ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಶ್ವಾಪುರ ಮುಖ್ಯರಸ್ತೆಯಲ್ಲಿ ಗುಂಡಿಗಳದ್ದೇ ಕಾರುಬಾರು

Last Updated 20 ಅಕ್ಟೋಬರ್ 2017, 7:12 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಗಣ್ಯ ವ್ಯಕ್ತಿಗಳು ನೆಲೆಸಿರುವ ಮತ್ತು ಅತಿ ಹೆಚ್ಚು ಜನಸಂದಣಿ ಇರುವ ಕೇಶ್ವಾಪುರ ಮುಖ್ಯರಸ್ತೆಯ ಸ್ಥಿತಿ ಹೇಳತೀರದಾಗಿದೆ. ರಸ್ತೆಯ ಉದ್ದಕ್ಕೂ ಹೆಜ್ಜೆ ಹೆಜ್ಜೆಗೂ ಗುಂಡಿಗಳು ಬಾಯ್ತೆರೆದು ಅಪಾಯಕ್ಕೆ ಆಹ್ವಾನಿಸುತ್ತಿವೆ. ವಾಹನ ಸವಾರರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.

ನಾಗಶೆಟ್ಟಿಕೊಪ್ಪದ ರಮೇಶ ಭವನದ ಮುಂದಿನ ರಸ್ತೆಯಿಂದ ಸರ್ವೋದಯ ವೃತ್ತದವರೆಗೂ ಗುಂಡಿಗಳನ್ನು ಕಾಣಬಹುದು. ಫಾತಿಮಾ ಶಾಲೆಯ ಮುಂದಿನ ರಸ್ತೆ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಈಚೆಗೆ ಬಿದ್ದ ಧಾರಾಕಾರ ಮಳೆಗೆ ಡಾಂಬರು ಕಿತ್ತು ದೊಡ್ಡ ದೊಡ್ಡ ತಗ್ಗುಗಳು ಉಂಟಾಗಿವೆ. ದ್ವಿಚಕ್ರ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಓಡಾಡಬೇಕು. ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ.

ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌, ಸಂಸದ ಪ್ರಹ್ಲಾದ ಜೋಶಿ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಕೇಶ್ವಾಪುರ ಮತ್ತು ಸುತ್ತಮುತ್ತಲ ಬಡಾವಣೆಗಳಲ್ಲಿ ನೆಲೆಸಿದ್ದಾರೆ. ಇವರು ಕೇಶ್ವಾಪುರ ಮುಖ್ಯರಸ್ತೆಯಲ್ಲೇ ಸಂಚರಿಸುತ್ತಾರೆ. ಗಣ್ಯರು ಓಡಾಡುವ ರಸ್ತೆಯ ಸ್ಥಿತಿಯೇ ಈ ರೀತಿ ಇದೆ. ಇದು ಜಿಲ್ಲಾಡಳಿತ, ಪಾಲಿಕೆ ಅಧಿಕಾರಿಗಳ ಆಡಳಿತ ಕಾರ್ಯವೈಖರಿಗೆ ಕನ್ನಡಿ ಹಿಡಿದಂತಿದೆ ಎಂದು ದೂರುತ್ತಾರೆ ಸ್ಥಳೀಯರು.

‘ಮಳೆ ಬಂದು ನೀರು ನಿಂತ ಸಂದರ್ಭದಲ್ಲಿ ತಗ್ಗು, ರಸ್ತೆ ಯಾವುದು ಎಂಬುದು ಗೊತ್ತಾಗುವುದೇ ಇಲ್ಲ. ರಸ್ತೆಯುದ್ದಕ್ಕೂ ಗುಂಡಿಗಳಿವೆ. ಅನೇಕ ಮಂದಿ ಬಿದ್ದು ಗಾಯಗೊಂಡಿದ್ದಾರೆ. ಯಾರನ್ನಾದರೂ ಬಲಿ ತೆಗೆದುಕೊಳ್ಳುವ ಮುನ್ನವೇ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನ ಹರಿಸಿ ರಸ್ತೆ ಸರಿಪಡಿಸಬೇಕು. ಇಲ್ಲವಾದಲ್ಲಿ ಪಾಲಿಕೆ ಆಡಳಿತದ ವಿರುದ್ಧ ಪ್ರತಿಭಟನೆ ಮಾಡಬೇಕಾಗುತ್ತದೆ’ ಎಂದು ಮಂಜುನಾಥ ಬಾದಾಮಿ ಎಚ್ಚರಿಕೆ ನೀಡಿದರು.

‘ಬೆಳಿಗ್ಗೆ ಮತ್ತು ಸಂಜೆ ವೇಳೆ ಈ ರಸ್ತೆಯಲ್ಲಿ ವಾಹನ ದಟ್ಟಣೆ ಹೇಳತೀರದಾಗಿದೆ. ಗುಂಡಿಗಳಿರುವುದರಿಂದ ಸಂಚರಿಸುವುದು ಕಷ್ಟವಾಗಿದೆ. ಇನ್ನಾದರೂ ಗುಂಡಿ ಬಿದ್ದಿರುವ ರಸ್ತೆಗೆ ಡಾಂಬರು ಹಾಕಬೇಕು. ಇಲ್ಲವಾದಲ್ಲಿ ಮುಂದಾಗುವ ಅನಾಹುತಕ್ಕೆ ಜನಪ್ರತಿನಿಧಿಗಳು, ಸಂಬಂಧಪಟ್ಟ ಅಧಿಕಾರಿಗಳೇ ಹೊಣೆಯಾಗಬೇಕಾಗುತ್ತದೆ’ ಎಂದು ರಾಜೇಶ ಏಕಬೋಟೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT