ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಾದ್ಯಂತ ದೀಪಾವಳಿ ಸಡಗರ

Last Updated 20 ಅಕ್ಟೋಬರ್ 2017, 7:27 IST
ಅಕ್ಷರ ಗಾತ್ರ

ಕಾರವಾರ: ಬೆಳಕಿನ ಹಬ್ಬ ‘ದೀಪಾವಳಿ’ ಆಚರಣೆಗೆ ಬುಧವಾರ ಸಂಭ್ರಮದ ಚಾಲನೆ ದೊರೆಯಿತು. ಗುರುವಾರ ಮನೆ ಹಾಗೂ ಅಂಗಡಿಗಳಲ್ಲಿ ಲಕ್ಷ್ಮೀ ಪೂಜೆಯು ಶ್ರದ್ಧಾ ಭಕ್ತಿಯಿಂದ ನೆರವೇರಿತು. ಹಬ್ಬಕ್ಕೂ ಮುನ್ನವೇ ಮನೆ ಹಾಗೂ ಅಂಗಡಿಗಳನ್ನು ಶುಚಿಗೊಳಿಸಿ, ಗೋಡೆಗಳಿಗೆ ಬಣ್ಣ ಬಳಿಯಲಾಗಿತ್ತು. ನರಕ ಚತುರ್ದಶಿ ನಿಮಿತ್ತ ರಾತ್ರಿ ಮನೆ ಅಂಗಳಗಳಲ್ಲಿ ಜೋಡಿಸಿಟ್ಟ ಹಣತೆಯ ಬೆಳಕು ಪ್ರಜ್ವಲಿಸಿತು. ಅನೇಕ ಕಟ್ಟಡಗಳು ವಿದ್ಯುದ್ದೀಪಗಳಿಂದ ಝಗಮಗಿಸಿದವು. ಬಹುತೇಕ ಮನೆಗಳಲ್ಲಿ ಆಕಾಶಬುಟ್ಟಿಗಳನ್ನು ಕಟ್ಟಿ ವಿಶೇಷವಾಗಿ ಸಿಂಗರಿಸಲಾಗಿತ್ತು.

ದೇವಸ್ಥಾನಗಳಲ್ಲಿ ಬುಧವಾರ ಬೆಳಗ್ಗಿನಿಂದಲೇ ವಿಶೇಷ ಪೂಜೆ ಜರುಗಿತು. ಹೊಸ ಬಟ್ಟೆ ತೊಟ್ಟು, ದೇವರ ಕಾರ್ಯಗಳಲ್ಲಿ ಅನೇಕರು ಭಾಗಿಯಾದರು. ಸ್ನೇಹಿತರು, ಸಂಬಂಧಿಕರ ಮನೆಗಳಿಗೆ ಭೇಟಿ ನೀಡಿ, ಸಿಹಿ ತಿಂಡಿಯನ್ನು ಹಂಚಿದರು. ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

ದೀಪ ತೋರಿದರು: ಮನೆಯ ಸದಸ್ಯರು ಮುಂಜಾನೆ ಬೇಗ ಎದ್ದು ಅಭ್ಯಂಜನ ಸ್ನಾನ ಮುಗಿಸಿ, ದೀಪ ನೋಡಿ ಧನ್ಯತೆ ಮೆರೆದರು. ಬಾಳಿನಲ್ಲಿ ಕತ್ತಲೆ ತೊಲಗಿ, ಬೆಳಕು ಮೂಡುವ ಸಂಕಲ್ಪದೊಂದಿಗೆ ಸುಮಂಗಲೆಯರು ಮನೆ ಮಂದಿಗೆಲ್ಲಾ ದೀಪ ತೋರಿದರು. ಹಣೆಗೆ ತಿಲಕವಿಟ್ಟು ಅಕ್ಷತೆ, ಹಾಕಿ ಆರತಿ ಬೆಳಗಿದರು.

ವಾಹನಗಳಿಗೆ ಅಲಂಕಾರ:  ಗುರುವಾರ ಬೆಳಿಗ್ಗೆ ವಾಹನಗಳನ್ನು ತೊಳೆದು ಹೂವಿನಿಂದ ಅಲಂಕೃತಗೊಳಿಸಲಾಗಿತ್ತು. ಆನಂತರ ಆರತಿ ಬೆಳಗಿ, ಪೂಜೆ ಸಲ್ಲಿಸಲಾಯಿತು. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸರ್ಕಾರಿ ವಾಹನಗಳಿಗೆ ನಡೆದ ಪೂಜೆಯಲ್ಲಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಪ್ರಸನ್ನ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದರು. ಸಂಜೆ ಎಲ್ಲೆಡೆ ಲಕ್ಷ್ಮಿ ಪೂಜೆ ನೆರವೇರಿತು.

ಕಿಕ್ಕಿರಿದ ಮಾರುಕಟ್ಟೆ: ಮಾರುಕಟ್ಟೆಯಲ್ಲಿ ಹೂವು, ಹಣ್ಣು, ಸಿಹಿ ತಿಂಡಿಗಳು ಹಾಗೂ ಅಗತ್ಯ ವಸ್ತುಗಳ ಖರೀದಿ ಭರಾಟೆ ಜೋರಾಗಿ ನಡೆಯಿತು. ಮಾರುಕಟ್ಟೆ, ಪ್ರಮುಖ ರಸ್ತೆಗಳು ದಿನವಿಡೀ ಜನರಿಂದ ಗಿಜಿಗಿಡುತ್ತಿತ್ತು. ಅಲ್ಲಲ್ಲಿ ಕೆಲ ಕಾಲ ಸಂಚಾರ ದಟ್ಟಣೆ ಕೂಡ ಉಂಟಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT