ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಸಾನದ ಹಾದಿಯಲ್ಲಿ ಕುಂಬಾರಿಕೆ

Last Updated 20 ಅಕ್ಟೋಬರ್ 2017, 9:24 IST
ಅಕ್ಷರ ಗಾತ್ರ

ರಾಮನಗರ: ಮಣ್ಣಿಗೆ ಸ್ಪಷ್ಟ ರೂಪ ಕೊಡುವ ಕೈಚಳಕ ಹೊಂದಿರುವ ಕುಂಬಾರರು ತಮ್ಮ ಜೀವನಕ್ಕೆ ಸ್ಪಷ್ಟ ಚಿತ್ರಣ ಕೊಟ್ಟು ಕೊಳ್ಳಲು ಸಾಧ್ಯವಾಗದೆ ಹೆಣಗುತ್ತಿದ್ದಾರೆ. ನಗರದ ಕುಂಬಾರ ಬೀದಿಯ ಕುಟುಂಬಗಳ ಪ್ರಸ್ತುತ ಚಿತ್ರಣವೇ ಸಾಕ್ಷಿ.

ಇಲ್ಲಿ ಕಳೆದ ಹಲವು ವರ್ಷಗಳ ಹಿಂದೆ ಕುಂಬಾರಿಕೆಯಲ್ಲೇ ಬದುಕನ್ನು ಕಂಡುಕೊಂಡಿದ್ದ 55ಕ್ಕೂ ಹೆಚ್ಚು ಕುಟುಂಬಗಳು ಇಂದು ಬೇರೆ ವೃತ್ತಿಯಲ್ಲಿ ತೊಡಗಿಸಿಕೊಂಡಿವೆ. ದಶಕಗಳ ಕಾಲ ನಿರಂತರವಾಗಿ ತಿರುಗುತ್ತಿದ್ದ ಕುಂಬಾರಿಕೆಯ ಚಕ್ರ ಈಗ ಮೂಲೆ ಸೇರಿದೆ.

ದಿನಸಿಯಷ್ಟೇ ನಿತ್ಯ ಬಳಕೆಯ ವಸ್ತುಗಳಾಗಿದ್ದ ಮಡಿಕೆಗಳು ಇಂದು ಮೂಲೆ ಗುಂಪಾಗಿದ್ದು, ಬೇಸಿಗೆಯ ಎರಡು ತಿಂಗಳು ಮಾತ್ರ ಇವುಗಳಿಗೆ ಬೇಡಿಕೆ ಇದೆ. ನಂತರ ದೀಪಾವಳಿ ಸಂದರ್ಭದಲ್ಲಿ ದೀಪಗಳಿಗೆ ಮಾತ್ರ ಬೇಡಿಕೆ ಇರುತ್ತದೆ. ಬೇರೆ ದಿನಗಳಲ್ಲಿ ಕುಂಬಾರರು ವೃತ್ತಿ ಮುಂದುವರಿಸಿಕೊಂಡು ಹೋಗಲು ಪರದಾಡಬೇಕಿದೆ.

‘ಶ್ರಮಕ್ಕೆ ತಕ್ಕ ಆದಾಯವಿಲ್ಲ ಹಾಗೂ ಬೇಡಿಕೆಯೂ ಇಲ್ಲದಿರುವುದು ವೃತ್ತಿಯಿಂದ ವಿಮುಖರಾಗಲು ಮುಖ್ಯ ಕಾರಣವಾಗಿದೆ’ ಎನ್ನುತ್ತಾರೆ ರಾಮಚಂದ್ರಪ್ಪ. ‘ಮಣ್ಣಿನ ಪರಿಕರ ತಯಾರಿಕೆಗೆ ಕೆರೆಯಲ್ಲಿನ ಕಪ್ಪುಮಣ್ಣು, ನಂತರ ಜಿಗಿತನ ಹೊಂದಿದ ಕೆಂಪುಮಣ್ಣು, ಹರಳು ಮಣ್ಣು ಸೇರಿದಂತೆ ಮೂರು ವಿಧಗಳ ಮಣ್ಣು ಬೇಕಾಗುತ್ತದೆ.

ಮೊದಲು ಮಣ್ಣನ್ನು ಗುಂಡಿಗೆ ಹಾಕಿ ರುಬ್ಬಬೇಕು ನಂತರ ಜರಡಿಯಿಂದ ಹಸನು ಮಾಡಿಕೊಳ್ಳಲಾಗುವುದು. ನಂತರ ಮಿಶ್ರಣ ಮಾಡಿ ಗಾಲಿಗೆ ಹಾಕಿ ಆಕಾರ ತೆಗೆದು ಸಮತಟ್ಟು ಮಾಡಲಾಗುವುದು. ಈ ಕಾರ್ಯಗಳಿಗೆ 5–6 ಕಾರ್ಮಿಕರು ಬೇಕಾಗುತ್ತಾರೆ. ಮನೆ ಮಂದಿ ಎಲ್ಲಾ ಸೇರಿ ಕೆಲಸ ಮಾಡಿದರೂ ಹೊಟ್ಟೆಪಾಡು ಕಷ್ಟಸಾಧ್ಯ’ ಎಂದು ಕುಂಬಾರಿಕೆಯನ್ನು ಬಿಟ್ಟು ಬೇರೆ ಕೆಲಸ ಮಾಡುತ್ತಿರುವ ರವಿ ಹೇಳುತ್ತಾರೆ.

‘ಹಣತೆಗಳಿಗೆ, ಮಡಿಕೆಗೆ ರೂಪ ಕೊಡುವುದು ಒಂದು ಕಷ್ಟವಾದರೆ ಅವುಗಳನ್ನು ಭಟ್ಟಿಯಲ್ಲಿ ಸುಡುವುದು ಮತ್ತೊಂದು ಕಷ್ಟ. 100 ಮಡಿಕೆಗಳನ್ನು ಭಟ್ಟಿಯಲ್ಲಿ ಹಾಕಿ ಸುಟ್ಟಲ್ಲಿ ಕೈಗೆ ದೊರೆಯುವುದು 60 ಮಾತ್ರ. ಉಳಿದವು ನಾನಾ ಕಾರಣಗಳಿಂದ ರಂಧ್ರ ಬೀಳುತ್ತವೆ. ಕೆಲವು ಒಡೆದು ಹೋಗುತ್ತವೆ’ ಎಂದು ಅವರು ವಿವರಿಸುತ್ತಾರೆ.

ಮಳೆಯಿಂದ ನಷ್ಟ: ಇಲ್ಲಿನ ಜಾನಪದ ಲೋಕದ ಕುಂಬಾರಿಕೆ ವಿಭಾಗದಲ್ಲಿ ತಯಾರಾಗುವ ಹಣತೆಗಳಿಗೆ ದೇಶದಾಚೆಗೂ ಬೇಡಿಕೆ ಇದೆ. ತೂಗು ದೀಪ, ಗಣೇಶ ದೀಪ, ನವಿಲು ದೀಪ, ಆನೆ ದೀಪ, ಮ್ಯಾಜಿಕ್ ದೀಪ, ಆಮೆ ದೀಪ, ಟಾಪನ್‍ಬೆಸ್ ದೀಪ, ಸರ್ಪದ ದೀಪ, ಗಾಳಿಗೆ ಆರದ ದೀಪ, ಸ್ಟ್ಯಾಂಡಿಂಗ್ ಗಣಪತಿ ದೀಪ, ಗಿಣಿ ದೀಪ, ನಾಲಿಗೆ ದೀಪಗಳದ್ದೇ ಕಾರುಬಾರು.

‘ಆದರೆ ಈ ಬಾರಿ ಮಣ್ಣಿನ ಹಣತೆಗಳನ್ನು ತಯಾರಿಸಿ, ಸುಡುವ ಸಂದರ್ಭದಲ್ಲಿ ನಿರಂತರವಾಗಿ ಮಳೆ ಬಂದಿದ್ದರಿಂದ ಹಣತೆಗಳನ್ನು ತಯಾರಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ನಷ್ಟವಾಯಿತು’ ಎನ್ನುತ್ತಾರೆ ಶ್ರೀ ಲಕ್ಷ್ಮೀ ವೆಂಕಟೇಶ್ವರ ಕರಕುಶಲ ವಸ್ತು ತಯಾರಿಕೆಯ ಮಳಿಗೆಯ ಮಾಲೀಕರಾದ ಆರ್.ವಿ.ಅನಸೂಯಬಾಯಿ.

‘ಕುಂಬಾರಿಕೆ ಕೂಡ ಒಂದು ಕಲಾತ್ಮಕ ಅಭಿವ್ಯಕ್ತಿ ಮಾಧ್ಯಮವಾಗಿ ಸಾವಿರಾರು ವರ್ಷಗಳಿಂದ ಗ್ರಾಮೀಣ ಭಾರತದ ಗೌರವಯುತ ವೃತ್ತಿಯಾಗಿ ಬೆಳೆದಿತ್ತು. ಆದರೆ ಇಂದಿನ ಜಾಗತಿಕರಣದ ಯುಗದಲ್ಲಿ ಕುಂಬಾರಿಕೆ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಬೆಳಕಿನ ಹಬ್ಬ ದೀಪಾವಳಿ. ಜ್ಯೋತಿಗೂ ದೀಪಾವಳಿಗೂ ಬಿಡಿಸಲಾಗದ ನಂಟು. ಕತ್ತಲನ್ನು ಹೊಡೆದೋಡಿಸಿ ಬೆಳಕನ್ನು ಚೆಲ್ಲುವ ದೀಪ ಜ್ಞಾನದ ಸಂಕೇತವೂ ಹೌದು. ಮನಸ್ಸಿನಲ್ಲಿರುವ ಅಂಧಕಾರವನ್ನು ತೊಲಗಿಸಿ ಬೆಳಕಿನೆಡೆಗೆ ತರುವ ದೀಪಾವಳಿಯಲ್ಲಿ ಮಣ್ಣಿನ ಹಣತೆಗೆ ಹೆಚ್ಚಿನ ಪ್ರಾಶಸ್ತ್ಯ’ ಎನ್ನುತ್ತಾರೆ ಜಾನಪದ ವಿದ್ವಾಂಸ ಕುರುವ ಬಸವರಾಜ್‌.

ಶೇ 20ರಷ್ಟು ಮಂದಿ: ‘ಜಿಲ್ಲೆಯಲ್ಲಿ ಸುಮಾರು 40 ಸಾವಿರ ಕುಂಬಾರ ಸಮುದಾಯದವರಿದ್ದಾರೆ. ಆದರೆ ಈಗ ಶೇ 20ರಷ್ಟು ಮಂದಿ ಮಾತ್ರ ಕುಂಬಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ’ ಎಂದು ಕುಂಬಾರ ಮಹಾಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಎಸ್. ಚಂದ್ರಶೇಖರ್‌ ತಿಳಿಸಿದರು.
–ಎಸ್. ರುದ್ರೇಶ್ವರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT