ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಣಿ ಕೆರೆಗಳ ಜಾಲಕ್ಕೆ ಮತ್ತೆ ಬಂತು ಜೀವ

Last Updated 20 ಅಕ್ಟೋಬರ್ 2017, 9:38 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯ ಕೆರೆಗಳ ವೈಶಿಷ್ಟ್ಯವಾದ ಸರಣಿ ಜಾಲಕ್ಕೆ ಮತ್ತೆ ಜೀವ ಬಂದಿದೆ. ಒಂದು ಕೆರೆ ತುಂಬಿದ ಬಳಿಕ ಅದರ ಕೋಡಿ ನೀರು ಮತ್ತೊಂದು ಕೆರೆಗೆ ಹರಿದು ಹೋಗುತ್ತದೆ. ಹೀಗೆ ಎಲ್ಲ ಕೆರೆಗಳು ಒಂದಾದ ನಂತರ ಒಂದರಂತೆ ತುಂಬುವುದು ಜಿಲ್ಲೆಯ ಕೆರೆಗಳ ವಿಶೇಷವಾಗಿದೆ. ಇತ್ತೀಚೆಗೆ ಬಿದ್ದ ಮಳೆಗೆ ಇಂಥ ಅನೇಕ ಸರಣಿ ಕೆರೆಗಳು ಕೋಡಿ ಬಿದ್ದಿವೆ. ಜಿಲ್ಲೆಯಲ್ಲಿ ಈ ಮೊದಲಿನ ಜೀವ ಜಲವನ್ನು ಜನರು ನೋಡುವಂತಾಗಿದೆ.

ಸರಣಿ ಕೆರೆಗಳಲ್ಲಿ ಪ್ರಮುಖವಾದ ತುಮಕೂರು ತಾಲ್ಲೂಕಿನ ದೇವರ ಅಮಾನಿಕೆರೆ ಹದಿನೆಂಟು ವರ್ಷಗಳ ಬಳಿಕ ಕೋಡಿ ಹರಿದಿದೆ.ಈ ಕೆರೆಯಿಂದ ಹರಿಯುವ ನೀರು ಹೊನ್ನುಡಿಕೆ, ಮುಳುಕುಂಟೆ, ವೀರನಾಯನಹಳ್ಳಿ, ಸಿಂಗಾದರ ಅಣೆ, ಸಾಸಲು, ನಾಗವಲ್ಲಿ, ಹೊಳಕಲ್ಲು ಕೆರೆಗಳನ್ನು ತುಂಬಿಸಲಿದೆ ಎಂಬ ವಿಶ್ವಾಸವನ್ನು ರೈತರು ವ್ಯಕ್ತಪಡಿಸುತ್ತಿದ್ದಾರೆ.

‘ಏಳು ಕೆರೆ ನೀರು ಬಂದರೆ ಆಕಳಿಸುವೆ, ಮೂರು ಕೆರೆ ನೀರು ಬಂದರೆ ಮುಕ್ಕಳಿಸುವೆ, ತರೂರು ಕೆರೆ ಬಂದರೆ ತಡೆಯಲಾರೆ’ ಎಂಬ ಮಾತು ಗುಬ್ಬಿ ತಾಲ್ಲೂಕಿನ ಸಿ.ಎಸ್‌.ಪುರ ಸುತ್ತಮುತ್ತ ಜನಜನಿತ. ತುಮಕೂರು ತಾಲ್ಲೂಕಿನ ನಾಗವಲ್ಲಿ ಕೆರೆಗೆ ತರೂರು ಕೆರೆ ಎಂಬ ಹೆಸರೂ ಇದೆ. ನಾಗವಲ್ಲಿ ಕೆರೆ ಕೋಡಿ ಬಿದ್ದರೆ ಸಿ.ಎಸ್‌.ಪುರ ಕೆರೆ ತಡೆದುಕೊಳ್ಳುವುದಿಲ್ಲ ಎಂಬ ಮಾತು ಈ ಮೂಲಕ ಪ್ರತೀತಿಯಲ್ಲಿದೆ.

ಈಗ ದೇವರ ಅಮಾನಿಕೆರೆ ಕೋಡಿ ಹರಿದಿರುವುದರಿಂದ ಈ ನೀರು ನಾಗವಲ್ಲಿ ಕೆರೆಗೆ ಬರಲಿದೆ. ನಾಗವಲ್ಲಿ ಕೆರೆಗೆ ಹೇಮಾವತಿ ನೀರು ಸಹ ಬಿಡಲಾಗಿದೆ. ಹೇಮಾವತಿ ನೀರು, ದೇವರ ಅಮಾನಿಕೆರೆ ಕೋಡಿ ಸೇರಿ ಈ ಕೆರೆ ಕೋಡಿ ಬಿದ್ದರೆ ಸಿ.ಎಸ್‌.ಪುರದವರೆಗಿನ ಹಲವಾರು ಸರಣಿ ಕೆರೆಗಳು ತುಂಬಿಕೊಳ್ಳಲಿವೆ. ಈ ಮೂಲಕ ತುಮಕೂರು ತಾಲ್ಲೂಕು ಹಾಗೂ ಗುಬ್ಬಿ ತಾಲ್ಲೂಕಿನ ದಶಕಗಳ ಬರ ನೀಗಲಿದೆ ಎಂಬ ಮಾತುಗಳನ್ನು ರೈತರು ಹೇಳುತ್ತಿದ್ದಾರೆ.

‘ದೇವರ ಅಮಾನಿಕೆರೆಗೆ ಶಿವಗಂಗೆ ಬೆಟ್ಟ ಸಾಲುಗಳಿಂದ ನೀರು ಹರಿದು ಬರುತ್ತಿದ್ದರೂ ರಾಜಕಾಲುವೆಗಳ ಒತ್ತುವರಿ ಕಾರಣ ಇಷ್ಟು ವರ್ಷಗಳ ಕಾಲ ಕೆರೆ ತುಂಬುತ್ತಿರಲಿಲ್ಲ’ ಎಂದು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ಸುರೇಶ್‌ಗೌಡ ತಿಳಿಸಿದರು.

‘ಈ ಕೆರೆ ತುಂಬಿಸಲು ರಾಜಕಾಲುವೆ ಒತ್ತುವರಿ ತೆರವು ಒಂದೇ ಉತ್ತರ ಎಂಬುದನ್ನು ಕಂಡುಕೊಂಡೆನು. ₹2 ಕೋಟಿ ವೆಚ್ಚದಲ್ಲಿ ರಾಜಕಾಲುವೆ ಒತ್ತುವರಿಯನ್ನು ತೆರೆವು ಮಾಡಲಾಗಿತ್ತು. ಕೆರೆಗೆ ಸರಾಗವಾಗಿ ನೀರು ಬರುವಂತೆ ನೋಡಿಕೊಳ್ಳಲಾಗಿದೆ. ಹೀಗಾಗಿ ಈ ವರ್ಷ ಕೆರೆ ತುಂಬುವಂತಾಯಿತು’ ಎಂದು ಸಂಭ್ರಮ ವ್ಯಕ್ತಪಡಿಸಿದರು.

‘ಅಲ್ಲಲ್ಲಿ ರಾಜಕಾಲುವೆಗಳನ್ನು ತೆರವುಗೊಳಿಸಿದ ಪರಿಣಾಮ ಕ್ಷೇತ್ರದಲ್ಲಿ ಅನೇಕ ಕೆರೆಗಳು ತುಂಬಿವೆ. ಗ್ರಾಮಾಂತರ ಕ್ಷೇತ್ರವನ್ನು ಬರಮುಕ್ತ ಕ್ಷೇತ್ರವಾಗಿ ಮಾಡಬೇಕೆಂಬ ನನ್ನ ಕನಸು ಈ ವರ್ಷ ಸ್ವಲ್ಪಮಟ್ಟಿಗೆ ನನಸಾಗುತ್ತಿದೆ. ತಾಲ್ಲೂಕಿನ ದುರ್ಗದಹಳ್ಳಿ, ವಡ್ಡರಹಳ್ಳಿ, ಮಲ್ಲೇನಹಳ್ಳಿ, ಮೈದಾಳ ದೊಡ್ಡನಾರವಂಗಲ ಟಿ.ಗೊಲ್ಲಹಳ್ಳಿ ಇನ್ನೂ ಅನೇಕ ಕೆರೆಗಳು ಕೋಡಿ ಆಗಿವೆ. ಅನೇಕ ಬ್ಯಾರೇಜ್, ಚೆಕ್ ಡ್ಯಾಂಗಳು ತುಂಬಿವೆ’ ಎಂದರು.

ಹೆಚ್ಚಿದ ಅಂತರ್ಜಲ: ಕೆರೆ ಕಟ್ಟೆಗಳು ತುಂಬಿದ ಕಾರಣ ತುಮಕೂರು ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿ ವಿಫಲವಾಗಿದ್ದ ನೂರಾರು ಕೊಳವೆಬಾವಿಗಳಲ್ಲಿ ನೀರು ಬರುತ್ತಿದೆ. ರೈತರ ಮುಖದಲ್ಲಿ ಮಂದಹಾಸ ಕಾಣುತ್ತಿದೆ ಎಂದು ಹೊನ್ನುಡಿಕೆಯ ಹನುಮಂತರಾಜು ಸಂಭ್ರಮ ವ್ಯಕ್ತಪಡಿಸಿದರು.

ಕೊರಟಗೆರೆ ತಾಲ್ಲೂಕಿನಲ್ಲಿ ಬುಕ್ಕಾಪಟ್ಟಣ, ಮಲ್ಲೇಕಾವು ಕೆರೆಯಿಂದ ಕೋಡಿ ಹರಿದ ನೀರಿನಿಂದಾಗಿ ಅಗ್ರಹಾರ ಮತ್ತು ಜಂಪೇನಹಳ್ಳಿ ಕೆರೆ ತುಂಬಿವೆ. ಒಟ್ಟಾರೆ ಈ ಮೂರು ಕೆರೆಗಳ ಕೋಡಿ ನೀರು ಅಕ್ಕಿರಾಂಪುರ ಕೆರೆ ಸೇರುತ್ತಿದೆ. ಇದೇ ರೀತಿ ಮಳೆಯಾದರೆ ಅಕ್ಕಿರಾಂಪುರ ಕೆರೆಯೂ ಕೋಡಿ ಹರಿಯಲಿದೆ ಎನ್ನುತ್ತಾರೆ ಇಲ್ಲಿನ ಜನರು.

’ಕೋಳಾಲ ಹೋಬಳಿ ಎಲೆರಾಂಪುರ ಕೆರೆ ಕೋಡಿ ನೀರು ಹಲವಾರು ಸಣ್ಣಪುಟ್ಟ ಕೆರೆಕಟ್ಟೆಗಳನ್ನು ತುಂಬಿಕೊಂಡು ತೀತಾ ಜಲಾಶಯ ಸೇರುತ್ತದೆ. ಈ ಭಾಗದಲ್ಲಿ ರಾಜಕಾಲುವೆ ಒತ್ತುವರಿ ಸಮಸ್ಯೆಯಿಂದಾಗಿ ಕೆರೆಗಳಿಗೆ ನೀರು ಕಡಿಮೆ ಬಂದಿದೆ.  ರಾಜಕಾಲುವೆ ತೆರವುಗೊಳಿಸಿದ್ದರೆ ಇನ್ನೂ ಬೇಗ ಈ ಕೆರೆಗಳು ತುಂಬುತ್ತಿದ್ದವು. ಸಣ್ಣ ಮಳೆಗೂ ಕೆರೆ ತುಂಬುವ ಅವಕಾಶವನ್ನು ರಾಜಕಾಲುವೆ ಒತ್ತುವರಿ ಕಾರಣ ಕಳೆದುಕೊಳ್ಳುತ್ತಿದ್ದೇವೆ’ ಎಂದು ಈ ಭಾಗದ ನೀರಾವರಿ ತಜ್ಞರು ಹಾಗೂ ಹಿರಿಯ ರೈತರು ಹೇಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT