ಗಬ್ಬು ನಾರುತ್ತಿದೆ ತುಮಕೂರು

ಸೋಮವಾರ, ಜೂನ್ 24, 2019
25 °C

ಗಬ್ಬು ನಾರುತ್ತಿದೆ ತುಮಕೂರು

Published:
Updated:
ಗಬ್ಬು ನಾರುತ್ತಿದೆ ತುಮಕೂರು

ತುಮಕೂರು: ಎರಡನೇ ಹಂತದಲ್ಲಿಯೇ ಸ್ಮಾರ್ಟ್‌ ಸಿಟಿ ಯೋಜನೆಗೆ ಆಯ್ಕೆಯಾಗಿರುವ ಹೆಗ್ಗಳಿಕೆಯನ್ನು ತುಮಕೂರು ನಗರ ತನ್ನದಾಗಿಸಿಕೊಂಡಿದೆ. ಆದರೆ ನಗರದ ಸ್ವಚ್ಛತೆಯ ವಿಷಯದಲ್ಲಿ ಮಾತ್ರ ಪಾಲಿಕೆ ಸಂಬಂಧವೇ ಇಲ್ಲ ಎನ್ನುವ ಹಾಗೆ ಕುಳಿತಿರುವುದು ನಗರಕ್ಕೇ ನಗರವೇ ಗಬ್ಬು ನಾರುವಂತೆ ಮಾಡಿದೆ.

ನಗರದ ಜನನಿಬಿಡ ಪ್ರದೇಶಗಳಲ್ಲಿಯೇ ಸ್ವಚ್ಛತೆಯ ಸಮಸ್ಯೆ ಕಾಡುತ್ತಿದ್ದು, ಹಳೆ ಮಾರುಕಟ್ಟೆ ಪ್ರದೇಶ, ಬಾಳನಕಟ್ಟೆ ಏರಿಗಳು ಗಬ್ಬೆದ್ದು ನಾರುತ್ತಿವೆ. ಜೆ.ಸಿ.ರಸ್ತೆಯ ಪಕ್ಕದಲ್ಲಿ ಪ್ರತಿನಿತ್ಯ ಕಸದ ರಾಶಿ ಶೇಖರಣೆ ಆಗುತ್ತಿದ್ದು, ಹತ್ತಾರು ವರ್ಷಗಳಾದರೂ ಈ ಸಮಸ್ಯೆಗೆ ಪರಿಹಾರ ದೊರೆತಿಲ್ಲ.

ಪ್ರತಿನಿತ್ಯ ಬಿದ್ದು ಕೊಳೆಯುವ ಕಸದ ರಾಶಿಯಿಂದಾಗಿ ಸೊಳ್ಳೆಯಿಂದಾಗಿ ಸೊಳ್ಳೆಗಳು ಹೆಚ್ಚುತ್ತಿವೆ. ಬೆಳಿಗ್ಗೆ ಅಂಗಡಿಗೇ ಬಂದೆವೆಂದರೆ ಸಾಕು ಸೊಳ್ಳೆ ಬತ್ತಿ ಹಚ್ಚಿಯೇ ಮುಂದಿನ ಕೆಲಸ ಆರಂಭಿಸುತ್ತೇವೆ. ಸೊಳ್ಳೆ ಬತ್ತಿ ಇದ್ದರೂ ಸೊಳ್ಳೆಯ ನಿಯಂತ್ರಣವಂತೂ ಸಾಧ್ಯವಿಲ್ಲ ಎನ್ನುತ್ತಾರೆ ಜನರಲ್‌ ಮರ್ಚಂಟ್‌ ಶ್ರೀಕಾಂತ್‌.

ಈ ಪ್ರದೇಶ ನಗರದ ಹೃದಯ ಭಾಗದಲ್ಲಿದ್ದರೂ ಇಲ್ಲಿಯ ಸಮಸ್ಯೆಗಳ ಬಗ್ಗೆ ಪಾಲಿಕೆ, ಶಾಸಕರು ಇದುವರೆಗೂ ತಲೆಗೆ ಹಾಕಿಕೊಂಡಂತಿಲ್ಲ. ಇಲ್ಲಿಯ ಗಬ್ಬು ವಾಸನೆಯಿಂದಾಗಿ ಅಂಗಡಿಗೆ ಬರುವವರ ಸಂಖ್ಯೆಯೂ ಕಡಿಮೆಯಾಗಿದ್ದು ವ್ಯಾಪಾರಕ್ಕೆ ಕೂಡ ಸಮಸ್ಯೆಯಾಗುತ್ತಿದೆ ಎನ್ನುತ್ತಾರೆ.

ಗುಬ್ಬಿ ವೀರಣ್ಣ ರಂಗಮಂದಿರದ ಪಕ್ಕ ಇರುವ ಬಾಳನಕಟ್ಟೆ ಏರಿಯಲ್ಲಿ ಟನ್‌ಗಳಷ್ಟು ತ್ಯಾಜ್ಯ ಕೊಳೆಯುತ್ತಿದ್ದು, ಇಲ್ಲಿನ ರಸ್ತೆಯಲ್ಲಿ ಸಂಚರಿಸುವಾಗ ಮೂಗು ಮುಚ್ಚಿಕೊಂಡೇ ಹೋಗಬೇಕಾಗಿರುವುದು ಅನಿವಾರ್ಯವಾಗಿದೆ. ತ್ಯಾಜ್ಯಗಳಲ್ಲಿ ಆಹಾರ ಹುಡುಕಲು ಹಿಂಡು ಹಿಂಡು ಹಂದಿಗಳು ಕಸದ ರಾಶಿಗಳ ಮೇಲೆ ಮುತ್ತಿಗೆ ಹಾಕುತ್ತಿವೆ.

‘ನಗರದ ಹೃದಯ ಭಾಗದಲ್ಲಿ ಈ ರೀತಿಯ ಅವ್ಯವಸ್ಥೆ ಇರುವುದು ನಿಜಕ್ಕೂ ಸ್ಮಾರ್ಟ್‌ ಸಿಟಿ ಹೆಗ್ಗಳಿಕೆಗೆ ಪಾತ್ರವಾಗಿರುವ ತುಮಕೂರಿಗೆ ನಾಚಿಕೆಯ ಸಂಗತಿ. ನಗರಸಭೆಯಿಂದ ಪಾಲಿಕೆಗೆ ಮೇಲ್ದರ್ಜೆಗೆ ಏರಿದ್ದು, ನಗರಕ್ಕೆ ಅಭಿವೃದ್ಧಿ ಮತ್ತು ಸ್ವಚ್ಛತೆಯ ಕಾರ್ಯಗಳಿಗೆ ಹೆಚ್ಚಿನ ಅನುದಾನ ದೊರೆಯುತ್ತಿದೆ. ಆದರೆ ಪಾಲಿಕೆಯು ಮಾತ್ರ ಸ್ವಚ್ಛತೆಯ ಬಗ್ಗೆ ಗಮನವನ್ನೇ ನೀಡುತ್ತಿಲ್ಲ’ ಎನ್ನುವುದು ಜನರ ಆರೋಪ.

ರಾಶಿ ರಾಶಿ ಕಸವನ್ನು ಚೆಲ್ಲಿರುವುದರಿಂದ ಬಾಳನಕಟ್ಟೆ ಏರಿ ಕಸ ವಿಲೇವಾರಿ ಘಟಕದಂತೆ ಕಾಣಿಸುತ್ತಿದೆ. ಜನರು ಇಲ್ಲಿಯೇ ಮಲ, ಮೂತ್ರ ವಿಸರ್ಜನೆಯನ್ನೂ ಮಾಡುತ್ತಿದ್ದಾರೆ. ಸ್ವಚ್ಛತೆಯ ಬಗ್ಗೆ ಅರಿವಿಲ್ಲದೆ, ಬದುಕಲು ಬೇರೆ ಜಾಗವೂ ಇಲ್ಲದೆ ಇರುವ ಜನರು ಅಲ್ಲಿಯೇ ವಾಸ ಮಾಡುತ್ತಿದ್ದು, ಅವರ ಆರೋಗ್ಯದ ಬಗ್ಗೆ ಪಾಲಿಕೆ, ಜನಪ್ರತಿನಿಧಿ ಯಾರೊಬ್ಬರೂ ಚಿಂತಿಸುತ್ತಿಲ್ಲ.

ಈ ಪ್ರದೇಶಗಳು ನಗರದ ಕೇಂದ್ರ ಭಾಗದಲ್ಲಿಯೇ ಇದ್ದರೂ, ಅಂಗಡಿ, ಮಾರುಕಟ್ಟೆಗಳಿರುವುದರಿಂದ ಜನರ ವಸತಿ ಪ್ರದೇಶ ಅಲ್ಲದೇ ಇರುವುದರಿಂದ ಜನಪ್ರತಿನಿಧಿಗಳಿಗೆ ಇಲ್ಲಿ ದೊರೆಯುವ ಓಟುಗಳು ಕಡಿಮೆ. ಹೀಗಾಗಿ ಅವರು ಜನವಸತಿ ಇರುವ ಪ್ರದೇಶಗಳ ಬಗ್ಗೆಯಷ್ಟೇ ಗಮನ ಹರಿಸುತ್ತಿದ್ದು, ಇಂತಹ ಮಾರುಕಟ್ಟೆಯ ಸ್ವಚ್ಛತೆ ಮತ್ತು ಅಭಿವೃದ್ಧಿಯ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ದೂರುತ್ತಾರೆ ಸ್ಥಳಿಯರು.

ಹಳೆ ಮಾರುಕಟ್ಟೆಯ ವೃತ್ತದ ಬಳಿ ಇರುವ ಶೌಚಾಲಯವಂತೂ ನಿರ್ವಹಣೆ ಇಲ್ಲದೇ ಗಬ್ಬು ನಾರುತ್ತಿದ್ದು, ಇದು ಬಳಕೆಗೂ ಯೋಗ್ಯವಾಗಿಲ್ಲ. ಈ ಶೌಚಾಲಯದ ಹೊರಗೆ ಕೂಡ ಕಸದ ರಾಶಿಯೇ ತುಂಬಿಕೊಂಡಿದೆ.

ನಗರದಲ್ಲಿ ಡೆಂಗಿ, ಚಿಕೂನ್‌ಗುನ್ಯಾ ರೋಗಿಗಳ ಸಂಖ್ಯೆ ಹೆಚ್ಚಿದೆ. ಹೀಗಾಗಿ ಆರೋಗ್ಯ ಇಲಾಖೆ ಕೂಡ ಸ್ವಚ್ಛತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು. ಎಲ್ಲೆಂದರಲ್ಲಿ ಕಸ ಶೇಖರಣೆ ಆಗದಂತೆ ತಡೆಯಲು ಪಾಲಿಕೆಗೆ ಒತ್ತಡ ಹೇರಬೇಕು ಎನ್ನುತ್ತಾರೆ ಸ್ಥಳೀಯರು.

ಜನನಿಬಿಡ ಪ್ರದೇಶಗಳಲ್ಲಿ ಶೇಖರಣೆ ಆಗುತ್ತಿರುವ ಕಸಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ, ನಗರದ ಸ್ವಚ್ಛತೆಗೆ ಮತ್ತು ಆರೋಗ್ಯ ಸಮಸ್ಯೆ ನಿವಾರಣೆಗೆ ಪಾಲಿಕೆ, ಜನಪ್ರತಿನಿಧಿಗಳು ಆದ್ಯತೆ ನೀಡಲಿ ಎನ್ನುವುದು ಸ್ಥಳೀಯರ ಒತ್ತಾಯ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry