ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಕಿನ ಹಬ್ಬದ ಸಂಭ್ರಮದಲ್ಲಿ ಮಿಂದ ವೃದ್ಧರು

Last Updated 20 ಅಕ್ಟೋಬರ್ 2017, 10:00 IST
ಅಕ್ಷರ ಗಾತ್ರ

ಯಾದಗಿರಿ: ಅವರೆಲ್ಲರೂ ಬಾಳ ಸಂಜೆಯಲ್ಲಿದ್ದವರು. ಬದುಕಿನ ಅಸಹಾಯಕತೆಗೆ, ಬಾಧಿಸುವ ಅನಾರೋಗ್ಯಕ್ಕೆ ಬಳಲಿ ಬೆಂಡಾದವರು. ಒಂದೊಂದು ಸಮಸ್ಯೆಗಳನ್ನು ಹೊತ್ತು ಬಂದ ಅವರಿಗೆ ನೆರವಾಗುವವರು ಸಿಕ್ಕಾರು ಎಂಬ ಆಶಾಭಾವದಲ್ಲಿ ಬಂದು ಸೇರಿದವರು. ಅಂತಹವರ ಪಾಲಿಗೆ ಬುಧವಾರ ದೀಪಾವಳಿ ಒಂದಷ್ಟು ಬೆಳಕು ಮೂಡಿಸಿತು. ಬದುಕಿನ ಅನೇಕ ದೀಪಾವಳಿ ಕಂಡವರು ಬದುಕಿನ ಮೊದಲ ದೀಪಾವಳಿ ಕಂಡವರಷ್ಟೇ ಖುಷಿಪಟ್ಟರು.

ಇಮ್ಮಡಿಸಿದ ಸಂತಸದಲ್ಲಿ ಸುರ್‌ ಸುರ್ ಬತ್ತಿ ಹಚ್ಚಿ ಹಿಡಿದು ಆವರಣದ ತುಂಬಾ ಓಡಾಡಿದರು. ನಲಿದರು.. ಮಕ್ಕಳಂತೆ ಕುಣಿದರು.. ಸಂತಸ ಹಂಚಿಕೊಂಡು ಒಂದು ಹನಿ ಕಣ್ಣೀರು ಹಾಕಿದರು! ಸಂತಸಕ್ಕೆ ಕಾರಣವಾದ ಪೊಲೀಸ್‌ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು. ನಗರದ ಹಿರಿಯ ನಾಗರಿಕರ ವೃದ್ಧಾಶ್ರಮದಲ್ಲಿ ಬುಧವಾರ ನಡೆದ ದೀಪಾವಳಿ ಆಚರಣೆಯ ಚಿತ್ರಣಗಳಿವು.

ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರ ನೇತೃತ್ವದಲ್ಲಿ ಇಡೀ ಪೊಲೀಸ್ ಇಲಾಖೆ ವದ್ಧಾಶ್ರಮದಲ್ಲಿ ಅನಾಥ ವೃದ್ಧರೊಂದಿಗೆ ಬೀಡುಬಿಟ್ಟು ಬೆಳಕಿನ ಹಬ್ಬ ದೀಪಾವಳಿಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸುವ ಮೂಲಕ ಮಾನವೀಯತೆ ಮೆರೆಯಿತು. ವೃದ್ಧಾಶ್ರಮದಲ್ಲಿನ 25ಕ್ಕೂ ಹೆಚ್ಚು ವೃದ್ಧರಿಗೆ ಇದೇ ಸಂದರ್ಭದಲ್ಲಿ ಆರೋಗ್ಯ ತಪಾಸಣೆಗೆ ಒಳಪಡಿಸಿದರು.

ಅನಾರೋಗ್ಯದಿಂದ ಬಳಲುತ್ತಿರುವ ವೃದ್ಧರಿಗೆ ಚಿಕಿತ್ಸೆ ಕೊಡಿಸುವ ಮೂಲಕ ಆರೋಗ್ಯ ಜಾಗೃತಿ ಮೂಡಿಸಲಾಯಿತು. ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಮಾತನಾಡಿ, ‘ನಾಗರಿಕರಿಗೆ ರಕ್ಷಣೆ ಒದಗಿಸುವುದಕ್ಕಷ್ಟೇ ಪೊಲೀಸ್‌ ಇಲಾಖೆ ಸೀಮಿತ\ವಾಗಿಲ್ಲ. ಪೊಲೀಸರು ಅಶಕ್ತ ಜನರ ಸೇವೆಗೂ ನೆರವಾಗುವುದರೊಂದಿಗೆ ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಬೇಕು. ಬದುಕಿನ ಹತಾಶ ಸ್ಥಿತಿ ಅತ್ಯಂತ ಅಪಾಯಕಾರಿ ಮತ್ತು ಶೋಚನೀಯವಾದುದು. ಅಂತಹ ಮನಸ್ಥಿತಿ ಹೋಗಲಾಡಿಸಿ ಒಂದಷ್ಟು ಬದುಕಿನ ಬಗ್ಗೆ ಭರವಸೆ ಮೂಡಿಸುವುದಕ್ಕಾಗಿಯೇ ವೃದ್ಧಾಶ್ರಮದಲ್ಲಿ ದೀಪಾವಳಿ ಆಚರಿಸಲು ಉದ್ದೇಶಿಸಲಾಗಿದೆ’ ಎಂದರು.

‘ಇಲ್ಲಿನ ಬಹುತೇಕ ವೃದ್ಧರು ಅನಾರೋಗ್ಯದಿಂದ ನರಳುತ್ತಿದ್ದಾರೆ. ಅವರಿಗೆ ನಗರ ಠಾಣೆ ಪಿಎಸ್‌ ಐ ಸ್ವಂತ ವೆಚ್ಚದಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಹೊಸ ಬಟ್ಟೆ, ಊಟದ ವ್ಯವಸ್ಥೆ ಮಾಡಿಸಿದ್ದಾರೆ. ಹೀಗೆ ಮಾನವೀಯ ನೆಲೆಗಟ್ಟಿನಲ್ಲಿ ಒಂದಷ್ಟು ಜನರ ಸೇವೆ ಮಾಡಬಹುದು ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ’ ಎಂದು ಶ್ಲಾಘಿಸಿದರು.

‘ವೃದ್ಧರು ಗಂಭೀರ ಸಮಸ್ಯೆಗಳಿದ್ದರೆ ನನ್ನನ್ನು ಸಂಪರ್ಕಿಸಬಹುದು. ನಿಶ್ಚಿಂತೆಯಿಂದ ಬದುಕು ಸಾಗಿಸಲು ಪೊಲೀಸ್ ಇಲಾಖೆ ಸಹಕಾರ ನೀಡಲಿದೆ’ ಎಂದು ಭರವಸೆ ನೀಡಿದರು.
‘ವೃದ್ಧಾಶ್ರಮದತ್ತ ಯಾರೂ ಬರುವುದಿಲ್ಲ. ಹಾಗೆ ಬಂದವರು ಇಲ್ಲಿ ಯಾರನ್ನೂ ಮಾತನಾಡಿಸುವುದಿಲ್ಲ. ಏಕತಾನತೆಯಲ್ಲಿ ನಮ್ಮ ಬದುಕು ಜಂಜಡವಾಗಿದೆ. ಸಮಾಜ ವೃದ್ಧ ಅಶಕ್ತರನ್ನು ಕಾಣುವ ಪರಿ ಕಂಡು ಮನಸ್ಸಿಗೆ ನೋವಾಗುತ್ತದೆ.

ಅಂತಹ ನೋವು ದೂರವಾಗುವಂತೆ ಪೊಲೀಸ್ ಇಲಾಖೆ ಮಾಡಿದೆ. ಈಗ ನಮಗೂ ಧೈರ್ಯ ಬಂದಿದೆ’ ಎಂದು ವೃದ್ಧಾಶ್ರಮ ನಿವಾಸಿ ಈಶಪ್ಪ ಕುಂಬಾರ ಅನಿಸಿಕೆ ಹಂಚಿಕೊಂಡರು. ಸಿಪಿಐ ಮೌನೇಶ್ವರ ಪಾಟೀಲ, ಬಿಜೆಪಿ ಮಹಿಳಾ ಜಿಲ್ಲಾ ಘಟಕ ಅಧ್ಯಕ್ಷೆ ವೀಣಾ ಮೋದಿ, ರವಿ ರಾಠೋಡ, ಭೀಮಣ್ಣ ಠಾಣಗಡ್ಡೆ, ವಿಠಲ್ ನರೋಣ, ಸಂಜುಕುಮಾರ್ ಪತಂಗೆ, ಸಾಬರೆಡ್ಡಿ, ಅಣ್ಣಾರಾವ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT