ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವನಸಿರಿ ನಡುವೆ ಕೈಬೀಸಿ ಕರೆವ ಜಲಧಾರೆ

Last Updated 20 ಅಕ್ಟೋಬರ್ 2017, 10:04 IST
ಅಕ್ಷರ ಗಾತ್ರ

ಗುರುಮಠಕಲ್: ಸುತ್ತಲಿನ ಬೆಟ್ಟಗಳೆಲ್ಲಾ ಹಸಿರುಡುಗೆಯುಟ್ಟು ಕಂಗೊಳಿಸುತ್ತ ನಿಂತು ಮಧ್ಯೆದಲ್ಲಿ ಮೈತುಂಬಿ ಹರಿದು ಧುಮ್ಮಿಕ್ಕುವ ಜಲಧಾರೆಯು ನೋಡುಗರ ಮೈಮರೆಯುವಂತೆ ಸಮ್ಮೋಹನಗೊಳಿಸುತ್ತದೆ. ಹಿಂಗಾರು ಮಳೆಯಿಂದಾಗಿ ಇಲ್ಲಿಗೆ ಸಮೀಪದ ಧಬ್ ದಬಿ ಜಲಪಾತವು ನೋಡುಗರನ್ನು ತನ್ನೆಡೆ ಸೆಳೆಯುತ್ತಿದೆ.

ಸುತ್ತಲಿನ ಹಸಿರು ಕಾನನದ ನಡುವಿನ ಈ ಜಲರಾಶಿಯ ಧುಮ್ಮಿಕ್ಕುವ ಸದ್ದು, ಮರಗಳಲ್ಲಿ ಕುಳಿತ ಹಕ್ಕಿಗಳ ಕಲರವ ಪ್ರವಾಸಿಗರನ್ನು ಮಂತ್ರಮುಗ್ದಗೊಳಿಸುತ್ತದೆ. ಅದರ ಜೊತೆಗೆ ಜಲಪಾತದ ಹತ್ತಿರಕ್ಕೆ ದೂರವಾಣಿ ಸಂಪರ್ಕವೂ ಸಿಗದಿರುವುದು ರಜೆಯ ಮಜಾ ಅನುಭವಿಸಲು ಹೇಳಿಮಾಡಿಸಿದಂತಿದ್ದು ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಿದೆ.

‘ಪ್ರತಿನಿತ್ಯ ಜಲಪಾತದ ವೀಕ್ಷಣೆಗೆ ಬರುವ ಪ್ರವಾಸಿಗರು ತರುವ ತಿಂಡಿಯ ಪೊಟ್ಟಣಗಳು, ನೀರಿನ ಬಾಟಲಿಗಳು ಸೇರಿದಂತೆ ಪ್ಲಾಸ್ಟಿಕ್ ತ್ಯಾಜ್ಯವನ್ನು ಇಲ್ಲಿಯೇ ಎಸೆದು ಹೋಗುತ್ತಿರುವುದರಿಂದ ಜಲಪಾತದ ಸುತ್ತಲೂ ಪ್ಲಾಸ್ಟಿಕ್ ಸಾಮ್ರಾಜ್ಯವೇ ತಲೆಯೆತ್ತಿದಂತಾಗಿದ್ದು, ಪ್ರವಾಸಿಗರು ಪರಿಸರ ಕಾಳಜಿನ್ನು ಮರೆಯಬಾರದು’ ಎಂದು ಮನವಿ ಮಾಡುತ್ತಾರೆ ಸ್ಥಳೀಯರಾದ ಶ್ರೀಕಾಂತರೆಡ್ಡಿ, ಮಂಜುನಾಥ, ಶ್ರೀಧರ ಹಾಗೂ ವರುಣ್.

‘ಜಲಪಾತದ ಹತ್ತಿರ ಮದ್ಯ ಸೇವನೆ, ಜೂಜಾಟ ಸೇರಿದಂತೆ ಹಲವು ಅಕ್ರಮ ಚಟುವಟಿಕೆಗಳು ಜರುಗುತ್ತವೆ. ಕುಟುಂಬದೊಡನೆ ಇಲ್ಲಿಗೆ ಬಂದು ನಿರುಮ್ಮಳರಾಗಿ ನಿಸರ್ಗವನ್ನು ಆಸ್ವಾದಿಸೋಣವೆಂದರೆ ಈ ಪುಂಡರಿಂದಾಗಿ ಸಂತೋಷವೂ ಕಡಿಮೆಯಾಗಿದೆ’ ಎಂದು ಪ್ರವಾಸಿಗರಾದ ಅನುರಾಧಾ, ವಿಕ್ರಮ, ಸಂತೋಷ, ನರಸಿಂಹ ಹಾಗು ರಾಘು ಅಸಮಧಾನ ವ್ಯಕ್ತಪಡಿಸಿದರು.

‘ಕುಡಿದ ಮದ್ಯದ ಬಾಟಲಿಗಳನ್ನು ಅಮಲಿನಲ್ಲಿ ಅಲ್ಲಿಯೇ ಹೊಡೆದು ಹಾಕುತ್ತಾರೆ. ಇದರಿಂದ ಜಲಪಾತಕ್ಕೆ ಬರುವ ಪ್ರವಾಸಿಗರಿಗೂ ಹಾಗೂ ಸುತ್ತಲಿನ ಜಮೀನಿನ ಕೃಷಿಕರಿಗೂ ತಿರುಗಾಡಲು ಸಮಸ್ಯೆಯಾಗುತ್ತಿದೆ. ಇದರಿಂದ ಸ್ಥಳೀಯ ಕೆಲ ರೈತರು ಕೈಗೆ ಸಿಕ್ಕ ಬಾಟಲಿ ಚೂರುಗಳನ್ನು ಅಲ್ಲಲ್ಲಿ ಗುಡ್ಡೆಯಾಗಿ ತೆಗೆದು ಹಾಕುತ್ತಿದ್ದಾರೆ’ ಆಕ್ರೋಶ ವ್ಯಕ್ತಪಡಿಸುತ್ತಾರೆ ರಾಜು, ವೆಂಕಟಪ್ಪ, ಮೌನೇಶ ಹಾಗೂ ಪ್ರಸಾದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT