ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಮಾಜದ ಪರಿವರ್ತನೆಗೆ ಸನ್ಯಾಸಿಯಾಗಬೇಕೇ?’

Last Updated 20 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

1. ನಾನು ನನ್ನ ಮಾವನ ಮಗಳನ್ನು ಪ್ರೀತಿಸುತ್ತಿದ್ದೆ. ಅವಳು ನನ್ನನ್ನು ಪ್ರೀತಿಸುತ್ತಿದ್ದಳು. ಇದು ಬಾಲ್ಯದಿಂದ ಹಿಡಿದು ಯೌವನದವರೆಗೂ ಮುಂದುವರೆದಿತ್ತು. ಇನ್ನೇನು ಮದುವೆಯಾಗಬೇಕು ಎಂದು ಇಬ್ಬರೂ ನಿರ್ಧರಿಸಿದ್ದೆವು. ಆದರೆ ಇಬ್ಬರ ಮನೆಯಲ್ಲೂ ‘ನಾವು ಮೇಲು, ತಾವು ಮೇಲು; ಅವರೇ ನಮ್ಮ ಮನೆಗೆ ಬರಲಿ, ಇವರೇ ನಮ್ಮ ಮನೆಗೆ ಬರಲಿ’ ಎಂದುಕೊಂಡು ಪರಸ್ಪರ ಕಚ್ಚಾಟಕ್ಕೆ ಬಿದ್ದು ದ್ವೇಷ ಸಾಧಿಸಿದರು. ನಂತರ ಇದೇ ಹಟ ಸಾಧಿಸಿ ನಾನು ಬೆಂಗಳೂರಿನಲ್ಲಿ ಕೆಲಸದಲ್ಲಿದ್ದ ಸಮಯ ನೋಡಿಕೊಂಡು ನನ್ನ ಹುಡುಗಿಗೆ ಬೇರೆ ಹುಡುಗನ ಜೊತೆ ನಿಶ್ಚಿತಾರ್ಥ ಮಾಡಿ ಮುಗಿಸಿದರು. ಇದನ್ನು ತಿಳಿದ ನನಗೆ ತುಂಬಾ ದುಃಖವಾಯಿತು. ಅವಳಿಲ್ಲದೇ ಇನ್ನೇಕೆ ಬದುಕುವುದು, ಅವಳಿಲ್ಲದ ಜೀವನ ಅರ್ಥವಿಲ್ಲದ್ದು – ಎಂದು ಅನ್ನಿಸುತ್ತಿದೆ. ಹತಾಶೆಯ ಭಾವ ಕಾಡುತ್ತಿದೆ. ಬಾಳಿನಲ್ಲಿ ಸ್ಫೂರ್ತಿ ಇಲ್ಲದಂತಾಗಿದೆ. ಏನು ಮಾಡಲಿ ಇದಕ್ಕೆ ಪರಿಹಾರ ಇಲ್ಲವೇ ಅಥವಾ ಅವಳ ನೆನಪಲ್ಲಿ ಇಡೀ ಜೀವನ ಕಳೆಯುವುದೇ?

ಸಂತೋಷ, ಊರು ಬೇಡ

ಇಂದಿಗೂ ಹಳ್ಳಿಗಳಲ್ಲಿ ಕುಟುಂಬಗಳ ನಡುವೆ ನಾವು, ನಮ್ಮದು ಎಂಬ ಅಹಂಕಾರವಿರುವುದು ಸಾಮಾನ್ಯ. ಈ ಸುಳ್ಳು ಪ್ರತಿಷ್ಠೆಗಳಿಂದ ಜನರು ಹೊರ ಬರಬೇಕು ಎಂದರೆ ಇನ್ನೂ ಹಲವು ತಲೆಮಾರುಗಳು ಕಳೆದುಹೋಗಬೇಕು. ಆದರೆ ಈಗ ನಿಮ್ಮ ಹುಡುಗಿಗೆ ಬೇರೆಯವರ ಜೊತೆ ಮದುವೆ ನಿಗದಿಯಾಗಿದೆ. ಈ ಬಗ್ಗೆ ನೀವು ಹೆಚ್ಚಿಗೆ ಏನೂ ಮಾಡಲು ಸಾಧ್ಯವಿಲ್ಲ. ನಿಮ್ಮ ಹುಡುಗಿಯೇ ಮದುವೆಯನ್ನು ವಿರೋಧಿಸಿ, ಅವರೇ ಒಂದು ನಿರ್ಧಾರಕ್ಕೆ ಬರಬೇಕಿತ್ತು. ನೀವು ಆ ಹುಡುಗಿಯನ್ನು ಯಾವಾಗಲೂ ಇಷ್ಟಪಡುತ್ತಿರಾದರೆ ಅವರ ಜೀವನಕ್ಕೆ ಶುಭವಾಗಲಿ ಎಂದು ಹಾರೈಸಿ, ಮುಂದೆ ಸಾಗಿ ಎಂದು ನಾನು ಹೇಳಬಯಸುತ್ತೇನೆ. ಸಮಯವೇ ನೋವನ್ನು ಮರೆಸುತ್ತದೆ. ಕೆಲಸ ಹಾಗೂ ಇತರ ಚಟುವಟಿಕೆಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಸಮಯ ಸರಿದಂತೆ ಅನೇಕ ಅವಕಾಶಗಳು ನಿಮ್ಮ ಬಳಿ ಬರುತ್ತದೆ. ಅಲ್ಲದೇ ಈ ಅವಕಾಶಗಳು ಜೀವನದಲ್ಲಿ ನೀವು ಮುಂದೆ ಬರಲು ಸಹಾಯ ಮಾಡುತ್ತದೆ. ಜೀವನದ ಹಾದಿಯಲ್ಲಿ ನಿಮಗೆ ಒಳ್ಳೆಯ ಸಂಗಾತಿ ಸಿಗಬಹುದು. ಯಾವಾಗಲೂ ಒಳ್ಳೆಯದನ್ನೇ ಯೋಚಿಸಿ. ಆಗುವುದೆಲ್ಲಾ ಒಳ್ಳೆಯದ್ದಕ್ಕೆ ಅಂದುಕೊಳ್ಳಿ.

2. ನಾನು  ಬಿ.ಎ. ಮೊದಲನೇ ವರ್ಷದಲ್ಲಿ ಓದುತ್ತಿದ್ದೇನೆ. ನನಗೆ ಎಲ್ಲರಂತೆ ಖುಷಿಯಿಂದ ಇರಲು ಸಾಧ್ಯವಾಗುತ್ತಿಲ್ಲ. ಏನೋ ಕಳೆದುಕೊಂಡಂತೆ ಇರುತ್ತೀನಿ ಅಂತ ಗೆಳೆಯರು ಹೇಳ್ತಾರೆ. ನನ್ನ ಮನಸಿನಲ್ಲಿ ಖಿನ್ನತೆ. ಏನನ್ನು ಮಾಡಲೂ ಒಂದು ವಿಧದ ಬೇಜಾರಾಗುತ್ತದೆ. ನನಗೆ ಯಾರಾದರೂ ಮನಸ್ಸಿಗೆ ನೋವು ಆಗುವ ರೀತಿಯಲ್ಲಿ ಮಾತನಾಡಿದರೆ ತುಂಬ ಯೋಚನೆಗಳು ಶುರು ಆಗುತ್ತವೆ. ಯಾವ ಸಮಯದಲ್ಲಿ ಏನು ಮಾತನಾಡಬೇಕು ಎಂದು ನನಗೆ ತಿಳಿಯುವುದಿಲ್ಲ. ನಂತರ ನಾನು ಹೀಗೆ ಮಾತನಾಡಬಾರದಿತ್ತು ಎಂದು ಪಶ್ಚಾತ್ತಾಪ ಪಡುತ್ತೇನೆ. ನಿಜವಾಗಲೂ ಇದು ನಂಗೆ ತುಂಬ ದೊಡ್ಡ ಸಮಸ್ಯೆಯೇ ಆಗಿದೆ. ನಾನು ತುಂಬ ಸಲ ಯೋಚನೆ ಮಾಡಿದೆ. ಇದು ಮಾನಸಿಕ ಕಾಯಿಲೆ –ಇರಬಹುದೆ ಎಂದು. ದಯವಿಟ್ಟು ನನಗೆ ಪರಿಹಾರ ತಿಳಿಸಿ.

–ರಾಜೇಶ್, ಊರು ಬೇಡ

ನಿಮಗೆ ಸಹಾಯ ಬೇಕು ಎಂಬುದನ್ನು ನೀವು ಅರಿತಿದ್ದೀರಿ. ಇದು ಪ್ರಶಂಸಾರ್ಹ. ಮೊದಲು ನೀವು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಿ. ಋಣಾತ್ಮಕವಾಗಿ ಮಾತನಾಡುವುದನ್ನು ನಿಲ್ಲಿಸಿ, ನೀವು ಪ್ರೀತಿಸುವವರ ಜೊತೆ ಸಮಯ ಕಳೆಯಿರಿ, ವಿಶ್ವಾಸ ವ್ಯಕ್ತಪಡಿಸುವುದನ್ನು ಕಲಿಯಿರಿ. ಈ ಕೆಲವು ಟಿಪ್ಸ್‌ಗಳಿಂದ ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಲು ಸಾಧ್ಯ. ಸಾಧಿಸಿಯೇ ತೀರುತ್ತೇನೆ ಎಂಬ ಗುರಿಯನ್ನು ಇರಿಸಿಕೊಳ್ಳಿ. ಇದು ನಿಮ್ಮಲ್ಲಿ ಧನಾತ್ಮಕ ವ್ಯಕ್ತಿತ್ವವು ಬೆಳೆಯಲು ಸಹಾಯ ಮಾಡುತ್ತದೆ. ಜೀವನವನ್ನು ಆತ್ಮವಿಶ್ವಾಸದಿಂದ ನೋಡಿ.

ಏಕ್ಸ್‌ಸೈಜ್, ಆಟ ಮತ್ತು ಕಾಲೇಜು ಚಟುವಟಿಕೆ ಮತ್ತು ಹವ್ಯಾಸಗಳಲ್ಲಿ ಯಾವಾಗಲೂ ನಿಮ್ಮನ್ನು ತೊಡಗಿಸಿಕೊಳ್ಳಿ. ಇದು ನಿಮ್ಮನ್ನು ಸದೃಢರಾಗಿರಲು ಸಹಾಯ ಮಾಡುತ್ತದೆ. ಜೀವನವನ್ನು ನೀವು ನೋಡುವ ರೀತಿ ಯಾವಾಗಲೂ ಧನಾತ್ಮಕವಾಗಿರಲಿ. ಪ್ರತಿ ವಿಷಯದ ಮೇಲೂ ಅನಗತ್ಯವಾಗಿ ಚಿಂತಿಸುವುದನ್ನು ತಡೆಯಲು ಧ್ಯಾನ ಮಾಡುವುದನ್ನು ರೂಢಿಸಿಕೊಳ್ಳಿ.

ನಿಮ್ಮಿಂದ ಇವೆಲ್ಲವೂ ಮಾಡಲು ಸಾಧ್ಯವಾಗದಿದ್ದರೆ ಒಬ್ಬ ಉತ್ತಮ ಆಪ್ತಸಮಾಲೋಚಕರನ್ನು ಕಂಡು ಕೆಲವು ಸೆಷನ್‌ಗಳಲ್ಲಿ ಭಾಗವಹಿಸಿ. ಆಗ ನೀವೇ ನಿಮ್ಮಲ್ಲಿ ಬದಲಾವಣೆಯನ್ನು ಗುರುತಿಸುತ್ತೀರಿ.

3. ನನಗೆ 22 ವರ್ಷ. ಮದುವೆಯಾಗಿ ಗಂಡನ ಮನೆಯಲ್ಲಿ ಇದ್ದೇನೆ. ನನ್ನ ಗಂಡ, ಅತ್ತೆ–ಮಾವ ನನ್ನನ್ನು ತುಂಬಾ ಪ್ರೀತಿಸುತ್ತಾರೆ. ಆದರೆ ಒಂದು ಯೋಚನೆ ನನಗೆ ತುಂಬಾ ವರ್ಷದಿಂದ ಕಾಡುತ್ತಿದೆ. ಅದೇನೆಂದರೆ ನನಗೆ ಸನ್ಯಾಸತ್ವ ಸ್ವೀಕರಿಸಬೇಕು ಎಂಬುದು. ಆ ಮೂಲಕ ಸಮಾಜದಲ್ಲಿ ಬದಲಾವಣೆ ತರಬೇಕು ಎಂದೆಲ್ಲಾ ಆಸೆ ಮನಸ್ಸಲ್ಲಿ ಬರುತ್ತದೆ. ಖುಷಿಯಾದಾಗಲೂ ಹೀಗೆ ಅನ್ನಿಸುತ್ತದೆ, ಬೇಸರವಾದಾಗಲೂ ಹೀಗೆ ಅನ್ನಿಸುತ್ತದೆ. ಆದರೆ ಇದನ್ನೆಲ್ಲ ಮನೆಯಲ್ಲಿ ಹೇಳುವುದಕ್ಕೂ ಆಗುವುದಿಲ್ಲ. ಕಾರಣ ಮನೆಯಲ್ಲಿ ಎಲ್ಲರೂ ನನ್ನನ್ನು ತುಂಬಾ ಪ್ರೀತಿಸುತ್ತಾರೆ. ಇಷ್ಟೆಲ್ಲಾ ಇದ್ದು ಮೊನ್ನೆ ಗಟ್ಟಿ ಮನಸ್ಸು ಮಾಡಿ ಮನೆಯಿಂದ ಹೊರ ಹೋಗಲು ನಿರ್ಧರಿಸಿದೆ. ಆದರೆ ಅಷ್ಟರಲ್ಲಿ ಬಾಬಾ ರಾಮ್ ರಹೀಂ ಸುದ್ದ ಕೇಳಿ ಶಾಕ್ ಆಯ್ತು. ಹೀಗೂ ಇದೆಯಾ ಪ್ರಪಂಚ ಎಂದು ಅನ್ನಿಸಿತು. ಈಗ ನಾನು ಈ ಯೋಚನೆಯಿಂದ ಹೊರ ಬರುವುದು ಹೇಗೆ? ನನ್ನ ಆಸೆಯೂ ಈಡೇರಬೇಕು, ನನ್ನ ಮನೆಯರಿಗೂ ಮೋಸ ಆಗಬಾರದು. ನಾನು ಏನು ಮಾಡಬೇಕು?

ಮನೆಬಿಟ್ಟು ಹೋಗಿ ಬದುಕುವುದು ಸುಲಭದ ಮಾತಲ್ಲ. ಮನೆಯ ಹೊರಗಿನ ಜೀವನ ಸಂಪೂರ್ಣವಾಗಿ ಅನಿಶ್ಚಿತತೆಯಿಂದ ಕೂಡಿದೆ. ಒಂದು ಬೇರೆಯದೇ ಸಾಮಾಜಿಕ ಜೀವನವನ್ನು ನಿರ್ವಹಿಸಬೇಕಾಗುತ್ತದೆ. ಅದರ ತುಂಬಾ ಚಾಲೆಂಜ್‌ಗಳೇ ಎದುರಾಗುತ್ತವೆ. ನೀವು ಹುಟ್ಟಿದಾಗಿನಿಂದ ಇಲ್ಲಿಯವರೆಗೆ ಕಾಳಜಿಯಿಂದ, ಪ್ರೀತಿಯಿಂದ, ನಿಮ್ಮ ಮನೆಯವರು ನಿಮ್ಮನ್ನು ರಕ್ಷಿಸಿಕೊಂಡು ಬಂದಿದ್ದರು. ನೀವು ಯೋಚನೆ ಮಾಡಿದ ಹಾದಿಯನ್ನು ಎದುರಿಸಲು ನೀವಿನ್ನೂ ತುಂಬಾ ಚಿಕ್ಕವರು. ಅದಾಗಿಯೂ ನೀವು ತುಂಬಾ ಸಮಯದಿಂದ ಈ ಬಗ್ಗೆ ಯೋಚಿಸಿಕೊಂಡು ಬಂದಿದ್ದೀರಿ. ಇಷ್ಟಾಗಿಯೂ ನೀವಿನ್ನೂ ತಿಳಿಯಲು, ಕಲಿಯಲು ಬಹಳವೇ ಇದೆ. ಇದಿನ್ನೂ ಕಲಿಯುವ ವಯಸ್ಸು. ಜೀವನದ ಹಂತಗಳ ಅನುಭವವನ್ನು ಪಡೆದುಕೊಳ್ಳಿ. ಸ್ವಲ್ಪ ಸಮಯ ನೀಡಿ. ಅವಸರ ಮಾಡಬೇಡಿ.

ಸಮಾಜವನ್ನು ಪರಿವರ್ತನೆ ಮಾಡಲು, ಜನರಿಗೆ ಸಹಾಯ ಮಾಡಲು, ಜಾಗೃತಿ ಮೂಡಿಸಲು ಸನ್ಯಾಸತ್ವವನ್ನು ಸ್ವೀಕರಿಸಬೇಕು ಎಂದೇನೂ ಇಲ್ಲ. ಮನೆಯಲ್ಲಿಯೇ ಉಳಿದುಕೊಂಡು ಸಾಮಾಜಿಕ ಕಾರ್ಯಗಳನ್ನು ಮಾಡಬಹುದು. ಜೊತೆಗೆ ಇಂತಹ ಸೇವೆ ಮತ್ತು ಉದಾತ್ತ ಕಾರಣಗಳಿಗೆ ನಿಮ್ಮ ಮನೆಯವರನ್ನು ಸೇರಿಸಿಕೊಳ್ಳಬಹುದು. ಪ್ರಬುದ್ಧತೆಯ ವಯಸ್ಸು ಮತ್ತು ಮನಸ್ಸಿನಲ್ಲಿ ದೃಢತೆ ಹೆಚ್ಚಿದಂತೆ, ಅನುಭವಗಳನ್ನು ಪಡೆದಂತೆ ನಿಜವಾಗಲೂ ನಿಮಗೆ ಏನು ಬೇಕು ಎಂಬುದರ ಸ್ವಷ್ಟ ಅರಿವು ನಿಮಗಾಗುತ್ತದೆ. ಅಂತರ್ಮುಖರಾಗಿರಿ. ಸಮಾಜಕ್ಕೆ ಸಹಾಯ ಮಾಡಬೇಕೆಂಬ ನಿಮ್ಮ ಆಸಕ್ತಿಯ ಕುರಿತು ನಿಮ್ಮ ಗಂಡ ಮತ್ತು ಅತ್ತೆ–ಮಾವನ ಬಳಿ ಮಾತನಾಡಿ. ಆದ್ಯತೆಗಳಿಗೆ ತಕ್ಕಂತೆ ಕೆಲಸ ಮಾಡಿ. ಇದು ಕುಟುಂಬದ ಸಮಯ. ಹಾಗಾಗಿ ಮೊದಲು ಅವರ ಜವಾಬ್ದಾರಿ ತೆಗೆದುಕೊಳ್ಳಿ. ಸಮಯ ಸರಿದಂತೆ ಉಳಿದವೆಲ್ಲವೂ ಇದನ್ನು ಹಿಂಬಾಲಿಸುತ್ತದೆ.

4. ನನಗೆ 19 ವರ್ಷ. ನಾನು ಡಿಪ್ಲೋಮಾ ಫೇಲ್ ಆಗಿದ್ದೇನೆ. ಅದರಿಂದ ಏನೇ ಕೆಲಸ ಮಾಡಲು ಹೋದರು ಒಂದು ರೀತಿ ಗಡಿಬಿಡಿ ಕೆಲಸ ಆಗುತ್ತದೆ. ಜೀವನದಲ್ಲಿ ಎಲ್ಲವೂ ಕೆಟ್ಟದೇ ಆಗುತ್ತಿದೆ. ಬೇರೆ ಕೆಲಸ ಮಾಡಲು ಬೇಜಾರಾಗುತ್ತಿದೆ. ಫೇಲ್ ಆಗಿದ್ದಕ್ಕೆ ಮನೆಯಲ್ಲಿ ಬೈಯುತ್ತಿದ್ದಾರೆ. ಹಾಗಾಗಿ ನಾನು ನಿಮ್ಮಲ್ಲಿ ಕೇಳುವುದೇನೆಂದರೆ ನಾನು ಯಾವ ರೀತಿ ಓದಬೇಕು. ಏನಾದರೂ ಪರಿಹಾರ ಕೊಡಿ.
ಪುನೀತ್ ರಾಜ್, ಊರು ಬೇಡ

ಗಂಭೀರತೆಯ ಕೊರತೆ ಮತ್ತು ಓದಿನ ಮೇಲೆ ಗಮನ ಇಲ್ಲದಿರುವುದು ನೀವು ಫೇಲಾಗಲು ಮುಖ್ಯ ಕಾರಣ. ನೀವು ಇದನ್ನು ತೀರಾ ಸಾಮಾನ್ಯವಾಗಿ ಪರಿಗಣಿಸಿದ್ದೀರಿ. ಓದಿನ ವಿಷಯಕ್ಕೆ ಬಂದಾಗ ನಿಮ್ಮ ಮೊದಲ ಆದ್ಯತೆ ಓದಿನ ಮೇಲೆ ಆಗಿರಬೇಕು. ಆಗ ಉಳಿದಿದ್ದೆಲ್ಲವೂ ಹಿಂಬಾಲಿಸುತ್ತದೆ. ಈಗ ನೀವು ನಿಮ್ಮ ಡಿಪ್ಲೋಮಾವನ್ನು ಮುಗಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ನೀವು ಈಗ ಅದನ್ನು ಚಾಲೆಂಜ್ ಆಗಿ ಸ್ವೀಕರಿಸಿ, ಬೇರೆಲ್ಲ ಕೆಲಸವನ್ನು ಬದಿಗೊತ್ತಿ ಓದಿನ ಮೇಲೆ ಗಮನ ಹರಿಸಿ. ಒಂದು ಸರಿಯಾದ ಟೈಮ್ ಟೇಬಲ್ ಸಿದ್ಧಪಡಿಸಿಕೊಂಡು ಅದನ್ನು ಗಂಭಿರವಾಗಿ ಹಿಂಬಾಲಿಸಿ. ಇಡೀ ದಿನ ನಿಮ್ಮನ್ನು ಚಟುವಟಿಕೆಯಿಂದ ಕೂಡಿರುವಂತೆ ಮಾಡುವ ಏಕ್ಸ್‌ಸೈಜ್ ಮತ್ತು ಧ್ಯಾನಕ್ಕೂ ನಿಮ್ಮ ಟೈಂ ಟೇಬಲ್‌ನಲ್ಲಿ ಒಂದು ಪಾಲಿರಲಿ.

ಓದುವಾಗ ಒಂದು ನೋಟ್ಸ್ ಅನ್ನು ಸಿದ್ಧಪಡಿಸಿಕೊಳ್ಳಿ. ಅದು ನಿಮಗೆ ಓದನ್ನು ಸುಲಭವಾಗಿಸುತ್ತದೆ. ಅಲ್ಲದೇ ಅದನ್ನು ಯಾವಾಗಲೂ ನೋಡಿಕೊಂಡು ಓದಬಹುದು. ನೀವು ಇಡೀ ಸಬ್ಜೆಕ್ಟ್ ಅನ್ನು ಓದಿ ಮುಗಿಸಿದ ಮೇಲೆ ಕಳೆದ 5 ವರ್ಷಗಳ ಪ್ರಶ್ನಪತ್ರಿಕೆಯನ್ನು ಇರಿಸಿಕೊಂಡು ಅದನ್ನು ಬಿಡಿಸಿ. ಅದು ವಿಷಯವನ್ನು ನೀವು ಎಷ್ಟರ ಮಟ್ಟಿಗೆ ಅರ್ಥಮಾಡಿಕೊಂಡಿದ್ದೀರಾ ಎಂಬುದನ್ನು ತಿಳಿಸುತ್ತದೆ. ಪ್ರತಿದಿನ ಅಭ್ಯಾಸ ಮಾಡಿ. ಅದೊಂದೆ ಹಾದಿಯಿಂದ ನೀವು ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಸಾಧ್ಯ.

ನೀವು ಇರಿಸಿಕೊಂಡ ಯಾವುದೇ ಟಾಸ್ಕ್ ಮೇಲಾದರೂ ಒಂದು ಧನಾತ್ಮಕ ಭಾವನೆ ಇರಿಸಿಕೊಳ್ಳಿ ಮತ್ತು ಮನಸ್ಸಿನಿಂದ ಅದನ್ನು ಮಾಡಿ. ಆಮೇಲಷ್ಟೇ ನಿಮಗೆ ಆ ಕೆಲಸದ ಮೇಲೆ ಆಸಕ್ತಿ ಹುಟ್ಟಲು ಸಾಧ್ಯ, ನಿರಂತರ ಪ್ರಯತ್ನದಿಂದ ನಿಮ್ಮಲ್ಲಿ ಆತ್ಮವಿಶ್ವಾಸ ಹುಟ್ಟಲು ಸಾಧ್ಯ. ಒಮ್ಮೆ ನಿಮ್ಮ ಕುಟುಂಬದವರಿಗೆ ನಿಮಗೂ ಜವಾಬ್ದಾರಿ ಇದೆ, ನೀವು ಓದಿನ ಮೇಲೆ ಆಸಕ್ತಿ ತೋರಿತ್ತಿದ್ದೀರಿ, ಜೀವನದಲ್ಲಿ ಗುರಿ ಸಾಧಿಸಲು ಶ್ರಮ ವಹಿಸುತ್ತೀರಾ ಎಂದು ಅನ್ನಿಸಲು ಪ್ರಾರಂಭಿಸಿದರೆ ನಿಮ್ಮ ಕುಟುಂಬದವರು ನಿಮಗೆ ಸಹಾಯ ಮಾಡುತ್ತಾರೆ.

ಹಾಗಾಗೀ ನೀವೇ ಇವೆಲ್ಲದಕ್ಕೂ ನಿಮ್ಮ ಮನಸ್ಸನ್ನು ಸಿದ್ಧಗೊಳಿಸಿಕೊಳ್ಳಬೇಕು ಮತ್ತು ಇದನ್ನು ಚಾಲೆಂಜ್ ಆಗಿ ಸ್ವೀಕರಿಸಬೇಕು. ನಿಮಗೇ ತಿಳಿದಿರುವಂತೆ ಯಾವುದು ಅಸಾಧ್ಯವಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT