ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆತ್ತಲೆ ಬೆನ್ನಿನ ಬೆಡಗು...

Last Updated 20 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ನವರಾತ್ರಿಯಂದು ಬಾಲಿವುಡ್‌ ನಟಿ ಸನ್ನಿ ಲಿಯೊನ್ ತಮ್ಮ ನುಣುಪಾದ ಬೆನ್ನು ತೋರುವ ಉದ್ದನೆಯ ಕಪ್ಪು ಗೌನ್ ತೊಟ್ಟು ಮಾಧ್ಯಮಗಳಲ್ಲಿ ಮಿಂಚಿದ್ದರು. ದಿಶಾ ಪಟಾನಿ ಸಹ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬೆನ್ನು ತೋರುವ ಉಡುಪು ತೊಟ್ಟ ಚಿತ್ರ ಹಾಕಿಕೊಂಡರು. ನಿಧಾನವಾಗಿ ಇದು ಒಂದು ಫ್ಯಾಷನ್ ಟ್ರೆಂಡ್ ಸ್ವರೂಪ ಪಡೆದುಕೊಂಡಿತು.

ಸಿನಿತಾರೆಯರು ಬೆತ್ತಲೆ ಬೆನ್ನು ಕಾಣಿಸುವ ಉಡುಪು ತೊಡುವುದಾಗಲೀ, ಅಂಥ ಸಂದರ್ಭಗಳಲ್ಲಿ ಅದರ ಸುತ್ತ ವಿವಾದಗಳು ಏಳುವುದಾಗಲೀ ಹೊಸದಲ್ಲ. ಬಾಲಿವುಡ್‌ನಲ್ಲಿ ಬೆತ್ತಲೆ ಬೆನ್ನಿನ ಇತಿಹಾಸಕ್ಕೆ ಪರೋಕ್ಷವಾಗಿ ಮುನ್ನುಡಿ ಬರೆದವರು ನಟಿ ಮಾಧುರಿ ದೀಕ್ಷಿತ್. ‘ಬೇಟಾ’ ಸಿನಿಮಾದಲ್ಲಿ ನಟ ಅನಿಲ್ ಕಪೂರ್ ಅವರೊಂದಿಗೆ ‘ಧಕ್ ಧಕ್’ ಹಾಡಿಗೆ ತೆಳು ಹಳದಿ ಸೀರೆಯಲ್ಲಿ ಮಾಧುರಿ ಹೆಜ್ಜೆ ಹಾಕುವಾಗ ತೊಟ್ಟಿದ್ದು, ಬೆನ್ನು ತೋರುವ ರವಿಕೆ. ‘ಖಳ್‌ನಾಯಕ್’ ಸಿನಿಮಾದಲ್ಲಿ ‘ಚೋಲಿ ಕೆ ಪೀಛೆ ಕ್ಯಾ ಹೈ’ ಹಾಡಿನಲ್ಲಿ ಲಂಬಾಣಿ ಉಡುಪು ತೊಟ್ಟಿದ್ದ ಮಾಧುರಿ ಅಲ್ಲೂ ಬೆತ್ತಲೆ ಬೆನ್ನು ತೋರಿದ್ದರು. ಆಗ ಮಾಧುರಿ ತೊಟ್ಟಿದ್ದ ಉಡುಪಿಗಿಂತ ಹಾಡಿನ ಸಾಲುಗಳೇ ವಿವಾದಕ್ಕೀಡಾಗಿದ್ದವು.

(ಸನ್ನಿ ಲಿಯೋನ್)

ಇತ್ತೀಚೆಗಷ್ಟೇ ‘ವೈರ’ ಕನ್ನಡ ಸಿನಿಮಾದಲ್ಲಿ ನಟಿ ಪ್ರಿಯಾಂಕಾ ಮಲ್ನಾಡ್ ಬೆತ್ತಲೆ ಬೆನ್ನಿನ ದೃಶ್ಯದ ಕಾರಣಕ್ಕಾಗಿ ಸುದ್ದಿಯಾಗಿದ್ದರು. ಇದಕ್ಕೂ ಮುನ್ನ ‘ದಂಡುಪಾಳ್ಯ’ ಸಿನಿಮಾದಲ್ಲಿ ಪೂಜಾ ಗಾಂಧಿ, ‘(ದಂಡುಪಾಳ್ಯ) 2’ರಲ್ಲಿ ಸಂಜನಾ, ‘ಕಡ್ಡಿಪುಡಿ’ ಸಿನಿಮಾದ ಹಾಡೊಂದರಲ್ಲಿ ಐಂದ್ರಿತಾ ರೇ ಬೆತ್ತಲೆ ಬೆನ್ನು ತೋರಿಸಿ ಸುದ್ದಿಯ ಕೇಂದ್ರವಾಗಿದ್ದರು. ನಟಿಯರ ಬೆತ್ತಲೆ ಬೆನ್ನು ಚಿತ್ರಕ್ಕೆ ಸಾಕಷ್ಟು ಪ್ರಚಾರವನ್ನೂ ತಂದುಕೊಟ್ಟಿತ್ತು.

ಸಿನಿಮಾರಂಗದಲ್ಲಿ ಪುರುಷರು ಟಾಪ್‌ಲೆಸ್ ಆದರೆ ಸುದ್ದಿಯಾಗುವುದಿಲ್ಲ. ಅವರು ಕ್ಯಾಮೆರಾ ಎದುರು ಎದೆತೋರಿ ನಿಂತಾಗ ಅವರ ವಿರುದ್ಧ ಟ್ರೋಲ್‌ಗಳೂ ಆಗುವುದಿಲ್ಲ. ವಿವಾದಗಳೂ ಉದ್ಭವಿಸುವುದಿಲ್ಲ. ಆದರೆ, ಒಬ್ಬ ನಟಿ ಬೆನ್ನು ಕಾಣುವ ಉಡುಪು ತೊಟ್ಟ ತಕ್ಷಣ ಭಾರೀ ಸುದ್ದಿಯಾಗುತ್ತದೆ. ಈ ಬೆಳವಣಿಗೆಯನ್ನು ಕೆಲ ವಿಮರ್ಶಕರು ’ಪುರುಷ ಪ್ರಧಾನ ಮನಸ್ಥಿತಿ’ ಎಂದು ವಿಶ್ಲೇಷಿಸುತ್ತಾರೆ.

ಕನ್ನಡ ಸಿನಿರಂಗದಲ್ಲಿ ಬೆತ್ತಲೆ ಬೆನ್ನಿಗಾಗಿ ಹೆಚ್ಚು ಸುದ್ದಿಯಾದವರು ನಟಿ ಅನಿತಾ ಭಟ್. ಬೆತ್ತಲೆ ಬೆನ್ನು ತೋರಿ ಫೋಟೊಶೂಟ್ ಮಾಡಿಸಿದಾಗ ಅನಿತಾ ಭಟ್ ವಿರುದ್ಧ ಹರಿಹಾಯ್ದವರೇ ಹೆಚ್ಚು ಮಂದಿ. ಆದರೆ, ಈ ಬಗ್ಗೆ ಅನಿತಾ ಭಟ್ ಹೇಳುವುದೇ ಬೇರೆ.

‘ನಟಿಯಾಗಿ ಹೇಳಬೇಕೆಂದರೆ ಸಿನಿಮಾದ ಪಾತ್ರ ಏನು ಬೇಡುತ್ತೋ ಅದನ್ನು ನಾನು ಮಾಡುತ್ತೇನೆ. ಫೋಟೊ ಶೂಟ್ ಮಾಡಿಸಿದ್ದು ವೈಯಕ್ತಿಕ ಕಾರಣಕ್ಕಾಗಿ. ನಿತ್ಯ ಜೀವನದಲ್ಲಿ ಎಷ್ಟೋ ಗೃಹಿಣಿಯರು ಬ್ಯಾಕ್ ಡೀಪ್ ಅಗಿರುವ ರವಿಕೆ ತೊಡುತ್ತಾರೆ. ಅಂಥವರ ಬಗ್ಗೆ ಯಾರೂ  ಪ್ರಶ್ನಿಸುವುದಿಲ್ಲ. ಅದೇ ಒಬ್ಬ ನಟಿ ಬ್ಯಾಕ್ ಲೆಸ್ ಉಡುಪು ತೊಟ್ಟಾಕ್ಷಣ ಸುದ್ದಿಯಾಗುತ್ತದೆ. ಯಾಕೆ ಹೀಗೆ? ಟಿಆರ್‌ಪಿಗಾಗಿ ಹೀಗೆ ಮಾಡುತ್ತಾರಾ? ಈಗೀಗಂತೂ ನನಗೆ ವಿವಾದ ಅಂದರೆ ಏನೂ ಅನಿಸೋದಿಲ್ಲ. ಈಚೆಗೆ ತಮಿಳು ಸಿನಿಮಾವೊಂದರ ಹಾಡಿನಲ್ಲಿ ಅಭಿನಯಿಸಲು ನನಗೆ ಆಫರ್ ಬಂದಿತ್ತು. ಅವರು ತೋರಿಸಿದ ಉಡುಪುಗಳು ಇಷ್ಟವಾಗಲಿಲ್ಲ. ನೇರವಾಗಿಯೇ ಇಂಥ ಉಡುಪು ತೊಡುವುದಿಲ್ಲ ಅಂದುಬಿಟ್ಟೆ. ನಾನು ಬೇರೆಯವರಿಗಾಗಿ ಯಾವತ್ತೂ ಉಡುಪು ತೊಡುವುದಿಲ್ಲ. ನನ್ನ ದೇಹ ನನ್ನ ಹಕ್ಕು. ಅಂತೆಯೇ ನನ್ನ ಉಡುಪು ನನ್ನ ಆಯ್ಕೆ’ ಎಂದು ಸ್ಪಷ್ಟವಾಗಿ ಪ್ರತಿಕ್ರಿಯಿಸಿದರು.

(ತಮನ್ನಾ ಭಾಟಿಯಾ)

ಬೆತ್ತಲೆ ಬೆನ್ನಿನ ವಿವಾದಕ್ಕೆ ತಾತ್ವಿಕ ಆಯಾಮ ನೀಡುವ ಪ್ರಯತ್ನ ಮಾಡುತ್ತಾರೆ ಸ್ತ್ರೀವಾದಿ ವಿಮರ್ಶಕಿ ಡಾ.ಎಂ.ಎಸ್.ಆಶಾದೇವಿ.

‘ಹೆಣ್ಣನ್ನು ಕೇವಲ ದೇಹ, ಗಂಡಿನ ಉಪಭೋಗಕ್ಕೆ ಇರುವ ಸರಕು ಎಂದು ಭಾವಿಸುವ ಮನಸ್ಥಿತಿಯಲ್ಲಿಯೇ ಸಮಸ್ಯೆಯ ಮೂಲ ಇದೆ. ಶೀಲ–ಅಶ್ಲೀಲ ಅನ್ನುವ ಪ್ರಶ್ನೆ ನಾವು ನೋಡುವ ದೃಷ್ಟಿಕೋನದಲ್ಲಿದೆ. ಒಬ್ಬ ಗಂಡಸು ಬೆತ್ತಲೆ ದೇಹ ತೋರಿದರೆ ಅಲ್ಲಿ ಯಾವ ಪ್ರಶ್ನೆಗಳೂ ಉದ್ಭವಿಸುವುದಿಲ್ಲ. ಆದರೆ, ಅದೇ ಹೆಣ್ಣು ತೋರಿದಾಗ ಮಾತ್ರ ಉದ್ಭವಿಸುತ್ತದೆ. ಹೆಣ್ಣಿನ ದೇಹವನ್ನು ಜೊಲ್ಲು ಸುರಿಸಿಕೊಂಡು ನೋಡಬೇಕು ಎನ್ನುವ ದೃಷ್ಟಿಕೋನವೇ ಬಹುತೇಕ ಕಡೆ ರಾರಾಜಿಸುತ್ತಿದೆ. ನಾವು ತೊಡುವ ಉಡುಪು ದೈಹಿಕ ಆಯ್ಕೆ ಮತ್ತು ಅಭಿರುಚಿಯ ಪ್ರಶ್ನೆಯಾಗಿಯಷ್ಟೇ ಇಂದು ಉಳಿದಿಲ್ಲ’ ಎನ್ನುವುದು ಅವರ ಅಭಿಪ್ರಾಯ.

**

ಸಿನಿಮಾ ತಾರೆಯರ ಬೆತ್ತಲೆ ಬೆನ್ನು ಈಗ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ. 80 ವರ್ಷಗಳ ಹಿಂದೆಯೇ ಹಾಲಿವುಡ್ ತಾರೆ ಮೆಕ್ಲೆನ್ ಪ್ಯಾಟನ್  ಬೆತ್ತಲೆ ಬೆನ್ನಿನ ಉಡುಪು ತೊಟ್ಟು ವಿವಾದಕ್ಕೆ ಕಾರಣವಾಗಿದ್ದರು. ಬಾಲಿವುಡ್‌ ಮತ್ತು ಚಂದನವನದಲ್ಲೂ ಬೆತ್ತಲೆ ಬೆನ್ನಿನ ಕುರಿತು ಕೊಂಕು ಮಾತುಗಳಿಗೇನೂ ಕೊರತೆಯಿಲ್ಲ. ‘ಅವಳ ದೇಹ ಅವಳ ಹಕ್ಕು’ ಎಂಬುದನ್ನು ಪ್ರಬಲವಾಗಿ ಪ್ರತಿಪಾದಿಸುವ ನಟಿಯರು, ನಿತ್ಯ ಜೀವನದಲ್ಲೂ ಸಾಮಾನ್ಯ ಮಹಿಳೆಯರು ಡೀಪ್ ನೆಕ್ ಬ್ಲೌಸ್ ತೊಡುತ್ತಾರಲ್ಲ. ಅವರಿಗಿಲ್ಲದ ವಿವಾದ ನಮಗೇಕೆ ಎಂದು ಪ್ರಶ್ನಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT