‘ಹಾಡು ಹಿಟ್‌ ಆದ್ರೆ, ಅದೇ ಖುಷಿ’

ಮಂಗಳವಾರ, ಜೂನ್ 25, 2019
25 °C

‘ಹಾಡು ಹಿಟ್‌ ಆದ್ರೆ, ಅದೇ ಖುಷಿ’

Published:
Updated:
‘ಹಾಡು ಹಿಟ್‌ ಆದ್ರೆ, ಅದೇ ಖುಷಿ’

ರಿಕ್ಕಿ ಕೇಜ್ ಅವರು 2004ರಿಂದಲೇ ನನಗೆ ಪರಿಚಯ. ಒಮ್ಮೆ ಅವರು ನನ್ನ ಸಂಗೀತ ಕಾರ್ಯಕ್ರಮಕ್ಕೆ ಬಂದಿದ್ದರು. ಆ ಮೊದಲು ಅವರು ನನ್ನ ಹಾಡು ಕೇಳಿರಲಿಲ್ಲ. ಮೊದಲ ಬಾರಿಯೇ ನನ್ನ ಸ್ವರ, ಹಾಡಿನ ಶೈಲಿಯನ್ನು ಮೆಚ್ಚಿದರು. ರಿಕ್ಕಿ ಕೇಜ್‌ ಅವರು ಕೆಲವೇ ಕೆಲವು ಸಿನಿಮಾಗಳಿಗೆ ಕೆಲಸ ಮಾಡಿದ್ದಾರೆ. ಅವರ ಎಲ್ಲ ಕೆಲಸಗಳಲ್ಲಿಯೂ ಸಾಮಾಜಿಕ ಮತ್ತು ಪರಿಸರ ಕಾಳಜಿ ಗುರುತಿಸಬಹುದು. ಇಡೀ ಜಗತ್ತು ಗುರುತಿಸುವಂಥ ಸಂಗೀತ ಕಲಾವಿದ ಅವರು.

ಅಮೆರಿಕ, ವಿಯೆಟ್ನಾಂ, ಘಾನಾ ಟಿಬೆಟ್ ಹೀಗೆ ಪ್ರಪಂಚದ ವಿವಿಧ ಭಾಗಗಳ ಸುಮಾರು 300 ಖ್ಯಾತ ಸಂಗೀತಗಾರರು ಈ ಕಾರ್ಯಕ್ರಮಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಕಳೆದ ವರ್ಷ ಜಯಮಹಲ್‌ನಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿದ್ದೆ. ಅಲ್ಲಿಗೂ ಈಗ ಬಂದಿರುವ ಹಲವು ಕಲಾವಿದರು ಬಂದಿದ್ದರು. ಅವರ ಸಂಗೀತ ಶೈಲಿಯೇ ಬೇರೆ. ಅವರು ಬಳಸುವ ಉಪಕರಣಗಳೇ ಬೇರೆ. ಸಂಸ್ಕೃತಿ, ಆಚಾರಗಳೂ ಭಿನ್ನ. ಅವರನ್ನು ಭೇಟಿಯಾಗುವ ಮೂಲಕ, ಅವರ ಸಂಗೀತವನ್ನು ಆಸ್ವಾದಿಸುವ ಮೂಲಕ ವಿಶ್ವದ ವಿವಿಧೆಡೆಯ ಹಲವು ಸಂಗೀತ ಪ್ರಕಾರಗಳನ್ನು ಆಲಿಸಿದೆವು.

2005ರಲ್ಲಿ ನಾನು 'ಅಮೃತಧಾರೆ' ಸಿನಿಮಾದ ‘ಹುಡುಗ ಹುಡುಗ...’ ಹಾಡು ಹಾಡಿದ್ದೆ. ಇವತ್ತಿಗೂ ನಾನು ಹಾಡಲು ಮೈಕ್ ಕೈಗೆತ್ತಿಕೊಂಡರೆ ಜನ ಆ ಹಾಡನ್ನೇ ಮೊದಲು ಕೇಳುತ್ತಾರೆ. ಆ ಹಾಡು ಅಷ್ಟರಮಟ್ಟಿಗೆ ಜನರ ಮನದಲ್ಲಿ ಸ್ಥಾನ ಪಡೆದಿದೆ. ನಾನು ಹಾಡಿದ ‘ಬಂಗಾರಿ ಯಾರೇ ನೀ ಬುಲ್ ಬುಲ್’, ‘ಬಿಡು ಬಿಡು ಕದ್ದು ಕದ್ದು ನೋಡೊದನ್ನ’, ‘ಡಾ.ಸತ್ಯ’, ‘ಕದ್ದು ಕದ್ದು ನೋಡೊ ಕಳ್ಳ ಯಾರೋ’ ಎಲ್ಲಾ ಹಾಡುಗಳು ನನಗೆ ಜನಪ್ರಿಯತೆ ತಂದುಕೊಟ್ಟವು. ಎಲ್ಲಾ ಸೂಪರ್ ಹಿಟ್. ಆ ತೃಪ್ತಿ ಇದೆ.

ಹಾಡಿನ ರೆಕಾರ್ಡಿಂಗ್‌ಗೆಂದು ಸ್ಟುಡಿಯೊಗೆ ಹೋದ ಮೇಲೆಯೇ ಹಾಡಿನ ಸಾಹಿತ್ಯ, ರಾಗ ಮತ್ತು ಮೂಡ್ ಗೊತ್ತಾಗುತ್ತದೆ. ಯಾವ ರೀತಿಯ ಹಾಡಾಗಿದ್ದರೂ ಅಲ್ಲಿಯೇ ಸಿದ್ಧತೆ ಮಾಡಿಕೊಳ್ಳಬೇಕು. ನಾನು ಮಾತ್ರವೇ ಅಲ್ಲ, ಎಲ್ಲಾ ಹಿನ್ನೆಲೆ ಗಾಯಕರು ಇದೇ ರೀತಿಯ ಮನಸ್ಥಿತಿ ಹೊಂದಿರುತ್ತಾರೆ.

ವೇದಿಕೆ ಮೇಲೆ ಹಾಡೋದು ರೆಕಾರ್ಡಿಂಗ್‌ಗಿಂತ ಭಿನ್ನ. ಆರಂಭದಲ್ಲಿ ತಪ್ಪುಗಳಾದಾಗ ವೇದಿಕೆ ಮೇಲೆಯೇ ತೋರಿಸಿಕೊಂಡಿದ್ದಿದೆ. ಆದರೆ ಈಗ ತಪ್ಪುಗಳಾದಾಗ ಅದನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ಅನುಭವದ ಮೇಲೆ ತಿಳಿದುಕೊಂಡಿದ್ದೇನೆ.

ಈಚೆಗೆ ಬಿಡುಗಡೆಯಾದ ಹಾಡುಗಳ ಪೈಕಿ ‘ಸಾಲುತ್ತಿಲ್ಲವೇ...ಸಾಲುತ್ತಿಲ್ಲವೇ’ ಹಾಡು ತುಂಬಾ ಇಷ್ಟವಾಯಿತು.

ಪ್ರಸ್ತುತ ಪೂಜಾ ಲೋಕೇಶ್ ಅವರ ಚಿತ್ರವೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ‘ಒಂದು ದಿನದ ಕತೆ’, ‘ದಶರಥ’ ಹೀಗೆ ಹಲವು ಚಿತ್ರಗಳು ಕೈಲಿವೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry