ಶನಿವಾರ, 21–10–1967

ಮಂಗಳವಾರ, ಜೂನ್ 18, 2019
25 °C

ಶನಿವಾರ, 21–10–1967

Published:
Updated:

ಲೈಂಗಿಕ ವಿಷಯಗಳ ಬಗ್ಗೆ ಅಮೆರಿಕಾ ಯುವತಿಯರ ಬಿಚ್ಚು ನುಡಿ

ನ್ಯೂಯಾರ್ಕ್, ಅ. 20– ಹದಿನೇಳು ವರ್ಷದ ತರುಣಿಯೊಬ್ಬಳು ಲೈಂಗಿಕ ವಿಷಯಗಳ ಬಗ್ಗೆ ಹಿರಿಯರ ಧೋರಣೆ ಏನೆನ್ನುವುದನ್ನು ನಿನ್ನೆ ಇಲ್ಲಿ ವಿವರಿಸಿದಾಗ ನೂರಾರು ಜನ ಗಣ್ಯ ನಾಗರಿಕರು ಮತ್ತು ನಿಷ್ಠಾವಂತ ಸಮಾಜ ಕಾರ್ಯಕರ್ತರು ಆಕೆಯ ಭಾಷಣವನ್ನು ಅತ್ಯಂತ ಆಸಕ್ತಿಯಿಂದ ಆಲಿಸಿದರು.

ಆ ತರುಣಿ ಧ್ವನಿವರ್ಧಕದ ಕಡೆ ಬಾಗಿ ಅತ್ಯಂತ ಶಾಂತ ರೀತಿಯಿಂದ ಈ ರೀತಿ ತಿಳಿಸಿದಳು: ‘ನಮ್ಮನ್ನು ನೀವು ಬಹಳ ಕಟ್ಟಿನಲ್ಲಿಟ್ಟಿದ್ದೀರಿ. ಸಂಭೋಗ ನಡೆಸಕೂಡದೆಂದು ನೀವು ಹದಿನಾರು ಹದಿನೇಳು ವರ್ಷದ ತರುಣಿಗೆ ಹೇಳಲಿಕ್ಕಾಗದು. ನೀವು ಏನೇ ಹೇಳಿ, ಅವಳಂತೂ ಸಂಭೋಗದ ಅನುಭವ ಪಡೆದೇ ತೀರುವಳು’ ಎಂದು ಆ ತರುಣಿ ನುಡಿದಳು.

ಮತ್ತೊಬ್ಬ ಯುವತಿ ಈ ರೀತಿ ತಿಳಿಸಿದಳು: ‘ಲೈಂಗಿಕ ಜ್ಞಾನವೆನ್ನುವುದು ಜೀವನದಲ್ಲಿ ತಾನೇ ತಾನಾಗಿ ಉದಯಿಸತಕ್ಕಂತಹುದು. ಅದನ್ನು ಮುಚ್ಚಿಟ್ಟು ನಿಗೂಢವಾಗಿ ಬೇರೊಂದು ಹೆಸರಿನಲ್ಲಿ ಕರೆದು ಶಿಕ್ಷಣ ಕ್ರಮದಿಂದ ಅದನ್ನು ದೂರವಿಡುವುದು ಮಹಾ ಪ್ರಮಾದ’.

ಇನ್ನೊಬ್ಬ ಯುವತಿ  ಈ ರೀತಿ ನುಡಿದಳು: ‘ನಮ್ಮ ನಾಯಿಗೆ ಮರಿಗಳಾಗಿದ್ದೇ ಲೈಂಗಿಕ ಜ್ಞಾನದ ಬಗ್ಗೆ ನನ್ನ ಪ್ರಥಮ ಪರಿಚಯ. ಹತ್ತು ವರ್ಷದ ಬಾಲಕಿಯಾಗಿರುವತನಕ ಲೈಂಗಿಕ ವಿಷಯಗಳ ಬಗ್ಗೆ ನನಗೆ ವಿಚಿತ್ರ ಕಲ್ಪನೆಗಳಿದ್ದವು’.

ಯೋಜಿತ ಕುಟುಂಬ ಕಾರ್ಯಕರ್ತರ ಕಿಕ್ಕಿರಿದ ಸಭೆಯಲ್ಲಿ ಆ ಮೂವರೂ ತರುಣಿಯರೂ ಮಾತನಾಡಿ ಶಾಲೆಗಳಲ್ಲಿ ಲೈಂಗಿಕ ವಿಷಯಗಳ ಬಗ್ಗೆ ಹೆಚ್ಚಿನ ಜ್ಞಾನ ನೀಡದಿರುವುದರ ಬಗ್ಗೆ ತಮ್ಮ ಅತೀವ ಕೋಪವನ್ನು ವ್ಯಕ್ತಪಡಿಸಿದರು.

ಗಣಿ ಕಾರ್ಮಿಕರ ಮುಷ್ಕರ

ಹೈದರಾಬಾದು, ಅ. 20– ಸಿಂಗರೇಣಿ ಕಲ್ಲಿದ್ದಲು ಗಣಿಯ ಸುಮಾರು 40 ಸಾವಿರ ಮಂದಿ ಕಾರ್ಮಿಕರು ಅನಿರ್ದಿಷ್ಟ ಕಾಲದ ಸಂಪನ್ನು ಆರಂಭಿಸಿದ್ದಾರೆ.

ಕಲ್ಲಿದ್ದಲು ಗಣಿ ಕಾರ್ಮಿಕರ ವೇತನ ಮಂಡಲಿಯ ಶಿಫಾರಸ್ಸುಗಳನ್ನು ಆಡಳಿತ ವರ್ಗ ಜಾರಿಗೆ ತರದಿರುವುದೇ ಈ ಮುಷ್ಕರಕ್ಕೆ ಕಾರಣವೆಂದು ಕಾರ್ಮಿಕ ನಾಯಕ ಶ್ರೀ ಸತ್ಯನಾರಾಯಣರೆಡ್ಡಿಯವರು ತಿಳಿಸಿದ್ದಾರೆ.

ಮಹಾಜನ್ ಶಿಫಾರಸು ಏಕಪಕ್ಷೀಯ: ಕೇರಳ ಒಪ್ಪದೆಂದು ಇ.ಎಂ.ಎಸ್.

ತಿರುವನಂತಪುರ, ಅ. 20– ‘ಕಾಸರಗೋಡಿಗೆ ಸಂಬಂಧಿಸಿದ ಮಹಾಜನ್ ಆಯೋಗದ ಶಿಫಾರಸು ಏಕಪಕ್ಷವಾದುದು ಹಾಗೂ ಪಕ್ಷಪಾತದಿಂದ ಕೂಡಿದುದು. ಆದ್ದರಿಂದ ಕೇರಳ ರಾಜ್ಯವು ಅದಕ್ಕೆ ಬದ್ಧವಲ್ಲ. ಈ ಶಿಫಾರಸನ್ನು ಕಾರ್ಯಗತ ಮಾಡುವುದಿಲ್ಲ’ ಎಂದು ಮುಖ್ಯಮಂತ್ರಿ ಶ್ರೀ ಇ.ಎಂ.ಎಸ್. ನಂಬೂದಿರಿಪಾಡ್ ಅವರು ತಿಳಿಸಿದರು.

ಕಾಸರಗೋಡು ಮಹಾಜನ ಸಭೆಯ ನಿಯೋಗವೊಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದಾಗ ಅವರು ಈ ವಿಷಯವನ್ನು ತಿಳಿಸಿದರು.

ಮಹಾಜನ್ ವರದಿ ಅತ್ಯುತ್ತಮ ಪರಿಹಾರ: ಕಯ್ಯಾರ ಕಿಞ್ಞಣ್ಣ ರೈ

ಕಾಸರಗೋಡು, ಅ. 20– ಕಾಸರಗೋಡು ಸಮಸ್ಯೆಗೆ ಮಹಾಜನ್ ಅವರ ನಿಷ್ಪಕ್ಷಪಾತ ವರದಿ ಅತ್ಯುತ್ತಮ ಪರಿಹಾರ ಎಂದು ಮಂಜೇಶ್ವರದ ವಿಭಾಗ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಮತ್ತು ಪ್ರಸಿದ್ಧ ಕವಿ ಶ್ರೀ ಕಯ್ಯಾರ ಕಿಞ್ಞಣ್ಣ ರೈ ಅವರು ಇಂದು ಇಲ್ಲಿ ತಿಳಿಸಿದರು.

ಈ ಗಡಿ ವಿವಾದದಲ್ಲಿ ಸ್ಥಳೀಯರ ಆಶೋತ್ತರಗಳೆಲ್ಲಾ ಈಡೇರುವುದಾಗಿಯೂ, ಪ್ರಜಾಸತ್ತೆಯನ್ನು ಗೌರವಿಸುವವರೆಲ್ಲರೂ ಮಹಾಜನ್ ಆಯೋಗದ ವರದಿಯನ್ನು ಸ್ವಾಗತಿಸುವರೆಂದೂ ಅವರು ಹೇಳಿದರು.

ಅಖಿಲ ಕೇರಳ ಕಾಸರಗೋಡು ಸಮಿತಿಯು ಕಾಸರಗೋಡು ಜನರ ಕುಂದುಕೊರತೆಗಳನ್ನು ಕಡೆಗಾಣಿಸಿರುವುದಾಗಿ ಕಾಸರಗೋಡು ವರ್ತಕ ವ್ಯವಸಾಯ ಮಂಡಲಿ ಅಧ್ಯಕ್ಷ ಶ್ರೀ ಕೆ.ಎಸ್. ಈಶ್ವರನ್ ಅವರು ತಿಳಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry