ಬರೀ ಬೆಳಗಿಸಲಿಲ್ಲ... ಮುಳುಗಿಸಿತು ಕೂಡ

ಭಾನುವಾರ, ಜೂನ್ 16, 2019
22 °C

ಬರೀ ಬೆಳಗಿಸಲಿಲ್ಲ... ಮುಳುಗಿಸಿತು ಕೂಡ

Published:
Updated:
ಬರೀ ಬೆಳಗಿಸಲಿಲ್ಲ... ಮುಳುಗಿಸಿತು ಕೂಡ

ಸೆಪ್ಟೆಂಬರ್ 7ರ ತಮ್ಮ ಜನ್ಮದಿನದಂದು ತಮ್ಮ ತವರು ರಾಜ್ಯಕ್ಕೆ ನೀರುಣಿಸುವ ಮತ್ತು ನೆರೆಯ ರಾಜ್ಯಗಳಿಗೆ ವಿದ್ಯುಚ್ಛಕ್ತಿ ಒದಗಿಸುವ ಸರ್ದಾರ್ ಸರೋವರ ಜಲಾಶಯವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶಕ್ಕೆ ‘ಸಮರ್ಪಿಸಿದರು’.

‘ಮೋದಿಯವರು ದೇಶಕ್ಕೆ ಸಮರ್ಪಿಸಿದ್ದು ಸರ್ದಾರ್ ಸರೋವರ ಯೋಜನೆಯನ್ನೇ ಅಥವಾ ಜಲಾಶಯದ ದೈತ್ಯ ಗೋಡೆಯನ್ನೇ’ ಎಂಬ ಪ್ರಶ್ನೆಯನ್ನು ಎತ್ತಿದ್ದಾರೆ ನರ್ಮದಾ ಬಚಾವೊ ಆಂದೋಲನದ ಮುಂದಾಳು ಮೇಧಾ ಪಾಟ್ಕರ್. ನರ್ಮದಾ ಮುಳುಗಡೆ ಸಂತ್ರಸ್ತರ ಪರವಾಗಿ ದಶಕಗಳಿಂದ ದಣಿವರಿಯದ ಹೋರಾಟ ನಡೆಸಿದ ನಿಸ್ವಾರ್ಥ ಜೀವ ಮೇಧಾ ಪಾಟ್ಕರ್.

ಯಾವುದೇ ಯೋಜನೆಯನ್ನು ದೇಶಕ್ಕೆ ಅಥವಾ ಸಮಾಜಕ್ಕೆ ಸಮರ್ಪಿಸಬೇಕಿದ್ದರೆ ಕನಿಷ್ಠಪಕ್ಷ ಅದರ ನಿರ್ಮಾಣ ಪೂರ್ಣಗೊಂಡಿರಬೇಕು. ಅಂತಹ ಯೋಜನೆ ಜಲಾಶಯವಾಗಿದ್ದಲ್ಲಿ, ಕೇವಲ ಅದರ ಗೋಡೆಯನ್ನು ಉದ್ದೇಶಿತ ಎತ್ತರಕ್ಕೆ ಏರಿಸಿದರೆ ಸಾಕೇ ಅಥವಾ ಅದರ ಕಾಲುವೆಗಳ ನಿರ್ಮಾಣ ಕಾರ್ಯವನ್ನೂ ಪೂರ್ಣಗೊಳಿಸಬೇಕೇ? ಕೇವಲ ಜಲಾಶಯದಲ್ಲಿ ನೀರು ನಿಲ್ಲಿಸಿದಾಕ್ಷಣ ರೈತರ ಹೊಲಗದ್ದೆಗಳಿಗೆ ತೋಟ ತುಡಿಕೆಗಳಿಗೆ ನೀರು ಹರಿದು ಬಿಡುವುದಿಲ್ಲ. ಅದಕ್ಕೆ ಕಾಲುವೆ, ಉಪಕಾಲುವೆ, ಕಿರುಕಾಲುವೆಗಳ ನಿರ್ಮಾಣ ಆಗಬೇಕು. ಗುಜರಾತಿನಲ್ಲಿ ಇಂತಹ ಕಾಲುವೆ ಕಾಮಗಾರಿ ಇನ್ನೂ ಶೇ 77ರಷ್ಟು ಬಾಕಿ ಉಳಿದಿದೆ.

138.68 ಮೀಟರ್ ಎತ್ತರದ ಜಲಾಶಯ ನಿರ್ಮಿಸಿ ನೀರು ನಿಲ್ಲಿಸಿದರೆ ಕೆಲಸ ಮುಗಿಯಿತೇ, ನದೀ ಕಣಿವೆಯ ಕೆಳಭಾಗದ ಹತ್ತು ಲಕ್ಷ ಮಂದಿ ದೇಶವಾಸಿಗಳ ಬದುಕುಗಳು ಬುಡಮೇಲಾಗುವ ಮಾನವ ದುರಂತ ಲೆಕ್ಕಕ್ಕೇ ಇಲ್ಲವೇ ಎಂಬ ಪ್ರಶ್ನೆ ಅವರದು. ಜನ ನರ್ಮದೆಯಲ್ಲಿ ಮುಳುಗಿಯಾರು... ಆದರೆ ಕನಿಷ್ಠ ಮೂಲಸೌಲಭ್ಯಗಳ ಮರುವಸತಿ ಇಲ್ಲದೆ ಹಳ್ಳಿಗಳನ್ನು ಖಾಲಿ ಮಾಡುವುದಿಲ್ಲ... ಮೋದಿ

ಅವರ ಜನ್ಮದಿನದ ವೈಭವಯುತ ಆಚರಣೆಗೆಂದು ಸಾವಿರಾರು ಸಂಖ್ಯೆಯ ನರಮೇಧದ ತಯಾರಿ ನಡೆದಿದೆ ಎಂದು ಮೇಧಾ ಕಟುವಾಗಿ ಪ್ರತಿಕ್ರಿಯಿಸಿದ್ದರು.

ಶಿಲಾಯುಗದಿಂದ ಹಿಡಿದು ತಾಮ್ರಯುಗದ ತನಕ ಮಾನವ ನಾಗರಿಕತೆಯ ಎಲ್ಲ ಮಜಲುಗಳನ್ನು ತನ್ನ ಗರ್ಭದಲ್ಲಿ ಇರಿಸಿಕೊಂಡಿರುವ ವೈಶಿಷ್ಟ್ಯ ನರ್ಮದಾ ಕಣಿವೆಯದು. ಅಂತಹ ಕಣಿವೆಯ ಮುಳುಗಡೆ, ನಾಗರಿಕತೆಯ ಉಗಮ-ವಿಕಾಸಗಳ ಜೀವಂತ ಇತಿಹಾಸದ ವಿನಾಶವಲ್ಲದೆ ಮತ್ತೇನೂ ಅಲ್ಲ.

ಯಾವುದು ಅಭಿವೃದ್ಧಿ ಮತ್ತು ಯಾವುದು ಅಭಿವೃದ್ಧಿ ಅಲ್ಲ ಎಂಬ ಜೀವಪರ ಒಳನೋಟವನ್ನೇ ಕಳೆದುಕೊಂಡು ಕುರುಡಾದ ಅಗಾಧ ಅಧಿಕಾರಬಲದ ಪ್ರಭುತ್ವ ಮತ್ತು ಅದರೊಡನೆ ಕೈ ಕಲೆಸಿರುವ ಲಾಭಬಡುಕ ಔದ್ಯೋಗಿಕ ಹಿತಾಸಕ್ತಿಗಳು ಒಂದು ಕಡೆಗೆ. ಈ ಅಗಾಧ ಅಪವಿತ್ರ ಮೈತ್ರಿಯ ಮುಂದೆ ಬದುಕಿ ಉಳಿಯಲು ಕೈಕಾಲು ಬಡಿದರೆ ಅದೇ ಹೆಚ್ಚು ಎನ್ನುವ ಸ್ಥಿತಿಯಲ್ಲಿರುವ ಬಲಹೀನ ಜನಸಮುದಾಯಗಳು ಮತ್ತೊಂದೆಡೆ.

ಅಸಮಾನರ ನಡುವಿನ ಈ ಹೋರಾಟದಲ್ಲಿ ಅಂತಿಮ ಗೆಲುವು ಯಾರದೆಂಬುದು ಆರಂಭದಲ್ಲಿಯೇ ನಿರ್ಧಾರವಾಗಿ ಹೋಗಿತ್ತು. ನರ್ಮದಾ ಕಣಿವೆಯ ಆದಿವಾಸಿಗಳು, ರೈತರು-ಕೂಲಿಕಾರರು, ಮೀನುಗಾರರು-ಕುಂಬಾರರು, ದಲಿತ-ದುರ್ಬಲರ ಇರುವೆ ಸೈನ್ಯ ಈ ಸಂಘರ್ಷವನ್ನು ಮೂರು ದಶಕಗಳ ಕಾಲ ಜಾರಿಯಲ್ಲಿ ಇರಿಸಿ ದೇಶ ವಿದೇಶಗಳ ಗಮನ ಸೆಳೆದದ್ದೇ ಒಂದು ಹೆಗ್ಗಳಿಕೆ.

ಮಧ್ಯಪ್ರದೇಶದ ನರ್ಮದಾ ಕಣಿವೆಯ ಅಲಿರಾಜಪುರ, ಕುಕ್ಷಿ, ಬಡವಾನಿ, ಮಾನಾವರ್, ಧರಮ್ ಪುರಿ, ಕಸ್ರಾವಾಡ, ತಿಕ್ಡಿ, ಮಾಹೇಶ್ವರ ಜಿಲ್ಲೆಗಳ ಲಕ್ಷಾಂತರ ಜನಗಳ ಬದುಕು ಬುಡಮೇಲಾಗಿದೆ.

ನೂರಾರು ವರ್ಷಗಳಿಂದ ಕಟ್ಟಿಕೊಂಡ ತಮ್ಮ ಊರುಕೇರಿಗಳು, ಭೂಮಿ-ಬದುಕುಗಳ ಜಲಸಮಾಧಿಯನ್ನು ತಡೆದು ನಿಲ್ಲಿಸುವುದು ಇನ್ನು ಸಾಧ್ಯವಿಲ್ಲ ಎಂಬ ಕ್ರೂರ ಸತ್ಯ ಈ ಜನಸಮುದಾಯಗಳ ಎದುರು ನಿಂತು ಕೇಕೆ ಹಾಕಿದೆ. ಸರ್ದಾರ್ ಸರೋವರದ ವಿರುದ್ಧದ ಮೂಲ ಹೋರಾಟ ವಿಧಿಯಿಲ್ಲದೆ ತಲೆಬಾಗಿದೆ. ಅಳಿವು ಉಳಿವಿಗಾಗಿ ಮತ್ತೊಂದು ಕಟ್ಟಕಡೆಯ ಹೋರಾಟ ಇದೀಗ ನಡೆದಿದೆ. ಪ್ರಭುತ್ವ ಮುರಿದು ಬಿಸಾಡಿ ಮೂರಾಬಟ್ಟೆಯಾದ ಬದುಕುಗಳನ್ನು ಮತ್ತೆ ಹೆಕ್ಕಿಕೊಳ್ಳುವ ಬವಣೆಯಲ್ಲಿ ಲಕ್ಷಾಂತರ ಜನ ಹೈರಾಣಾಗಿದ್ದಾರೆ.

ಬಲಹೀನ ಮತ್ತು ದನಿ ಸತ್ತ ದುರ್ಬಲ ಜನಸಮುದಾಯಗಳು ಆರ್ಭಟಿಸಿ ಭೋರ್ಗರೆವ ಪ್ರಬಲ ಪ್ರವಾಹದ ವಿರುದ್ಧ ಬದುಕಿ ಉಳಿಯಲು ಜನಸಾಮಾನ್ಯರು ಕೈ ಕಾಲು ಬಡಿದ ಕ್ರಿಯೆ. ದೇಶ-ವಿದೇಶಗಳ ಗಮನ ಸೆಳೆದ ಈ ಹೋರಾಟ ಇದೀಗ ಕಡೆಯ ಚರಣದಲ್ಲಿದೆ. ಸರ್ದಾರ್ ಸರೋವರವೆಂಬ ದೈತ್ಯ ಜಲಾಶಯ 45 ಸಾವಿರ ಕುಟುಂಬಗಳನ್ನು ನುಂಗತೊಡಗಿದೆ. ವಾರದೊಪ್ಪತ್ತಿನ ಹಿಂದೆ ಮಧ್ಯಪ್ರದೇಶದ ನರ್ಮದಾ ಕಣಿವೆಯಡಿ ಜಲಸಮಾಧಿಯಾಗುತ್ತಿರುವ ಗ್ರಾಮಗಳಲ್ಲಿ ಹಲವು ದಿನಗಳ ಕಾಲ ಸಂಚರಿಸಿ, ಈ ಮಾನವ ನಿರ್ಮಿತ ದುರಂತದ ಅಗಾಧತೆಯನ್ನು ‘ಪ್ರಜಾವಾಣಿ’ ಕಣ್ಣಾರೆ ಕಂಡಿತು. ಸರ್ದಾರ್ ಸರೋವರ ಜಲಾಶಯದ ಎತ್ತರವನ್ನು ಹತ್ತು ಮೀಟರುಗಳಷ್ಟು ತಗ್ಗಿಸಿದ್ದರೂ ಈ ದುರಂತವನ್ನು ತಪ್ಪಿಸಬಹುದಿತ್ತು. ಎತ್ತರವನ್ನು ಅಷ್ಟು ಕಡಿಮೆ ಮಾಡಿದರೆ ಮಧ್ಯಪ್ರದೇಶಕ್ಕೆ ವಿದ್ಯುಚ್ಛಕ್ತಿ ಒದಗಿಸುವುದು ಸಾಧ್ಯವಿಲ್ಲ ಎಂಬುದು ಗುಜರಾತ್ ವಾದ. ಆದರೆ ಮಧ್ಯಪ್ರದೇಶದ ಬಳಿ ವಿದ್ಯುಚ್ಛಕ್ತಿ ಹೇರಳವಾಗಿದೆ. ಬೇಕಿಲ್ಲದ ವಿದ್ಯುಚ್ಛಕ್ತಿಗಾಗಿ ಮತ್ತು ಪ್ರಚಂಡ ನಾಯಕರೊಬ್ಬರನ್ನು ತೃಪ್ತಿಗೊಳಿಸಲು ತನ್ನದೇ ಜನರ ಬದುಕುಗಳನ್ನು ಸರ್ಕಾರವೇ ಉರುವಲಾಗಿಸಿದ ಘೋರ ವಿಡಂಬನೆಯಿದು.

ತನ್ನದೇ ಭೂಭಾಗದ ಜನ ಸಮುದಾಯವೊಂದರ ಕಣ್ಣೀರು, ನಿಟ್ಟುಸಿರು ಕಡು ಕಾರ್ಪಣ್ಯಗಳಿಗೆ ಮಹಾನ್ ಭಾರತದ ಜನಕೋಟಿ ಕುರುಡಾಗಿರುವುದು ದುಃಖಕರ. ಸರ್ದಾರ್ ಸರೋವರದ ವೈಭವದಲ್ಲಿ ಈ ಜನರ ಕಣ್ಣೀರು ಕಾರ್ಪಣ್ಯಗಳು ಮುಳುಗಿ ಹೋಗಿವೆ.

ದೇಶದ ಅತಿ ಎತ್ತರದ ಸರ್ದಾರ್ ಸರೋವರ ಜಲಾಶಯದ ಎತ್ತರವನ್ನು ಇತ್ತೀಚೆಗೆ 138.68 ಮೀಟರುಗಳಿಗೆ ಹೆಚ್ಚಿಸಲಾಯಿತು. 1.2 ಕಿ.ಮೀ. ಉದ್ದದ ಈ ಜಲಾಶಯದ ಆಳ 163 ಮೀಟರುಗಳು. 40.73 ಲಕ್ಷ ಎಕರೆಗಳಲ್ಲಿ ಒಂದು ಅಡಿ ನೀರು ನಿಲ್ಲಿಸಿದರೆ ಎಷ್ಟು ನೀರು ಆದೀತೋ ಅಷ್ಟು ಬಳಸಬಹುದಾದ ನೀರನ್ನು ಈ ಜಲಾಶಯದಲ್ಲಿ ಸಂಗ್ರಹಿಸಬಹುದು.

ಈ ಜಲಾಶಯದ ನೀರಾವರಿ ಮತ್ತು ವಿದ್ಯುಚ್ಛಕ್ತಿ ಉತ್ಪಾದನೆಯ ಯೋಜನೆ ಸ್ವಾತಂತ್ರ್ಯಪೂರ್ವ ದಿನಗಳಲ್ಲೇ ರೂಪು ತಳೆದಿತ್ತು. ಮೊದಲ ಪ್ರಧಾನಿ ಜವಾಹರ ಲಾಲ್ ನೆಹರೂ 1961ರಲ್ಲಿ ಈ ಜಲಾಶಯ ನಿರ್ಮಾಣಕ್ಕೆ ಅಡಿಗಲ್ಲು ಇರಿಸಿದರು.

ಈ ಜಲಾಶಯದಿಂದ ಉತ್ಪಾದನೆಯಾಗುವ ವಿದ್ಯುಚ್ಛಕ್ತಿಯನ್ನು ಮಧ್ಯಪ್ರದೇಶ, ಮಹಾರಾಷ್ಟ್ರ ಹಾಗೂ ಗುಜರಾತ್ ಹಂಚಿಕೊಳ್ಳುತ್ತವೆ. ಸರ್ಕಾರಿ ಅಂಕಿ ಅಂಶಗಳ ಪ್ರಕಾರ ಈ ಯೋಜನೆಯಿಂದ ಹತ್ತು ಲಕ್ಷ ರೈತರ ಹೊಲಗಳಿಗೆ ನೀರು ಹರಿಯಲಿದೆ. ನಾಲ್ಕು ಕೋಟಿ ಜನರಿಗೆ ಕುಡಿಯುವ ನೀರು ದೊರೆಯಲಿದೆ. 200 ಗ್ರಾಮಗಳ 30 ಸಾವಿರ ಹೆಕ್ಟೇರುಗಳಷ್ಟು ಜಮೀನಿಗೆ ಪ್ರವಾಹದಿಂದ ರಕ್ಷಣೆ ಲಭಿಸಲಿದೆ.

ಜಲಾಶಯ ನಿರ್ಮಾಣಕ್ಕೆ ಮೇಧಾ ಪಾಟ್ಕರ್ ನೇತೃತ್ವದ ‘ನರ್ಮದಾ ಬಚಾವೊ’ ಆಂದೋಲನದಿಂದ ಭಾರೀ ಸವಾಲು ಎದುರಾಯಿತು. ಮುಳುಗಡೆ ಸಂತ್ರಸ್ತರಿಗೆ ಅಸಮರ್ಪಕ ಮರುವಸತಿ ವ್ಯವಸ್ಥೆ ಮತ್ತು ಪರಿಸರದ ಮೇಲೆ ಉಂಟಾಗುವ ಸಾಧಕ ಬಾಧಕಗಳ ಅಂಶಗಳನ್ನು ಈ ಹೋರಾಟ ಮುನ್ನೆಲೆಗೆ ತಂದಿತು. 1994ರಲ್ಲಿ ಕಾನೂನು ಸಮರವನ್ನೂ ಸಾರಿತು. ಸುಪ್ರೀಂ ಕೋರ್ಟ್ ತಡೆಯಾಜ್ಞೆಯ ಕಾರಣ ಜಲಾಶಯ ನಿರ್ಮಾಣ 1996ಲ್ಲಿ ಸ್ಥಗಿತಗೊಂಡಿತು. ತಡೆಯಾಜ್ಞೆ 2000ದ ಇಸವಿಯಲ್ಲಿ ತೆರವಾದ ನಂತರ ನಿರ್ಮಾಣ ಕಾರ್ಯ ಮತ್ತೆ ಮುಂದುವರೆಯಿತು. ಮುಳುಗಡೆ ಸಂತ್ರಸ್ತರಿಗೆ ನ್ಯಾಯಯುತ ಮರುವಸತಿ ಕಲ್ಪಿಸಬೇಕೆಂಬ ಷರತ್ತುಬದ್ಧ ಅನುಮತಿಯನ್ನು ನ್ಯಾಯಾಲಯ ನೀಡಿತ್ತು.

ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಮುಳುಗಡೆಯಾದ ಗ್ರಾಮಗಳ ಸಂಖ್ಯೆ ಕಡಿಮೆ. ಆದರೆ ಮಧ್ಯಪ್ರದೇಶದ ಕುರಿತು ಈ ಮಾತು ಹೇಳಲು ಬರುವುದಿಲ್ಲ. ನಿಮಾಡ್ ಸಂಸ್ಕೃತಿ ಸೀಮೆಯ 192 ಗ್ರಾಮಗಳ ಜಲಸಮಾಧಿಯ ಘೋರ ದುರಂತ ಈಗ ಆರಂಭ ಆಗಿದೆ. ಜನರನ್ನು ಒಕ್ಕಲೆಬ್ಬಿಸಲು ಪೊಲೀಸ್ ಬಲ ಪ್ರಯೋಗಕ್ಕೂ ಸರ್ಕಾರ ಹೇಸುತ್ತಿಲ್ಲ.

ಸರ್ದಾರ್ ಸರೋವರ ಅಣೆಕಟ್ಟೆ ತೂಬಿಗೆ ಬಾಗಿಲು ಅಳವಡಿಸಲು ಯುಪಿಎ ಸರ್ಕಾರ 2007ರಿಂದ ಏಳು ವರ್ಷಗಳ ಕಾಲ ಅನುಮತಿ ನೀಡಿರಲಿಲ್ಲ. ಮೋದಿಯವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಕೇವಲ 17 ದಿನಗಳಲ್ಲಿ ಅನುಮತಿ ದೊರೆಯಿತು.

ನರ್ಮದಾ ಬಚಾವೊ ಆಂದೋಲನದ ಅಮ್ಮ ಮೇಧಾ ತಾಯಿ ಮುಳುಗಡೆ ಸಂತ್ರಸ್ತರ ಪಾಲಿನ ತಾಯಿ ಕೂಡ. ಈ ತಾಯಿಯ ನೈತಿಕ ಬಲದ ನೆರಳಿನಲ್ಲಿ ಮುಳುಗಡೆ ಗ್ರಾಮಗಳು ಉಳಿವಿಗಾಗಿ, ನ್ಯಾಯಯುತ ಮರುವಸತಿಯ ಹಕ್ಕಿಗಾಗಿ ಅಹಿಂಸಾತ್ಮಕ ಹೋರಾಟ ನಡೆಸಿವೆ. ‘ನರ್ಮದಾ ಘಾಟೀ ಕರೇ ಸವಾಲ್, ಜೀನೇ ಕಾ ಹಕ್ ಯಾ ಮೌತ್ ಕಾ ಸವಾಲ್’ ಎಂಬ ಘೋಷಣೆಗಳು ಹಳ್ಳಿ ಹಳ್ಳಿಗಳಲ್ಲಿ ಮೊರೆದಿವೆ. ‘ಕುತ್ತೇ ಕೋ ಟುಕಡೇ ಡಾಲ್ತೇ ಹೈ, ಇನ್ಸಾನ್ ಕೋ ರೋಟಿ ದೇತೇ ಹೈ (ನಾಯಿಗಳಿಗೆ ಚೂರು ಚಾರು ಎಸೀತಾರೆ... ಮನುಷ್ಯರಿಗೆ ರೊಟ್ಟಿ ಕೊಡ್ತಾರೆ) ನಿಮಗೆ ಯಾವುದೇ ಬೇಕೋ ಆರಿಸಿಕೊಳ್ಳಿ' ಎನ್ನುತ್ತಾರೆ ಮೇಧಾ.

ಗೋವಂಶ ರಕ್ಷಣೆಗೆ ದೇಶದ ತುಂಬೆಲ್ಲ ಗದ್ದಲ ಎದ್ದಿದೆ. ಇಲ್ಲಿ ನೀರಿನಡಿ ಮುಳುಗುವ ಗೋವುಗಳ ಬಗ್ಗೆ ದರಕಾರೇ ಇಲ್ಲ ಯಾರಿಗೂ. ಅಯೋಧ್ಯೆಯಲ್ಲಿ ಒಂದು ಮಂದಿರ ಕಟ್ಟುವ ಕುರಿತು ಅಷ್ಟೆಲ್ಲ ಕೋಲಾಹಲ ಎಬ್ಬಿಸಲಾಗಿದೆ. ಆದರೆ ಇಲ್ಲಿ ಸಾವಿರಾರು ಮಂದಿರಗಳು ಮುಳುಗುವ ಬಗೆಗೆ ಸರ್ಕಾರ ಕುರುಡಾಗಿದೆ. ನಮ್ಮದೇ ಮನೆಗೆ (ಹಿಂದೂ ಧರ್ಮ) ಕಿಚ್ಚಿಟ್ಟು ಬಿಟ್ಟರು ಎಂಬುದು ಈ ಭಾಗದ ಹಳೆಯ ತಲೆಮಾರಿನ ಆರೆಸ್ಸೆಸ್ಸಿಗರ ಅಳಲು.

138 ಮೀಟರುಗಳಿಗೆ ಎಷ್ಟೆಲ್ಲ ಮುಳುಗಡೆಯ ಅನಾಹುತ ಜರುಗುತ್ತಿದೆ. ಒಂದು ವೇಳೆ ಭಾರೀ ಮಳೆ ಬಂದು ಸರ್ದಾರ್ ಸರೋವರದ ಎತ್ತರವನ್ನು ಮೀರಿಸಿ ನೀರು ಹರಿದರೆ ಆಗುವ ಜಲಪ್ರಳಯಕ್ಕೆ ಯಾರು ಹೊಣೆ ಎಂಬ ಪ್ರಶ್ನೆಯನ್ನುಕೋಟೇಶ್ವರ ಎಂಬ ಧಾರ್ಮಿಕ ಧಾಮದ ಅರ್ಚಕರೊಬ್ಬರು ‘ಪ್ರಜಾವಾಣಿ’ಯ ಮುಂದಿಟ್ಟರು.

ಆಲಿರಾಜಪುರದ ರೋಲಿಗಾಂವ್ ನೂರಕ್ಕೆ ನೂರು ಆದಿವಾಸಿಗಳ ಗ್ರಾಮ. ಮಳೆಗಾಲವೆಂಬುದನ್ನೂ ಲೆಕ್ಕಿಸದೆ ಬಲವಂತವಾಗಿ ಮನೆಗಳನ್ನು ಕೆಡವಿಸಲಾಯಿತು. ಹೌದು, ಮನೆಗಳ ಮಾಲೀಕರು ತಮ್ಮ ಮನೆಗಳನ್ನು ತಮ್ಮ ಕೈಯಾರೆ ಕೆಡವಬೇಕು. ಆನಂತರವೇ ಅವರು ಪರಿಹಾರಕ್ಕೆ ಅರ್ಹತೆ ಗಳಿಸಿಕೊಳ್ಳುತ್ತಾರೆ. ತಲೆ ತಲಾಂತರಗಳಿಂದ ಬದುಕಿ ಬಾಳಿದ ಮನೆಗಳನ್ನು ಕೆಡವುವಾಗ ಈ ಜನರ ಕಣ್ಣೀರು ಕಪಾಳಕ್ಕೆ ಇಳಿಯುತ್ತದೆ. ದುಃಖ ಮಡುಗಟ್ಟಿದ ಮೂಕ ರೋದನ ಅವರದು. ಗ್ರಾಮಗಳನ್ನು ಖಾಲಿ ಮಾಡಿಸಲು ಅಲ್ಲಿನ ಎಲ್ಲ ಮೂಲಸೌಲಭ್ಯಗಳನ್ನು ಕಿತ್ತು ಹಾಕಲಾಗುತ್ತಿದೆ. ವಿದ್ಯುಚ್ಛಕ್ತಿ ಸರಬರಾಜು ಕತ್ತರಿಸಲಾಗುತ್ತಿದೆ. ಕೊಳವೆ ಬಾವಿಗಳನ್ನು ಕಿತ್ತು ಒಯ್ಯಲಾಗುತ್ತಿದೆ. ಸುತ್ತಮುತ್ತ ಆವರಿಸಿದ ಸ್ಥಗಿತ ನೀರಿನಲ್ಲಿ ಮರಗಿಡಗಳ ಕೊಳೆತ ವಾಸನೆ. ಮೀನುಗಳು ಸತ್ತು ತೇಲುತ್ತಿವೆ. ಆ ನೀರನ್ನೇ ಕುಡಿದು ಜೀವ ಹಿಡಿದಿದ್ದಾರೆ ಮುಳುಗಡೆ ಪ್ರದೇಶದ ಜನ.

ಹಳ್ಳಿಗಳನ್ನು ಖಾಲಿ ಮಾಡಬೇಕಿದ್ದರೆ ಆ ಜನರಿಗೆ ಮರುವಸತಿಯ ಎಲ್ಲ ಸೌಕರ್ಯ ಕಲ್ಪಿಸಿದ ಮತ್ತೊಂದು ವಸತಿ ಪ್ರದೇಶವನ್ನು ನಿರ್ಮಿಸಿ ನೀಡಬೇಕು. ಮನೆಗಳನ್ನು ಕಟ್ಟಿಕೊಳ್ಳಲು ನಿವೇಶನಗಳನ್ನು ಗುರುತಿಸಬೇಕು. ಹೊಲಕ್ಕೆ ಬದಲಾಗಿ ಹೊಲಗಳನ್ನು ನೀಡಬೇಕು. ಬಹುತೇಕ ಹಳ್ಳಿಗಳಿಗೆ ಈ ಪರ್ಯಾಯ ವ್ಯವಸ್ಥೆ ಇಲ್ಲಿಯ ತನಕ ಆಗಿಲ್ಲ. ಮರುವಸತಿ ಒತ್ತಟ್ಟಿಗಿರಲಿ, ಆ ಮರುವಸತಿಗೆ ಜಾಗವನ್ನು ಕೂಡ ಗುರುತಿಸದ ಮುಳುಗಡೆ ಹಳ್ಳಿಗಳು ದೊಡ್ಡ ಸಂಖ್ಯೆಯಲ್ಲಿವೆ. ಇವುಗಳ ಪೈಕಿ ಆದಿವಾಸಿಬಹುಳ ಹಳ್ಳಿಗಳದೇ ಸಿಂಹಪಾಲು. ಒಟ್ಟು 88 ಪುನರ್ವಸತಿ ಸ್ಥಳಗಳ ಯೋಜನೆಯಲ್ಲಿ ಜಮೀನನ್ನು ಕೂಡ ಗುರುತಿಸಿಲ್ಲದ ಉದಾಹರಣೆಗಳೇ ಹೆಚ್ಚು. ಆದಿವಾಸಿ ಬಹುಳ ಹಳ್ಳಿಗಳೇ ಈ ಅನ್ಯಾಯಕ್ಕೆ ಗುರಿಯಾಗಿವೆ.

ಹಳ್ಳಿಗಳು ದ್ವೀಪಗಳಾಗಿ ಹೋಗಿವೆ. ಫಲವತ್ತಾದ ಜಮೀನುಗಳು ಫಸಲಿನ ಸಹಿತ ಜಲಸಮಾಧಿಯಾಗಿವೆ. ರಸ್ತೆಗಳು ಕಡಿದು ಬಿದ್ದಿವೆ. ಹೊಸ ಮರುವಸತಿ ಪ್ರದೇಶಗಳದು ಎರೆಮಣ್ಣಿನ ನೆಲ. ಮನೆ ಕಟ್ಟಲು ಪ್ರಶಸ್ತ ಅಲ್ಲ. ಅಲ್ಲಿ ನೀರು, ವಿದ್ಯುಚ್ಛಕ್ತಿ ಇನ್ನೂ ಲಭ್ಯವಿಲ್ಲ. ಹೊಲಕ್ಕೆ ಬದಲಾಗಿ ಹೊಲ ಸಿಕ್ಕ ಉದಾಹರಣೆಗಳೂ ಇವೆ. ಆದರೆ ಹೊಲಕ್ಕೂ ಮನೆಗೂ ಬಲು ದೂರ.

‘ಪ್ರಜಾವಾಣಿ’ ಭೇಟಿ ನೀಡಿದ್ದ ಧಾರ್ ಜಿಲ್ಲೆಯ ಡೇಹರ್ ಪಟೇಲ್ ಪುರ ನರ್ಮದಾ ದಂಡೆಯ ಹಳ್ಳಿ. ನೂರಕ್ಕೆ ನೂರು ಆದಿವಾಸಿಗಳು ಮತ್ತು ದಲಿತರಿರುವ ಗ್ರಾಮ. ಇಲ್ಲಿನ 447 ಕುಟುಂಬಗಳಿಗೆ ಬೆಟ್ಟ ಗುಡ್ಡ ಪ್ರದೇಶದಲ್ಲಿ ನಿವೇಶನ ನೀಡಲಾಗಿದೆ. ಈ ನಿವೇಶನಗಳನ್ನು ಸಮತಟ್ಟು ಮಾಡಲು 30ರಿಂದ 50 ಅಡಿ ಮಣ್ಣು ತುಂಬಬೇಕು. ಮನೆ ಕಟ್ಟಲು ನೀಡುವ ₹ 5.5 ಲಕ್ಷ ಸಮತಟ್ಟು ಮಾಡಲು ಕೂಡ ಸಾಲುವುದಿಲ್ಲ. ಡೇಹರ್ ಮತ್ತು ಚಂದನಖೇಡಿ ಹಳ್ಳಿಗಳ ಜನ ಮುಳುಗಡೆಗೆ ಹೆದರಿ ಹೊಲಗಳಲ್ಲಿ ಮನೆ ಮಾಡಿಕೊಂಡಿದ್ದಾರೆ. ಸರ್ಕಾರಿ ಕಡತಗಳ ಪಾಲಿಗೆ ಈ ಗ್ರಾಮಗಳು ಖಾಲಿಯಾಗಿವೆ! ಪರಿಹಾರ ಮೊತ್ತ ಬಹುತೇಕ ಗ್ರಾಮಸ್ತರಿಗೆ ಇನ್ನೂ ಸಂದಾಯ ಆಗಿಲ್ಲ.

ಮರುವಸತಿ ಪ್ರದೇಶಗಳಿಗೆಂದು ಸ್ವಾಧೀನಪಡಿಸಿಕೊಂಡಿರುವುದು ಆದಿವಾಸಿಗಳ ಜಮೀನನ್ನೇ! ಆದಿವಾಸಿಗಳ ಜಮೀನನ್ನು ಸ್ವಾಧೀನಪಡಿಸಿಕೊಳ್ಳುವುದು ಅಪರಾಧ ಎನ್ನುತ್ತದೆ ಭೂಸ್ವಾಧೀನ ಕಾಯ್ದೆ. ಅಗ್ಗದ ದರಕ್ಕೆ ಈ ಜಮೀನನ್ನು ಸ್ವಾಧೀನಪಡಿಸಿಕೊಂಡಿರುವುದು ಸರ್ಕಾರದ ದುಪ್ಪಟ್ಟು ಅಪರಾಧ. ಚಂದನ್ ಖೇಡಿಯ ಮಕ್ಕಳು ಶಾಲೆ ತಲುಪಲು ಮುಳುಗಡೆಗೆ ಮುನ್ನ ನಾಲ್ಕು ಕಿ.ಮೀ. ಕ್ರಮಿಸಬೇಕಿತ್ತು. ಈಗ ಹೊಸ ಮರುವಸತಿ ಪ್ರದೇಶದಿಂದ ಆ ದೂರ 25 ಕಿ.ಮೀ.ಗಳಿಗೆ ಹೆಚ್ಚಿದೆ. ಬಸ್ ಪ್ರಯಾಣದರ ದುಬಾರಿ. ‘ಮಗಳೇ, ಶಾಲೆಗೆ ಹೋಗಬೇಕಿದ್ದರೆ ನಿನ್ನ ಬಸ್ ಚಾರ್ಜನ್ನು ಸಂಪಾದಿಸಿಕೊಳ್ಳಲು ಕೂಲಿ ಮಾಡು’ ಎಂದು ಅಸಹಾಯಕ ತಂದೆಯು ಮಕ್ಕಳಿಗೆ ಹೇಳುವಷ್ಟು ಪರಿಸ್ಥಿತಿ ದೈನೇಸಿಯಾಗಿ ಹೋಗಿದೆ.‘ ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಘೋಷಣೆಗೆ ಅರ್ಥವಾದರೂ ಏನು? ಗುಲಾಮದೇಶದಲ್ಲಿ ಬದುಕಿದ್ದೇವೆ ಎನಿಸುತ್ತಿದೆ’ ಎನ್ನುವುದು ಚಂದನ್ ಖೇಡಿಯ ದಲಿತ ಮಹಿಳೆ ರಾಧಾಬಾಯಿಯ ಅಳಲು.

ನರ್ಮದೆಯಲ್ಲಿ ಮೀನು ಹಿಡಿದು ಬದುಕು ಸಾಗಿಸುತ್ತಿದ್ದ ಬೆಸ್ತರ ಅಳಲು ಹೇಳತೀರದು. ಜಮೀನು ಕಳಕೊಂಡವರಿಗೆ ಜಮೀನು ಸಿಗುತ್ತದೆ. ‘ನದಿಯೇ ನಮ್ಮ ಪಾಲಿನ ಜಮೀನಾಗಿತ್ತು. ಈಗ ಅದು ನಿಂತ ನೀರು. ಮೊದಲು 15ರಿಂದ 20 ಕೆ.ಜಿ.ಗಳಷ್ಟು ಸಿಗುತ್ತಿದ್ದ ಮೀನು ಈಗ ಎರಡು– ಮೂರು ಕೆ.ಜಿ.ಗೆ ಇಳಿದಿದೆ. ನಮ್ಮ ಜೀವನೋಪಾಯ ಎಂತು’ ಎಂಬುದು ಲಕ್ಷಾಂತರ ಮೀನುಗಾರರ ಪ್ರಶ್ನೆ. ನದಿಯಲ್ಲಿ ಮೀನು ಹಿಡಿಯಲು ಸಣ್ಣ ದೋಣಿ, ಸಣ್ಣ ಬಲೆ ಸಾಕಿತ್ತು. ಈಗ ಬಲೆಯೊಂದಿಗೆ ದೋಣಿಯೂ ದೊಡ್ಡದು ಬೇಕು. ಲಕ್ಷಗಟ್ಟಲೆ ಬಂಡವಾಳ ಎಲ್ಲಿಂದ ತರೋಣ ಎನ್ನುತ್ತಾರೆ ಪಿಛೋಡಿ ಗ್ರಾಮದ ಭೋಲಾರಾಮ. ಭೂಹೀನ ದಲಿತರ ಸ್ಥಿತಿ ಅಧೋಗತಿ.

ಸರ್ದಾರ್ ಸರೋವರ ಯೋಜನೆ ರೂಪು ತಳೆದದ್ದು 1979ರಲ್ಲಿ. 38 ವರ್ಷಗಳ ಹಿಂದೆ ನರ್ಮದಾ ಜಲವಿವಾದ ನ್ಯಾಯಮಂಡಳಿ 1979ರಲ್ಲಿ ತನ್ನ ಐತೀರ್ಪು ನೀಡಿದ ನಂತರ. ನೆಹರೂ 1961ರಲ್ಲಿ ಅಡಿಗಲ್ಲು ಇರಿಸಿದ ಆ ಯೋಜನೆಯೇ ಬೇರೆ. ಅದರ ಎತ್ತರ ಕೇವಲ 49.37 ಮೀಟರುಗಳಾಗಿತ್ತು. ಯಾವುದೇ ಗಂಭೀರ ಸಾಮಾಜಿಕ- ಪರಿಸರ ಸಾಧಕ ಬಾಧಕಗಳು ಈ ಯೋಜನೆಗೆ ಇರಲಿಲ್ಲ ಎನ್ನುತ್ತಾರೆ ಮೇಧಾ ತಾಯಿ.

ಕಛ್, ಸೌರಾಷ್ಟ್ರ ಹಾಗೂ ಉತ್ತರ ಗುಜರಾತಿನ ನೀರಿನ ಬವಣೆಗೆ ಸರ್ದಾರ್ ಸರೋವರವೊಂದೇ ಉತ್ತರ ಎಂಬುದು ಗುಜರಾತ್ ಸರ್ಕಾರದ ವಾದ. ಆದರೆ ಕಾಲುವೆ ನಿರ್ಮಾಣ ಕಾರ್ಯ ಈ ಪ್ರದೇಶಗಳಲ್ಲೇ ತೆವಳುತ್ತ ಸಾಗಿರುವುದು ವಿಡಂಬನೆಯೇ ಸರಿ. ಸಾಮಾಜಿಕ-ಆರ್ಥಿಕವಾಗಿ ಮುಂದುವರೆದಿರುವ, ರಾಜಕೀಯವಾಗಿಯೂ ದೊಡ್ಡ ದನಿ ಗಳಿಸಿರುವ ಜಲಸಮೃದ್ಧ ಸೀಮೆ ಮಧ್ಯ ಗುಜರಾತ್. ಪೂರ್ವದ ಆದಿವಾಸಿ ಸೀಮೆಯ ವಿನಾ ಈ ಪ್ರದೇಶದ ಕಾಲುವೆ ನಿರ್ಮಾಣ ಕಾರ್ಯ ಬಹಳ ಹಿಂದೆಯೇ ಪೂರ್ಣಗೊಂಡಿತು. ನೀರಾವರಿಯ ಸಮೃದ್ಧ ಫಲ ಸರ್ದಾರ್ ಸರೋವರ ಮೂಲ ಯೋಜನೆಯಲ್ಲಿ ಕಾಣಿಸಲಾಗಿದ್ದಕ್ಕಿಂತ ಎಷ್ಟೋ ಪಟ್ಟು ಹೆಚ್ಚಿನ ಪ್ರಮಾಣದಲ್ಲಿ ಈ ಭಾಗದ ಜನರಿಗೆ ಈಗಾಗಲೇ ಲಭಿಸಿದೆ.

ಸುಪ್ರೀಂ ಕೋರ್ಟ್ ನೀಡಿದ ಆದೇಶಗಳು ನೆಲಮಟ್ಟದಲ್ಲಿ ಜಾರಿಯಾಗಿಲ್ಲ. ಶೇ 80ರಷ್ಟು ಮರುವಸತಿ ಕಾರ್ಯ ಇನ್ನೂ ಬಾಕಿ ಉಳಿದಿದೆ. ಆದರೆ ಜನರನ್ನು ಅವರ ಮೂಲನೆಲೆಗಳಿಂದ ಒಕ್ಕಲೆಬ್ಬಿಸುವ ಕ್ರೌರ್ಯ ಸರ್ಕಾರದಿಂದಲೇ ನಡೆದಿದೆ. ಸರ್ಕಾರಿ ಅಂಕಿ ಅಂಶಗಳ ಪ್ರಕಾರವೇ ಇನ್ನೂ 30 ಸಾವಿರ ಕಿ.ಮೀ. ಉದ್ದದ ಕಾಲುವೆ ಜಾಲವನ್ನು ನಿರ್ಮಿಸಬೇಕಿದೆ. ಈ ಯೋಜನೆಯ ವೆಚ್ಚ– ಲಾಭ, ಸಾಧಕ– ಬಾಧಕಗಳ ಅಂದಾಜಿನ ನಿಜ ನೋಟ ಇನ್ನೂ ಹೊರಹೊಮ್ಮಿಲ್ಲ. ಜಲಾಶಯದ ಕೆಳಭಾಗದ 150 ಕಿ.ಮೀ. ಉದ್ದದ ನದಿ ಪಾತ್ರ ಬತ್ತಿ ಹೋಗಿದೆ. ಆದರೂ ಸರ್ದಾರ್ ಸರೋವರ ಯೋಜನೆ ಪೂರ್ಣಗೊಂಡಿದೆ ಎಂದು ಪ್ರಧಾನಿ ತಮ್ಮ ಹುಟ್ಟುಹಬ್ಬದಂದು ದೇಶಕ್ಕೆ ಸಾರಿಬಿಟ್ಟರು.

ಮುಳುಗಡೆ ಸಂತ್ರಸ್ತರ ನೆರವಿಗೆ ಮನುಷ್ಯರು ಬಾರದೆ ಹೋದರೂ ಸದ್ಯಕ್ಕೆ ನಿಸರ್ಗ ಕರುಣೆ ತೋರಿದೆ. ಮಳೆಯ ಅಭಾವದಿಂದ ಸರ್ದಾರ್ ಸರೋವರ ಪೂರ್ಣ ಭರ್ತಿಯಾಗಿಲ್ಲ. 129.68 ಮೀಟರುಗಳಷ್ಟು ನೀರು ನಿಂತಿದೆ. ಪೂರ್ಣ ತುಂಬಲು ಇನ್ನೂ ಒಂಬತ್ತು ಮೀಟರು ಬಾಕಿ ಇದೆ. ಮೇಲ್ಭಾಗದ ಇಂದಿರಾಸಾಗರ ಮತ್ತು ಓಂಕಾರೇಶ್ವರ ಜಲಾಶಯಗಳ ವಿದ್ಯುಚ್ಛಕ್ತಿ ಉತ್ಪಾದನೆಯನ್ನು ಶೇ 95ರಷ್ಟು ಕಡಿತಗೊಳಿಸಿದ್ದೇ ಅಲ್ಲದೆ ಪ್ರಧಾನಿಯವರ ಜನ್ಮದಿನಕ್ಕೆ ಸರಿಯಾಗಿ ಈ ಎರಡೂ ಜಲಾಶಯಗಳ ಬಹುತೇಕ ನೀರನ್ನು ಹರಿಸಿ ಸರ್ದಾರ್ ಸರೋವರದ ಸಂಗ್ರಹವನ್ನು ಹೆಚ್ಚಿಸಲಾಯಿತು.

ಈ ಯೋಜನೆ ತನ್ನ ಪ್ರಸಕ್ತ ರೂಪದಲ್ಲಿ ಜಾರಿಯಾಗುವುದು ಜನಹಿತದಿಂದ ಸಾಧುವಲ್ಲ ಎಂಬ ವರದಿಯನ್ನು ವಿಶ್ವಬ್ಯಾಂಕ್ ಮತ್ತು ಭಾರತ ಸರ್ಕಾರದ ಅಧ್ಯಯನಗಳು 25 ವರ್ಷಗಳಷ್ಟು ಹಿಂದೆಯೇ ಸಾರಿ ಹೇಳಿದ್ದವು. 35 ವರ್ಷಗಳ ಕಾಮಗಾರಿ, ₹ 48 ಸಾವಿರ ಕೋಟಿ ವೆಚ್ಚ, 45 ಸಾವಿರ ಕುಟುಂಬಗಳ ಅತಂತ್ರ ಸ್ಥಿತಿ, ಎರಡೂವರೆ ಲಕ್ಷ ಹೆಕ್ಟೇರುಗಳಷ್ಟು ಭೂಸ್ವಾಧೀನ ಹಾಗೂ 245 ಗ್ರಾಮಗಳ ಮುಳುಗಡೆಯ ನಂತರವೂ ಸರ್ದಾರ್‌ ಸರೋವರ ಜಲಾಶಯ ಕೇವಲ ಭರವಸೆಯಾಗಿಯೇ ಉಳಿದಿದೆ ಎನ್ನುತ್ತಾರೆ ಅಂತರರಾಷ್ಟ್ರೀಯ ಜಲನಿರ್ವಹಣೆ ಸಂಸ್ಥೆಯ ತುಷಾರ್ ಮೆಹ್ತಾ.

ಈ ಯೋಜನೆ ಗುಜರಾತ್‌ನಲ್ಲಿ 18.45 ಲಕ್ಷ ಹೆಕ್ಟೇರುಗಳಷ್ಟು ಭಾರೀ ಭೂಪ್ರದೇಶದೊಂದಿಗೆ ರಾಜಸ್ಥಾನದ 2.46 ಲಕ್ಷ ಹೆಕ್ಟೇರ್‌ಗಳಿಗೆ ನೀರುಣಿಸುತ್ತದೆ. 1,450 ಮೆಗಾವಾಟ್ ಸಾಮರ್ಥ್ಯದ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೊಂದಿದೆ. ಗುಜರಾತಿನ 173 ಪಟ್ಟಣಗಳು, 9,500 ಗ್ರಾಮಗಳು ಹಾಗೂ ರಾಜಸ್ಥಾನದ 124 ಹಳ್ಳಿಗಳಿಗೆ ನೀರುಣಿಸುತ್ತದೆ. ಹತ್ತು ಲಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಕೈಗಾರಿಕೆಗಳಿಗೂ ನೀರು ದೊರೆಯುತ್ತದೆ. ಶೂಲಪಾಣೇಶ್ವರ ವನ್ಯಜೀವಿ ಅಭಯಾರಣ್ಯದ ವಿಸ್ತೀರ್ಣ 150 ಚದರ ಕಿ.ಮೀ.ಗಳಿಂದ 607 ಚದರ ಕಿ.ಮೀ.ಗಳಿಗೆ ವಿಸ್ತರಿಸಲಿದೆ. ಏಳೂವರೆ ಕೋಟಿ ಸಸಿಗಳನ್ನು ಈಗಾಗಲೇ ನೆಡಲಾಗಿದೆ. ಮುಳುಗಡೆಯಾದ ಪ್ರತಿ ಮರಕ್ಕೆ 92 ಸಸಿ ನೆಡಲಾಗಿದೆ. 4,650 ಹೆಕ್ಟೇರುಗಳನ್ನು ಅರಣ್ಯೀಕರಣಕ್ಕೆ ಮೀಸಲಿರಿಸಲಾಗಿದೆ ಎನ್ನುತ್ತವೆ ಸರ್ಕಾರಿ ಅಂಕಿ ಅಂಶಗಳು.

ಬಡವಾನಿ ಜಿಲ್ಲಾ ಕೇಂದ್ರದ ಹೊರವಲಯದ ಗ್ರಾಮ ರಾಜಘಾಟ್. ಗಾಂಧಿ- ಕಸ್ತೂರಬಾ- ಮಹದೇವ ದೇಸಾಯಿ ಅವರ ಅಸ್ಥಿಯನ್ನು ಇರಿಸಿದ್ದ ನರ್ಮದಾ ತಟದ ಊರು ಭಣಗುಡುತ್ತಿದೆ. ರಾಜೂ ಸೀತಾರಾಂ ಎಂಬಾತನ ದಲಿತ ಬಡ ಕುಟುಂಬವೊಂದು ಇನ್ನೂ ಊರು ತೊರೆದಿಲ್ಲ. ‘ನನಗೆ ನಿವೇಶನವೂ ಸಿಕ್ಕಿಲ್ಲ, ಮನೆ ಕಟ್ಟಿಕೊಳ್ಳಲು ಹಣವನ್ನೂ ಕೊಟ್ಟಿಲ್ಲ. ಕೊಡುವ ತನಕ ಖಾಲಿ ಮಾಡಲ್ಲ’ ಎನ್ನುತ್ತಾರೆ ಸೀತಾರಾಂ. ನಾಲ್ಕೂ ದಿಕ್ಕಿನಿಂದ ನೀರು ಸುತ್ತುವರೆದಿರುವ ಈ ಗ್ರಾಮದಲ್ಲಿ ಇದೀಗ ಎಲ್ಲೆಂದರಲ್ಲಿ ಸರ್ಪಗಳು ಹರಿಯುತ್ತಿವೆ.

‘ಸರ್ಕಾರ ನಮ್ಮ ಸ್ವಾತಂತ್ರ್ಯ ಕಸಿದುಕೊಂಡು ಗುಲಾಮಗಿರಿಗೆ ತಳ್ಳಿದೆ’ ಎನ್ನುತ್ತಾರೆ ರೋಲೇಗಾಂವ್‌ನ ಸುರಭಾನ್ ಎಂಬ ಆದಿವಾಸಿ. ‘ನದಿ, ಜಂಗಲು ಜಮೀನುಗಳನ್ನು ನಮ್ಮಿಂದ ಕಿತ್ತುಕೊಳ್ಳಲಾಗುತ್ತಿದೆ. ಇಷ್ಟೇ ನೀರು, ಇಷ್ಟೇ ಭೂಮಿ ಎಂದು ಭಗವಂತ ತೂಕ ಮಾಡಿ ಈ ಜಗತ್ತು ಸೃಷ್ಟಿಸಿದ್ದಾನೆ. ಈ ಸಮತೋಲನವನ್ನು ತಪ್ಪಿಸಲಾಗುತ್ತಿದೆ. ವಿನಾಶದತ್ತ ಸಾಗುತ್ತಿದ್ದೇವೆ’ ಎಂಬ ಸುರಭಾನ್ ಮಾತನ್ನು ‘ನಾಗರಿಕ’ ಜಗತ್ತು ಸಾವಧಾನದಿಂದ ಮೆಲುಕು ಹಾಕಬೇಕಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry