ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ: ಸಂಕಷ್ಟದಲ್ಲಿ ಜೀನ್ಸ್‌ ಉದ್ಯಮ

ಸರಕು ಮತ್ತು ಸೇವಾ ತೆರಿಗೆ ಜಾರಿಯಾದ ಪರಿಣಾಮ
Last Updated 20 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬಳ್ಳಾರಿ: ಜೀನ್ಸ್‌ ಪ್ಯಾಂಟ್‌ಗಳ ಉತ್ಪಾದನೆಗೆ ಪ್ರಸಿದ್ಧವಾದ ಜಿಲ್ಲೆಯಲ್ಲಿ ಜಿಎಸ್‌ಟಿ ಜಾರಿಯಾದ ಬಳಿಕ ಉದ್ಯಮದ ಎಲ್ಲ ಹಂತದ ಭಾಗೀದಾರರು ಸಂಕಟದಲ್ಲಿ ಸಿಲುಕಿದ್ದಾರೆ. ಜಿಎಸ್‌ಟಿ ಜಾರಿಗೆ ಮುನ್ನ ಶೇ 2 ರಷ್ಟು ವ್ಯಾಟ್‌ ಮಾತ್ರ ಪಾವತಿಸಬೇಕಾಗಿದ್ದ ಈ ಉದ್ಯಮ ಈಗ ತೆರಿಗೆಯ ಬಲೆಯಲ್ಲಿ ಸಿಲುಕಿದ ಸ್ಥಿತಿಯಲ್ಲಿದೆ.

ಜೀನ್ಸ್‌ ಬಟ್ಟೆಗೆ ಶೇ 5ರವರೆಗೆ ತೆರಿಗೆ ಮತ್ತು ಪ್ಯಾಂಟ್‌ ತಯಾರಿಸಲು ಬೇಕಾದ ಸಾಮಗ್ರಿಗಳಿಗೆ ಶೇ 18ರಷ್ಟು ತೆರಿಗೆಯನ್ನು ವಿಧಿಸಿರುವುದರಿಂದ ಉತ್ಪಾದನೆ ಕುಸಿದಿದೆ. ಅದನ್ನೇ ನೆಚ್ಚಿಕೊಂಡಿದ್ದ ಟೈಲರ್‌ಗಳು, ಅವರನ್ನು ಕೆಲಸಕ್ಕೆ ತೆಗೆದುಕೊಂಡು ಸಗಟು ಜಾಬ್‌ ವರ್ಕ್‌ ಮಾಡಿಕೊಡುತ್ತಿದ್ದ ಘಟಕಗಳ ಮಾಲೀಕರಿಗೆ, ಉತ್ಪಾದಕರಿಗೆ ಮೊದಲಿನಷ್ಟು ಕೆಲಸವಿಲ್ಲದಂತಾಗಿದೆ.

ಜೀನ್ಸ್‌ ಪ್ಯಾಂಟ್‌ ಉತ್ಪಾದಿಸುವ 400ಕ್ಕೂ ಹೆಚ್ಚು ಘಟಕಗಳು ಜಿಲ್ಲೆಯಲ್ಲಿವೆ. ಅವುಗಳೊಂದಿಗೆ, ನೂರಾರು ಮಂದಿ ಮನೆಗಳಲ್ಲಿಯೇ ಹೊಲಿಗೆ ಯಂತ್ರಗಳನ್ನಿಟ್ಟುಕೊಂಡು ಇದೇ ವೃತ್ತಿಯನ್ನು ಅವಲಂಬಿಸಿದ್ದಾರೆ. ಒಟ್ಟಾರೆ ಸಾವಿರಾರು ಮಂದಿಯ ಸಂಪಾದನೆಗೆ ಜಿಎಸ್‌ಟಿ ಪೆಟ್ಟು ಕೊಟ್ಟಿದೆ.

‘ತಿಂಗಳಿಗೆ ಮೂರ್ನಾಲ್ಕು ಸಾವಿರ ಪ್ಯಾಂಟ್‌ಗಳು ಬೇಕೆಂದು ಬೇಡಿಕೆ ಸಲ್ಲಿಸುತ್ತಿದ್ದ ಖರೀದಿದಾರರು ಈಗ 500- 600 ಪ್ಯಾಂಟ್‌ಗಳಷ್ಟೇ ಸಾಕು ಎನ್ನುತ್ತಿದ್ದಾರೆ. ಹೀಗಾಗಿ ನಮಗೂ ಕೆಲಸವಿಲ್ಲದಂತಾಗಿದೆ. ನಮ್ಮನ್ನೇ ನೆಚ್ಚಿಕೊಂಡಿದ್ದ ಬಡ ಕುಟುಂಬಗಳ ಮಹಿಳೆಯರೂ ಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ನಗರದ ಕೌಲ್‌ಬಜಾರ್‌ನ ಉತ್ಪಾದಕ ಸೈಯದ್ ಶುಕುರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮ್ಮ ಘಟಕದಲ್ಲಿ ಹತ್ತಕ್ಕೂ ಹೆಚ್ಚು ಮಹಿಳಾ ಟೈಲರ್‌ಗಳಿದ್ದರು. ಈಗ ಕೇವಲ ಐವರು ಮಹಿಳೆಯರಿಗಷ್ಟೇ ಕೆಲಸವಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ ನಮ್ಮಂಥ ಘಟಕಗಳನ್ನು ಮುಚ್ಚುವುದು ಅನಿವಾರ್ಯವಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಜೀನ್ಸ್‌ ಪ್ಯಾಂಟ್‌ಗಳನ್ನು ಸಗಟು ವಹಿವಾಟಿಗಾಗಿ ತಯಾರಿಸಲು ಕನಿಷ್ಠ ಒಂದು ತಿಂಗಳಾದರೂ ಬೇಕು. ಆದರೆ ಪ್ರತಿ ತಿಂಗಳೂ ವಹಿವಾಟಿನ ಮಾಹಿತಿ ಸಲ್ಲಿಸಬೇಕು ಎಂಬುದು ಜಿಎಸ್‌ಟಿ ನಿಯಮ. ಹಾಗೆ ಸಲ್ಲಿಸಲು ಸಾಧ್ಯವಾಗುವುದಿಲ್ಲ. ನಾವು ಉತ್ಪಾದಿಸುವ ಬಟ್ಟೆ ಮಾರಾಟವಾಗುವ ಮುಂಚೆಯೇ ಹೇಗೆ ಅದರ ಲೆಕ್ಕವನ್ನು ಕೊಡುವುದು?’ ಎಂದು ಪೋಲೆಕ್ಸ್‌ ಘಟಕದ ಮಾಲೀಕ ಮಲ್ಲಿಕಾರ್ಜುನ ಪ್ರಶ್ನಿಸಿದರು.

ಆರು ತಿಂಗಳು ಬೇಕು: ‘ಜಿಎಸ್‌ಟಿ ಜಾರಿಯಾಗಿ ಮೂರೂವರೆ ತಿಂಗಳಾದರೂ ವಹಿವಾಟು ಚೇತರಿಕೆ ಕಂಡಿಲ್ಲ. ಕನಿಷ್ಠ ಆರು ತಿಂಗಳಾದರೂ ಬೇಕು ಎಂದು ತಜ್ಞರು ಹೇಳುತ್ತಾರೆ. ಅಲ್ಲಿಯವರೆಗೂ ಈ ಉದ್ಯಮವನ್ನು ನೆಚ್ಚಿಕೊಂಡಿರುವ ಸಣ್ಣ ಪುಟ್ಟ ವ್ಯಾಪಾರಸ್ಥರು ಮತ್ತು ಬಡ ಕೂಲಿಗಳ ಸ್ಥಿತಿ ಹೇಳತೀರದಾಗಿದೆ’ ಎಂದು ಎನ್ನುತ್ತಾರೆ ಅವರು.

ತೆರಿಗೆ ಕಡಿಮೆಯಾಗಲಿ: 'ಏಕಾಏಕಿ ತೆರಿಗೆಯನ್ನು ಹೆಚ್ಚಿಸಿರುವುದರಿಂದ ವಹಿವಾಟು ಏರುಪೇರಾಗಿದೆ. ಅದಕ್ಕೆ ಇರುವ ಏಕೈಕ ಮಾರ್ಗವೆಂದರೆ ತೆರಿಗೆಯನ್ನು ಸಾಧ್ಯವಾದಷ್ಟು ಇಳಿಸುವುದು. ಆ ಬಗ್ಗೆ ಸರ್ಕಾರ ಗಮನಹರಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT