ಸೋಮವಾರ, ಸೆಪ್ಟೆಂಬರ್ 16, 2019
22 °C
ತನ್ನದೇ ದೇಶದ ಕಿರ್ಕುಕ್‌ ಪ್ರದೇಶದ ಮೇಲೆ ಇರಾಕ್‌ ದಂಡೆತ್ತಿ ಹೋಗಿದ್ದು ಯಾಕೆ?

ಕುರ್ದ್‌ಸ್ತಾನ: ಸ್ವಂತ ದೇಶದ ಕನಸಿಗೆ ಮತ್ತೆ ತಣ್ಣೀರು

Published:
Updated:
ಕುರ್ದ್‌ಸ್ತಾನ: ಸ್ವಂತ ದೇಶದ ಕನಸಿಗೆ ಮತ್ತೆ ತಣ್ಣೀರು

ಇರಾಕ್‌ನ ಉತ್ತರ ಭಾಗದಲ್ಲಿರುವ ಗುಡ್ಡಗಾಡು ಪ್ರದೇಶ, ಕುರ್ದ್‌ ಸಮುದಾಯದ ಜನರ ನೆಲೆ. ಈ ಜನರು ನೆಲೆಯಾಗಿರುವ ಇರಾಕ್‌ನ ಸುಮಾರು 75 ಸಾವಿರ ಚದರ ಕಿ.ಮೀ. ಪ್ರದೇಶವನ್ನು ಸ್ವಾಯತ್ತ ಪ್ರದೇಶವೆಂದು ಗುರುತಿಸಲಾಗಿದೆ. ಆದರೆ ಕಳೆದ ಒಂದು ವಾರದಲ್ಲಿ ಈ ಪ್ರದೇಶದ ಪ್ರಮುಖ ಪಟ್ಟಣಗಳಾದ ಕಿರ್ಕುಕ್‌, ಬಷಿಕ, ಕನಕಿನ್‌ ಮತ್ತು ಸಿಂಜರ್‌ಗಳನ್ನು ಇರಾಕ್‌ನ ಸೇನೆ ವಶಪಡಿಸಿಕೊಂಡಿದೆ. ಕುರ್ದ್‌ ಸ್ವಾಯತ್ತ ಸರ್ಕಾರವು ತನ್ನ ವಶದಲ್ಲಿದ್ದ ಶೇ 40ರಷ್ಟು ಪ್ರದೇಶವನ್ನು ಕಳೆದುಕೊಂಡಿದೆ. ಕುರ್ದ್‌ ಸಮುದಾಯದ ಒಂದು ಲಕ್ಷಕ್ಕೂ ಹೆಚ್ಚು ಜನರು ಕಿರ್ಕುಕ್‌ ಪ್ರದೇಶದಿಂದ ಪಲಾಯನ ಮಾಡಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಸೃಷ್ಟಿಯಾದ ಮತ್ತೊಂದು ಬಿಕ್ಕಟ್ಟಿನ ಒಂದು ನೋಟ ಇಲ್ಲಿದೆ.

ಕುರ್ದ್‌ಗಳು ಯಾರು?

ಕ್ರಿಸ್ತ ಪೂರ್ವದಿಂದಲೇ ಮಧ್ಯಪ್ರಾಚ್ಯದಲ್ಲಿ ಇರುವ ಬುಡಕಟ್ಟು ಸಮುದಾಯ ಎಂದು ಕುರ್ದ್‌ ಜನರನ್ನು ಇತಿಹಾಸಕಾರರು ಗುರುತಿಸುತ್ತಾರೆ. ಈ ಪ್ರದೇಶದಲ್ಲಿ ಇಸ್ಲಾಂ ಪ್ರಾಬಲ್ಯ ಹೆಚ್ಚಿದಂತೆ ಇಸ್ಲಾಂಗೆ ಮತಾಂತರವಾಗುವಂತೆ ಇವರ ಮೇಲೆ ಒತ್ತಡ ಹೆಚ್ಚಾಯಿತು. ಆರಂಭದಲ್ಲಿ ಭಾರಿ ಪ್ರತಿರೋಧ ಒಡ್ಡಿದರೂ ಕುರ್ದ್‌ ಜನರು ಬಳಿಕ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡರು. ಆದರೆ ಇಂದಿಗೂ ಅವರು ಅರೇಬಿಕ್‌ ಭಾಷೆ ಮಾತನಾಡುವುದಿಲ್ಲ. ಬದಲಿಗೆ ತಮ್ಮದೇ ಕುರ್ದ್‌ ಭಾಷೆ, ಸಂಸ್ಕೃತಿಯನ್ನು ಹೊಂದಿದ್ದಾರೆ.

ಕುರ್ದ್‌ ಸಮುದಾಯದ ಜನರು ಇರಾಕ್‌ಗಷ್ಟೇ ಸೀಮಿತವಲ್ಲ. ಟರ್ಕಿ, ಇರಾಕ್‌, ಸಿರಿಯಾ, ಇರಾನ್‌ ಮತ್ತು ಆರ್ಮೇನಿಯಾದ ಗಡಿ ಭಾಗಗಳಲ್ಲಿ ಈ ಜನರು ಹಂಚಿ ಹೋಗಿದ್ದಾರೆ. ಇರಾಕ್‌ನ ಕುರ್ದ್‌ಸ್ತಾನದಲ್ಲಿ 55 ಲಕ್ಷ ಕುರ್ದ್‌ ಸಮುದಾಯದ ಜನರಿದ್ದಾರೆ ಎಂದು ಅಂದಾಜಿಸಲಾಗಿದೆ. ಈ ಸಮುದಾಯದ ಒಟ್ಟು ಜನಸಂಖ್ಯೆ ಸುಮಾರು ಐದು ಕೋಟಿ.

ಕುರ್ದ್‌ಸ್ತಾನದ ಮೇಲೆ ಇರಾಕ್‌ನ ದಿಢೀರ್‌ ದಾಳಿಗೆ ಕಾರಣ ಏನು?

ಕಿರ್ಕುಕ್‌ ತೈಲ ಸಮೃದ್ಧವಾದ ಪ್ರದೇಶ. ಇದರ ಬಹುಭಾಗ ಇರಾಕ್‌ನ ನಿಯಂತ್ರಣದಲ್ಲಿಯೇ ಇತ್ತು. ಆದರೆ 2014ರಲ್ಲಿ ಐಎಸ್‌ ಉಗ್ರಗಾಮಿ ಸಂಘಟನೆಗೆ ತಲೆಬಾಗಿದ ಇರಾಕ್‌ ಸೇನೆ, ಕಿರ್ಕುಕ್‌ ಪ್ರದೇಶವನ್ನು ಬಿಟ್ಟು ಕೊಟ್ಟಿತ್ತು. ಕುರ್ದ್‌ಸ್ತಾನದ ಪೇಶ್‌ಮರ್ಗಾ ಯೋಧರು ಆರಂಭದಿಂದಲೂ ಐಎಸ್‌ ವಿರುದ್ಧ ಹೋರಾಡುತ್ತಾ ಬಂದವರು. ಐಎಸ್‌ ಬಲ ಕುಂದಿದಂತೆ ಕಿರ್ಕುಕ್‌ ಪ್ರದೇಶದ ನಿಯಂತ್ರಣ ಕುರ್ದ್‌ಸ್ತಾನದ ಕೈಗೆ ಬಂತು. ಇದು ತನ್ನದೇ ಪ್ರದೇಶ. ಹಾಗಾಗಿ ಅದನ್ನು ವಶಕ್ಕೆ ಪಡೆಯಲಾಗಿದೆ ಎಂದು ಇರಾಕ್‌ ಹೇಳುತ್ತಿದೆ. ನಿನೆವೆಹ್‌, ಸಲಾಹುದ್ದೀನ್‌ ಮತ್ತು ದಿಯಾಲಾ ಪ್ರದೇಶಗಳ ನಿಯಂತ್ರಣಕ್ಕೆ ಸಂಬಂಧಿಸಿಯೂ ಇರಾಕ್‌ ಮತ್ತು ಕುರ್ದ್‌ಸ್ತಾನ ಸ್ವಾಯತ್ತ ಸರ್ಕಾರದ ನಡುವೆ ವಿವಾದ ಇದೆ.

ಪ್ರತಿರೋಧವೇ ಇಲ್ಲದೆ ಕುರ್ದ್‌ ಸೇನೆ ತಲೆಬಾಗಿದ್ದು ಏಕೆ?

ಕುರ್ದ್‌ಸ್ತಾನದ ಆಡಳಿತ ಎರಡು ಕುಟುಂಬಗಳ ನಿಯಂತ್ರಣದಲ್ಲಿದೆ. ಮಸೂದ್‌ ಬರ್ಜಾನಿ ದೇಶದ ಅಧ್ಯಕ್ಷರಾಗಿದ್ದರೆ, ಅವರ ಅಣ್ಣನ ಮಗ ನೀಚಿರ್ವನ್‌ ಬರ್ಜಾನಿ ಪ್ರಧಾನಿ. ಮಸೂದ್‌ ಅವರ ದೊಡ್ಡ ಮಗ ಮನ್ಸೂರ್‌ ಗುಪ್ತಚರ ವಿಭಾಗದ ಮುಖ್ಯಸ್ಥನಾಗಿದ್ದರೆ, ಎರಡನೇ ಮಗ ಮಸ್ರೂರ್‌ ಸೇನೆಯ ಜನರಲ್‌. ಮಸೂದ್‌ ಅವರ ಮಕ್ಕಳು ಮತ್ತು ನೀಚಿರ್ವನ್‌ ನಡುವೆ ಅಧಿಕಾರಕ್ಕಾಗಿ ಕಚ್ಚಾಟ ಇದೆ.

ಇಲ್ಲಿ ಎರಡು ಪ್ರಮುಖ ರಾಜಕೀಯ ಪಕ್ಷಗಳಿವೆ. ಮಸೂದ್‌ ಅವರ ಕೆಡಿಪಿ ಮತ್ತು ಇನ್ನೊಂದು ಪಕ್ಷ ಪಿಯುಕೆ ನಡುವೆ ಭಾರಿ ಪ್ರತಿಸ್ಪರ್ಧೆ ಇದೆ. ಈ ಪಕ್ಷಗಳು ತಮ್ಮದೇ ಆದ ಸೇನೆಯನ್ನು ಹೊಂದಿವೆ. ವಿವಾದಾತ್ಮಕ ಸಿಂಜರ್‌ ಪ್ರದೇಶದಿಂದ ಕೆಡಿಪಿ ಸೇನೆ ಹೊರನಡೆದರೆ ಕನಕಿನ್‌ನಲ್ಲಿ ಪಿಯುಕೆ ಯಾವುದೇ ಪ್ರತಿರೋಧ ತೋರಲಿಲ್ಲ. ಆಂತರಿಕ ಕಚ್ಚಾಟವೇ ಈ ರೀತಿ ತಲೆಬಾಗಲು ಕಾರಣ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.

ಸ್ವಂತ ದೇಶದ ಕನಸು ಯಾಕೆ ಈಡೇರಲಿಲ್ಲ?

ಸ್ವಂತ ದೇಶ ಬೇಕು ಎನ್ನುವುದು ಕುರ್ದ್‌ ಸಮುದಾಯದ ಶತಮಾನಗಳ ಕನಸು. ಆದರೆ ಈ ನಿಟ್ಟಿನಲ್ಲಿ ಹೆಚ್ಚಿನ ಪ್ರಗತಿ ಸಾಧ್ಯವಾಗಿಲ್ಲ. ಸದ್ದಾಂ ಹುಸೇನ್‌ ಇರಾಕ್‌ನ ಸರ್ವಾಧಿಕಾರಿಯಾಗಿದ್ದಾಗ ಈ ಸಮುದಾಯವನ್ನು ನಿರ್ನಾಮ ಮಾಡಲು ಯತ್ನಿಸಿದ್ದರು. ಆಗ ಪಶ್ಚಿಮದ ದೇಶಗಳು ಕುರ್ದ್‌ ಸಮುದಾಯದ ನೆರವಿಗೆ ಹೋಗಿದ್ದವು. 1991ರ ಗಲ್ಫ್‌ ಯುದ್ಧದ ಬಳಿಕ ಕುರ್ದ್‌ ಸಮುದಾಯದ ಜನರು ಇರುವ ಪ್ರದೇಶಕ್ಕೆ ಸ್ವಾಯತ್ತ ಸ್ಥಾನ ದೊರೆಯಿತು.

2005ರಲ್ಲಿ ಸಂವಿಧಾನದ ವಿಧಿಯ ಮೂಲಕವೇ ಈ ಪ್ರದೇಶದ ಸ್ವಾಯತ್ತೆಯನ್ನು ಅಧಿಕೃತಗೊಳಿಸಲಾಯಿತು. ಆದರೆ ಸ್ವಂತ ದೇಶದ ಕನಸು ಈಡೇರಲಿಲ್ಲ. ಇರಾನ್‌, ಇರಾಕ್‌, ಸಿರಿಯಾ ಮತ್ತು ಟರ್ಕಿಯಲ್ಲಿನ ಕುರ್ದ್‌ ಸಮುದಾಯದ ಜನರು ಹೆಚ್ಚಾಗಿರುವ ಪ್ರದೇಶಗಳನ್ನು ಒಟ್ಟು ಸೇರಿಸಿ ಕುರ್ದ್‌ಸ್ತಾನ ರಚನೆ ಈ ಜನರ ಗುರಿ. ವಿವಿಧ ದೇಶಗಳಲ್ಲಿ ಹಂಚಿಹೋಗಿರುವ ಪ್ರದೇಶಗಳನ್ನು ಒಟ್ಟಾಗಿಸಿ ಒಂದು ದೇಶವಾಗಿಸುವುದು ಭಾರಿ ಕಷ್ಟದ ಕೆಲಸ.

ಸ್ವಾತಂತ್ರ್ಯದ ‍ಪರ ಜನಮತಗಣನೆಯ ಪರಿಣಾಮವೇನು?

ಕುರ್ದ್‌ಸ್ತಾನ ಸ್ವತಂತ್ರ ದೇಶವಾಗಬೇಕೇ ಎಂಬ ಬಗ್ಗೆ ಜನಮತಗಣನೆ ನಡೆಸಬೇಕು ಎಂಬ ಪ್ರಯತ್ನ 2014ರಲ್ಲಿಯೇ ಆರಂಭವಾಗಿತ್ತು. ಆದರೆ ಬೇರೆ ಬೇರೆ ಕಾರಣಗಳಿಂದಾಗಿ ಅದು ನಡೆದಿರಲಿಲ್ಲ. ಅಧ್ಯಕ್ಷ ಬರ್ಜಾನಿ ಅವರು ಸೆಪ್ಟೆಂಬರ್‌ 25ರಂದು ಕುರ್ದ್‌ಸ್ತಾನದಲ್ಲಿ ಜನಮತಗಣನೆ ನಡೆಸಿದ್ದಾರೆ. ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಿಲ್ಲವಾದರೂ ಶೇ 93ರಷ್ಟು ಜನರು ಪ್ರತ್ಯೇಕ ದೇಶದ ಪರವಾಗಿ ಮತ ಹಾಕಿದ್ದಾರೆ ಎಂಬ ವರದಿಗಳಿವೆ.

ಈ ಜನಮತಗಣನೆಗೆ ಇರಾಕ್‌ ವಿರೋಧ ವ್ಯಕ್ತಪಡಿಸಿತ್ತು. ಆದರೆ ನೆರೆಯ ದೇಶಗಳಾದ ಇರಾನ್‌ ಮತ್ತು ಟರ್ಕಿ ಪರೋಕ್ಷ ಬೆಂಬಲ ನೀಡಿದ್ದವು. ಅಮೆರಿಕದ ಹಸಿರು ನಿಶಾನೆಯೂ ಇತ್ತು. ಹಾಗಾಗಿ ವಿಶ್ವಸಂಸ್ಥೆ ಅಥವಾ ಇತರ ಯಾವುದೇ ಅಂತರರಾಷ್ಟ್ರೀಯ ಸಂಸ್ಥೆಯ ಬೆಂಬಲ ಮತ್ತು ಮೇಲ್ವಿಚಾರಣೆ ಇಲ್ಲದೆ ಜನಮತಗಣನೆ ನಡೆದಿದೆ. ಸ್ವತಂತ್ರ ದೇಶದ ಪರವಾಗಿ ವ್ಯಕ್ತವಾದ ಭಾರಿ ಒಲವು ಇರಾಕನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಇದು ಮೌಲಿಕವಲ್ಲ ಎಂದು ಇರಾಕ್‌ ವಾದಿಸಿದರೂ ವಿವಾದಾತ್ಮಕ ಪ್ರದೇಶಗಳನ್ನು

ವಶಪಡಿಸಿಕೊಳ್ಳುವುದಕ್ಕೆ ಇದೊಂದು ಪ್ರಮುಖ ಕಾರಣ. ಸ್ವತಂತ್ರ ದೇಶದ ಆಸೆಯನ್ನು ದಮನ ಮಾಡುವುದು ಇರಾಕ್‌ನ ಉದ್ದೇಶ.

Post Comments (+)