ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆಗಿದೆ ಪರಿಹಾರದ ದಾರಿ

Last Updated 20 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಅಂದಾಜು ಶೇ. 25ರಷ್ಟು ಮಹಿಳೆಯರಲ್ಲಿ, ಲೈಂಗಿಕ ಸಮಸ್ಯೆಗಳಿಗೆ ನಿರಾಸಕ್ತಿ ಅಥವಾ ಉದ್ರೇಕದ ಕೊರತೆ ಅತಿ ಮುಖ್ಯ ಕಾರಣ ಎಂಬುದನ್ನು ಹಲವಾರು ಅಧ್ಯಯನಗಳು ತೋರಿಸಿಕೊಟ್ಟಿವೆ. ಇತ್ತೀಚೆಗೆ ಲೈಂಗಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಹಲವು ಬೆಳವಣಿಗೆಗಳು ಬೆಳಕಿಗೆ ಬಂದಿದ್ದು, ಅದರಲ್ಲಿ ಮೂರು ವಿಧಾನಗಳು – ಇಂಟೆನ್ಸಿಟಿ ಮೆಡಿಕಲ್ ಡಿವೈಸ್, ಒ ಶಾಟ್ ಹಾಗೂ ಹೊಸ ಇಂಪ್ಲಾಂಟ್‌ ಈ ನಿಟ್ಟಿನಲ್ಲಿ ಪರಿಹಾರವನ್ನು ಒದಗಿಸಬಲ್ಲ ಭರವಸೆಯನ್ನೂ ನೀಡಿವೆ.

‘ಉದ್ರೇಕದ ಕೊರತೆಯ ಸಮಸ್ಯೆ ಅತಿ ಒತ್ತಡದಾಯಕ. ಸಾಕಷ್ಟು ಮಹಿಳೆಯರು ಅನುಭವಿಸುತ್ತಿರುವ ಇಂಥ ಲೈಂಗಿಕ ಸಮಸ್ಯೆಯ ಕುರಿತು ವಿಜ್ಞಾನಿಗಳು ಗಮನ ನೀಡಿರುವುದು ಒಳ್ಳೆಯ ಬೆಳವಣಿಗೆಯೇ’ ಎಂದು ಹೇಳಿದ್ದಾರೆ, ಸೆಕ್ಸ್ ಥೆರಪಿಸ್ಟ್ ಮಡೆಲೀನ್ ಎಂ. ಕ್ಯಾಸ್ಟೆಲ್ಲೆನೊಸ್.

ಈ ಸಮಸ್ಯೆಯ ಎಳೆಯನ್ನು ಹುಡುಕುತ್ತಾ ಹೊರಟರೆ ಕೆಲವು ಕಾರಣಗಳು ಗೋಚರಿಸುತ್ತವೆ. ಮಹಿಳೆಯರು ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಸಾಧ್ಯವಾಗದೇ ಇರುವುದಕ್ಕೆ ಪೆಲ್ವಿಕ್ ಸ್ನಾಯುಗಳು ಬಲಹೀನವಾಗಿರುವುದೂ ಕಾರಣವಾಗಿರುತ್ತದೆ. ಮಗು ಹುಟ್ಟಿದ ಸಂದರ್ಭ ಅಥವಾ ಮೆನೋಪಾಸ್‌ನ ನಂತರ ಹೀಗಾಗಬಹುದು. ಸ್ನಾಯುಗಳು ಬಲಗೊಂಡರೆ, ಸಹಜವಾಗಿಯೇ ಈ ತೊಂದರೆಗೂ ಪರಿಹಾರ ಕಂಡಂತೆಯೇ. ನೋವುಭರಿತ ಸಂಭೋಗ ಅಥವಾ ವಿಶ್ರಾಂತವಾಗಿ ಸಮ್ಮಿಲನ ಕ್ರಿಯೆಯಲ್ಲಿ ತೊಡಗಿಕೊಳ್ಳಲು ಸಾಧ್ಯವಾಗದೇ ಇರುವುದಕ್ಕೆ ಯೋನಿನಾಳದ ಶುಷ್ಕತೆಯೂ ಕಾರಣವಾಗಿರುತ್ತದೆ.

ಶುಷ್ಕತೆಯ ಸಮಸ್ಯೆಯೇ ಕಾರಣವಾಗಿದ್ದರ, ಈಸ್ಟ್ರೋಜೆನ್‌ರಹಿತ ಮಾಯಿಶ್ಚರೈಸರ್ ಕ್ರೀಂ ಅನ್ನು ವಾರಕ್ಕೆ ಒಮ್ಮೆ ಅಥವಾ ಎರಡು ಬಾರಿ ಹಚ್ಚಿಕೊಳ್ಳಲು ಸಲಹೆ ನೀಡಬಹುದು. ಇದರ ಪರಿಣಾಮ ಮೂರು ದಿನ ಉಳಿಯುತ್ತದೆ. ತೇವಾಂಶವನ್ನು ನೈಸರ್ಗಿಕವಾಗಿ ಪುನರ್ಭರ್ತಿ ಮಾಡುತ್ತದೆ. ನಿಮ್ಮ ಮುಖ ಅಥವಾ ಕೈ ಕಾಲುಗಳಲ್ಲೂ ತೇವಾಂಶದ ಅತಿಯಾದ ಕೊರತೆ ಕಂಡುಬಂದರೂ ಜಾಗೃತಗೊಳ್ಳಬೇಕು. ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವ ಮುನ್ನ ಸಿಲಿಕೋನ್ ಲ್ಯೂಬ್ರಿಕೆಂಟ್ ಬಳಸುವುದೂ ಉಂಟು.

ಇದಕ್ಕಿರುವ ಮತ್ತೂ ಒಂದು ಪರಿಹಾರ ಇಂಟೆನ್ಸಿಟಿ ಮೆಡಿಕಲ್ ಸಾಧನ. ಇದು ಮಹಿಳೆಯರಿಗೆ ವ್ಯಾಯಾಮದಂತೆ ಕೆಲಸ ಮಾಡಿ, ಪೆಲ್ವಿಕ್ ಸ್ನಾಯುಗಳನ್ನು ಬಲಗೊಳಿಸಲು ಸಹಕಾರಿ. ಇಂಟೆನ್ಸಿಟಿಯನ್ನು ಲೈಂಗಿಕ ಸುಖವನ್ನು ಉದ್ದೀಪನಗೊಳಿಸುವ ಸಲುವಾಗಿಯೇ ವೈಜ್ಞಾನಿಕವಾಗಿ ವಿನ್ಯಾಸಗೊಳಿಸಲಾಗಿದೆ.

ಸ್ಟೆಮ್ ಸೆಲ್ ಇಂಜೆಕ್ಷನ್‌ ಪದ್ಧತಿ: ಪಿಆರ್‌ಪಿ (ಪ್ಲೇಟ್‌ಲೆಟ್ ರಿಚ್ ಪ್ಲಾಸ್ಮ) ಚಿಕಿತ್ಸೆಯ ಈ ಹಂತದಲ್ಲಿ ಹೊಸ ಕೊಲಾಜೆನ್ ನೀಡಲಾಗುತ್ತದೆ. ಇದರಿಂದ ಆರೋಗ್ಯಕರ ರಕ್ತನಾಳಗಳನ್ನು ಹೊಂದಲು ಸಾಧ್ಯವಾಗಿಸುತ್ತಲೇ ಭಾವೋದ್ರೇಕವನ್ನು ಉದ್ದೀಪನಗೊಳಿಸುತ್ತದೆ.

ಒ ಶಾಟ್: ಇದು ಕೂಡ ಇಂಜೆಕ್ಷನ್ ಪದ್ಧತಿಯೇ. ಕ್ಲೈಟೊರಲ್ ಗ್ಲಾನ್‌ಗಳ ಹೊರಭಾಗದಲ್ಲಿ ಈ ಇಂಜೆಕ್ಷನ್ ನೀಡಲಾಗುತ್ತದೆ. ಇದು ಹೊಸ ಕೋಶಗಳ ಬೆಳವಣಿಗೆಗೆ ಸಹಾಯಕವಾಗಿ ಸ್ನಾಯುಗಳು ಬಲಗೊಳ್ಳುವಂತೆ ಮಾಡುತ್ತದೆ. ಇದರಿಂದ ಇನ್ನಿತರ ಉಪಯೋಗವೂ ಇದೆ. ಲಿಚೆನ್ ಸ್ಲೆರೊಸಿಸ್ ಎಂಬ ಚರ್ಮ ಸಮಸ್ಯೆಗೂ ಇದರಿಂದ ಪರಿಹಾರ ದೊರೆತಿರುವುದಾಗಿ ಅಮೆರಿಕದ ಅಧ್ಯಯನವೊಂದು ಸಾಬೀತುಗೊಳಿಸಿದೆ.

ಇಂಜೆಕ್ಷನ್ ನೀಡಿದ ನಂತರ ಒಂದರಿಂದ ಮೂರು ವಾರದಲ್ಲಿ ಫಲಿತಾಂಶ ದೊರೆತಿದೆ. ಯಾವುದೇ ಬದಲಾವಣೆಗಳು ಕಂಡುಬರದಿದ್ದ ಪಕ್ಷ ಇಂಜೆಕ್ಷನ್ ಪುನರಾವರ್ತಿಸಬೇಕು. ಈ ವಿಧಾನದಲ್ಲಿ ಶೇ. 70ರಷ್ಟು ಫಲಿತಾಂಶ ದೊರೆತಿರುವುದಾಗಿ ತಿಳಿದುಬಂದಿದೆ.

ಇಂಪ್ಲಾಂಟ್ ಪದ್ಧತಿ

ಅಮೆರಿಕದಲ್ಲಿ ಇತ್ತೀಚೆಗಷ್ಟೆ ಪೇಟೆಂಟ್ ಪಡೆದುಕೊಂಡ ಸಾಧನ. ಅದರ ವೈದ್ಯಕೀಯ ಪರೀಕ್ಷೆಗಳೂ ನಡೆಯುತ್ತಿವೆ. ಈ ವಿಧಾನದಲ್ಲಿ ಎಲೆಕ್ಟ್ರೋಡ್‌ಗಳ ಪುಟ್ಟ ಬಾಕ್ಸ್ ಅನ್ನು ಶಸ್ತ್ರಚಿಕಿತ್ಸೆ ಮೂಲಕ ಸ್ಪೈನಲ್ ಕಾರ್ಡ್‌ನಲ್ಲಿ ಅಳವಡಿಸಲಾಗುತ್ತದೆ. ಒಂದು ಬಟನ್ ಮೂಲಕ ಇದು ಕೆಲಸ ನಿರ್ವಹಿಸಲಿದೆ.

ಹೊಸ ಜೀವಕೋಶದ ಬೆಳವಣಿಗೆ ಪ್ರಕ್ರಿಯೆಯನ್ನೂ ಪರಿಹಾರದ ರೂಪವಾಗಿ ಕಂಡುಕೊಳ್ಳಲಾಗಿದೆ. ಈ ಪದ್ಧತಿಯಲ್ಲಿ ಬಳಸುವ ಕ್ಯಾಲ್ಸಿಯಂ ಕ್ಲೋರೈಡ್‌ ಪ್ಲೇಟ್‌ಲೆಟ್‌ಗಳನ್ನು ಪ್ರಚೋದಿಸುವ ಮೂಲಕ ಪರಿಹಾರಕ್ಕೆ ದಾರಿ ಕಂಡುಕೊಳ್ಳಲಾಗುತ್ತದೆ.

ಆದರೆ ಈ ಚಿಕಿತ್ಸೆಗಳು ಎಲ್ಲರಿಗೂ ಅಲ್ಲ. ಯಾವ ಚಿಕಿತ್ಸೆ ಯಾವ ಸಮಸ್ಯೆಗೆ ಯಾರಿಗೆ ಸೂಕ್ತ ಎಂಬುದನ್ನು ವೈದ್ಯರೇ ಸಲಹೆ ನೀಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT