7

ಆರೋಗ್ಯಕರ ಅಭ್ಯಾಸ ಹೆಚ್ಚಿಸುವ ಉಪಾಯಗಳು

Published:
Updated:
ಆರೋಗ್ಯಕರ ಅಭ್ಯಾಸ ಹೆಚ್ಚಿಸುವ ಉಪಾಯಗಳು

ರಿಚರ್ಡ್ ತೇಲರ್ - ಈ ಬಾರಿಯ ಅರ್ಥಶಾಸ್ತ್ರದ ನೊಬೆಲ್ ಪಾರಿತೋಷಕ ಪಡೆದವರು. ಅರ್ಥಶಾಸ್ತ್ರ ಎಂದರೆ ಕೇವಲ ಲೆಕ್ಕಾಚಾರ, ಅಂಕಿ–ಅಂಶಗಳಷ್ಟೆ ಅಲ್ಲ, ಮಾನವಸ್ವಭಾವಕ್ಕೆ, ಅದರಲ್ಲೂ ಮನಃಶಾಸ್ತ್ರಕ್ಕೂ ಅರ್ಥಶಾಸ್ತರಕ್ಕೂ ನಂಟಿದೆ ಎಂಬುದನ್ನು ಇದು ಸೂಚಿಸುವಂತಿದೆ. ನಮ್ಮ ತರ್ಕಹೀನ, ವಿವೇಕವಿಲ್ಲದ ಆರ್ಥಿಕ ನಿರ್ಧಾರ ಮತ್ತು ನಿಲುವುಗಳನ್ನು ಗಮನಿಸಿ ಅವುಗಳನ್ನು ಸರಿದೂಗಿಸಲು ಉಪಾಯಗಳನ್ನು ಸೂಚಿಸುವುದೇ ಅರ್ಥಶಾಸ್ತ್ರ. ನಾವುಗಳು ತರ್ಕಬದ್ಧವಾಗಿ ವ್ಯವಹರಿಸುವವರು ಎಂದು ಹೆಚ್ಚಾಗಿ ಅಂದುಕೊಳ್ಳುತ್ತೇವೆ.

ಆದರೆ ವಾಸ್ತವದಲ್ಲಿ ನಾವು ಹಾಹಿರುವುದಿಲ್ಲ. ನಿಷೇಧ ಮಾಡಿದ ಪುಸ್ತಕವನ್ನು ಜನರು ಹೆಚ್ಚು ಓದುತ್ತಾರಂತೆ! ಒಬ್ಬ ವ್ಯಕ್ತಿಗೆ ಒಂದು ಲಕ್ಷ ಸಂಬಳ ಸಿಕ್ಕಿ ಆ ಸಂಸ್ಥೆಯಲ್ಲಿ ಅವನಿಗೇ ಅತಿ ಹೆಚ್ಚು ಆ ಸಂಬಳವಾಗಿದ್ದಲ್ಲಿ ಆತನಿಗೆ ಇರುವ ಸಂತೋಷ, ಒಂದೂವರೆ ಲಕ್ಷ ಸಂಬಳ ಸಿಕ್ಕಿ ಆ ಸಂಸ್ಥೆಯಲ್ಲಿ ಆತನದೇ ಅತಿ ಕಡಿಮೆ ಸಂಬಳವಾಗಿದ್ದಲ್ಲಿ ಸಂತೋಷ ಇರದು; ಅವನಿಗೆ ದುಃಖವೇ ದುಪ್ಪಟ್ಟಿರುತ್ತದೆ ಎನ್ನುತ್ತಾರೆ ಸಂಶೋಧಕರು. ಸಾಮಾನ್ಯವಾಗಿ ಜನರು ಸ್ವರ್ಗದಲ್ಲಿ ಗುಲಾಮನಾಗಿರುವುದರ ಬದಲು ನರಕದಲ್ಲಿ ರಾಜನಾಗಿರುವುದಕ್ಕೆ ಬಯಸುವುದುಂಟು. ಶೇ.80ರಷ್ಟು ಗೆಲ್ಲುವ ಸಾಧ್ಯತೆ ಇದೆ ಎನ್ನುವುದರ ಪ್ರಭಾವಕ್ಕಿಂತ ಶೇ.90ರಷ್ಟು ಸೋಲುವ ಸಾಧ್ಯತೆ ಇದೆ ಎನ್ನುವುದು ಹೆಚ್ಚು ಪ್ರಭಾವ ಮನುಷ್ಯರ ಮೇಲೆ ಬೀಳುತ್ತದೆ. ವಿಷಯ ಒಂದೇ ಇದ್ದರೂ ಹೇಳಿದ ರೀತಿಯು ವಿಭಿನ್ನವಾದ ಮಾನಸಿಕ ಪ್ರತಿಕ್ರಿಯೆಗೆ ಕಾರಣವಾಗುತ್ತದೆ.

ಇಂತಹ ವಾಸ್ತವ ಮಾನವಸ್ವಭಾವವನ್ನು ತಿಳಿದು, ಅದರ ಪ್ರಕಾರ ನಮ್ಮ ಆರ್ಥಿಕ ನೀತಿ, ಆರೋಗ್ಯನೀತಿ ನಿರ್ಮಿಸುವುದರತ್ತ ಗಮನ ಕೊಡಬೇಕಾಗಿದೆ. ಕೇವಲ ಇದಕ್ಕೆ ಅಷ್ಟು ಕೋಟಿ, ಅದಕ್ಕೆ ಇಷ್ಟು ಕೋಟಿ ದುಡ್ಡು ಕೊಟ್ಟೆವು, ಖರ್ಚು ಮಾಡಿದೆವು – ಎಂದರೆ ನಿಜವಾದ ಅಭಿವೃದ್ಧಿ ಸಮಾಜದಲ್ಲಿ ಕಾಣಲಾಗದು. ಒಂದು ಸಮೀಕ್ಷೆಯ ಪ್ರಕಾರ ಭಾರತದಲ್ಲಿ ಶೇ. 40ರಷ್ಟು ಕುಟುಂಬಗಳು ಶೌಚಾಲಯವನ್ನು ಕಟ್ಟಿಸಿಕೊಟ್ಟಿದ್ದರೂ, ಉಪಯೋಗ ಮಾಡುತ್ತಿಲ್ಲ ಎನ್ನುತ್ತದೆ. ಕೋಟಿಗಟ್ಟಲೆ ಹಣ ಖರ್ಚು ಮಾಡಿ ಶೌಚಾಲಯ ಕಟ್ಟಿಸುವುದರ ಜೊತೆಗೆ ಅದನ್ನು ಉಪಯೋಗಿಸುವಂತೆ ಪ್ರೇರೇಪಿಸುವುದು ಹೇಗೆ ಎಂಬುದು ಪ್ರಮುಖ ವಿಷಯವಾಗುತ್ತದೆ.

ನೆದರ್‌ಲ್ಯಾಂಡ್‌ನಲ್ಲಿ ಯೂರಿನಲ್‌ನನ್ನು ಸರಿಯಾಗಿ ಬಳಸದಿದ್ದಾಗ, ಅವರು ಯೂರಿನಲ್‌ನ ಮಧ್ಯೆ ಒಂದು ಸಣ್ಣ ಪ್ಲಾಸ್ಟಿಕ್ ಅಂಟಿಸಿದರು. ಆಗ ಉಪಯೋಗಿಸುವಾಗ ಜನರು ನೇರವಾಗಿ ಯೂರಿನಲ್‌ನ ಒಳಗೆ ಮೂತ್ರ ವಿಸರ್ಜನೆ ಮಾಡಲಾರಂಭಿಸಿದರು! ಇದನ್ನು ತೇಲರ್ ಜನರನ್ನು ‘ಒಳ್ಳೆಯದರತ್ತ ತಳ್ಳುವ (nudge) ಬಗೆ’ ಎನ್ನುತ್ತಾರೆ. ನಮ್ಮಲ್ಲಿ ಒಂದು ಹಾಸ್ಯಕಥೆ ಇದೆ. ಬಾವಿಗೆ ಬಿದ್ದ ಮಗುವನ್ನು ವ್ಯಕ್ತಿಯೊಬ್ಬ ಬಾವಿಗೆ ದುಮುಕಿ ಮಗುವನ್ನು ಹೊರತರುತ್ತಾನೆ. ಇದನ್ನು ಮೆಚ್ಚಿ ಅಲ್ಲಿದ್ದವರು ಆತನನ್ನು ಹಾಡಿ ಹೊಗಳುತ್ತಿದ್ದರೆ, ಆತ ’ಅದು ಹಾಗಿರಲಿ, ಮೊದಲು ಹೇಳಿ ನನ್ನನ್ನು ತಳ್ಳಿದವರು ಯಾರೆಂದು?’ ಎಂದು ಕೇಳುತ್ತಾನೆ.

ಗೂಗಲ್ ಕಂಪನಿಯ ಕ್ಯಾಂಟೀನ್‌ನಲ್ಲಿ ಹಣ್ಣು ಮತ್ತು ಆರೋಗ್ಯಕರ ಪದಾರ್ಥಗಳನ್ನು ಕಣ್ಣಿನ ನೇರಕ್ಕೆ ಅಂದಚಂದವಾಗಿ ಪ್ರದರ್ಶನ ಮಾಡಿದ್ದರಿಂದ ಜನರು ಅವುಗಳನ್ನು ಹೆಚ್ಚು ಉಪಯೋಗಿಸಲು ಆರಂಭಿಸಿದರಂತೆ. ಮಕ್ಕಳಿಗೆ ಪುಸ್ತಕಗಳನ್ನು ಓದಲು ಹಚ್ಚಿಸಲು ಚಿತ್ರಗಳಿರುವ ಪುಸ್ತಕಗಳನ್ನು ಕೈಗೆ ಸಿಕ್ಕುವ ಹಾಗೆ ಅಥವಾ ಸುಮ್ಮನೆ ತೆರೆದಿಟ್ಟಿದ್ದರೆ, ತಾವಾಗಿಯೇ ಪುಸ್ತಕಲೋಕಕ್ಕೆ ತೆರೆದುಕೊಳ್ಳುತ್ತಾರೆ. ಹೀಗಾಗಿ ಆರೋಗ್ಯಕರ ಅಭ್ಯಾಸಕ್ಕೆ ಜನರನ್ನು ಹುರಿದುಂಬಿಸಲು ಈ ರೀತಿಯ ಉಪಾಯಗಳು ಸಹಾಯಕಾರಿಯಾಗುತ್ತದೆ. ಸ್ವಚ್ಛತೆ, ಮಕ್ಕಳಿಗೆ ಲಸಿಕೆಯನ್ನು ಕೊಡಿಸುವುದು, ಆರೋಗ್ಯಕರ ಆಹಾರಪದ್ಧತಿಯನ್ನು ಅಳವಡಿಸಿಕೊಳ್ಳುವುದಕ್ಕೆ ಜನಸಾಮಾನ್ಯರನ್ನು ಸರ್ಕಾರ ಮತ್ತು ನಾಗರಿಕ ಸಮಾಜ ಒಟ್ಟುಗೂಡಿ, ಆರ್ಥಿಕ ಯೋಜನೆಗಳ ಅನುಷ್ಠಾನಕ್ಕೆ ಉಪಾಯಗಳನ್ನು ಹುಡುಕಿಕೊಳ್ಳಬೇಕು. ಇವುಗಳು ಆಯಾ ಸಮುದಾಯಗಳ ಸಾಂಸ್ಕೃತಿಕ ಚೌಕಟ್ಟಿಗೆ ಹೊಂದಿಕೊಂಡಿರಬೇಕು. ಜನರ ಅಭ್ಯಾಸಗಳನ್ನು ಬದಲಿಸುವಂತೆ ಮಾಡುವುದು ಹರಸಾಹಸವೇ ಸರಿ.

ಬಯಲು ಶೌಚಾಲಯ, ಕಂಡಕಂಡಲ್ಲಿ ಬೀಡಾ ಉಗಿಯುವುದು, ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರವಿಸರ್ಜನೆ ಮಾಡುವುದು, ವ್ಯವಸ್ಥೆ ಇದ್ದರೂ ಶೌಚಾಲಯವನ್ನು ಉಪಯೋಗಿಸದಿರುವುದು, ಕಸವನ್ನು ಕಸದ ಬುಟ್ಟಿಗೆ ಹಾಕದಿರುವುದು, ಕಸವನ್ನು ವಿಂಗಡನೆ ಮಾಡದಿರುವುದು, ಪ್ಲಾಸ್ಟಿಕ್ ಬಳಸುವುದು – ಹೀಗೆ ಹತ್ತಾರು ನಮ್ಮ ಮೂಗಿನ ಕೆಳಗಿರುವ ಸಮಸ್ಯೆಗಳನ್ನು ನಾವು ಕೇವಲ ಕಾನೂನು ಮತ್ತು ಬಜೆಟ್ ಮೂಲಕ ಹಣ ಒದಗಿಸುವುದರಿಂದ ಸರಿದೂಗಿಸಲಾಗದು; ಅಥವಾ ಕಾನೂನು ಮತ್ತು ಶಿಕ್ಷೆಯಿಂದಲೂ ಸರಿಪಡಿಸಲಾಗದು. ಮರಣದಂಡನೆ ಹೆಚ್ಚು ಇರುವ ದೇಶದಲ್ಲಿಯೇ ಅಪರಾಧಗಳೂ ಹೆಚ್ಚಿರುವುದು ವಿಪರ್ಯಾಸ. ಹಾಗಾಗಿ ಗಾಂಧೀಜಿ ಅಪರಾಧವನ್ನು ದ್ವೇಷಿಸಬೇಕೇ ಹೊರತು ಅಪರಾಧಿಯನ್ನಲ್ಲ ಎಂದದ್ದು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry