ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸೌಧಕ್ಕೆ 60: ಒಂದು ರೋಚಕ ಕಥೆ

Last Updated 25 ಅಕ್ಟೋಬರ್ 2017, 7:02 IST
ಅಕ್ಷರ ಗಾತ್ರ
ADVERTISEMENT

ಕರ್ನಾಟಕದ ಶಕ್ತಿ ಕೇಂದ್ರ ವಿಧಾನಸೌಧ. ಇದರ ವಾಸ್ತುಶಿಲ್ಪ ವೈಭವಕ್ಕೆ ಬೆರಗಾಗದವರಿಲ್ಲ. ಕಟ್ಟಡ ನಿರ್ಮಾಣದ ಆಧುನಿಕ ತಂತ್ರಜ್ಞಾನ ಬೆಳೆಯದ ದಿನಮಾನಗಳಲ್ಲಿ ನಿರ್ಮಿಸಿದ ಈ ಕಟ್ಟಡಕ್ಕೆ ಸರಿಸಾಟಿ ಎನಿಸುವ ಮತ್ತೊಂದು ಕಟ್ಟಡ ನಿರ್ಮಿಸಲು ಸಾಧ್ಯವಾಗಿಲ್ಲ. ಅದರ ಪ್ರತಿರೂಪವಾಗಿ ನಿರ್ಮಿಸಿದ ವಿಕಾಸಸೌಧ, ಪ್ರತಿಕೃತಿಯಂತೆ ಭಾಸವಾಗುತ್ತದೆ. ವಿಧಾನಸೌಧಕ್ಕೆ ಈಗ 60 ತುಂಬಿದೆ. ವಜ್ರ ಮಹೋತ್ಸವದ ಸಂಭ್ರಮ. ಈ ಉತ್ಸವದ ಆಚರಣೆಯೇ ವಿವಾದಕ್ಕೆ ಕಾರಣವಾಗಿದೆ. ಈ ಅದ್ಭುತ ಕಟ್ಟಡ ನಿರ್ಮಾಣವನ್ನು ನೆನಪಿಸಿಕೊಳ್ಳಲು ಸರಳ ಮತ್ತು ಸುಂದರ ಕಾರ್ಯಕ್ರಮವನ್ನು ಆಚರಿಸಲು ಯಾರ ವಿರೋಧವೂ ಇಲ್ಲ. ದೇಶ–ವಿದೇಶಗಳ ಪ್ರವಾಸಿಗರ ವೀಕ್ಷಣೆಯ ನೆಚ್ಚಿನ ತಾಣವೂ ಹೌದು. ದಕ್ಷಿಣದ ತಾಜ್‌ಮಹಲ್‌ ಎಂಬ ಹೆಗ್ಗಳಿಕೆಯೂ ಇದೆ. ಇಂತಹ ಸುಂದರ ಕಟ್ಟಡ ನಿರ್ಮಾಣದ ಕನಸು ಕಂಡವರು ಕೆಂಗಲ್‌ ಹನುಮಂತಯ್ಯ. ಅವರ ಕಠಿಣ ಪರಿಶ್ರಮ, ಶ್ರದ್ಧೆಯ ಫಲವಾಗಿ ನಾಲ್ಕು ವರ್ಷಗಳಲ್ಲೇ ಭವ್ಯಸೌಧ ಎದ್ದು ನಿಂತಿತು. ಇದರ ನಿರ್ಮಾಣದಲ್ಲಿ ಕೈದಿಗಳ ಪಾತ್ರ ಮಹತ್ವದ್ದು. ಈ ಅಧಿಕಾರ ಶಕ್ತಿ ಕೇಂದ್ರ ಪೂರ್ಣಗೊಳ್ಳುವ ವೇಳೆಗೆ ಕೆಂಗಲ್‌ ಹನುಮಂತಯ್ಯ ಅಧಿಕಾರದಿಂದ ನಿರ್ಗಮಿಸಿದ್ದರು. ತಮ್ಮ ಕನಸಿನ ಕಟ್ಟಡ ಸಾಕಾರಗೊಂಡರೂ ಅಲ್ಲಿ ಕುಳಿತು ಒಂದು ದಿನವೂ ಆಡಳಿತ ನಡೆಸಲು ಅವರಿಗೆ ಸಾಧ್ಯವಾಗಲಿಲ್ಲ. ವಿಧಾನಸೌಧದ ನಿರ್ಮಾಣದ ಕಥೆಯೇ ಸಸ್ಪೆನ್ಸ್‌ ಥ್ರಿಲ್ಲರ್‌ ರೀತಿಯಲ್ಲಿದೆ. ವಿಧಾನಸೌಧವನ್ನು ರಾಷ್ಟ್ರಕವಿ ಕುವೆಂಪು ‘ಶಿಲಾಕಾವ್ಯ’ ಎಂದೂ ಬಣ್ಣಿಸಿದ್ದರು.

ವಿಧಾನಸೌಧದ ಪರಿಕಲ್ಪನೆ ಮೂಡಿದ್ದು ಹೇಗೆ?
ಆಗಿನ್ನೂ ಕರ್ನಾಟಕ ಉದಯವಾಗಿರಲಿಲ್ಲ. ಮೈಸೂರು ರಾಜ್ಯವಿತ್ತು. ಕೆ.ಸಿ.ರೆಡ್ಡಿ ಮುಖ್ಯಮಂತ್ರಿ (1951). ಕೆಂಗಲ್‌ ಹನುಮಂತಯ್ಯ ಸಚಿವರಾಗಿದ್ದರು. ಆಗ ಬೆಂಗಳೂರಿನ ಅಟಾರ ಕಚೇರಿಯಲ್ಲೇ ಮೈಸೂರು ರಾಜ್ಯದ ಆಡಳಿತ ನಡೆಯುತ್ತಿತ್ತು. ಇದೇ ಸಂದರ್ಭದಲ್ಲಿ ಭಾಷಾವಾರು ಪ್ರಾಂತ್ಯಗಳ ರಚನೆಯ ಹೋರಾಟ ಜೋರಾಗಿತ್ತು. ಮೈಸೂರು ರಾಜ್ಯದಲ್ಲೂ ಕನ್ನಡ ಮಾತನಾಡುವ ಪ್ರದೇಶಗಳ ಏಕೀಕರಣಕ್ಕೆ ಬಿರುಸಿನ ಹೋರಾಟ ನಡೆದಿತ್ತು. ಹಳೆ ಮೈಸೂರಿನ ಒಂದಷ್ಟು ರಾಜಕಾರಣಿಗಳ ವಿರೋಧವಿತ್ತು.  ಆಡಳಿತಕ್ಕಾಗಿ ಅಟಾರ ಕಚೇರಿ ಬದಲಿಗೆ ಬೇರೆ ಕಟ್ಟಡ ನಿರ್ಮಿಸಲು ಕೆ.ಸಿ.ರೆಡ್ಡಿ ಬಯಸಿದ್ದರು. ₹ 33 ಲಕ್ಷ ವೆಚ್ಚದಲ್ಲಿ ಬ್ರಿಟಿಷ್‌ ಮಾದರಿ ಕಟ್ಟಡ ನಿರ್ಮಿಸಲು ರೆಡ್ಡಿ ತೀರ್ಮಾನಿಸಿದ್ದರು. ಇದನ್ನು ಕೆಂಗಲ್‌ ಹನುಮಂತಯ್ಯ ತೀವ್ರವಾಗಿ ವಿರೋಧಿಸಿದ್ದರು. ಭಾರತೀಯ ಶೈಲಿಯ ಕಟ್ಟಡವೇ ಆಗಬೇಕು ಎಂಬುದು ಅವರ ಆಕ್ಷೇಪಕ್ಕೆ ಕಾರಣ. ಲಂಡನ್‌ನ ಹೌಸ್‌ ಆಫ್‌ ಕಾಮನ್ಸ್‌ ಇವರಿಗೆ ಸ್ಫೂರ್ತಿಯಾಗಿತ್ತು.

ನಿರ್ಮಾಣ ಶುರುವಾಗಿದ್ದು ಹೇಗೆ?
ಕೆ.ಸಿ.ರೆಡ್ಡಿ ರಾಜೀನಾಮೆ ಬಳಿಕ ಕೆಂಗಲ್‌ ಹನುಮಂತಯ್ಯ ಮುಖ್ಯಮಂತ್ರಿ ಆದರು.  ಕಟ್ಟಡದ ಯೋಜನೆಯ ಅಂದಾಜು ವೆಚ್ಚ ₹ 50 ಲಕ್ಷಕ್ಕೆ ಹೆಚ್ಚಿಸಿದರು. ಒಟ್ಟು ನಾಲ್ಕು ಅಂತಸ್ತುಗಳ ಬೃಹತ್ ಕಟ್ಟಡ ನಿರ್ಮಿಸಲು ತೀರ್ಮಾನಿಸಿದರು. ಬಿ.ಆರ್‌. ಮಾಣಿಕಂ ವಿಧಾನಸೌಧ ಕಟ್ಟಡದ ಮುಖ್ಯ ವಾಸ್ತುಶಿಲ್ಪಿ. ಬೇಲೂರು ಮತ್ತು ಹಳೇಬೀಡು ವಾಸ್ತುಶಿಲ್ಪ ಶೈಲಿಯನ್ನು ಅಳವಡಿಸಲು ಕೆಂಗಲ್‌ ಅವರಿಗೆ ಸೂಚಿಸಿದ್ದರು. ಕೆಂಗಲ್‌ ಅದಕ್ಕೂ ಒಪ್ಪಲಿಲ್ಲ. ಬ್ರಿಟಿಷ್‌ ಅಥವಾ ಅಮೆರಿಕ ಶೈಲಿಯ ವಾಸ್ತುಶಿಲ್ಪಕ್ಕಿಂತ ಭಾರತೀಯ ಶೈಲಿಯ ಅನನ್ಯ ಮಾದರಿಯ ಭವ್ಯ ಕಟ್ಟಡ ನಿರ್ಮಿಸಬೇಕು ಎಂಬುದು ಕೆಂಗಲ್‌ ಅವರ ಉದ್ದೇಶವಾಗಿತ್ತು. ಆ ಕಾಲದಲ್ಲಿ ಬೆಂಗಳೂರಿನಲ್ಲಿದ್ದ ಎಲ್ಲ ದೊಡ್ಡ ಕಟ್ಟಡಗಳು ಯುರೋಪ್ ವಾಸ್ತುಶೈಲಿಯದ್ದೇ ಆಗಿದ್ದವು. ಬ್ರಿಟಿಷ್‌ ಅಧಿಕಾರಿಯೊಬ್ಬರು ಕೆಂಗಲ್‌ ಅವರನ್ನು ‘ಎಲ್ಲೂ ಭಾರತೀಯ ಶೈಲಿ ಕಟ್ಟಡಗಳೇ ಇಲ್ಲ. ನಿಮ್ಮದೇ ಆದ ಶೈಲಿ ಇಲ್ಲವೇ’ ಎಂದು ಕೆಣಕಿದ್ದರು. ಅದನ್ನು ಸವಾಲಾಗಿ ತೆಗೆದುಕೊಂಡ ಕೆಂಗಲ್‌ ಹಲವು ದೇಶಗಳಿಗೆ ತೆರಳಿ ವಾಸ್ತುಶಿಲ್ಪವನ್ನು ಅಧ್ಯಯನ ಮಾಡಿದರು. ಇಂಗ್ಲೆಂಡಿನ ಬಕಿಂಗ್‌ ಹ್ಯಾಮ್‌ ಅರಮನೆಯನ್ನೂ ವೀಕ್ಷಿಸಿದರು. ಅಂತಿಮವಾಗಿ ಎಲ್ಲ ರೀತಿಯ ವಾಸ್ತುಶಿಲ್ಪಗಳನ್ನೂ ಒಳಗೊಂಡ ಮಿಶ್ರಶೈಲಿ ಅಳವಡಿಸಿಕೊಂಡು ಮೈಸೂರು ಅರಮನೆಯನ್ನೂ ಮೀರಿಸುವಂತೆ ನಿರ್ಮಿಸುವ ನಿರ್ಧಾರ ಮಾಡಿದರು. 1951 ರ ಜುಲೈ 13 ರಂದು ಅಂದಿನ ಪ್ರಧಾನಿ ಜವಾಹರಲಾಲ್‌ ನೆಹರೂ ಅವರು ಶಂಕುಸ್ಥಾಪನೆ ನೆರವೇರಿಸಿದರು.

ವಿಧಾನಸೌಧ ನಿರ್ಮಾಣಕ್ಕೆ ಆಡಳಿತ ಪಕ್ಷದಲ್ಲೇ ವಿರೋಧ ಇತ್ತು?
ವಿಧಾನಸೌಧ ನಿರ್ಮಾಣಕ್ಕೆ ಆಡಳಿತ ಪಕ್ಷದಲ್ಲೇ ವಿರೋಧ ಇತ್ತು. ಏಕೀಕರಣ ವಿರೋಧಿಸುತ್ತಿದ್ದವರು, ಕೆಂಗಲ್‌ ಹನುಮಂತಯ್ಯ ಅವರನ್ನು ಒಳಗಿಂದಲೇ ದ್ವೇಷಿಸುತ್ತಿದ್ದರು. ಏಕೀಕರಣವಾದರೆ ಆಡಳಿತದಲ್ಲಿ ಹಳೆ ಮೈಸೂರು ಪ್ರದೇಶದ ಒಕ್ಕಲಿಗರ ಹಿಡಿತ ತಪ್ಪುತ್ತದೆ ಎಂಬುದೇ ಮುಖ್ಯಕಾರಣವಾಗಿತ್ತು ಎಂದು ಹಿರಿಯ ಪತ್ರಕರ್ತ ಸಿ.ಎಂ.ರಾಮಚಂದ್ರ ಅವರು ‘ಎ ರೇರ್ ಅಂಡ್ ಮ್ಯಾಗ್ನಿಫಿಷಿಯಂಟ್ ಮಾನ್ಯುಮೆಂಟ್ ಟು ಡೆಮಾಕ್ರಸಿ ಅಂಡ್ ಪಾಪ್ಯುಲರ್‌ ಸುಪ್ರಿಮೆಸಿ– ವಿಧಾನಸೌಧ’ ಕೃತಿಯಲ್ಲಿ ದಾಖಲಿಸಿದ್ದಾರೆ.

ಕೆಂಗಲ್‌ ಹತ್ಯೆ ಯತ್ನ ನಡೆದಿತ್ತೇ?
ವಿಧಾನಸೌಧದ ಕಟ್ಟಡವು 20ನೇ ಶತಮಾನದ ಭವ್ಯ ಸೌಧವಾಗಬೇಕು ಎಂಬ ಕನಸು ಕೆಂಗಲ್‌ ಅವರದ್ದಾಗಿತ್ತು. ಇದರ ನಿರ್ಮಾಣಕ್ಕಾಗಿ ರಾಜ್ಯದಲ್ಲಿದ್ದ ಸುಮಾರು 5,000 ಕೈದಿಗಳು ಮತ್ತು 1,500 ಕುಶಲಕರ್ಮಿಗಳನ್ನು ಬಳಸಿಕೊಳ್ಳಲಾಗಿತ್ತು. ಅಟಾರ ಕಚೇರಿಯಿಂದ ಪ್ರತಿದಿನ ವಿಧಾನಸೌಧ ನಿರ್ಮಾಣದ ಕಾಮಗಾರಿ ಪ್ರಗತಿ ವೀಕ್ಷಿಸಲು ಹೋಗುತ್ತಿದ್ದರು. ಒಂದು ಕಡೆಯಿಂದ ಮುಖ್ಯಮಂತ್ರಿ ಕೆಂಗಲ್‌ ಹೋಗುತ್ತಿದ್ದರೆ, ಇನ್ನೊಂದು ಕಡೆಯಿಂದ ಪತ್ರಕರ್ತರೂ ವೀಕ್ಷಣೆಗೆ ಹೋಗುತ್ತಿದ್ದರು. ಒಮ್ಮೆ ಕೆಂಗಲ್‌ ಹನುಮಂತಯ್ಯ ಕಾಮಗಾರಿ ವೀಕ್ಷಣೆಗೆ ಹೋಗಿದ್ದರು. ಒಬ್ಬ ಕೈದಿ ಯಾವುದೇ ಪ್ರಚೋದನೆ ಇಲ್ಲದೇ ಕೆಂಗಲ್‌ ಅವರತ್ತ ಕಲ್ಲುಗಳನ್ನು ಎಸೆದದ್ದೂ ಅಲ್ಲದೆ, ಹಿಂದಿನಿಂದ ಬಂದು ಕಬ್ಬಿಣದ ಸಲಾಕೆಯಿಂದ ದಾಳಿ ನಡೆಸಲು ಮುಂದಾಗಿದ್ದ. ಆಗ ಚಿಕ್ಕಪುಟ್ಟಸ್ವಾಮಿ ಎಂಬುವರು ಆ ಕೈದಿಯನ್ನು ಗಟ್ಟಿಯಾಗಿ ಹಿಡಿದುಕೊಂಡು, ಹಲ್ಲೆಯನ್ನು ತಡೆದರು. ಇಲ್ಲವಾದಲ್ಲಿ ಆ ದಿನ ದೊಡ್ಡ ಅನಾಹುತವೇ ನಡೆದು ಹೋಗುತ್ತಿತ್ತು ಎಂದು ಕಡಿದಾಳ್‌ ಮಂಜಪ್ಪ ನೆನಪಿಸಿಕೊಂಡಿದ್ದಾರೆ.

ಕೆಂಗಲ್‌ ವಿರುದ್ಧ ತನಿಖೆಗೆ ಆದೇಶ?
ವಿಧಾನಸೌಧ ನಿರ್ಮಾಣದ ವೆಚ್ಚ ₹ 50 ಲಕ್ಷದಿಂದ ₹ 1.75 ಕೋಟಿಗೆ ಏರಿಕೆ ಆಗಿದ್ದನ್ನು (ಬಳಿಕ ₹ 1.84 ಕೋಟಿಗೆ ತಲುಪಿತು) ಸ್ವಪಕ್ಷೀಯರು ಮತ್ತು ವಿರೋಧ ಪಕ್ಷದವರೂ ತೀವ್ರವಾಗಿ ವಿರೋಧಿಸಿದ್ದರು. ಭ್ರಷ್ಟಾಚಾರ ಆಗಿದೆ ಎಂದು ಗದ್ದಲ ಎಬ್ಬಿಸಿದರು. ತನಿಖೆಗೆ ಪಕ್ಷದೊಳಗೆ ಆಗ್ರಹ ಹೆಚ್ಚುತ್ತಿದ್ದಂತೆ ನಾಗಪುರದ ನಿವೃತ್ತ ನ್ಯಾಯಾಧೀಶರೊಬ್ಬರನ್ನು ತನಿಖೆ ಸಮಿತಿ ಮುಖ್ಯಸ್ಥರನ್ನಾಗಿ ನೇಮಿಸಿದರು. ತಾವು ಹಣ ದುರುಪಯೋಗ ಮಾಡಿಲ್ಲ, ಒಂದು ಪೈಸೆಯೂ ದುಂದು ವೆಚ್ಚವಾಗಿಲ್ಲ ಎಂದೂ ಕೆಂಗಲ್‌ ವಾದಿಸಿದರು. ಆದರೆ, ತನಿಖೆ ಸಮಿತಿ ಕೆಂಗಲ್ ಅವರನ್ನು ತಪ್ಪಿತಸ್ಥರು ಎಂದು ಸಾರಿತು.

ಉದ್ಘಾಟನೆ ಆಗದೇ ಕಾರ್ಯಾರಂಭ...
ವಿಧಾನಸೌಧ ಕಟ್ಟಡ ಪೂರ್ಣಗೊಂಡ ಬಳಿಕ ಅದರ ಉದ್ಘಾಟನೆ ನಡೆಯಲಿಲ್ಲ. ರಾಜ್ಯದ ಪ್ರತಿಯೊಂದು ಗ್ರಾಮದಿಂದಲೂ ಒಬ್ಬೊಬ್ಬರನ್ನು ಕರೆಸಿ ಅವರ ಸಮ್ಮಖದಲ್ಲಿ ಉದ್ಘಾಟನೆ ಮಾಡಬೇಕು ಎಂಬ ಬಯಕೆ ಕೆಂಗಲ್‌ ಅವರಿಗಿತ್ತು. ಆದರೆ, ಕೆಂಗಲ್‌ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದಾಗ, ಬೇಸತ್ತು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುತ್ತಾರೆ. ವಿಧಾನಸೌಧದಲ್ಲಿ ಹೋಮ ನಡೆಸಿ, ವಿಜಯದಶಮಿಯ ದಿನ ಕಾರ್ಯಾರಂಭಕ್ಕೆ ಚಾಲನೆ ನೀಡಲಾಯಿತು. ತಾವೇ ನಿರ್ಮಿಸಿದ ವಿಧಾನಸೌಧದಲ್ಲಿ ಒಂದು ದಿನ ಕುಳಿತೂ ಮುಖ್ಯಮಂತ್ರಿಯಾಗಿ ಕೆಂಗಲ್‌ ಕಾರ್ಯ ನಿರ್ವಹಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT