ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೇದಾರನಾಥ ಮರು ನಿರ್ಮಾಣಕ್ಕೆ ಯುಪಿಎ ಅಡ್ಡಿ’

Last Updated 20 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಕೇದಾರನಾಥ (ಉತ್ತರಾಖಂಡ): 2013ರಲ್ಲಿ ಪ್ರವಾಹದ ಬಳಿಕ ಭಾರಿ ವಿನಾಶಕ್ಕೆ ಒಳಗಾಗಿದ್ದ ಕೇದಾರನಾಥದಲ್ಲಿ ಮರು ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಲು ಆಗ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ತಮಗೆ ಯುಪಿಎ ಸರ್ಕಾರ ಅವಕಾಶ ನಿರಾಕರಿಸಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಆರೋ‍ಪಿಸಿದ್ದಾರೆ.

ಕೇದಾರನಾಥದಲ್ಲಿ ಐದು ಮೂಲಸೌಕರ್ಯ ಯೋಜನೆಗಳ ಶಂಕುಸ್ಥಾಪನೆ ಮಾಡಿ ಮೋದಿ ಅವರು ಮಾತನಾಡಿದ್ದಾರೆ. ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ, ಹಿಮಾಲಯದ ತಪ್ಪಲಿನ ಈ ಮಂದಿರಕ್ಕೆ ಭೇಟಿ ನೀಡಿದ್ದು ದೇಶ ಸೇವೆಗೆ ತಮ್ಮಲ್ಲಿ ಇನ್ನಷ್ಟು ಶಕ್ತಿ ತುಂಬಿದೆ ಎಂದು ಹೇಳಿದ್ದಾರೆ. ಜನರ ಸೇವೆಯೇ ನಿಜವಾದ ದೇವರ ಪೂಜೆ ಎಂದು ಅವರು ಹೇಳಿದರು. ಶಿವನ ದೇವಾಲಯದಲ್ಲಿ ರುದ್ರಾಭಿಷೇಕ ನಡೆಸಿದರು.

‘2013ರ ಪ್ರವಾಹಕ್ಕೆ ಸಾವಿರಾರು ಜನರು ಬಲಿಯಾಗಿದ್ದರು. ಮೂಲಸೌಕರ್ಯಗಳೆಲ್ಲ ಕೊಚ್ಚಿ ಹೋಗಿದ್ದವು. ನಾಶವಾದ ಮೂಲಸೌಕರ್ಯಗಳನ್ನು ಮರು ನಿರ್ಮಾಣ ಮಾಡುವುದಾಗಿ ನಾನು ಹೇಳಿದ್ದೆ. ಆಗ ಉತ್ತರಾಖಂಡ ಮುಖ್ಯಮಂತ್ರಿಯಾಗಿದ್ದ ಕಾಂಗ್ರೆಸ್‌ನ ವಿಜಯ ಬಹುಗುಣ ಅವರು ತಾತ್ವಿಕವಾಗಿ ಅದಕ್ಕೆ ಒಪ್ಪಿಗೆಯನ್ನೂ ನೀಡಿದ್ದರು’ ಎಂದು ಪ್ರಧಾನಿ ಹೇಳಿದ್ದಾರೆ.

‘ಆದರೆ ಈ ಹುರುಪಿನಲ್ಲಿ ನಾನು ಈ ವಿಚಾರವನ್ನು ಮಾಧ್ಯಮದ ಮುಂದೆ ಹೇಳಿಕೊಂಡಿದ್ದೆ. ಇದು ಸುದ್ದಿ ವಾಹಿನಿಗಳಲ್ಲಿ ಪ್ರಸಾರ ಆಗುತ್ತಿದ್ದಂತೆಯೇ ದೆಹಲಿಯಲ್ಲಿ ನಡುಕ ಆರಂಭವಾಯಿತು. ಕೇಂದ್ರದ ಯುಪಿಎ ಸರ್ಕಾರ ಈ ಬೆಳವಣಿಗೆಯನ್ನು ಭಾರಿ ಎಚ್ಚರಿಕೆಯಿಂದ ನೋಡಿತು. ಗುಜರಾತ್‌ ಮುಖ್ಯಮಂತ್ರಿಯು ಕೇದಾರನಾಥಕ್ಕೆ ಹೋಗುವುದು ಸರ್ಕಾರಕ್ಕೆ ಇಷ್ಟವಿರಲಿಲ್ಲ. ನನ್ನ ವಿನಂತಿಯನ್ನು ಒಪ್ಪಿಕೊಳ್ಳದಂತೆ ಉತ್ತರಾಖಂಡ ಸರ್ಕಾರದ ಮೇಲೆ ಒತ್ತಡ ಹೇರಿತು’ ಎಂದು ಮೋದಿ ಹೇಳಿದ್ದಾರೆ.

‘ಗುಜರಾತ್‌ ಸರ್ಕಾರದ ನೆರವು ಬೇಡ ಎಂದು ಹೇಳುವುದು ಬಿಟ್ಟು ಉತ್ತರಾಖಂಡ ಮುಖ್ಯಮಂತ್ರಿಗೆ ಬೇರೆ ದಾರಿಯೇ ಇರಲಿಲ್ಲ. ನಾನು ನಿರಾಶೆಯಿಂದ ಹಿಂದಿರುಗಿದೆ. ಆದರೆ ಕೇದಾರನಾಥದ ಮರು ನಿರ್ಮಾಣದ ಹೊಣೆಯನ್ನು ನನಗೇ ವಹಿಸಬೇಕು ಎಂಬುದು ಶಿವನ ಇಚ್ಛೆ’ ಎಂದು ಅವರು ಹೇಳಿದ್ದಾರೆ. ಆಗ ಕಾಂಗ್ರೆಸ್‌ನಲ್ಲಿದ್ದ ಬಹುಗುಣ ಅವರು ಈಗ ಬಿಜೆಪಿ ಸೇರಿದ್ದಾರೆ.

ಕಾಡಿದ ನೆನಪು
ರಾಜಕಾರಣಕ್ಕೆ ಬರುವ ಮೊದಲು ಕೇದಾರನಾಥ ಸಮೀಪದ ಗರೂರ್‌ಚಟ್ಟಿ ಬಳಿ ಕಳೆದ ದಿನಗಳನ್ನು ಮೋದಿ ನೆನಪಿಸಿಕೊಂಡರು. ‘ಇಂದು ನಾನು ಭೇಟಿಯಾದ ಕೆಲವು ಪರಿಚಿತ ವ್ಯಕ್ತಿಗಳು ಆ ದಿನಗಳನ್ನು ನೆನಪಿಸಿದ್ದಾರೆ. ಆ ದಿನಗಳಿಗೆ ನನ್ನ ಜೀವನದಲ್ಲಿ ಭಾರಿ ಮಹತ್ವ ಇದೆ. ಶಿವನ ಸನ್ನಿಧಿಯಲ್ಲಿ ಶಾಶ್ವತವಾಗಿ ನೆಲೆಸಬೇಕು ಎಂಬುದು ನನ್ನ ಇಚ್ಛೆ. ಆದರೆ ಶಿವನ ಇಚ್ಛೆ ಬೇರೆಯೇ ಇತ್ತು’ ಎಂದರು.

‘ಬಹುಶಃ ಜೀವನವಿಡೀ ಒಬ್ಬ ಶಿವನ ಸೇವೆ ಮಾಡಿಕೊಂಡು ನಾನು ಇರುವುದು ಶಿವನಿಗೆ ಇಷ್ಟ ಇರಲಿಲ್ಲ ಅನಿಸುತ್ತದೆ. ಜನರ ಸೇವೆಯೇ ದೇವರ ಸೇವೆ. ಹಾಗಾಗಿ ದೇಶದ 125 ಕೋಟಿ ಜನರ ಸೇವೆ ಮಾಡಲು ಕಳುಹಿಸಿದ್ದಾನೆ’ ಎಂದು ಅವರು ಹೇಳಿದರು.
*
ಮೋದಿ ಹೇಳಿಕೆ ಸುಳ್ಳು: ಕಾಂಗ್ರೆಸ್‌ ತಿರುಗೇಟು
ನವದೆಹಲಿ: ಕೇದಾರನಾಥ ಮರು ನಿರ್ಮಾಣಕ್ಕೆ ಯುಪಿಎ ಸರ್ಕಾರ ಅವಕಾಶ ನಿರಾಕರಿಸಿತ್ತು ಎಂಬ ಪ್ರಧಾನಿ ಆರೋಪವನ್ನು ಕಾಂಗ್ರೆಸ್‌ ತಳ್ಳಿ ಹಾಕಿದೆ.

‘ಉತ್ತರಾಖಂಡ ಸರ್ಕಾರಕ್ಕೆ ಆಗಿನ ಗುಜರಾತ್‌ ಮುಖ್ಯಮಂತ್ರಿ ಇಂತಹ ವಿನಂತಿ ಮಾಡಿಕೊಂಡ ಬಗ್ಗೆ ಯಾವುದೇ ದಾಖಲೆ ಇಲ್ಲ. ಮೋದಿ ಅವರು ಲಿಖಿತವಾಗಿ ಅಥವಾ ಮೌಖಿಕವಾಗಿ ಇಂತಹ ಕೋರಿಕೆ ಮಂಡಿಸಿಲ್ಲ’ ಎಂದು ಕಾಂಗ್ರೆಸ್‌ ವಕ್ತಾರ ಆರ್‌.ಪಿ.ಎನ್‌. ಸಿಂಗ್‌ ಹೇಳಿದ್ದಾರೆ.

ಕೇದಾರನಾಥ ದೇವಾಲಯಕ್ಕೆ ಬೆನ್ನು ಹಾಕಿ ಸಭೆಯನ್ನು ಉದ್ದೇಶಿಸಿ ಮಾತನಾಡುವ ಮೂಲಕ ಮೋದಿ ಅವರು ‘ದುರಹಂಕಾರ’ದಿಂದ ವರ್ತಿಸಿದ್ದಾರೆ. ಇದು ಶಿವನಿಗೆ ಮಾಡಿದ ಅವಮಾನ ಎಂದು ಕಾಂಗ್ರೆಸ್‌ ಟೀಕಿಸಿದೆ. 70 ವರ್ಷಗಳಲ್ಲಿ ಯಾವ ಪ್ರಧಾನಿಯೂ ದೇವಾಲಯಕ್ಕೆ ಬೆನ್ನು ಹಾಕಿ ಜನರನ್ನು ಉದ್ದೇಶಿಸಿ ಮಾತನಾಡಿಲ್ಲ ಎಂದು ಕಾಂಗ್ರೆಸ್‌ ಹೇಳಿದೆ.

ಕೇದಾರನಾಥ ಮರು ನಿರ್ಮಾಣಕ್ಕೆ ಯುಪಿಎ ಸರ್ಕಾರ ₹8,000 ಕೋಟಿ ನೀಡುವುದಾಗಿ ಘೋಷಿಸಿತ್ತು. ಆದರೆ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಒಂದು ರೂಪಾಯಿಯನ್ನೂ ಬಿಡುಗಡೆ ಮಾಡಿಲ್ಲ. ಯುಪಿಎ ಸರ್ಕಾರ ಇದ್ದಾಗಲೇ ₹2,200 ಕೋಟಿ ಬಿಡುಗಡೆ ಮಾಡಲಾಗಿತ್ತು. ಮೋದಿ ನೇತೃತ್ವದ ಸರ್ಕಾರ ಆಮೇಲೆ ಹಣ ನೀಡಿಯೇ ಇಲ್ಲ ಎಂದು ಸಿಂಗ್‌ ಆರೋಪಿಸಿದ್ದಾರೆ.

ಪ್ರವಾಹ‍ಪೀಡಿತ ಉತ್ತರಾಖಂಡದಿಂದ ಗುಜರಾತಿನ 5,000 ಯಾತ್ರಿಕರನ್ನು ರಕ್ಷಿಸಿದ್ದಾಗಿ ಮೋದಿ ಅವರು ಹೇಳಿಕೊಂಡಿದ್ದರು. ಆದರೆ ‘ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ಗುಜರಾತ್‌ ಸರ್ಕಾರ ಭಾಗಿಯಾಗಿಲ್ಲ. ಈ ಜವಾಬ್ದಾರಿಯನ್ನು ಉತ್ತರಾಖಂಡ ಸರ್ಕಾರವೇ ವಹಿಸಿಕೊಂಡಿತ್ತು’ ಎಂದು ಉತ್ತರಾಖಂಡದ ಆಗಿನ ಮುಖ್ಯಮಂತ್ರಿ ವಿಜಯ್‌ ಬಹುಗುಣ ಹೇಳಿದ್ದನ್ನು ಸಿಂಗ್‌ ನೆನಪಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT