ಗುಜರಾತ್‌ ಚುನಾವಣೆ ಘೋಷಣೆ ಹೊಣೆ ಪ್ರಧಾನಿಗೆ ಕೊಟ್ಟ ಆಯೋಗ

ಶುಕ್ರವಾರ, ಮೇ 24, 2019
33 °C
ದಿನಾಂಕ ಪ್ರಕಟಿಸದ ಚುನಾವಣಾ ಆಯೋಗದ ವಿರುದ್ಧ ಹರಿಹಾಯ್ದ ಚಿದಂಬರಂ

ಗುಜರಾತ್‌ ಚುನಾವಣೆ ಘೋಷಣೆ ಹೊಣೆ ಪ್ರಧಾನಿಗೆ ಕೊಟ್ಟ ಆಯೋಗ

Published:
Updated:
ಗುಜರಾತ್‌ ಚುನಾವಣೆ ಘೋಷಣೆ ಹೊಣೆ ಪ್ರಧಾನಿಗೆ ಕೊಟ್ಟ ಆಯೋಗ

ನವದೆಹಲಿ: ಗುಜರಾತ್‌ ವಿಧಾನಸಭೆ ಚುನಾವಣೆಯ ದಿನಾಂಕ ನಿಗದಿ ಮಾಡುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಹಿಸಿ ಚುನಾವಣಾ ಆಯೋಗ ‘ದೀರ್ಘ ರಜೆ’ಯಲ್ಲಿ ತೆರಳಿದೆ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಪಿ. ಚಿದಂಬರಂ ಟೀಕಿಸಿದ್ದಾರೆ.

ಆಯೋಗದ ಬಗ್ಗೆ ವ್ಯಂಗ್ಯವಾಗಿ ಮಾತನಾಡಿರುವ ಅವರು ‘ತಮ್ಮ ರ‍್ಯಾಲಿಯಲ್ಲಿ ಗುಜರಾತ್‌ ಚುನಾವಣೆಯ ದಿನಾಂಕ ಘೋಷಿಸಲು ಪ್ರಧಾನಿಗೆ ಅವಕಾಶ ಕೊಡಲಾಗಿದೆ ಮತ್ತು ದಿನಾಂಕವನ್ನು ದಯವಿಟ್ಟು ನಮಗೆ ತಿಳಿಸಿ ಎಂದು ಆಯೋಗ ಹೇಳಿದೆ’ ಎಂದು ಕುಟುಕಿದ್ದಾರೆ.

ಗುಜರಾತ್‌ ಚುನಾವಣೆಯು ಕೇಂದ್ರ ಸರ್ಕಾರ ಮತ್ತು ಕಾಂಗ್ರೆಸ್‌ ನಡುವೆ ಹೊಸ ಸಂಘರ್ಷ ಸೃಷ್ಟಿಸಿದೆ. ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯ ದಿನಾಂಕವನ್ನು ಆಯೋಗವು ಇದೇ 12ರಂದು ಪ್ರಕಟಿಸಿದೆ. ಆದರೆ ಗುಜರಾತ್‌ ಚುನಾವಣೆ ದಿನಾಂಕವನ್ನು ಘೋಷಿಸಿಲ್ಲ. ಈ ಎರಡೂ ರಾಜ್ಯ ವಿಧಾನಸಭೆಗಳ ಅವಧಿ ಜನವರಿಗೆ  ಕೊನೆಗೊಳ್ಳಲಿದೆ.

‘ಗುಜರಾತ್‌ ಸರ್ಕಾರವು ಎಲ್ಲ ರೀತಿಯ ರಿಯಾಯಿತಿಗಳು ಮತ್ತು ಉಚಿತ ಕೊಡುಗೆಗಳನ್ನು ಘೋಷಿಸಿದ ಬಳಿಕ ಆಯೋಗವನ್ನು ರಜೆಯಿಂದ ವಾಪಸ್‌ ಕರೆಸಿಕೊಳ್ಳ

ಲಾಗುವುದು’ ಎಂದು ಚಿದಂಬರಂ ಟ್ವೀಟ್‌ ಮಾಡಿದ್ದಾರೆ.

ಗುಜರಾತ್‌ ವಿಧಾನಸಭೆ ಚುನಾವಣೆ ಘೋಷಣೆಯನ್ನು ವಿಳಂಬ ಮಾಡುವಂತೆ ಆಯೋಗದ ಮೇಲೆ ಬಿಜೆಪಿ ಒತ್ತಡ ಹೇರಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ. ಆದರೆ ಈ ಆರೋಪವನ್ನು ಬಿಜೆಪಿ ತಳ್ಳಿ ಹಾಕಿದೆ. ಮೀಸಲಾತಿಗಾಗಿ ಹೋರಾಟ ನಡೆಸುತ್ತಿರುವ ಜಾಟ್‌ ಸಮುದಾಯಕ್ಕೆ ಹಲವು ವಿನಾಯಿತಿಗಳನ್ನು ಗುಜರಾತ್‌ ಸರ್ಕಾರ ಪ್ರಕಟಿಸಿದೆ. ಹಿಮಾಚಲ ಪ್ರದೇಶ ಚುನಾವಣೆ ದಿನಾಂಕ ಪ್ರಕಟವಾದ ಬೆನ್ನಿಗೇ ಈ ಕ್ರಮ ಕೈಗೊಳ್ಳಲಾಗಿದೆ.

ಇದೇ 16–17ರಂದು ಮೋದಿ ಅವರು ಗುಜರಾತ್‌ಗೆ ಭೇಟಿ ನೀಡಿದ್ದರು. ಒಂದು ತಿಂಗಳಲ್ಲಿ ಮೋದಿ ಅವರು ಗುಜರಾತ್‌ಗೆ ಐದು ಬಾರಿ ಭೇಟಿ ನೀಡಿದ್ದಾರೆ. ‘ಗುಜರಾತ್‌ನಲ್ಲಿ 22 ವರ್ಷಗಳಿಂದ ಬಿಜೆಪಿ ಅಧಿಕಾರದಲ್ಲಿದೆ.

ಆದರೆ, ಮೀಸಲಾತಿ ನೀಡಿಲ್ಲ ಎಂಬ ಕಾರಣಕ್ಕೆ ಜಾಟ್‌ ಸಮುದಾಯ ಈ ಬಾರಿ ಬಿಜೆಪಿಯಿಂದ ದೂರ ಸರಿದಿದೆ. ಹಾಗಾಗಿ ಈ ಬಾರಿಯ ಚುನಾವಣೆ ಬಿಜೆಪಿಗೆ ಹಿಂದಿನಷ್ಟು ಸುಲಭವಲ್ಲ’ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

*

‘ರಾಹುಲ್ ಉಳಿಸಿ ಅಭಿಯಾನದ ಭಾಗ’

ನವದೆಹಲಿ: ಗುಜರಾತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋತರೆ ಆ ಪಕ್ಷದ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರು ಅಧ್ಯಕ್ಷ ಸ್ಥಾನಕ್ಕೆ ಏರುವುದಕ್ಕೆ ಹಿನ್ನಡೆ ಆಗುತ್ತದೆ. ಹಾಗಾಗಿ ‘ರಾಹುಲ್‌ ಉಳಿಸಿ’ ಅಭಿಯಾನದ ಭಾಗವಾಗಿ ಚಿದಂಬರಂ ಅವರು ಚುನಾವಣಾ ಆಯೋಗವನ್ನು ಟೀಕಿಸಿದ್ದಾರೆ ಎಂದು ಬಿಜೆಪಿ ವಕ್ತಾರ ಜಿ.ವಿ.ಎಲ್‌. ನರಸಿಂಹ ರಾವ್‌ ಹೇಳಿದ್ದಾರೆ.

ಹಿಮಾಚಲ ಪ‍್ರದೇಶ ಚುನಾವಣೆ ದಿನಾಂಕ ಘೋಷಣೆ ಜತೆಗೆ ಗುಜರಾತ್‌ ಚುನಾವಣಾ ದಿನಾಂಕ ಘೋಷಿಸದ ಆಯೋಗದ ಕ್ರಮವನ್ನು ರಾವ್‌ ಸಮರ್ಥಿಸಿಕೊಂಡಿದ್ದಾರೆ. ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ಮಾದರಿ ನೀತಿ ಸಂಹಿತೆ ಜಾರಿಗೆ ಬರುತ್ತದೆ. ಆದರೆ 45 ದಿನಗಳಿಗಿಂತ ಹೆಚ್ಚು ದಿನ ನೀತಿ ಸಂಹಿತೆ ಜಾರಿಯಲ್ಲಿ ಇರಬಾರದು ಎಂದು ಅವರು ಹೇಳಿದ್ದಾರೆ.

‘ಚಿದಂಬರಂ ಅವರು ಎಲ್ಲವನ್ನೂ ಕಾಮಾಲೆ ಕಣ್ಣಿನಿಂದ ನೋಡುತ್ತಿದ್ದಾರೆ. ಸಂವಿಧಾನೇತರ ಅಧಿಕಾರ ಪಡೆದುಕೊಂಡಿದ್ದ ಸೋನಿಯಾ ಗಾಂಧಿ ಅವರು ಪ್ರಧಾನಿ ಮನಮೋಹನ್‌ ಸಿಂಗ್‌ ಅವರನ್ನು ನಿಯಂತ್ರಿಸುತ್ತಿದ್ದರು. ಆದರೆ ಮೋದಿ ಅವರು ಯಾವುದೇ ಸಂಸ್ಥೆಗಳ ಕಾರ್ಯನಿರ್ವಹಣೆಯಲ್ಲಿ ಮಧ್ಯಪ‍್ರವೇಶಿಸುವುದಿಲ್ಲ’ ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry