ಗುರುವಾರ , ಸೆಪ್ಟೆಂಬರ್ 19, 2019
29 °C
ಔಷಧ ಪೂರೈಕೆದಾರರಿಗೆ ಅನುಕೂಲ ಮಾಡಿಕೊಟ್ಟ ಆರೋಪ

ಅಂಡಮಾನ್‌ನಲ್ಲಿ ಅಕ್ರಮ, ಬೆಂಗಳೂರಿನಲ್ಲಿ ‘ಲಂಚ’ ಪಾವತಿ

Published:
Updated:

ನವದೆಹಲಿ: ಅಂಡಮಾನ್‌ನ ಆರೋಗ್ಯ ಸೇವೆಗಳ ಮಹಾನಿರ್ದೇಶಕಿ ಡಾ. ಶಿಪ್ರಾ ಪಾಲ್‌ ಮತ್ತು ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ಅನ್ವರ್ ಮೂಸಾ ಅವರು ಔಷಧ ಪೂರೈಕೆದಾರರಿಗೆ ಅಕ್ರಮವಾಗಿ ಅನುಕೂಲ ಮಾಡಿಕೊಟ್ಟಿದ್ದಾರೆ. ಇದಕ್ಕೆ ಪ್ರತಿಯಾಗಿ ಔಷಧ ಪೂರೈಕೆದಾರರು ಶಿಪ್ರಾ ಅವರ ಮಗಳ ಮದುವೆ ಸಮಾರಂಭಕ್ಕಾಗಿ ಬೆಂಗಳೂರಿನ ಎರಡು ಐಷಾರಾಮಿ ಹೋಟೆಲ್‌ಗಳ ಬಿಲ್‌ ಪಾವತಿಸಿದ್ದಾರೆ ಎಂದು ಸಿಬಿಐ ಆರೋಪಿಸಿದೆ.

ಅಗ್ಗದ ಬೆಲೆಯಲ್ಲಿ ಔಷಧಗಳು ಲಭ್ಯವಿದ್ದರೂ ಭಾರಿ ಬೆಲೆಗೆ ಔಷಧಗಳನ್ನು ಪೂರೈಸಲು ಎರಡು ಕಂಪೆನಿಗಳಿಗೆ ಅನುಕೂಲ ಮಾಡಿಕೊಟ್ಟ ಆರೋಪ ಶಿಪ್ರಾ ಮತ್ತು ಮೂಸಾ ಅವರ ಮೇಲಿದೆ. ಈ ಅಕ್ರಮದಿಂದಾಗಿ ಸರ್ಕಾರಕ್ಕೆ ₹ 79 ಲಕ್ಷ ನಷ್ಟವಾಗಿದೆ ಎಂದು ಸಿಬಿಐ ಹೇಳಿದೆ. ಈ ಸಂಬಂಧ ಸಿಬಿಐ ಅಕ್ಟೋಬರ್ 16ರಂದು ಎಫ್‌ಐಆರ್ ದಾಖಲಿಸಿದೆ.

‘ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿನ ಆಸ್ಪತ್ರೆಗಳಿಗೆ ಅಗತ್ಯವಿದ್ದ ವಿಟಮಿನ್, ಕಬ್ಬಿಣಾಂಶ ಮತ್ತು ನೋವು ನಿವಾರಕ ಔಷಧಗಳ ಪೂರೈಕೆಗೆ ಟೆಂಡರ್‌ ಕರೆಯಲಾಗಿತ್ತು. ಟೆಂಡರ್ ಜಾಹೀರಾತಿನಲ್ಲಿ ಈ ಔಷಧಗಳ ರಾಸಾಯನಿಕ ಸಂಯೋಜನೆಯ ಬದಲಿಗೆ ಒಂದು ಬ್ರಾಂಡ್‌ನ ಹೆಸರನ್ನು ನಮೂದಿಸಲಾಗಿತ್ತು. ಇದರಿಂದ ಆ ಬ್ರಾಂಡ್‌ನ ಕಂಪೆನಿಗಳು ಮಾತ್ರ ಟೆಂಡರ್‌ನಲ್ಲಿ ಭಾಗವಹಿಸಿದ್ದವು. ಬ್ರಾಂಡ್ ಹೆಸರು ನಮೂದಿಸಿದ್ದರಿಂದ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಬೇರೆ ಕಂಪೆನಿಗಳಿಗೆ ಅವಕಾಶವೇ ಇರಲಿಲ್ಲ’ ಎಂದು ಸಿಬಿಐ ಎಫ್‌ಐಆರ್‌ನಲ್ಲಿ ವಿವರಿಸಿದೆ.

‘ಈ ಎಲ್ಲಾ ಔಷಧಗಳೂ ಜೆನರಿಕ್ ಆಗಿದ್ದು ತೀರಾ ಅಗ್ಗದ ದರದಲ್ಲಿ ಲಭ್ಯವಿವೆ. ಅಲ್ಲದೆ ಕೇಂದ್ರ ಸರ್ಕಾರದಿಂದಲೂ ಇವು ಪೂರೈಕೆಯಾಗುತ್ತವೆ. ಹೀಗಿದ್ದೂ 2015ರಿಂದ 2016 ಮಧ್ಯೆ ದುಬಾರಿ ಬೆಲೆಗೆ ಇವನ್ನು ಖರೀದಿಸಲಾಗಿದೆ. ಸತೀಶ್ ಎಂಬುವವರ ಜಯಾ ಮೆಡಿಕಲ್ಸ್ ಮತ್ತು ತೌಹೀದ್ ಎಂಬುವವರ ಟಿ.ಟಿ.ಟ್ರೇಡಿಂಗ್ಸ್ ಕಂಪೆನಿಗಳಿಗೆ ಈ ಔಷಧಗಳ ಪೂರೈಕೆಯ ಗುತ್ತಿಗೆ ನೀಡಲಾಗಿತ್ತು. ಈ ಎರಡೂ ಕಂಪೆನಿಗಳು ಬೇಡಿಕೆ ಇಲ್ಲದಿದ್ದರೂ ಅನಗತ್ಯ ಪ್ರಮಾಣದ ಔಷಧಗಳನ್ನು ಪೂರೈಸಿವೆ. ಇಷ್ಟೇ ಅಲ್ಲದೆ 2014–15ನೇ ಸಾಲಿನ ಹೋಲಿಕೆಯಲ್ಲಿ 2015–16ನೇ ಸಾಲಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಔಷಧಗಳ ಪೂರೈಕೆಗೆ ಬೇಡಿಕೆ ಸಲ್ಲಿಸಲಾಗಿದೆ’ ಎಂದು ಎಫ್‌ಐಆರ್‌ನಲ್ಲಿ ವಿವರಿಸಲಾಗಿದೆ.

‘2016ರ ಫೆಬ್ರುವರಿಯಲ್ಲಿ ಶಿಪ್ರಾ ಅವರ ಮಗಳ ಮದುವೆ ಬೆಂಗಳೂರಿನಲ್ಲಿ ನಡೆದಿತ್ತು. ಆಗ ಅಥಿತಿಗಳು ಉಳಿದುಕೊಳ್ಳಲೆಂದು ಶಿಪ್ರಾ ಅವರು ಬೆಂಗಳೂರಿನ ಐಬಿಸ್ ಮತ್ತು ನೊವೊಟೆಲ್ ಹೋಟೆಲ್‌ಗಳಲ್ಲಿ ಕೊಠಡಿಗಳನ್ನು ಕಾಯ್ದಿರಿಸಿದ್ದರು. ಈ ಹೋಟೆಲ್‌ಗಳ ಶುಲ್ಕ ₹ 10 ಲಕ್ಷಕ್ಕಿಂತಲೂ ಹೆಚ್ಚಿತ್ತು.

ಇದನ್ನು ಸತೀಶ್ ಮತ್ತು ತೌಹೀದ್ ಪಾವತಿಸಿದ್ದಾರೆ. ತಮಗೆ ಅನುಕೂಲ ಮಾಡಿಕೊಟ್ಟ ಕಾರಣಕ್ಕೆ ಈ ಇಬ್ಬರು ಶಿಪ್ರಾ ಅವರ ಮಗಳ ಮದುವೆಯ ಬಿಲ್ ಪಾವತಿಸಿದ್ದಾರೆ’ ಎಂದು ಸಿಬಿಐ ಆರೋಪಿಸಿದೆ.

Post Comments (+)