ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೂರ್ನಿ ವೀಕ್ಷಿಸಿದ್ದು ಹತ್ತು ಲಕ್ಷ ಪ್ರೇಕ್ಷಕರು

ದಾಖಲೆ ಬರೆದ ಫಿಫಾ 17 ವರ್ಷದೊಳಗಿನವರ ಫುಟ್‌ಬಾಲ್‌ ವಿಶ್ವಕಪ್‌
Last Updated 20 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದೇಶದ ಕ್ರೀಡಾ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸಿರುವ ಫಿಫಾ 17 ವರ್ಷದೊಳಗಿನವರ ವಿಶ್ವಕಪ್ ಟೂರ್ನಿಯ ಪಂದ್ಯಗಳನ್ನು ಕ್ರೀಡಾಂಗಣಕ್ಕೆ ತೆರಳಿ ವೀಕ್ಷಿಸಿದವರ ಸಂಖ್ಯೆ 10 ಲಕ್ಷ ಮೀರಿದೆ.

ಅಕ್ಟೋಬರ್‌ 18ರಂದು ಟೂರ್ನಿಯ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯಗಳು ಮುಕ್ತಾಯಗೊಂಡಿದ್ದು ಶನಿವಾರದಿಂದ ಎಂಟರ ಘಟ್ಟದ ಹಣಾಹಣಿಗೆ ವೇದಿಕೆ ಸಜ್ಜಾಗಿದೆ. ಈ ನಡುವೆ ಇಲ್ಲಿಯವರೆಗೆ ಪಂದ್ಯಗಳನ್ನು ವೀಕ್ಷಿಸಿದವರ ಸಂಖ್ಯೆ ದಾಖಲೆಯ ಪುಟಗಳನ್ನು ಸೇರುವತ್ತ ಸಾಗಿದೆ.

ಒಟ್ಟು 52 ಪಂದ್ಯಗಳ ಪೈಕಿ 44 ಪಂದ್ಯಗಳು ಮುಗಿದಿವೆ. ಇಷ್ಟರಲ್ಲೇ ವೀಕ್ಷಕರ ಸಂಖ್ಯೆ 10,07,396 ಆಗಿದೆ. ಇದು 17 ವರ್ಷದೊಳಗಿನವರ ವಿಶ್ವಕಪ್ ಇತಿಹಾಸದಲ್ಲೇ ದಾಖಲೆ ಎಂದು ಟೂರ್ನಿ ನಿರ್ದೇಶಕ ಜೇವಿಯರ್‌ ಸೆಪ್ಪಿ ತಿಳಿಸಿದ್ದಾರೆ.

‘ದೇಶದಲ್ಲಿ ಫುಟ್‌ಬಾಲ್‌ಗೆ ಇಷ್ಟೊಂದು ಪ್ರೋತ್ಸಾಹ ಸಿಗುತ್ತಿರುವುದು ಅತ್ಯಂತ ಸಂತಸದ ವಿಷಯ. ಪಂದ್ಯಗಳನ್ನು ವೀಕ್ಷಿಸಲು ಜನರು ಮುಗಿಬೀಳುವುದು ಕಂಡು ರೋಮಾಂಚನವಾಗಿದೆ. ಉಳಿದ ಪಂದ್ಯಗಳಿಗೂ ಇದೇ ರೀತಿಯಲ್ಲಿ ಪ್ರೇಕ್ಷಕರು ಬರುವ ಸಾಧ್ಯತೆ ಇದೆ. ಆದ್ದರಿಂದ ಸಾರ್ವಕಾಲಿಕ ದಾಖಲೆ ಮುರಿಯಲು ಭಾರತ ಸಜ್ಜಾಗಿದೆ’ ಎಂದು ಅವರು ವಿವರಿಸಿದರು.

‘ಫೈನಲ್‌ ಪಂದ್ಯ ಅಕ್ಟೋಬರ್‌ 28ರಂದು ನಡೆಯಲಿದೆ. ಉಳಿದ ಒಂಬತ್ತು ದಿನಗಳಲ್ಲಿ ಸಾಕಷ್ಟು ಪ್ರೇಕ್ಷಕರು ಅಂಗಣಕ್ಕೆ ಬರುವಂತೆ ಮಾಡಲಾಗುವುದು. ಇದರಲ್ಲಿ ಯಶಸ್ವಿಯಾದರೆ ದಾಖಲೆ ನಿರ್ಮಾಣವಾಗಲಿದೆ. ಅತಿ ಹೆಚ್ಚು ಪ್ರೇಕ್ಷಕರು ಪಂದ್ಯಗಳನ್ನು ವೀಕ್ಷಿಸಿದ ದಾಖಲೆ 1985ರಲ್ಲಿ ನಡೆದ ಮೊದಲ ಟೂರ್ನಿಯಲ್ಲಿ ನಿರ್ಮಾಣವಾಗಿತ್ತು. ಚೀನಾದಲ್ಲಿ ನಡೆದ ಆ ಟೂರ್ನಿಯಲ್ಲಿ 12,30,976 ಮಂದಿ ಪಂದ್ಯಗಳನ್ನು ವೀಕ್ಷಿಸಿದ್ದರು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT