ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸೌಧ ವಜ್ರ ಮಹೋತ್ಸವ ಖರ್ಚಿಗೆ ಕತ್ತರಿ

Last Updated 20 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸೌಧ ವಜ್ರ ಮಹೋತ್ಸವ ಸಮಾರಂಭವನ್ನು ಒಂದು ದಿನಕ್ಕೆ ಸೀಮಿತಗೊಳಿಸಿ ₹10 ಕೋಟಿ ಖರ್ಚು ಮಾಡಲು ವಿಧಾನಮಂಡಲ ಸಚಿವಾಲಯ ಪ್ರಸ್ತಾವನೆ ಸಿದ್ಧಪಡಿಸಿದೆ.

ಕಾರ್ಯಕ್ರಮಕ್ಕೆ ಸುಮಾರು ₹26.87 ಕೋಟಿ ಖರ್ಚು ಮಾಡುವ ನಿರ್ಧಾರಿಸಲಾಗಿತ್ತು. ಈ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾದ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆ ಸಭಾಧ್ಯಕ್ಷ ಮತ್ತು ಪರಿಷತ್‌ ಸಭಾಪತಿಯವರ ಜತೆ ಮಾತುಕತೆ ನಡೆಸಿದ್ದರು. ವೆಚ್ಚವನ್ನು ₹10 ಕೋಟಿಗೆ ಸೀಮಿತಗೊಳಿಸಿದ್ದರು.

ವಿಧಾನಮಂಡಲದ ಸಚಿವಾಲಯ ಖರ್ಚು ಮಾಡುತ್ತಿರುವ ₹10 ಕೋಟಿಯಲ್ಲಿ ₹2.5ಕೋಟಿ ತೆರಿಗೆಗೆ ಹೋಗಲಿದೆ. ವಜ್ರ ಮಹೋತ್ಸವಕ್ಕೆ ಖರ್ಚು ಮಾಡುವ ಪ್ರತಿ ಪೈಸೆಗೂ ಲೆಕ್ಕ ಕೊಡಬೇಕು. ಜನಸಾಮಾನ್ಯರ ತೆರಿಗೆ ಹಣ ಬೇಕಾಬಿಟ್ಟಿ ಖರ್ಚು ಮಾಡಿದರೆ ಒಳ್ಳೆಯ ಸಂದೇಶ ಹೋಗುವುದಿಲ್ಲ ಎಂದು ಮುಖ್ಯಮಂತ್ರಿ ತಾಕೀತು ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಾಕ್ಷ್ಯ ಚಿತ್ರಗಳನ್ನು ನಿರ್ಮಿಸುತ್ತಿರುವ ಟಿ.ಎನ್‌.ಸೀತಾರಾಮ್‌ ಅವರಿಗೆ ₹1.58 ಕೋಟಿ ಬದಲಿಗೆ ₹50 ಲಕ್ಷ, ಗಿರೀಶ್‌ ಕಾಸರವಳ್ಳಿಗೆ ₹1 ಕೋಟಿ ಬದಲಿಗೆ ₹30 ಲಕ್ಷ, ಮಾಸ್ಟರ್‌ ಕಿಶನ್ ಅವರಿಗೆ ₹1.02 ಕೋಟಿ ಬದಲಿಗೆ ₹40 ಲಕ್ಷ ನಿಗದಿ ಮಾಡಲಾಗಿದೆ.

ಭೋಜನ ವೆಚ್ಚವನ್ನು ಪರಿಷ್ಕರಿಸಿದ್ದು, ಒಂದು ಊಟಕ್ಕೆ ₹2000 ಕ್ಕೆ ಬದಲು ₹380 ಕ್ಕೆ ನಿಗದಿ‍ಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಹೂವಿನ ಅಲಂಕಾರ (₹75 ಲಕ್ಷ), ನಾಲ್ಕು ಸಾವಿರ ಜನಕ್ಕೆ ಕಾಫಿ–ಟೀ(₹35 ಲಕ್ಷ), ಹತ್ತು ಸಾವಿರ ಜನರಿಗೆ ಭೋಜನ ವ್ಯವಸ್ಥೆ (₹3.75 ಕೋಟಿ), ರಿಕಿ ಕೇಜ್‌ ಸಂಗೀತ ಕಾರ್ಯಕ್ರಮ, 2400 ಜನರಿಗೆ ನೆನಪಿನ ಕಾಣಿಕೆ(₹3 ಕೋಟಿ), ಸ್ವಚ್ಛತೆ, ಸಾರಿಗೆ ಮತ್ತು ವಸತಿ ವ್ಯವಸ್ಥೆಗೆ (₹50 ಲಕ್ಷ ) ನಿಗದಿ ಮಾಡಿದ್ದನ್ನು ರದ್ದು ಮಾಡಲಾಗಿದೆ.

ಸಾಂಸ್ಕೃತಿಕ ಕಾರ್ಯಕ್ರಮ ಕಲಾವಿದರ ಸಂಭಾವನೆ, ಭತ್ಯೆಯನ್ನು ₹50 ಲಕ್ಷದಿಂದ ₹ 30 ಲಕ್ಷಕ್ಕೆ, ವೇದಿಕೆ ನಿರ್ಮಾಣ, ಸೌಂಡ್‌ ಲೈಟಿಂಗ್‌, ಜನರೇಟರ್‌ ₹3.50 ಕೋಟಿಯಿಂದ ₹1.20 ಕೋಟಿ, ಜೀವನ ಶ್ರೇಷ್ಠ ಸಾಧನೆ ಪ್ರಶಸ್ತಿ ಪ್ರದಾನ ₹10 ಲಕ್ಷದಿಂದ ₹ 3 ಲಕ್ಷ, ಸರ್ಕಾರದ ಸಾಧನೆಗಳ ತ್ರಿಡಿ ಮ್ಯಾಪಿಂಗ್‌ ಪ್ರದರ್ಶನ ₹3.04 ಕೋಟಿಯಿಂದ ₹1 ಕೋಟಿ, ಜಾಹಿರಾತು, ಆಹ್ವಾನ ಪತ್ರಿಕೆ, ಹೋರ್ಡಿಂಗ್‌, ಇತರೆ ವೆಚ್ಚ ₹2 ಕೋಟಿಯಿಂದ 80 ಲಕ್ಷ, ಶಾಸಕರಿಗೆ ಫೋಟೊ ಹಂಚಿಕೆ ₹75 ಲಕ್ಷದಿಂದ ₹25 ಲಕ್ಷಕ್ಕೆ ಮತ್ತು ಇತರೆ ವೆಚ್ಚ ₹5 ಕೋಟಿಯಿಂದ ₹ 2 ಕೋಟಿಗೆ ಪರಿಷ್ಕರಿಸಲಾಗಿದೆ ಎಂದೂ ಮೂಲಗಳು ಸ್ಪಷ್ಟಪಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT