ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಣಯ್‌ಗೆ ಶರಣಾದ ಲೀ ಚಾಂಗ್

ಡೆನ್ಮಾರ್ಕ್‌ ಓಪನ್ ಬ್ಯಾಡ್ಮಿಂಟನ್ ಟೂರ್ನಿ;
Last Updated 20 ಅಕ್ಟೋಬರ್ 2017, 19:03 IST
ಅಕ್ಷರ ಗಾತ್ರ

ಒಡೆನ್ಸ್‌ (ಪಿಟಿಐ): ಮೂರು ಬಾರಿ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿರುವ ಲೀ ಚಾಂಗ್ ವೀ ಅವರಿಗೆ ಆಘಾತ ನೀಡಿದ ಭಾರತದ ಎಚ್‌.ಎಸ್‌ ಪ್ರಣಯ್ ಡೆನ್ಮಾರ್ಕ್ ಓಪನ್ ಸೂಪರ್‌ ಸರಣಿ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಶುಕ್ರವಾರ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದ್ದಾರೆ.

ಭಾರತದ ಭರವಸೆಯ ಆಟಗಾರ್ತಿ ಸೈನಾ ನೆಹ್ವಾಲ್ ಹಾಗೂ ಕಿದಂಬಿ ಶ್ರೀಕಾಂತ್ ಕೂಡ ಗೆದ್ದಿದ್ದಾರೆ.

ನಾಲ್ಕು ತಿಂಗಳ ಹಿಂದೆ ಇಂಡೊನೇಷ್ಯಾ ಸೂಪರ್ ಸರಣಿ ಟೂರ್ನಿಯಲ್ಲಿ ಮಲೇಷ್ಯಾದ ಆಟಗಾರನನ್ನು ಮೊದಲ ಬಾರಿಗೆ ಪ್ರಣಯ್‌ ಮಣಿಸಿದ್ದರು. ಸತತ ಎರಡನೇ ಟೂರ್ನಿಯಲ್ಲಿ ಮತ್ತೊಮ್ಮೆ ಲೀ ಚಾಂಗ್‌ ಎದುರು ಗೆದ್ದರು.

ಪುರುಷರ ಸಿಂಗಲ್ಸ್ ವಿಭಾಗದ ಪ್ರೀ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಶ್ರೇಯಾಂಕ ರಹಿತ ಭಾರತದ ಆಟಗಾರ 21–17, 11–21, 21–19ರಲ್ಲಿ ಗೆದ್ದರು. ಒಂದು ಗಂಟೆ ಮೂರು ನಿಮಿಷದ ಹಣಾಹಣಿಯಲ್ಲಿ ಪ್ರಣಯ್‌ ತಮ್ಮ ನೈಜ ಆಟದಿಂದ ಗಮನ ಸೆಳೆದರು.

‘ಮತ್ತೊಮ್ಮೆ ಲೀ ಅವರನ್ನು ಮಣಿಸಿದ್ದು ಖುಷಿ ನೀಡಿದೆ. ವಿಶ್ವದ ಉತ್ತಮ ಆಟಗಾರನ ಎದುರು ಆಡುವುದು ಸುಲಭವಲ್ಲ. ಈ ಸವಾಲನ್ನು ಮೀರಿ ನಿಲ್ಲುವುದು ನನಗೆ ಸಾಧ್ಯವಾಗಿದೆ. ದೊಡ್ಡ ಗೆಲುವು ಸಿಕ್ಕಿದೆ. ಆದರೆ ಹಿಂದೆಯೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಮುಂದಿನ ಪಂದ್ಯದ ಕಡೆ ಹೆಚ್ಚು ಗಮನಹರಿಸಲಿದ್ದೇನೆ’ ಎಂದು ಪ್ರಣಯ್ ಹೇಳಿದ್ದಾರೆ.

ಮುಂದಿನ ಪಂದ್ಯದಲ್ಲಿ ಪ್ರಣಯ್‌ ಕೊರಿಯಾದ ಅಗ್ರಗಣ್ಯ ಆಟಗಾರ ಸನ್‌ ವಾನ್ ಹೊ ವಿರುದ್ಧ ಆಡಲಿದ್ದಾರೆ.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಎಂಟನೇ ಸ್ಥಾನದಲ್ಲಿರುವ ಶ್ರೀಕಾಂತ್‌ 21–13, 8–21, 21–18ರಲ್ಲಿ ಕೊರಿಯಾದ ಜೆಯೊನ್ ಹ್ಯೂಕ್‌ ಜಿನ್ ಅವರನ್ನು ಮಣಿಸಿದರು. ಇಂಡೊನೇಷ್ಯಾ ಹಾಗೂ ಆಸ್ಟ್ರೇಲಿಯಾ ಓಪನ್‌ಗಳಲ್ಲಿ ಪ್ರಶಸ್ತಿ ಗೆದ್ದುಕೊಂಡಿರುವ ಶ್ರೀಕಾಂತ್ ಈ ಟೂರ್ನಿಯಲ್ಲಿ ಭಾರತದ ಪ್ರಮುಖ ಭರವಸೆ ಎನಿಸಿದ್ದಾರೆ.

ಕ್ವಾರ್ಟರ್‌ನಲ್ಲಿ ಶ್ರೀಕಾಂತ್‌ ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ವಿಕ್ಟರ್‌ ಅಕ್ಸೆಲ್‌ಸನ್ ಎದುರು ಆಡಲಿದ್ದಾರೆ.

ಸೈನಾ ನೆಹ್ವಾಲ್ ಮಹಿಳೆಯರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ 22–20, 21–13ರಲ್ಲಿ ನೇರ ಗೇಮ್‌ಗಳಿಂದ ಥಾಯ್ಲೆಂಡ್‌ನ ನಿಚನ್‌ ಜಿಂದಪಾಲ್ ಎದುರು ಗೆದ್ದರು. ಸೈನಾ ಮುಂದಿನ ಸುತ್ತಿನಲ್ಲಿ ಜಪಾನ್‌ನ ಅಕಾನೆ ಯಾಮಾಗುಚಿ ಅವರ ಸವಾಲು ಎದುರಿಸಲಿದ್ದಾರೆ. ಇಂಗ್ಲೆಂಡ್‌ನ ರಾಜೀವ್ ಓಸೆಫ್‌, ಹಾಂಕಾಂಗ್‌ನ ವಾಂಗ್ ವಿಂಗ್‌ ಕಿ ವಿನ್ಸೆಂಟ್, ಕೊರಿಯಾದ ಲೀ ಹ್ಯುಯಾನ್, ಚೀನಾ ತೈಪೆಯ ತಿಯೆನ್‌ ಚೆನ್ ಕೂಡ ಕ್ವಾರ್ಟರ್‌ ತಲುಪಿದ್ದಾರೆ.

ಮಹಿಳೆಯರ ಸಿಂಗಲ್ಸ್‌ನಲ್ಲಿ ತೈ ಜು ಯಿಂಗ್‌ ಸೇರಿದಂತೆ ಸಂಗ್‌ ಜಿ ಹುಯಾನ್, ಕಿಮ್ ಹ್ಯೊ ಮಿನ್, ಸಯಾಕಾ ಸಾಟೊ, ಚೆನ್ ಯೂಫಿ ಕೂಡ ಮುಂದಿನ ಸುತ್ತು ಪ್ರವೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT