₹150 ಕೋಟಿ ಆಸ್ತಿ ಒಡೆಯನಿಗೂ ಬಗರ್‌ಹುಕುಂ ಜಾಗ!

ಬುಧವಾರ, ಜೂನ್ 19, 2019
22 °C
ಶಾಸಕರಾಗಿದ್ದ ಎಂ.ಶ್ರೀನಿವಾಸ್‌, ಆರ್‌. ಅಶೋಕ ಅವಧಿಯಲ್ಲಿ ಮಂಜೂರು

₹150 ಕೋಟಿ ಆಸ್ತಿ ಒಡೆಯನಿಗೂ ಬಗರ್‌ಹುಕುಂ ಜಾಗ!

Published:
Updated:
₹150 ಕೋಟಿ ಆಸ್ತಿ ಒಡೆಯನಿಗೂ ಬಗರ್‌ಹುಕುಂ ಜಾಗ!

ಬೆಂಗಳೂರು: ‘ಬೆಂಗಳೂರು ದಕ್ಷಿಣ ಭೂ ನ್ಯಾಯಮಂಡಳಿಯು ಬಗರ್‌ಹುಕುಂ ಯೋಜನೆಯಡಿ 2005–06ನೇ ಸಾಲಿನಲ್ಲಿ ₹150 ಕೋಟಿ ಆಸ್ತಿ ಒಡೆಯನಿಗೂ 4 ಎಕರೆ 36 ಗುಂಟೆ ಜಾಗ ಮಂಜೂರು ಮಾಡಿತ್ತು’ ಎಂಬ ಅಂಶ ‘ವಿಧಾನಮಂಡಲದ ಭರವಸೆಗಳ ಸಮಿತಿ’ಗೆ ಕಂದಾಯ ಇಲಾಖೆ ಸಲ್ಲಿಸಿದ ವರದಿಯಲ್ಲಿದೆ.

‘ಈ ಯೋಜನೆಯ ಷರತ್ತಿನ ಪ್ರಕಾರ, ಜಾಗ ಸಕ್ರಮಕ್ಕಾಗಿ ಅರ್ಜಿ ಸಲ್ಲಿಸುವವರ ವಾರ್ಷಿಕ ಆದಾಯ ₹8,000ಕ್ಕಿಂತ ಕಡಿಮೆ ಇರಬೇಕು. ಆದರೆ, ಸಮಿತಿಯು ಈ ಅಂಶವನ್ನು ಗಣನೆಗೆ ತೆಗೆದುಕೊಂಡಿಲ್ಲ. ಸಿರಿವಂತರಿಗೆ ನೂರಕ್ಕೂ ಅಧಿಕ ಎಕರೆ ಮಂಜೂರು ಮಾಡಿತ್ತು. ಈ ಪೈಕಿ, ತಗಚಗುಪ್ಪೆ ಗ್ರಾಮದ ಸಂದೀಪ್‌ ಬಾಬು ಎಂಬುವರು ಜಾಗ ಸಕ್ರಮಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಶಾಸಕ ಆರ್‌. ಅಶೋಕ ನೇತೃತ್ವದ ಸಮಿತಿಯು ಅವರ ಅರ್ಜಿಯನ್ನು ಮಾನ್ಯ (ಎಲ್‌.ಎನ್‌.ಡಿ/ಆರ್‌.ಎ (ಎಸ್‌)16/15–16–16) ಮಾಡಿತ್ತು. ಅವರಿಗೆ ತಗಚಗುಪ್ಪೆಯಲ್ಲಿ ₹150 ಕೋಟಿಯ ಜಾಗ ಇದೆ. ಅಲ್ಲದೆ ಅವರು ಆರ್ಥಿಕವಾಗಿ ಶ್ರೀಮಂತರು. ಉಪವಿಭಾಗಾಧಿಕಾರಿ ನ್ಯಾಯಾಲಯ ತನಿಖೆ ನಡೆಸಿ ಮಂಜೂರಾತಿ ರದ್ದುಪಡಿಸಿ ಜಾಗವನ್ನು ಸರ್ಕಾರದ ವಶಕ್ಕೆ ಪಡೆದಿದೆ’ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಯಾರಿಗೆ ಎಷ್ಟು ಜಾಗ: ‘2002–03ರಲ್ಲಿ ಗುತ್ತಿಗೆದಾರ ಬಸವರಾಜು ಅವರಿಗೆ 2 ಎಕರೆ 15 ಗುಂಟೆ, 2005–06ರಲ್ಲಿ ಸೌಧಾಮಿನಿ ಕಲ್ಯಾಣ ಮಂಟಪದ ಮಾಲೀಕರಾಗಿರುವ ಶಾರದಮ್ಮ ಅವರಿಗೆ 3 ಎಕರೆ, ಯಲಚೇನಹಳ್ಳಿಯ ಕಾರ್ತಿಕ್‌ (ಬಿಬಿಎಂಪಿ ಪಾಲಿಕೆಯ ಸದಸ್ಯರ ಹತ್ತಿರದ ಸಂಬಂಧಿ) ಅವರಿಗೆ 4 ಎಕರೆ ಮಂಜೂರು ಮಾಡಿತ್ತು’ ಎಂದು ವರದಿಯಲ್ಲಿ ತಿಳಿಸಲಾಗಿದೆ.‘ಶ್ರೀಮಂತರಾಗಿರುವ ಚನ್ನವೆಂಕಟಪ್ಪ ಅವರಿಗೆ ಹಂಪಾಪುರದಲ್ಲಿ 1 ಎಕರೆ, ಜಮೀನುದಾರ ಹಾಗೂ ಬಾರ್‌ ಮಾಲೀಕರಾಗಿರುವ ರಾಜಣ್ಣ ಅವರಿಗೆ ಹೆಮ್ಮಿಗೇಪುರದಲ್ಲಿ 1 ಎಕರೆ 30 ಗುಂಟೆ, ಬಿಬಿಎಂಪಿಯ ಮಾಜಿ ಸದಸ್ಯೆ ಮಂಜುಳಾ ಅವರಿಗೆ ಅಗರದಲ್ಲಿ 3 ಎಕರೆ, ಪಾಲಿಕೆಯ ಮಾಜಿ ಸದಸ್ಯರ ತಾಯಿ ಲಕ್ಷ್ಮಮ್ಮ ಅವರಿಗೆ ಅಗರದಲ್ಲಿ 3 ಎಕರೆ, ಭೂಮಂಜೂರಾತಿ ಸಮಿತಿಯ ಸದಸ್ಯರಾಗಿದ್ದ ಎಸ್‌.ಆರ್‌.ರತ್ನಮ್ಮ ಅವರಿಗೆ ಚಿನ್ನಕುರ್ಚಿಯಲ್ಲಿ 3 ಎಕರೆ 38 ಗುಂಟೆ, ಬಿಬಿಎಂಪಿಯ ಮಾಜಿ ಸದಸ್ಯರಾದ ಗೋವಿಂದರಾಜು ಅವರಿಗೆ ಚಿನ್ನಕುರ್ಚಿಯಲ್ಲಿ 2 ಎಕರೆ 6 ಗುಂಟೆ, ಎಂ. ಜಯರಾಮ್‌ ಅವರಿಗೆ ಅದೇ ಗ್ರಾಮದಲ್ಲಿ 3 ಎಕರೆ, ಗ್ರಾಮಲೆಕ್ಕಿಗ ಕೃಷ್ಣೇಗೌಡ ಪತ್ನಿ ಉಷಾ ಅವರಿಗೆ 3 ಎಕರೆ 15 ಗುಂಟೆ ಹಾಗೂ ನಾದಿನಿ ತೇಜಸ್ವಿನಿ ಅವರಿಗೆ 2 ಎಕರೆ 10 ಗುಂಟೆ, ಬಿಬಿಎಂಪಿ ಮಾಜಿ ಸದಸ್ಯ ಬೈರಪ್ಪ ಸಾರಕ್ಕಿ ಅವರ ಪತ್ನಿ ಪಾಪಚ್ಚಮ್ಮ ಅವರಿಗೆ 2 ಎಕರೆ, ಬಿಬಿಎಂಪಿಯ ಮಾಜಿ ಸದಸ್ಯ ವಿ.ರಾಜಣ್ಣ ಅವರಿಗೆ ಚಿನ್ನಕುರ್ಚಿಯಲ್ಲಿ 2 ಎಕರೆ, ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಶಿವಕುಮಾರ್‌ ಅವರ ತಾಯಿ ನಂಜಮ್ಮ ಅವರಿಗೆ ಕಗ್ಗಲೀಪುರದಲ್ಲಿ 2 ಎಕರೆ ಹಾಗೂ ಪತ್ನಿ ವಿ.ಶಶಿಕಲಾ ಅವರಿಗೆ 3 ಎಕರೆ ಮಂಜೂರು ಮಾಡಲಾಗಿತ್ತು. ಸ್ಥಳೀಯ ಮುಖಂಡ ಕಬ್ಬಡಿ ಬಾಬು ಕುಟುಂಬಕ್ಕೆ 3 ಎಕರೆ ನೀಡಲಾಗಿದೆ’ ಎಂದು ವರದಿಯಲ್ಲಿ  ಉಲ್ಲೇಖಿಸಲಾಗಿದೆ.

ಮಂಜೂರಾತಿ ರದ್ದುಪಡಿಸಲು ಸೂಚನೆ: ‘ನಗರ ಜಿಲ್ಲೆಯಲ್ಲಿ ಅನರ್ಹರಿಗೆ ಕಾನೂನುಬಾಹಿರವಾಗಿ ಜಾಗ ಮಂಜೂರು ಮಾಡಲಾಗಿದೆ. ಈ ಎಲ್ಲ ಮಂಜೂರಾತಿಯನ್ನು ರದ್ದುಪಡಿಸಬೇಕು. ಜತೆಗೆ ತಪ್ಪಿತಸ್ಥ ಅಧಿಕಾರಿಗಳ ಶಿಸ್ತುಕ್ರಮ ಕೈಗೊಳ್ಳಬೇಕು’ ಎಂದು ಸದನ ಸಮಿತಿಯು ನಗರ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದೆ. ಈ ಸಂಬಂಧ ತಹಶೀಲ್ದಾರ್‌ಗಳಿಗೆ ಜಿಲ್ಲಾಡಳಿತ ನೋಟಿಸ್‌ ನೀಡಿದೆ.ಸಕ್ರಮಕ್ಕೆ ಅವಕಾಶ ಇಲ್ಲ: ‘ಜಿಲ್ಲೆಯ ಮೂರು ಗ್ರಾಮಗಳಲ್ಲಿ ಮಾತ್ರ ಬಗರ್‌ಹುಕುಂ ಅರ್ಜಿಗಳನ್ನು ಸಕ್ರಮ ಮಾಡಬಹುದು’ ಎಂದು ಜಿಲ್ಲಾಧಿಕಾರಿ ವಿ.ಶಂಕರ್‌ ಸ್ಪಷ್ಟಪಡಿಸಿದರು.

‘ಜಿಲ್ಲೆಯಲ್ಲಿ 34,111 ಎಕರೆ ಸರ್ಕಾರಿ ಜಾಗ ಒತ್ತುವರಿಯಾಗಿತ್ತು ಎಂದು ಎ.ಟಿ. ರಾಮಸ್ವಾಮಿ ವರದಿ ತಿಳಿಸಿತ್ತು. ನಮೂನೆ 50 ಹಾಗೂ ನಮೂನೆ 53ರಡಿ (ಬಗರ್‌ಹುಕುಂ) 5 ಸಾವಿರ ಎಕರೆ ಸಕ್ರಮಗೊಳಿಸಬೇಕಿದೆ ಎಂದು ತಿಳಿಸಿತ್ತು. 1899ರ ಮೈಸೂರು ಸಾಮಾನ್ಯ ನಿಯಮಾವಳಿ ಕಾಯ್ದೆ ಪ್ರಕಾರ ಈ ಜಾಗಗಳನ್ನು ಸಕ್ರಮಗೊಳಿಸಲು ಸಾಧ್ಯವಿಲ್ಲ’ ಎಂದು ಅವರು ತಿಳಿಸಿದರು.

ಸಮಿತಿಯಲ್ಲಿ ಯಾರಿದ್ದರು?

‘1992ರಿಂದ 1999ರ ವರೆಗೆ ಸಮಿತಿಗೆ ಎಂ. ಶ್ರೀನಿವಾಸ್‌ (ಆಗಿನ ಶಾಸಕರು) ಅಧ್ಯಕ್ಷರಾಗಿದ್ದರು. ಬಿ.ಆರ್‌.ಕೃಷ್ಣನ್‌, ಎಸ್.ಎನ್‌. ರಾಮೇಗೌಡ, ದಾದಾರಾವ್‌ (ಆಗಿನ ತಹಶೀಲ್ದಾರರು) ಸದಸ್ಯ ಕಾರ್ಯದರ್ಶಿಗಳಾಗಿದ್ದರು. 2000ರಿಂದ 2006ರ ವರೆಗೆ ಶಾಸಕ ಆರ್‌. ಅಶೋಕ ಅಧ್ಯಕ್ಷರಾಗಿದ್ದರು. ಕೆ.ವಿ. ವೆಂಕಟೇಶಯ್ಯ, ರಾಮಚಂದ್ರಯ್ಯ, ನಾರಾಯಣಸ್ವಾಮಿ, ಸದಾನಂದಪ್ಪ ಸದಸ್ಯ ಕಾರ್ಯದರ್ಶಿಗಳಾಗಿದ್ದರು. 2011ರ ವರೆಗೆ ಎ.ಶಿವಕುಮಾರ್ ಸಮಿತಿಗೆ ಅಧ್ಯಕ್ಷರಾಗಿದ್ದರು. ಚಿಕ್ಕಬೆಟ್ಟಯ್ಯ, ಎಚ್‌.ಎಸ್‌. ಸತೀಶ್‌ಬಾಬು, ಮಂಜುನಾಥ್‌ ಕಾರ್ಯದರ್ಶಿಗಳಾಗಿದ್ದರು’ ಎಂದು ವರದಿ ತಿಳಿಸಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry