ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಪರ ಕಾರ್ಯಗಳ ಮೂಲಕ ಸಂಭ್ರಮಿಸಿ

ವಿಧಾನಸೌಧ ವಜ್ರಮಹೋತ್ಸವಕ್ಕೆ ₹10 ಕೋಟಿ ವ್ಯಯ: ದುಂದುವೆಚ್ಚ ಸಲ್ಲ; ಚಿಂತಕಿಯರ ಅಭಿಮತ
Last Updated 20 ಅಕ್ಟೋಬರ್ 2017, 19:24 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಸಾಕಷ್ಟು ಸಾಮಾಜಿಕ ಕೆಲಸಗಳನ್ನು ಕೈಗೊಳ್ಳಬೇಕಿದೆ. ಅವುಗಳಿಗೆ ಹಣ ಖರ್ಚು ಮಾಡಿ. ಅದನ್ನು ಬಿಟ್ಟು ಒಂದು ಕಾರ್ಯಕ್ರಮಕ್ಕೇ ₹10 ಕೋಟಿ ಖರ್ಚು ಮಾಡುವುದು ಯಾವ ರೀತಿಯಿಂದಲೂ ಸರಿಯಲ್ಲ. ಜನಪರ ಕೆಲಸಗಳನ್ನು ಕೈಗೊಂಡು ವಜ್ರಮಹೋತ್ಸವದ ಸಂಭ್ರಮ ಅನುಭವಿಸಿ ಎಂದು ಜನ ಹೇಳಿದ್ದಾರೆ.

ವಜ್ರಮಹೋತ್ಸವವನ್ನು ಅದ್ದೂರಿಯಾಗಿ ಮಾಡುವ ಬದಲು ಅರ್ಥಪೂರ್ಣವಾಗಿ ಹೇಗೆ ಮಾಡಬಹುದು, ಜನರಲ್ಲಿ ಅದರ ನೆನಪುಳಿಯುವಂತೆ ಯಾವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದು ಎಂಬ ಬಗ್ಗೆ ಕೆಲವು ಚಿಂತಕಿಯರು
‘ಪ್ರಜಾವಾಣಿ’ಯೊಂದಿಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

‘ಬೆಂಗಳೂರಿನ ಸಮಸ್ಯೆ ನೀಗಿಸಿ’
ರಾಜಕಾಲುವೆಗಳ ನಿರ್ವಹಣೆ, ಕಸದ ಸಮಸ್ಯೆ, ಇನ್ನಷ್ಟು ಇಂದಿರಾ ಕ್ಯಾಂಟೀನ್‌ಗಳ ನಿರ್ಮಾಣ... ಹೀಗೆ ಬೆಂಗಳೂರಿನ ಸಮಸ್ಯೆಗಳನ್ನು ಪರಿಹರಿಸುವ ಬಗ್ಗೆ ಯೋಚಿಸಿದರೆ, ಹೀಗೆ ಕಾರ್ಯಕ್ರಮವೊಂದಕ್ಕೆ ₹10 ಕೋಟಿ ಖರ್ಚು ಮಾಡುವ ಆಲೋಚನೆ ಬರುತ್ತಿರಲಿಲ್ಲ. ಜನರಿಗೆ ಉಪಯೋಗವಾಗುವ ಕೆಲಸ ಮಾಡಿ
–ಹರಿಣಿ ನಾಗೇಂದ್ರ, ಬರಹಗಾರ್ತಿ

‘ರಚನಾತ್ಮಕ ಕೆಲಸವಂತೂ ಅಲ್ಲವೇ ಅಲ್ಲ’
ಈ ಕಾರ್ಯಕ್ರಮ ರಚನಾತ್ಮಕ ಕೆಲಸವಂತೂ ಅಲ್ಲವೇ ಅಲ್ಲ. ಇಂತಹ ಅದ್ಧೂರಿ ಕಾರ್ಯಕ್ರಮಗಳಿಗೆ ರಾಜರ ಕಾಲದಲ್ಲಿ ಅವಕಾಶ ಇತ್ತು. ಏಕೆಂದರೆ ಆಗ ಪ್ರಜೆಗಳು ಪ್ರಶ್ನಿಸುವಂತಿರಲಿಲ್ಲ. ಆದರೆ, ಈಗ ಅದೆಲ್ಲ ನಡೆಯುವುದಿಲ್ಲ. ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅವುಗಳಿಗೆ ಸ್ಪಂದಿಸುವ ಕೆಲಸ ಆಗಬೇಕಿದೆ. ಆ್ಯಸಿಡ್‌ ದಾಳಿಗೆ ಒಳಗಾದ ಮಹಿಳೆಯರಿಗೆ ಚಿಕಿತ್ಸಾ ವೆಚ್ಚ ನೀಡಲು ಎಷ್ಟೆಲ್ಲ ಅಲೆದಾಡಿಸುತ್ತಾರೆ. ರಾಜ್ಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನಿರುದ್ಯೋಗಿಗಳಿದ್ದಾರೆ, ಅವರಿಗೆ ಅನುಕೂಲವಾಗುವ ಕೆಲಸಕ್ಕೆ ಹಣ ತೊಡಗಿಸಬಹುದು. ಅಲ್ಲದೆ, ರೈತರ ಸಾಲ ಮನ್ನಾ ಮಾಡಬಹುದು. ಅದನ್ನು ಬಿಟ್ಟು ಒಂದು ಕಾರ್ಯಕ್ರಮಕ್ಕೆ ಕೋಟಿ ಹಣ ವಿನಿಯೋಗಿಸುವುದರಲ್ಲಿ ಯಾವುದೇ ಅರ್ಥವಿಲ್ಲ.
–ಮಲ್ಲಿಗೆ ಸಿರಿಮನೆ, ಕರ್ನಾಟಕ ಜನಶಕ್ತಿ ಕಾರ್ಯಕರ್ತೆ

‘ಸಾಕ್ಷ್ಯಚಿತ್ರದಲ್ಲಿ ಭ್ರಷ್ಟಾಚಾರ ಕಾಣಿಸಲಿದೆಯೇ’
ಜನರು ಅನೇಕ ವರ್ಷಗಳಿಂದ ನೇರವಾಗಿ ನೋಡಿರುವ ವಿಧಾನಸೌಧವನ್ನು ಸಾಕ್ಷ್ಯಚಿತ್ರದ ಮೂಲಕ ಮತ್ತೇನು ತೋರಿಸುತ್ತಾರೆ. ವಿಧಾನಸೌಧದ ಒಳಗೆ ನಡೆಸುವ ಭ್ರಷ್ಟಾಚಾರವನ್ನೇನಾದರೂ ತೋರಿಸುತ್ತಾರೆಯೇ. ವಜ್ರಮಹೋತ್ಸವಕ್ಕೆ ವೆಚ್ಚ ಮಾಡುವ ಹಣವನ್ನು ಭದ್ರತೆಗೆ ವ್ಯಯಿಸಿ, ವಿಧಾನಸೌಧದ ನೇರ ವೀಕ್ಷಣೆಗೆ ಅನುವು ಮಾಡಿಕೊಟ್ಟರೆ ಜನರು ಹೆಚ್ಚು ಖುಷಿ ಪಡುತ್ತಾರೆ. ವಜ್ರಮಹೋತ್ಸವದ ಹೆಸರಿನಲ್ಲಿ ಸಾಮಾಜಿಕ ಕೆಲಸಗಳನ್ನು ಹಮ್ಮಿಕೊಂಡಿದ್ದರೆ ಕಾರ್ಯಕ್ರಮ ಅರ್ಥಪೂರ್ಣವಾಗಿರುತ್ತಿತ್ತು.
– ಬಿ.ಯು. ಗೀತಾ, ಲೇಖಕಿ

‘ಜನಪರ ಕೆಲಸಗಳಿಗೆ ಹಣ ವಿನಿಯೋಗಿಸಿ’
ಸೂರು ಇಲ್ಲದವರು ಸಾಕಷ್ಟಿದ್ದಾರೆ, ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ, ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಇಂತಹ ಜನಪರ ಕೆಲಸಗಳಿಗೆ ಹಣ ಖರ್ಚು ಮಾಡಿದ್ದರೆ ಯಾರೂ ಕೇಳುತ್ತಿರಲಿಲ್ಲ. ಅಹಿಂದ ಹಿನ್ನೆಲೆಯುಳ್ಳ ಮುಖ್ಯಮಂತ್ರಿ ಈ ರೀತಿ ಅನಗತ್ಯ ಕಾರ್ಯಕ್ರಮಕ್ಕೆ ದುಂದು ವೆಚ್ಚ ಮಾಡುತ್ತಿರುವುದು ಬೇಸರ ತಂದಿದೆ. ಜನರ ದುಡ್ಡನ್ನು ನಾವು ಖರ್ಚು ಮಾಡುತ್ತಿದ್ದೇವೆ ಎನ್ನುವ ಕಿಂಚಿತ್ತೂ ಕಾಳಜಿ ಇಲ್ಲದೆ ಬೇಕಾಬಿಟ್ಟಿ ಕಾರ್ಯಕ್ರಮದ ರೂಪುರೇಷೆ ಮಾಡಿದ್ದಾರೆ. ಅಷ್ಟು ಅದ್ದೂರಿಯಾಗಿ ಕಾರ್ಯಕ್ರಮ ಮಾಡುವ ಅಗತ್ಯವಿಲ್ಲ.
–ಗೌರಿ, ಜನಶಕ್ತಿ ಸಂಘಟನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT