ಸೋಮವಾರ, ಸೆಪ್ಟೆಂಬರ್ 16, 2019
22 °C

‘ಧೀರ’ ಚಿತ್ರದ ಬಿಡುಗಡೆಗೆ ಸಿದ್ಧತೆ

Published:
Updated:
‘ಧೀರ’ ಚಿತ್ರದ ಬಿಡುಗಡೆಗೆ ಸಿದ್ಧತೆ

ಬೆಂಗಳೂರು: ನಟ ಅಜಿತ್‌ಕುಮಾರ್ ನಟನೆಯ ‘ಆರಂಭಂ’ ತಮಿಳು ಸಿನಿಮಾವು ‘ಧೀರ’ ಹೆಸರಿನಡಿ ಕನ್ನಡದಲ್ಲಿ ಡಬ್ಬಿಂಗ್ ಆಗಿ ಬಿಡುಗಡೆಗೆ ಸಿದ್ಧವಾಗಿದೆ. ‘ಸತ್ಯದೇವ್ ಐಪಿಎಸ್’ ಡಬ್ಬಿಂಗ್‌ ಚಿತ್ರದ ನಿರ್ಮಾಪಕ ಜಿ. ಕೃಷ್ಣಮೂರ್ತಿ ಅವರೇ ಈ ಚಿತ್ರವನ್ನೂ ಡಬ್ಬಿಂಗ್‌ ಮಾಡಿ ಬಿಡುಗಡೆಗೆ ತಯಾರಿ ನಡೆಸಿದ್ದಾರೆ.

‘ಸತ್ಯದೇವ್ ಐಪಿಎಸ್’ ಚಿತ್ರದ ಬಿಡುಗಡೆ ಖಂಡಿಸಿ ಕನ್ನಡಪರ ಹೋರಾಟಗಾರರು ಮತ್ತು ಹಲವು ನಟರು ಪ್ರತಿಭಟಿಸಿದ್ದರು. ಈಗ ‘ಧೀರ’ ಚಿತ್ರವನ್ನು ಬಿಡುಗಡೆ ಮಾಡಲು ನಿರ್ಮಾಪಕರು ಉತ್ಸುಕರಾಗಿದ್ದಾರೆ. ಇತ್ತೀಚೆಗೆ ಸಂಪಿಗೆ ಚಿತ್ರಮಂದಿರದಲ್ಲಿ ನಟ ವಿಜಯ್‌ ನಟನೆಯ ‘ಮರ್ಸೆಲ್’ ಚಿತ್ರ ಪ್ರದರ್ಶನ ಕಂಡಿತ್ತು. ಈ ವೇಳೆ ವಿಜಯ್‌ ಅಭಿಮಾನಿಗಳು ಕನ್ನಡಿಗರ ಮೇಲೆ ಹಲ್ಲೆ ನಡೆಸಿದರು ಎನ್ನಲಾಗಿದೆ.

ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಡಬ್ಬಿಂಗ್‌ ಪರ ಹೋರಾಟಗಾರ ಮತ್ತು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೃಷ್ಣೇಗೌಡ, ‘ನಾನು ಡಬ್ಬಿಂಗ್‌ ಪರವಾಗಿದ್ದೇನೆ. ಆದರೆ, ಕನ್ನಡಿಗರ ಭಾವನೆಗಳನ್ನು ಕೆರಳಿಸುವ ಕೆಲಸಕ್ಕೆ ಎಂದಿಗೂ ಮುಂದಾಗುವುದಿಲ್ಲ. ಧೀರ ಚಿತ್ರದ ಬಿಡುಗಡೆಗೆ ನನ್ನ ಬೆಂಬಲ ಇಲ್ಲ’ ಎಂದು ಸ್ಪಷ್ಟಪಡಿಸಿದರು.

‘ತಮಿಳು ಭಾಷೆಯ ಯಾವುದೇ ಡಬ್ಬಿಂಗ್‌ ಚಿತ್ರ ಪ್ರದರ್ಶನಕ್ಕೆ ನಾನು ಬೆಂಬಲ ನೀಡುವುದಿಲ್ಲ. ಇದರಿಂದ ಅನಾಹುತಗಳೇ ಹೆಚ್ಚು. ನನ್ನದು ತಟಸ್ಥ ನಿಲುವು. ಆದರೆ, ಹಿಂದಿ ಸೇರಿದಂತೆ ಇತರ ಯಾವುದೇ ಭಾಷೆಯ ಚಿತ್ರಗಳನ್ನು ಕನ್ನಡದಲ್ಲಿ ಡಬ್ಬಿಂಗ್‌ ಮಾಡಿದರೆ ನಾನು ಖುದ್ದಾಗಿ ನಿಂತು ಪ್ರದರ್ಶನಕ್ಕೆ ಅವಕಾಶ ಕಲ್ಪಿಸುತ್ತೇನೆ’ ಎಂದು ಪ್ರತಿಕ್ರಿಯಿಸಿದರು.

‘ಕೃಷ್ಣಮೂರ್ತಿ ಅವರು ನಮ್ಮ ವಾಣಿಜ್ಯ ಮಂಡಳಿಯ ಸದಸ್ಯರಾಗಿದ್ದಾರೆ. ‘ಧೀರ’ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಅದು ಅವರ ನಿರ್ಧಾರವಾಗಿದೆ’ ಎಂದರು.

Post Comments (+)