ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾನಗರ... ಇನ್ನೂ ಎತ್ತರ ಎತ್ತರ...!

900 ಗಗನಚುಂಬಿ ಕಟ್ಟಡಗಳಿಗೆ ಮಂಜೂರಾತಿ ನೀಡಲು ಮಹಾನಗರ ಪಾಲಿಕೆ ಸಿದ್ಧತೆ
Last Updated 20 ಅಕ್ಟೋಬರ್ 2017, 19:36 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಈ ವರ್ಷ 900ಕ್ಕೂ ಹೆಚ್ಚು ಗಗನಚುಂಬಿ ಕಟ್ಟಡಗಳು ತಲೆ ಎತ್ತಲಿವೆ. ನಗರದ ವಿಸ್ತಾರವನ್ನು ಹೆಚ್ಚಿಸುವ ಬದಲು ಎತ್ತರದ ಕಟ್ಟಡಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸುವುದು ಸೂಕ್ತ ಎಂದು ಪರಿಭಾವಿಸಿರುವ ಬಿಬಿಎಂಪಿ ಈ ಗಗನಚುಂಬಿ ಕಟ್ಟಡಗಳಿಗೆ ಹಸಿರು ನಿಶಾನೆ ತೋರಿಸಿದೆ.

ನಾಲ್ಕು ವರ್ಷಗಳಲ್ಲಿ ಒಟ್ಟು ಇಷ್ಟೊಂದು ಪ್ರಮಾಣದಲ್ಲಿ ಗಗನಚುಂಬಿ ಕಟ್ಟಡಗಳಿಗೆ ಮಂಜೂರಾತಿ ನೀಡಿರಲಿಲ್ಲ ಎನ್ನುತ್ತವೆ ಪಾಲಿಕೆಯ ಅಂಕಿಅಂಶಗಳು.

ತಳಮಹಡಿ ಸೇರಿದಂತೆ ಒಟ್ಟು ನಾಲ್ಕು ಅಂತಸ್ತುಗಳನ್ನು ಹೊಂದಿರುವ ಕಟ್ಟಡಗಳನ್ನು ಗಗನಚುಂಬಿ ಕಟ್ಟಡಗಳು ಎಂದು ಪರಿಗಣಿಸಬಹುದು ಎನ್ನುತ್ತದೆ ಬಿಬಿಎಂಪಿಯ 2003ರ ಕಟ್ಟಡ ಉಪನಿಯಮಗಳು. ಇದರ ಪ್ರಕಾರ 15 ಮೀಟರ್‌ಗಳಿಗಿಂತ ಎತ್ತರದ ಕಟ್ಟಡಗಳು ‘ಗಂಗನಚುಂಬಿ’ ಎನಿಸಿಕೊಳ್ಳುತ್ತವೆ. ‌

2014ರಿಂದ 2016ರ ನಡುವೆ ಪಾಲಿಕೆ ಒಟ್ಟು 706 ಗಗನಚುಂಬಿ ಕಟ್ಟಡಗಳಿಗೆ ಸ್ವಾಧೀನ ಪ್ರಮಾಣಪತ್ರಗಳನ್ನು ನೀಡಿದೆ. ಇವುಗಳಲ್ಲಿ ಅಪಾರ್ಟ್‌ಮೆಂಟ್‌ ಸಮುಚ್ಚಯಗಳು ಹಾಗೂ ವಾಣಿಜ್ಯ ಕಟ್ಟಡಗಳೂ ಸೇರಿವೆ. ಕಳೆದ ವರ್ಷದಿಂದ ಈಚೆಗೆ 819 ಗಗನಚುಂಬಿ ಕಟ್ಟಡಗಳ ಯೋಜನೆಗಳಿಗೆ ಅನುಮೋದನೆ ಹಾಗೂ 89 ಕಟ್ಟಡಗಳ ನಿರ್ಮಾಣಕ್ಕೆ ಪ್ರಾರಂಭಿಕ ಪ್ರಮಾಣಪತ್ರ ನೀಡಲಾಗಿದೆ.

‘ನಗರವು ಹೆಚ್ಚು ಲಂಬವಾಗಿ ಬೆಳೆಯುತ್ತಿರುವುದು ವಾಸ್ತವ. ಜಾಗದ ಕೊರತೆ ಇರುವುದರಿಂದ ಇಂತಹ ಬೆಳವಣಿಗೆಗೆ ಉತ್ತೇಜನ ನೀಡುವ ಅಗತ್ಯವಿದೆ. ಈ ಪ್ರವೃತ್ತಿ ಮುಂದುವರಿಯಲಿದೆ. ಇದಕ್ಕೆ ನಿಯಂತ್ರಣ ಹೇರುವುದು ಕಷ್ಟಸಾಧ್ಯ’ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದರು. ಜನರು ‘ನಮ್ಮ ಮೆಟ್ರೊ’ ಕಾರಿಡಾರ್‌ಗಳ ಬಳಿ ವಾಸಿಸುವುದನ್ನು ಜನ ಇಷ್ಟಪಡುತ್ತಿದ್ದಾರೆ ಎಂಬ ಅಂಶವನ್ನು ಅವರು ಬೊಟ್ಟು ಮಾಡಿದರು.

‘ಪ್ರಯಾಣ ಕೇಂದ್ರಿತ ಅಭಿವೃದ್ಧಿ ನೀತಿಯನ್ವಯ ಮೆಟ್ರೊ ಕಾರಿಡಾರ್ ಪ್ರದೇಶಗಳಲ್ಲಿ ಒಂದಕ್ಕೆ ನಾಲ್ಕರಷ್ಟು ಫ್ಲೋರ್‌ ಏರಿಯಾ ರೇಷಿಯೊ (ಎಫ್‌ಎಆರ್‌) ನೀಡಲು ಅವಕಾಶ ಇದೆ. ಇದರಿಂದಾಗಿ ನಗರ ಲಂಬವಾಗಿ ಬೆಳೆಯಲು ಉತ್ತೇಜನ ಸಿಗಲಿದೆ’ ಎಂದರು.

ಮಂಜೂರಾತಿ ನೀಡುವ ಪ್ರಕ್ರಿಯೆಗಳನ್ನು ಸರಳಗೊಳಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ. ಕಟ್ಟಡ ಯೋಜನೆಗಳ ಮಂಜೂರಾತಿಗಾಗಿ ಅರ್ಜಿ ಸಲ್ಲಿಕೆ ಆದ 30 ದಿನಗಳ ಒಳಗೆ ನಗರ ಸ್ಥಳೀಯ ಸಂಸ್ಥೆಗಳು ಮಂಜೂರಾತಿ ನೀಡಬೇಕು. ಏಳು ದಿನಗಳ ಒಳಗೆ ಸ್ಥಳ ಪರಿಶೀಲನೆ ನಡೆಸಬೇಕು ಹಾಗೂ ಇದಾಗಿ ಎಂಟು ದಿನಗಳ ಒಳಗೆ ಸ್ವಾಧೀನ ಪ್ರಮಾಣಪತ್ರವನ್ನು ವಿತರಿಸಬೇಕು ಎಂದು ಗಡುವು ವಿಧಿಸಿದೆ.

‘ಇಡೀ ಪ್ರಕ್ರಿಯೆಯನ್ನು ಸಕಾಲದ ವ್ಯಾಪ್ತಿಯಲ್ಲಿ ತರಲಾಗುತ್ತದೆ. ಈ ಪ್ರಕ್ರಿಯೆಯನ್ನು ಸಂಪೂರ್ಣ ಆನ್‌ಲೈನ್‌ಗೊಳಿಸಲು ನಗರ ಸ್ಥಳೀಯ ಸಂಸ್ಥೆಗಳಿಗಾಗಿ ನಾವು ನಿರ್ಮಾಣ ತಂತ್ರಾಂಶವನ್ನು ರೂಪಿಸುತ್ತಿದ್ದೇವೆ’ ಎಂದು ನಗರ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಅಂಜುಂ ಪರ್ವೇಜ್‌ ತಿಳಿಸಿದರು.

2016ರ ಏಪ್ರಿಲ್ ಬಿಬಿಎಂಪಿ ಆಯುಕ್ತರ ನೇತೃತ್ವದಲ್ಲಿ ಸರ್ಕಾರ 13 ಸದಸ್ಯರ ಸಮಿತಿಯನ್ನು ರಚಿಸಿತ್ತು. ಅಗ್ನಿಶಾಮಕ ದಳ, ಬೆಸ್ಕಾಂ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ, ಜಲಮಂಡಳಿ, ಅರಣ್ಯ ಹಾಗೂ ಇತರ ಇಲಾಖೆಗಳ ಪ್ರತಿನಿಧಿಗಳು ಇದರಲ್ಲಿರುತ್ತಾರೆ.

ಈ ಸಮಿತಿ ತಿಂಗಳಿನ ಮೊದಲ ಹಾಗೂ ಮೂರನೇ ಶನಿವಾರ ಸ್ಥಳ ತನಿಖೆ ನಡೆಸಲಿದೆ. ಕಟ್ಟಡಗಳಿಗೆ ಅನುಮತಿ ಪಡೆಯುವುದು ಇದರಿಂದ ಸುಲಭವಾಗಲಿದೆ.

ಪಾಲಿಕೆಯ ನಗರ ಯೋಜನಾ ವಿಭಾಗವು ನಗರದ ಹಳೆಯ ಪ್ರದೇಶಗಳನ್ನು ಒಳಗೊಂಡ ದಕ್ಷಿಣ ವಲಯದಲ್ಲಿ ಒಂದೇ ವರ್ಷದಲ್ಲಿ 708 ಕಟ್ಟಡ ಯೋಜನೆಗಳಿಗೆ ಮಂಜೂರಾತಿ ನೀಡಿದೆ. ಕ್ಷಿಪ್ರಗತಿಯಲ್ಲಿ ಅಭಿವೃದ್ಧಿಯಾಗುತ್ತಿರುವ ಕೋರಮಂಗಲ ಪ್ರದೇಶವೂ ಈ ವಲಯದ ವ್ಯಾಪ್ತಿಯಲ್ಲಿದೆ.

ಅತಿಹೆಚ್ಚು ಸ್ವಾಧೀನ ಪ್ರಮಾಣಪತ್ರಗಳನ್ನು ನೀಡಿರುವುದು ಬೆಂಗಳೂರು ಉತ್ತರ ಹಾಗೂ ಮಹದೇವಪುರ ವಲಯಗಳಲ್ಲಿ.

‘ಗಗನಚುಂಬಿ ಕಟ್ಟಡ ಎಂದಾಕ್ಷಣ ಅದು ಅಪಾರ್ಟ್‌ಮೆಂಟ್‌ ಸಮುಚ್ಚಯವೇ ಆಗಿರಬೇಕಿಲ್ಲ. ಇತ್ತೀಚೆಗೆ ಭೂಮಾಲೀಕರು ಸ್ವಂತ ವಸತಿಗಾಗಿಯೂ ನಾಲ್ಕು ಅಂತಸ್ತುಗಳ ಕಟ್ಟಡಗಳನ್ನು ನಿರ್ಮಿಸುತ್ತಿದ್ದಾರೆ’ ಎಂದು ಪಾಲಿಕೆಯ ನಗರ ಮತ್ತು ಗ್ರಾಮೀಣ ಯೋಜನಾ ನಿರ್ದೇಶಕ ಎಲ್‌.ಶಶಿಕುಮಾರ್‌ ತಿಳಿಸಿದರು.

‘ನಗರದ ಹೊರವಲಯಗಳಲ್ಲಿ 1,200 ಚದರ ಅಡಿಯ ಒಂದು ನಿವೇಶನಕ್ಕೆ ₹ 1 ಕೋಟಿ ಬೆಲೆ ಇದೆ. ಇಂತಹ ಕಡೆಗಳಲ್ಲಿ ಅಷ್ಟೇ ಮೊತ್ತಕ್ಕೆ 4 ಬಿಎಚ್‌ಕೆ ಫ್ಲ್ಯಾಟ್‌ ಲಭ್ಯ. ಮುಂಬೈ, ಪುಣೆ ಹಾಗೂ ನೋಯ್ಡಾ ಮಾದರಿಯಲ್ಲೇ ಬೆಂಗಳೂರು ಕೂಡಾ ಗಗನಚುಂಬಿ ಕಟ್ಟಡಗಳನ್ನು ನೆಚ್ಚಿಕೊಳ್ಳುತ್ತಿದೆ’ ಎಂದು ಅವರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT