ಮಾಲಿನ್ಯಕ್ಕೆ 26 ಲಕ್ಷ ಬಲಿ

ಭಾನುವಾರ, ಜೂನ್ 16, 2019
32 °C
2015ರಲ್ಲಿ ಭಾರತದಲ್ಲೇ ಹೆಚ್ಚು ಸಾವು

ಮಾಲಿನ್ಯಕ್ಕೆ 26 ಲಕ್ಷ ಬಲಿ

Published:
Updated:
ಮಾಲಿನ್ಯಕ್ಕೆ 26 ಲಕ್ಷ ಬಲಿ

ನವದೆಹಲಿ: ‘ಭಾರತದಲ್ಲಿ 2015ರೊಂದರಲ್ಲೇ ಸುಮಾರು 26 ಲಕ್ಷಕ್ಕೂ ಹೆಚ್ಚು ಜನ ಮಾಲಿನ್ಯಕ್ಕೆ ಬಲಿಯಾಗಿದ್ದಾರೆ. ಇದು 2015ರಲ್ಲಿ ಮಾಲಿನ್ಯದ ಕಾರಣಕ್ಕೆ ವಿಶ್ವದ ಯಾವುದೇ ದೇಶದಲ್ಲಿ ಸಂಭವಿಸಿದ ಸಾವಿಗಿಂತ ಹೆಚ್ಚು’  ಎಂದು ಸಾರ್ವಜನಿಕ ಆರೋಗ್ಯದ ಜಾಗತಿಕ ಸಮಿತಿಯೊಂದು ಹೇಳಿದೆ.

ಭಾರತೀಯರೂ ಇದ್ದ ಈ ಸಮಿತಿಯ ಅಧ್ಯಯನದ ವರದಿಯು ಲ್ಯಾನ್ಸೆಟ್ ನಿಯತಕಾಲಿಕದಲ್ಲಿ ಪ್ರಕಟವಾಗಿದೆ. 26 ಲಕ್ಷ ಸಾವುಗಳಲ್ಲಿ ಸುಮಾರು 18 ಲಕ್ಷ ಸಾವುಗಳು ವಾಯು ಮಾಲಿನ್ಯದಿಂದಲೇ ಸಂಭವಿಸಿವೆ. ಹೃದಯಾಘಾತ, ಪಾರ್ಶ್ವವಾಯು, ಶ್ವಾಸಕೋಶದ ಕ್ಯಾನ್ಸರ್‌ ಮತ್ತು ಶ್ವಾಸಕೋಶ ಸಂಬಂಧಿ ಖಾಯಿಲೆಗಳಿಂದ ಈ ಸಾವು ಸಂಭವಿಸಿವೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ದೇಶದ 75 ಸ್ಥಳಗಳಲ್ಲಿ ಕ್ಷೇತ್ರಕಾರ್ಯ ನಡೆಸಿ ಮತ್ತು ದತ್ತಾಂಶಗಳನ್ನು ಕಲೆ ಹಾಕಿ ಈ ಅಧ್ಯಯನ ನಡೆಸಲಾಗಿದೆ. ಈ 75 ಸ್ಥಳಗಳಲ್ಲಿ ಕರ್ನಾಟಕದ 17 ಸ್ಥಳಗಳು ಸೇರಿವೆ. ಈ ಸ್ಥಳಗಳಲ್ಲಿನ ಗಾಳಿ ಮತ್ತು ನೀರಿನಲ್ಲಿನ ಮಾಲಿನ್ಯಕಾರಕ ಅಂಶಗಳನ್ನು ಪತ್ತೆ ಮಾಡಲಾಗಿದೆ. ಭಾರತದ ಪ್ರತಿ ಮೂರು ಮನೆಗಳಲ್ಲಿ ಈಗಲೂ ಸೌದೆ–ಬೆರಣಿಯ ಒಲೆಗಳನ್ನು ನೀರು ಖಾಯಿಸಲು ಮತ್ತು ಅಡುಗೆ ಮಾಡಲು ಬಳಸಲಾಗುತ್ತದೆ. ಭಾರತದಲ್ಲಿನ ವಾಯು ಮಾಲಿನ್ಯಕ್ಕೆ ಈ ಒಲೆಗಳ ಕೊಡುಗೆ ಶೇ 50ರವರೆಗೂ ಇದೆ ಎಂದು ತಜ್ಞರು ಹೇಳಿದ್ದಾರೆ.

ಮಾಲಿನ್ಯದ ಕಾರಣಕ್ಕೆ ಚೀನಾದಲ್ಲಿ 2015ರಲ್ಲಿ 18 ಲಕ್ಷ ಜನ ಮೃತಪಟ್ಟಿದ್ದಾರೆ. ಮಾಲಿನ್ಯದ ಕಾರಣಕ್ಕೆ ಜಾಗತಿಕವಾಗಿ ಸಂಭವಿಸಿದ ಸಾವುಗಳಲ್ಲಿ ಶೇ 92ರಷ್ಟು ಸಾವುಗಳು ಕಡಿಮೆ ಮತ್ತು ಮಧ್ಯಮ ಆದಾಯದ ರಾಷ್ಟ್ರಗಳಲ್ಲಿ ಸಂಭವಿಸಿದೆ. ಭಾರತ, ಪಾಕಿಸ್ತಾನ, ಚೀನಾ, ಬಾಂಗ್ಲಾದೇಶ, ಮಡಗಾಸ್ಕರ್‌ ಮತ್ತು ಕೀನ್ಯಗಳಲ್ಲಿ ಸಂಭವಿಸುವ ಪ್ರತಿ ನಾಲ್ಕು ಸಾವುಗಳಲ್ಲಿ ಒಂದು ಸಾವಿಗೆ ಮಾಲಿನ್ಯ ಕಾರಣವಾಗಿರುತ್ತದೆ.  ಈ ದೇಶಗಳಲ್ಲಿ ಮಾಲಿನ್ಯಕ್ಕೆ ಬಲಿಯಾಗುವವರಲ್ಲಿ ಬಡವರ ಪ್ರಮಾಣವೇ ಹೆಚ್ಚು. ಮೂಲಸೌಕರ್ಯಗಳ ಕೊರತೆ ಇರುವುದರಿಂದ ಈ ಜನರು ಬಳಸುವ ನೀರಿನಲ್ಲಿ ಮಾಲಿನ್ಯಕಾರಕಗಳ ಪ್ರಮಾಣ ಹೆಚ್ಚಿರುತ್ತದೆ. ಮಾಲಿನ್ಯಕ್ಕೆ ಕಾರಣವಾಗುವ ಸ್ಥಳಗಳ ಸಮೀಪವೇ ಈ ವರ್ಗದ ಜನರ ವಸತಿ ಇರುವುದರಿಂದ ಇವರು ನೀರು, ಗಾಳಿ ಮತ್ತು ಕೆಲಸ ಮಾಡುವ ಸ್ಥಳದಲ್ಲಿ ವಿಷಕಾರಿ ರಾಸಾಯನಿಕಗಳನ್ನು ಸೇವಿಸುತ್ತಾರೆ ಎಂಬುದು ಅಧ್ಯಯನದ ವೇಳೆ ಪತ್ತೆಯಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ರಾಜ್ಯದ ವಿವಿಧೆಡೆ ಪತ್ತೆಯಾದ ವಿಷಕಾರಿ ಮಾಲಿನ್ಯಕಾರಕಗಳು

ಸೀಸ

ಮಾವಳ್ಳಿಪುರ ಕಸ ಸಂಸ್ಕರಣಾ ಘಟಕ

ಹೆಬ್ಬಾಳ ಕೆರೆ ಪ್ರದೇಶ

ಮಂಗಮ್ಮನಪಾಳ್ಯ ಮತ್ತು ಸುತ್ತಮುತ್ತಲಿನ ಪ್ರದೇಶ

ಅಗರ ಕೆರೆ ಪ್ರದೇಶ

ಅರಕೆರೆ ಪ್ರದೇಶ

ಮಡಿವಾಳ ಕೆರೆ

ಬೇಗೂರು ರಸ್ತೆ ಸುತ್ತಮುತ್ತಲಿನ ಪ್ರದೇಶ

ನಂಜನಗೂಡು ಸಮೀಪ ಕಾವೇರಿ ನದಿ ಪ್ರದೇಶ

*

ಕ್ರೋಮಿಯಂ

ಪೀಣ್ಯ ಕೈಗಾರಿಕಾ ಪ್ರದೇಶ

ವೃಷಭಾವತಿ ಕಣಿವೆ ಪ್ರದೇಶ

ಕೋಲಾರ ಚಿನ್ನದ ಗಣಿ ಪ್ರದೇಶ

ಹಾಸನದ ನುಗ್ಗೆಹಳ್ಳಿ ರೂಪಾಂತರ ಶಿಲೆ ಪ್ರದೇಶ

*

ಕ್ಯಾಡಿಯಂ

ಬೆಳ್ಳಂದೂರು ಕೆರೆ ಪ್ರದೇಶ

ಕೆಂಗೇರಿ ಕೆರೆ ಪ್ರದೇಶ

*

ವಾಯು ಮಾಲಿನ್ಯದಿಂದ ಸಂಭವಿಸಿದ ಸಾವುಗಳು 18 ಲಕ್ಷ

ಜಲ ಮಾಲಿನ್ಯದಿಂದ ಸಂಭವಿಸಿದ ಸಾವುಗಳು 6.46 ಲಕ್ಷ

ಪರೋಕ್ಷ ಧೂಮಪಾನ ಮತ್ತು ಸೀಸದ ಸಂಪರ್ಕದಿಂದ ಸಂಭವಿಸಿದ ಸಾವುಗಳು 1.68 ಲಕ್ಷ

* * *

* ವಾತಾವರಣಕ್ಕೆ ದೂಳು ಮತ್ತು ಹೊಗೆ ಬಿಡುಗಡೆ ಆಗುವ ಪ್ರಮಾಣ ಭಾರತದಲ್ಲಿ ಅತಿ ಹೆಚ್ಚು

* ಒಟ್ಟು ವಾಯು ಮಾಲಿನ್ಯದ ಶೇ 25–50ರಷ್ಟಕ್ಕೆ ಮನೆಗಳಲ್ಲಿ ಬಳಸುವ ಉರುವಲಿನ ಹೊಗೆ ಕಾರಣ

* ಮಾಲಿನ್ಯದಿಂದ ಬಡವರಿಗೆ ಹೆಚ್ಚು ತೊಂದರೆ. ಮಲಿನ ಗಾಳಿ, ನೀರು, ಮಲಿನಗೊಂಡ ಕೆಲಸದ ಸ್ಥಳಗಳು ಇದಕ್ಕೆ ಕಾರಣ

* ಬಡಜನರ ಮನೆಗಳ ಸುತ್ತ ಮುತ್ತಲೂ ಮಾಲಿನ್ಯಕಾರಕ ಅಂಶಗಳು ಇರುತ್ತವೆ

*ಹೆಚ್ಚು ಮಾಲಿನ್ಯ ಇರುವ ಭಾರತದ 75 ಸ್ಥಳಗಳಲ್ಲಿ ಅಧ್ಯಯನ ನಡೆಸಲಾಗಿದೆ. ಅವುಗಳಲ್ಲಿ 17 ಸ್ಥಳಗಳು ಕರ್ನಾಟಕದಲ್ಲಿವೆ

*ಮಾಲಿನ್ಯದಿಂದಾಗಿ ಉಂಟಾಗುವ ಪ್ರಮುಖ ಕಾಯಿಲೆಗಳು: ಹೃದಯ ಸಂಬಂಧಿ ರೋಗಗಳು, ಪಾರ್ಶ್ವವಾಯು, ಶ್ವಾಸಕೋಶದ ಕ್ಯಾನ್ಸರ್‌, ಉಸಿರಾಟದ ತೊಂದರೆ

* ಮಾಲಿನ್ಯದಿಂದ ಅತಿ ಹೆಚ್ಚು ತೊಂದರೆಗೆ ಒಳಗಾದ ದೇಶಗಳು: ಭಾರತ, ಚೀನಾ, ಪಾಕಿಸ್ತಾನ, ಬಾಂಗ್ಲಾದೇಶ, ಮಡಗಾಸ್ಕರ್‌, ಕೀನ್ಯ

*ನವದೆಹಲಿಯ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಮತ್ತು ಅಮೆರಿಕದ ಐಕಾನ್‌ ಸ್ಕೂಲ್‌ ಆಫ್‌ ಮೆಡಿಸಿನ್‌ ಸಂಸ್ಥೆಗಳು ಜಂಟಿಯಾಗಿ ಈ ಅಧ್ಯಯನ ನಡೆಸಿವೆ

* ಮಾಲಿನ್ಯದಿಂದಾಗಿ ಆಗುವ ನಷ್ಟದ ಮೊತ್ತ ₹ 300 ಲಕ್ಷ ಕೋಟಿಗೂ ಹೆಚ್ಚು. ಇದು ಜಗತ್ತಿನ ಒಟ್ಟು ಆರ್ಥಿಕ ಉತ್ಪನ್ನದ ಶೇ 6.2ರಷ್ಟು

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry