ಸೋಮವಾರ, ಸೆಪ್ಟೆಂಬರ್ 16, 2019
21 °C

ದೀಪಾವಳಿ ಸಂಭ್ರಮಕ್ಕೆ ಕೋಟೆಗಳ ಮೆರುಗು

Published:
Updated:

ಖಾನಾಪುರ: ಛತ್ರಪತಿ ಶಿವಾಜಿ ಮಹಾರಾಜ ಮೊಗಲ್ ಸಾಮ್ರಾಜ್ಯದ ವಿರುದ್ಧ ವಿಜಯ ಸಾಧಿಸಿದ ಸವಿನೆನಪಿಗಾಗಿ ಆತನ ಅನುಯಾಯಿಗಳು ಮತ್ತು ಭಕ್ತರು ಕೋಟೆಗಳ ಮಾದರಿಯನ್ನು ತಮ್ಮ ಸುತ್ತಲಿನ ಭಾಗದಲ್ಲಿ ತಯಾರಿಸಿ ಪೂಜಿಸುವ ಪರಂಪರೆ ಪಟ್ಟಣ ಸೇರಿದಂತೆ ತಾಲ್ಲೂಕಿನ ಹಲವೆಡೆ ಇದೆ.

ದೀಪಾವಳಿಯಿಂದ ತುಳಸಿ ವಿವಾಹದವರೆಗೆ ಶಿವಾಜಿ ಮಹಾರಾಜ ಮತ್ತು ಅವರ ಸಮಕಾಲೀನ ರಾಜ ಮಹಾರಾಜರ ಸಾಹಸ, ಧೈರ್ಯ, ದೇಶಭಕ್ತಿ ಮತ್ತು ಧ್ಯೇಯಗಳನ್ನು ವಿವರಿಸುವ ಕೋಟೆಗಳನ್ನು ನಿರ್ಮಿಸುವ ಮೂಲಕ ಶಿವಾಜಿ ಮಹಾರಾಜರ ಬಗ್ಗೆ ಇಂದಿನ ಯುವಪೀಳಿಗೆಗೆ ಪರಿಚಯಿಸುವ ಕೆಲಸ ನಡೆಯುತ್ತಿದೆ.

ಕೋಟೆಗಳ ನಿರ್ಮಾಣ, ಪ್ರದರ್ಶನ ಮತ್ತು ಆಕರ್ಷಕ ಕೋಟೆ ನಿರ್ಮಿಸುವ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ಉತ್ತಮ ವಿನ್ಯಾಸ ಮತ್ತು ಅಲಂಕಾರಗಳನ್ನು ಹೊಂದಿದ ಕೋಟೆ ನಿರ್ಮಿಸಿದವರಿಗೆ ಬಹುಮಾನ ನೀಡಿ ಗೌರವಿಸಲಾಗುತ್ತದೆ.

ಪಟ್ಟಣ, ಲೋಂಡಾ, ಗುಂಜಿ, ಶಿರೋಲಿ, ಕಣಕುಂಬಿ, ಜಾಂಬೋಟಿ, ನಂದಗಡ ಭಾಗದ ಪ್ರದೇಶಗಳಲ್ಲಿ ಮಕ್ಕಳು ಮತ್ತು ಯುವಕರು ಉತ್ಸಾಹದಿಂದ ತರಹೇವಾರಿ ಕೋಟೆಗಳ ಮಾದರಿಯನ್ನು ನಿರ್ಮಿಸಿದ್ದಾರೆ. ಸ್ಥಳೀಯವಾಗಿ ವಂತಿಗೆ ಸಂಗ್ರಹಿಸಿ ಕಲ್ಲು, ಇಟ್ಟಿಗೆ, ಮರಳು, ಕೆಂಪು ಮಣ್ಣುಗಳಿಂದ ಕೋಟೆ ನಿರ್ಮಿಸಿ ಅವುಗಳ ಒಳಗೆ ಮನೆ, ವ್ಯಾಯಾಮ ಶಾಲೆ, ಕುದುರೆ ಲಾಯ, ದೇವಸ್ಥಾನ, ರಾಜನ ಆಸ್ಥಾನಗಳನ್ನು ತಯಾರಿಸಿದ್ದಾರೆ. ಅವುಗಳಲ್ಲಿ ಪುಟ್ಟ ಪುಟ್ಟ ಮಣ್ಣಿನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಿದ್ದಾರೆ.

ಮೌಲ್ಯಮಾಪನಕ್ಕೆ ಸಮಿತಿ: ಶಿವಾಜಿ ಮಹಾರಾಜರು ಯುದ್ಧಕ್ಕೆ ಹೊರಟ ದಿನವಾದ ಬಲಿಪಾಡ್ಯಮಿಯಿಂದ ಯುದ್ಧ ಗೆದ್ದು ಮರಳಿ ಬಂದ ದಿನವಾದ ತುಳಸಿ ವಿವಾಹದವರೆಗೆ ಸಾಗುವ ಕೋಟೆಗಳ ಉತ್ಸವದ ಅಂಗವಾಗಿ ಅಲಂಕೃತ ಕೋಟೆಗಳು ಎಲ್ಲೆಡೆ ಝಗಮಗಿಸುತ್ತಿವೆ. ಊರಿನ ಹಿರಿಯರು ಒಂದು ಸಮಿತಿ ರಚಿಸಿ ಕೋಟೆಗಳ ಮೌಲ್ಯಮಾಪನ ನಡೆಸಿ ಉತ್ತಮ ಕೋಟೆಗೆ ಬಹುಮಾನ ಘೋಷಿಸುತ್ತಾರೆ. ಹೀಗಾಗಿ ಈ ಭಾಗದಲ್ಲಿ ಕೋಟೆ ನಿರ್ಮಾಣ ಹಬ್ಬದ ಮಾದರಿಯಲ್ಲಿ ಪ್ರಸಿದ್ಧಿ ಪಡೆದಿದೆ.

ಪ್ರಸಕ್ತ ವರ್ಷ ತಾಲ್ಲೂಕಿನ 100ಕ್ಕೂ ಹೆಚ್ಚು ಗ್ರಾಮಗಳಲ್ಲಿ ಎರಡು ಸಾವಿರ ಕೋಟೆಗಳು ನಿರ್ಮಾಣಗೊಂಡಿವೆ. ಶಿವಾಜಿ ನಿರ್ಮಿಸಿದ ರಾಯಗಡ, ಪ್ರತಾಪಗಡ, ಪನಾಳಗಡ, ರಾಜಹಂಸಗಡ ಮತ್ತಿತರ ಮಾದರಿಯ ಕೋಟೆಗಳು ಗಮನ ಸೆಳೆಯುತ್ತಿವೆ. ಶಾಸಕ ಅರವಿಂದ ಪಾಟೀಲ, ಕಾಂಗ್ರೆಸ್ ಮುಖಂಡರಾದ ನಾಸೀರ ಬಾಗವಾನ, ಡಾ.ಅಂಜಲಿ ನಿಂಬಾಳಕರ, ಬಿಜೆಪಿ ಅಧ್ಯಕ್ಷ ವಿಠ್ಠಲ ಪಾಟೀಲ, ಪಕ್ಷದ ಮುಖಂಡರಾದ ಸುಭಾಸ ಗುಳಶೆಟ್ಟಿ, ಮಂಜುಳಾ ಕಾಪಸೆ, ವಿಠ್ಠಲ ಹಲಗೇಕರ, ವಲ್ಲಭ ಗುಣಾಜಿ, ಪ್ರಮೋದ ಕೊಚೇರಿ ಕೋಟೆಗಳಿಗೆ ಆಕರ್ಷಕ ನಗದು ಬಹುಮಾನಗಳನ್ನು ಘೋಷಿಸಿದ್ದಾರೆ.

‘ಖಾನಾಪುರದ ನಾಗುರ್ಡಾ ಗ್ರಾಮದಲ್ಲಿ ನಿರ್ಮಿಸಿದ ಕೋಟೆಯನ್ನು ಈಗಾಗಲೇ ಸ್ಥಳೀಯರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ಥಳೀಯವಾಗಿ ಸಿಗುವ ವಸ್ತುಗಳಿಂದ ನಿರ್ಮಿಸಲಾದ ಕೋಟೆಗೆ ಹೆಚ್ಚಿನ ಹಣ ಖರ್ಚಾಗಿಲ್ಲ. ವಿದ್ಯುತ್ ಅಲಂಕಾರ ಮತ್ತು ಗೊಂಬೆಗಳಿಗಾಗಿ ನೂರಿನ್ನೂರು ರೂಪಾಯಿ ಮಾತ್ರ ವ್ಯಯಿಸಿದ್ದು, ಕೋಟೆ ಮಾದರಿ ನಿರ್ಮಾಣ ಸ್ಪರ್ಧೆಯಲ್ಲಿ ಭಾಗವಹಿಸಿರುವುದು ಹೆಮ್ಮೆ ತಂದಿದೆ’ ಎಂದು ನಾಗುರ್ಡಾ ಗ್ರಾಮಸ್ಥ ರಾಜು ಕುಂಬಾರ ತಿಳಿಸಿದರು.

 

Post Comments (+)