ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ಆಸ್ಪತ್ರೆಯಲ್ಲಿ ನಿಲ್ಲದ ‘ಚೀಟಿ’ ಹಾವಳಿ

Last Updated 21 ಅಕ್ಟೋಬರ್ 2017, 5:53 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಧಾನಮಂತ್ರಿ ಜನೌಷಧಿ ಮಳಿಗೆ ಆರಂಭಗೊಂಡರೂ ಖಾಸಗಿ ಔಷಧಿ ಮಳಿಗೆಗಳಿಗೆ ‘ಚೀಟಿ’ ಕೊಟ್ಟು ಕಳುಹಿಸುವ ಹಳೆಯ ‘ಚಾಳಿ’ ಮಾತ್ರ ನಿಂತಿಲ್ಲ. ಎಂದಿನಂತೆ ಬಡ ರೋಗಿಗಳು ಚೀಟಿ, ಹಣ ಹಿಡಿದು ಖಾಸಗಿ ಔಷಧಿ ಮಳಿಗೆಗಳಿಗೆ ಎಡತಾಕುವ ದೃಶ್ಯ ಇಂದಿಗೂ ಸಾಮಾನ್ಯವಾಗಿದೆ.

ಜಿಲ್ಲಾ ಆಸ್ಪತ್ರೆ ವೈದ್ಯರ ಈ ಪ್ರವೃತ್ತಿಯ ಬಗ್ಗೆ ಈ ಮೊದಲು ಯಾರಾದರೂ ಪ್ರಶ್ನಿಸಿದರೆ ಆಸ್ಪತ್ರೆಯ ಮುಖ್ಯಸ್ಥರು, ಜಿಲ್ಲಾ ಆರೋಗ್ಯಾಧಿಕಾರಿ, ಜಿಲ್ಲಾಧಿಕಾರಿ ಅವರು, ‘ನಿಜ, ಸ್ವಲ್ಪ ಸಮಸ್ಯೆ ಇದೆ. ಶೀಘ್ರದಲ್ಲಿಯೇ ಜನೌಷಧಿ ಮಳಿಗೆಗಳನ್ನು ತೆರೆಯುತ್ತೇವೆ. ಆಗ ಈ ಸಮಸ್ಯೆ ಬಗೆಹರಿಯುತ್ತದೆ’ ಎಂಬ ಸಿದ್ಧ ಉತ್ತರ ತಕ್ಷಣವೇ ನೀಡುತ್ತಿದ್ದರು. ಆ ಎರಡು ಮಳಿಗೆಗಳನ್ನು ತೆರೆದಾಗಲೂ ಆಸ್ಪತ್ರೆಯಲ್ಲಿ ನಿಲ್ಲದಿರುವ ‘ಹಳೆಯ ಸಂಪ್ರದಾಯ’ದ ಬಗ್ಗೆ ಇದೀಗ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಜಿಲ್ಲಾ ಆಸ್ಪತ್ರೆಯ ‘ಚೀಟಿ’ ಹಾವಳಿ ಅರಿಯುವ ಉದ್ದೇಶದಿಂದ ಆಸ್ಪತ್ರೆಯ ದ್ವಾರದ ಬಳಿ ನಿಂತು ವಾಸ್ತವ ಪರೀಕ್ಷಿಸಿದರೆ ಹಿಂದಿನ ಚಿತ್ರಣ ಬದಲಾದಂತೆ ಕಂಡುಬರಲಿಲ್ಲ. ಆಸ್ಪತ್ರೆಗೆ ಬರುವ ರೋಗಿಗಳು ಆಸ್ಪತ್ರೆಯ ಮುಂಭಾಗದ ರಸ್ತೆಯಲ್ಲಿರುವ 9 ಔಷಧಿ ಮಳಿಗೆಗಳಿಗೆ ಅಲೆದಾಡುವ ದೃಶ್ಯ ಗೋಚರಿಸಿತು.

ಕೈಯಲ್ಲಿ ದೊಡ್ಡ ಔಷಧಿ ಬ್ಯಾಗ್ ಹಿಡಿದು ಆಸ್ಪತ್ರೆಯತ್ತ ಧಾವಂತದಿಂದ ಹೋಗುತ್ತಿದ್ದ ಬಶೆಟ್ಟಿಹಳ್ಳಿ ನಿವಾಸಿ ಲಕ್ಷ್ಮಮ್ಮ ಅವರನ್ನು ತಡೆದು ಮಾತಿಗೆಳೆದರೆ, ‘ಮಗನಿಗೆ ಮೂತ್ರಕೋಶದಲ್ಲಿ ಕಲ್ಲು ಇದೆ. ಅದಕ್ಕಾಗಿ ಆಸ್ಪತ್ರೆಗೆ ತೋರಿಸಲು ಬಂದಿದ್ದೇವೆ. ಇಲ್ಲಿ ನೋಡಿದರೆ ಇನ್‌ಜೆಕ್ಷನ್‌ ಹೊರಗಡೆ ಬರೆದುಕೊಟ್ಟಿದ್ದಾರೆ’ ಎಂದರು.

‘ಎಷ್ಟು ಖರ್ಚಾಯ್ತು’ ಎಂದು ಪ್ರಶ್ನಿಸಿದರೆ ಲೆಕ್ಕ ಹೇಳಲು ತೋಚದ ಅವರು, ‘₹ 1,000 ಕೊಟ್ಟಿದ್ದೆ. ಇಷ್ಟು ವಾಪಸ್‌ ಕೊಟ್ಟಿದ್ದಾರೆ ನೋಡಿ’ ಎಂದು ₹ 10ರ ಮೂರು ನೋಟುಗಳನ್ನು ತೆಗೆದು ತೋರಿಸಿದರು.

ಕೂಲಿ ಮಾಡಿ ಹೊಟ್ಟೆ ಹೊರೆಯುವ ಲಕ್ಷ್ಮಮ್ಮ ಅವರಿಗೆ ಜಿಲ್ಲಾ ಆಸ್ಪತ್ರೆಯ ವೈದ್ಯರು ತಲಾ ₹ 243.71 ಮೌಲ್ಯದ ‘ಪಿಪ್‌ಜೊ’ ಎಂಬ ನಾಲ್ಕು ಇನ್‌ಜೆಕ್ಷನ್‌ ತಂದುಕೊಡುವಂತೆ ‘ಚೀಟಿ’ ಬರೆದುಕೊಟ್ಟಿದ್ದರು. ಸರ್ಕಾರಿ ಆಸ್ಪತ್ರೆ ಎಂಬ ಆಸೆಯಿಂದ ಬಂದಿದ್ದ ಅವರು ತಮ್ಮ ಕೂಲಿಯಲ್ಲಿ ಕೂಡಿಟ್ಟ ₹ 970 ಖರ್ಚು ಮಾಡಿ ಮುಖ ಬಾಡಿಸಿಕೊಂಡಿದ್ದರು.

ಆಸತ್ರೆ ಗೇಟ್ ಬಳಿ ಎದುರಾದ ಗುಡಿಬಂಡೆ ನಿವಾಸಿ ಆನಂದ್ ಅವರನ್ನು ತಡೆದು ‘ಏನಿದು’ ಎಂದು ಪ್ರಶ್ನಿಸಿದಾಗ, ‘ನಮ್ಮ ದೊಡ್ಡಮ್ಮ ಅವರಿಗೆ ಆರೋಗ್ಯ ಸರಿ ಇಲ್ಲದ ಕಾರಣಕ್ಕೆ ಆಸ್ಪತ್ರೆಗೆ ಕರೆದುಕೊಂಡು ಬಂದಿರುವೆ. ಡಾಕ್ಟರ್‌ ಇನ್‌ಜೆಕ್ಷನ್ ಇಲ್ಲ ತನ್ನಿ ಎಂದು ಬರೆದುಕೊಟ್ಟರು. ತರಲು ಹೋಗಿದ್ದೆ. ಡಾಕ್ಟರ್‌ ಹೇಳಿದ ಮೇಲೆ ನಾವು ಇಲ್ಲ ಎನ್ನಲು ಆಗುತ್ತದೆಯೇ? ಅಲ್ಲಾ, ಈ ಆಸ್ಪತ್ರೆಗೆ ಸರ್ಕಾರದಿಂದ ಔಷಧಿ ಕೊಡಲ್ವಾ’ ಎಂದು ಅವರು ಮುಗ್ಧವಾಗಿ ಮರು ಪ್ರಶ್ನಿಸಿದರು.

‘ಜನೌಷಧಿ ಮಳಿಗೆಗಳು ಆರಂಭಗೊಂಡ ನಂತರವೂ ಜಿಲ್ಲಾ ಆಸ್ಪತ್ರೆಯಲ್ಲಿ ಚೀಟಿ ಹಾವಳಿ ಮುಂದುವರಿದಿರುವುದು ಗಂಭೀರ ವಿಚಾರ. ಈ ಬಗ್ಗೆ ಮಾಹಿತಿ ಪಡೆಯುತ್ತೇನೆ. ಜತೆಗೆ ಸಾರ್ವಜನಿಕರಿಗೆ ಜನೌಷಧಿ ಮಳಿಗೆಗಳ ಬಗ್ಗೆ ಮಾಹಿತಿ ನೀಡುವ ಫಲಕಗಳನ್ನು ಆಸ್ಪತ್ರೆಯಲ್ಲಿ ಹಾಕಿಸಲು ಕ್ರಮ ಕೈಗೊಳ್ಳುತ್ತೇನೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ರವಿಶಂಕರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT