ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ದೀಪಾವಳಿಗೆ ಅಡವಿ ಹೂಗಳ ಮೆರಗು

Last Updated 21 ಅಕ್ಟೋಬರ್ 2017, 6:30 IST
ಅಕ್ಷರ ಗಾತ್ರ

ಸಂತೇಬೆನ್ನೂರು: ಗ್ರಾಮೀಣ ಭಾಗದ ದೀಪಾವಳಿ ಹಬ್ಬ ವೈಶಿಷ್ಟ್ಯಗಳು ಮೇಳೈಸಿದ ಆಚರಣೆ. ಹಲವು ಸಂಪ್ರದಾಯಗಳ ನಡುವೆ ಮನೆಯಂಗಳ ಅಡವಿ ಹೂಗಳಿಂದ ಕಂಗೊಳಿಸುವುದು ಇನ್ನೊಂದು ವಿಶೇಷ.

ಹಳದಿ ಬಣ್ಣದ ತಂಗಡಿಕೆ ಹೂ, ಉತ್ತರಾಣಿ, ಬ್ರಹ್ಮದಂಡೆ, ಸಜ್ಜೆ ತೆನೆ, ಕವಚಿ ಹುಲ್ಲು, ಅನ್ನೆ ತೆನೆಗಳು ದೀಪಾವಳಿ ಹಬ್ಬಕ್ಕೆಂದೇ ಸಂಗ್ರಹಿಸಲಾಗುತ್ತದೆ. ರೈತ ಕುಟುಂಬಗಳಿಗೆ ಈ ಸಾಮಾಗ್ರಿಗಳನ್ನು ಕಲೆ ಹಾಕುವುದು ಸುಲಭ. ಸಗಣಿ ಬಳಿದು ಸಿಂಗರಿಸಿದ ಅಂಗಳಕ್ಕೆ ಇವುಗಳೇ ವಿಶೇಷ ಆಕರ್ಷಣೆ. ಹಸುವಿನ ಸಗಣಿಗೆ ಉಂಡೆಯಲ್ಲಿ ಇವುಗಳನ್ನು ಸಿಕ್ಕಿಸುವುದು ಇದೆ.

ಅಡವಿಯಲ್ಲಿ ಬೆಳೆಯುವ ಉದ್ದನೆ ಹುಲ್ಲಿನ ತಳಿ ಕವಚಿ. ಇದನ್ನು ಜಡೆಯಂತೆ ಹಣೆದು ಬಾಗಿಲ ಬಳಿ ಇರುಸುವುದು ಕಡ್ಡಾಯ ಸಂಪ್ರದಾಯದಂತೆ ಪಾಲಿಸಲಾಗುತ್ತದೆ. ಇವಿಲ್ಲದೇ ದೀಪಾವಳಿಯೇ ಇಲ್ಲ ಎನ್ನುವ ಭಾವ ಗ್ರಾಮೀಣ ಜನತೆಯಲ್ಲಿ. ಮುಂಬಾಗಿಲ ಎಡ ಭಾಗದಲ್ಲಿ ಹಟ್ಟಿ ಲಕ್ಕಮ್ಮ ಸ್ಥಾಪಿಸಲಾಗುತ್ತದೆ. ಇದರಲ್ಲಿ ದೀಪ, ಸಗಣಿ ಉಂಡೆಯಲ್ಲಿ ಅಲಂಕರಿಸಿದ ಅಡವಿ ಹೂಗಳನ್ನು ಇರಿಸಲಾಗುತ್ತದೆ. ಹೊಸ ಬಿದಿರಿನ ಬುಟ್ಟಿಯಿಂದ ಮುಚ್ಚಲಾಗುತ್ತದೆ.

ವಿಶೇಷ ಪೂಜೆ ಸಲ್ಲಿಸಲಾಗುತ್ತದೆ ಎನ್ನುತ್ತಾರೆ ಸುಮಂಗಲಮ್ಮ. ದಶಕಗಳ ಹಿಂದೇ ಅಡವಿ ಸಾಮಾಗ್ರಿಗಳನ್ನು ಮಕ್ಕಳೇ ಸಂಗ್ರಹಿಸಿ ಸಂಭ್ರಮಿಸುತ್ತಿದ್ದರು. ಇಂದಿನ ಮಕ್ಕಳಿಗೆ ಇವುಗಳ ಪರಿಚಯವೇ ಇಲ್ಲ. ಗ್ರಾಮೀಣ ಪ್ರದೇಶಗಳು ನಗರ ಜೀವನಕ್ಕೆ ಮಾರು ಹೋಗಿವೆ. ಮೂಲ ಪದ್ಧತಿಗಳ ಅನುಸರಣೆಗೆ ಕ್ರಮೇಣ ಹಿನ್ನಡೆ ಬೀಳುತ್ತಿದೆ. ನಗರ ಪ್ರದೇಶಗಳಲ್ಲಿ ಇನ್ನೇನು ಪರಿಸ್ಥಿತಿ ಇದೆಯೋ ಎನ್ನುತ್ತಾರೆ ಹಿರಿಯರು.

ದೀಪಾವಳಿಯಂದು ಬಹುತೇಕ ಮನೆಗಳಲ್ಲಿ ಹಿರಿಯರ ಪೂಜೆ ಕೈಗೊಳ್ಳುವುದು. ಸಾಮಾನ್ಯವಾಗಿ ಅವರ ಐಚ್ಛಿಕ ವಸ್ತುಗಳನ್ನು ಇರಿಸವುದು ವಾಡಿಕೆ. ಆ ಮೂಲಕ ತಲೆಮಾರಿನವರಿಗೆ ಗೌರವ ಸಲ್ಲಿಕೆ. ದೀಪಗಳ ಸಾಲು, ಪಟಾಕಿ ಹೊಡೆಯುವುದು ಸಾಮಾನ್ಯ ಅಂಶಗಳು. ಹಿಂದಿನ ದಿನಗಳಿಗೆ ಹೋಲಿಸದಲ್ಲಿ ಪಟಾಕಿ ಸಿಡಿಸುವವರ ಸಂಖ್ಯೆ ಇಳಿಮುಖಗೊಂಡಿರುವುದು ಸಂತಸದ ವಿಷಯ.

ದೀಪಾವಳಿ ಹಬ್ಬ ಗ್ರಾಮೀಣ ಭಾಗದಲ್ಲಿ ಒಂದೇ ಬಾರಿ ಆಚರಣೆ ಇರುವುದಿಲ್ಲ. ಮುಂದಿನ ಅಮಾವಾಸ್ಯೆಯ ಅಂತರದಲ್ಲಿ ಅನುಕೂಲಕ್ಕೆ ತಕ್ಕಂತೆ ಪ್ರತಿ ವಾರವೂ ಆಚರಿಸಲಾಗುತ್ತದೆ. ಬಹುತೇಕ ಮನೆಗಳಲ್ಲಿ ಮೊದಲ ಹಬ್ಬವನ್ನೇ ಶ್ರದ್ಧೆಯಿಂದ ಆಚರಿಸುವರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT