ಗುರುವಾರ , ಸೆಪ್ಟೆಂಬರ್ 19, 2019
26 °C

‘ಹಸಿರು ದೀಪಾವಳಿ’-ವಿದ್ಯಾರ್ಥಿಗಳಿಂದ ಜಾಗೃತಿ

Published:
Updated:

ಸುಂಟಿಕೊಪ್ಪ: “ಮಾಲಿನ್ಯಕ್ಕೆ ಕಾರಣವಾದ ಪಟಾಕಿಯನ್ನು ತ್ಯಜಿಸಿ ಹಣತೆ ಬೆಳಗಿಸುವ ಮೂಲಕ ಪರಿಸರಸ್ನೇಹಿ ಹಸಿರು ದೀಪಾವಳಿ ಆಚರಿಸುವುದು ಅಗತ್ಯ’ ಎಂದು ರಾಜ್ಯ ವಿಜ್ಞಾನ ಪರಿಷತ್ತು ಜಿಲ್ಲಾ ಸಮಿತಿ ಅಧ್ಯಕ್ಷ ಫಿಲಿಪ್‌ ವಾಸ್ ಮನವಿ ಮಾಡಿದರು.

ಇಲ್ಲಿ ಶುಕ್ರವಾರ ‘ಪರಿಸರಸ್ನೇಹಿ ಹಸಿರು ದೀಪಾವಳಿ’ ಆಚರಣೆ ಕುರಿತ ಪರಿಸರ ಜಾಗೃತಿ ಆಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆಯಲ್ಲಿ ಇಕೋ-ಕ್ಲಬ್ ಮತ್ತು ವಿಜ್ಞಾನ ಸಂಘ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿ, ವಿಜ್ಞಾನ ಪರಿಷತ್ತು ಜಿಲ್ಲಾ ಘಟಕದ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.

ಪಟಾಕಿ ಸಿಡಿತದಿಂದಾಗುವ ಮಾಲಿನ್ಯ ತಡೆಗೆ ಜಾಗೃತಿ ಆಂದೋಲನ ನಡೆಸಲಾಗುತ್ತಿದೆ. ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು. ಇಕೋ-ಕ್ಲಬ್‌ ‘ಪರಿಸರ ಮಿತ್ರ’ ಶಿಕ್ಷಕ, ಪರಿಸರ ಜಾಗೃತಿ ಆಂದೋಲನದ ಜಿಲ್ಲಾ ಸಂಚಾಲಕ ಟಿ.ಜಿ. ಪ್ರೇಮಕುಮಾರ್, ಪರಿಸರಸ್ನೇಹಿ ದೀಪಾವಳಿ ಆಚರಣೆಯ ಮಹತ್ವ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಸಿಡಿಮದ್ದು ಸಿಡಿಸಿದರೆ ಪರಿಸರ ಮತ್ತು ಆರೋಗ್ಯದ ಮೇಲೆ ಪರಿಣಾಮ ಆಗಲಿದೆ. ಅರಣ್ಯ, ವನ್ಯಜೀವಿ, ಜೀವಿ ವೈವಿಧ್ಯ ಸಂರಕ್ಷಣೆಗೆ ಇದು ಅಗತ್ಯ ಎಂದು ಹೇಳಿದರು.

ಶಾಲಾ ಮುಖ್ಯ ಶಿಕ್ಷಕ ಬಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಪಿ.ಸೋಮಚಂದ್ರ, ವಿಜ್ಞಾನ ಸಂಘದ ಸಂಚಾಲಕಿ ಶಿಕ್ಷಕಿ ಎಂ.ಎನ್.ಲತಾ, ಉಪನ್ಯಾಸಕ ಎಸ್.ಎಚ್.ಈಶ, ಶಿಕ್ಷಕಿಯರಾದ ಎಸ್.ಆರ್.ಚಿತ್ರಾ, ಶಾಂತಾ ಹೆಗಡೆ, ಟಿ.ಪವಿತ್ರಾ, ಮಂಜುಳಾ ಎಂ.ಕೆರೂರ್ ಇದ್ದರು.

ಜಾಗೃತಿ ಜಾಥಾ: ಶಿಕ್ಷಕರು, ವಿದ್ಯಾರ್ಥಿಗಳು ಜತೆಗೂಡಿ ಪಟ್ಟಣದಲ್ಲಿ ಪರಿಸರ ಜಾಗೃತಿ ಜಾಥಾ ನಡೆಸಿ, ಪರಿಸರ ರಕ್ಷಣೆ ಕುರಿತ ಕರಪತ್ರಗಳನ್ನು ವಿತರಿಸಿದರು. ‘ಹಣತೆ ಹಚ್ಚೋಣ’, ‘ಪಟಾಕಿ ಬಿಡೋಣ- ಪರಿಸರ ಉಳಿಸೋಣ’, ‘ವಾಯುಮಾಲಿನ್ಯ ತಡೆಗಟ್ಟಿ’ ಇತ್ಯಾದಿ ಘೋಷಣೆಗಳಿದ್ದ ಫಲಕಗಳನ್ನು ಹಿಡಿದು ಗಮನ ಸೆಳೆದರು.

Post Comments (+)