ಮಳೆಗೆ ಹಾಳಾದ ರಸ್ತೆಗಳು: ಸಾರ್ವಜನಿಕರ ಬವಣೆ

ಭಾನುವಾರ, ಮೇ 26, 2019
30 °C

ಮಳೆಗೆ ಹಾಳಾದ ರಸ್ತೆಗಳು: ಸಾರ್ವಜನಿಕರ ಬವಣೆ

Published:
Updated:

ಮುಳಬಾಗಿಲು: ತಾಲ್ಲೂಕಿನಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ಗ್ರಾಮೀಣ ಭಾಗದಲ್ಲಿ ಬಹುಪಾಲು ರಸ್ತೆಗಳು ಹಾಳಾಗಿದ್ದು, ಸಾರ್ವಜನಿಕರು ಬವಣೆ ಪಡುವಂತಾಗಿದೆ.

ಮಳೆಯಿಂದಾಗಿ ರಸ್ತೆಯಲ್ಲಿನ ಜಲ್ಲಿ, ಡಾಂಬರು ಕೊಚ್ಚಿ ಹೋಗಿದ್ದು, ದೊಡ್ಡ ಗುಂಡಿಗಳಾಗಿವೆ. ಇದರಿಂದ ವಾಹನ ಸವಾರರು ನಿಧಾನ ಗತಿಯಲ್ಲಿ ಸಾಗುವಂತಾಗಿದೆ. ರೈತರಿಗೆ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲು ಸಮಸ್ಯೆಯಾಗಿದೆ.

ತಾಲ್ಲೂಕಿನ ವಜ್ರನಾಗೇನಹಳ್ಳಿಯಿಂದ ಚಿಕ್ಕಗುಟ್ಟಹಳ್ಳಿ, ದೊಡ್ಡಗುಟ್ಟಹಳ್ಳಿ ಮತ್ತು ನಂಗಲಿ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಮಣ್ಣಿನ ರಸ್ತೆಯ ಚಿತ್ರಣವೇ ಬದಲಾಗಿದೆ. ರಸ್ತೆಯು ರಾಡಿಯಾಗಿದ್ದು, ಈ ಭಾಗದಲ್ಲಿ ನಡೆದು ಹೋಗುವುದು ಸಹ ಕಷ್ಟವಾಗಿದೆ.

‘ಪ್ರತಿ ಬಾರಿ ಮಳೆ ಬಂದಾಗಲೂ ರಸ್ತೆ ಹಾಳಾಗುತ್ತಿದೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆಗೆ ಹಲವು ಬಾರಿ ದೂರು ಕೊಟ್ಟಿದ್ದರೂ ಸಮಸ್ಯೆ ಬಗೆಹರಿದಿಲ್ಲ. ಅಧಿಕಾರಿಗಳಿಗೆ ಜನರ ಕಷ್ಟದ ಅರಿವಿಲ್ಲ’ ಎಂದು ಚಿಕ್ಕಗುಟ್ಟಹಳ್ಳಿ ಗ್ರಾಮಸ್ಥ ರಘುಪತಿ ದೂರಿದರು.

ಯಳಗೊಂಡ್ಲಹಳ್ಳಿಯಿಂದ ದೇವರಾಯಸಮುದ್ರ ಗ್ರಾಮದ ಮೂಲಕ ರಾಷ್ಟ್ರೀಯ ಹೆದ್ದಾರಿ 75ಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ಹೊನ್ನಶೆಟ್ಟಿ ಗೇಟ್ ಬಳಿ ಸಂಪೂರ್ಣ ಗುಂಡಿ ಬಿದ್ದಿದೆ. ರಸ್ತೆಯ ಒಂದು ಪಾರ್ಶ್ವದಲ್ಲಿ ಡಾಂಬರು ಹಾಗೂ ಜಲ್ಲಿಯು ಮಳೆ ನೀರಿನಲ್ಲಿ ಕೊಚ್ಚಿ ಹೋಗಿದೆ. ಈ ಭಾಗದಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ. ಈ ರಸ್ತೆ ತುಂಬಾ ಕಿರಿದಾಗಿದ್ದು, ಎದುರು ಬದುರು ವಾಹನಗಳು ಬಂದರೆ ಸಮಸ್ಯೆ ಹೇಳತೀರದಾಗಿದೆ.

ಕೀಲುಹೊಳಲಿ ಬಳಿಯ ಮೋರಿ ಕುಸಿದು ಗುಂಡಿಯಾಗಿದೆ. ಈ ಗುಂಡಿಯು ಸ್ಪಷ್ಟವಾಗಿ ಗೋಚರಿಸದ ಕಾರಣ ಸಣ್ಣಪುಟ್ಟ ಅಪಘಾತಗಳು ಸಂಭವಿಸುತ್ತಿವೆ. ಈಗಾಗಲೇ ಹಲವು ಬೈಕ್‌ ಸವಾರರು ಗುಂಡಿಯಲ್ಲಿ ಬಿದ್ದು ಗಾಯಗೊಂಡಿದ್ದಾರೆ. ರಸ್ತೆಗಳನ್ನು ಶೀಘ್ರವೇ ದುರಸ್ತಿ ಮಾಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry