ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಿಕಾ ಮಟ್ಟ ಸುಧಾರಣೆಗೆ ‘ವಿಶ್ವಾಸ ಕಿರಣ’

Last Updated 21 ಅಕ್ಟೋಬರ್ 2017, 7:24 IST
ಅಕ್ಷರ ಗಾತ್ರ

ಕೋಲಾರ: ಕಲಿಕೆಯಲ್ಲಿ ಹಿಂದುಳಿದಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ 9ನೇ ತರಗತಿ ಮತ್ತು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಕಲಿಕಾ ಮಟ್ಟ ಸುಧಾರಿಸಿ ಆತ್ಮವಿಶ್ವಾಸ ಮೂಡಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯು ವಿಶ್ವಾಸ ಕಿರಣ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ದಸರಾ ರಜೆಯಲ್ಲೂ ವಿಶೇಷ ತರಗತಿ ಆರಂಭಿಸಿದೆ.

ಜಿಲ್ಲೆಯು ಹಿಂದಿನ ಶೈಕ್ಷಣಿಕ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 78.51 ಫಲಿತಾಂಶ ಸಾಧನೆಯೊಂದಿಗೆ ರಾಜ್ಯ ಮಟ್ಟದಲ್ಲಿ ಏಳನೇ ಸ್ಥಾನಕ್ಕೆ ಏರಿತ್ತು. ಆದರೆ ವಿಜ್ಞಾನ, ಇಂಗ್ಲಿಷ್‌ ಮತ್ತು ಗಣಿತ ವಿಷಯದಲ್ಲಿ ಸ್ವಲ್ಪ ಮಟ್ಟಿಗೆ ಫಲಿತಾಂಶ ಕುಸಿದಿದ್ದು, ಒಟ್ಟಾರೆ ಫಲಿತಾಂಶದ ಮೇಲೆ ನಕಾರಾತ್ಮಕ ಪರಿಣಾಮ ಬೀರಿತು.

ರಾಜ್ಯದ ಬೇರೆ ಜಿಲ್ಲೆಗಳ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲೂ ಇದೇ ರೀತಿಯ ಸಮಸ್ಯೆಯಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಇಲಾಖೆಯು ದಸರಾ ರಜೆಯಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಪಠ್ಯ ಬೋಧನೆ ಮಾಡಲು ವಿಶೇಷ ತರಬೇತಿ ಕಾರ್ಯಕ್ರಮ ರೂಪಿಸಿದೆ.

ವಿದ್ಯಾರ್ಥಿಗಳಲ್ಲಿ ಅಧ್ಯಯನ ಕೌಶಲ ಉತ್ತಮಪಡಿಸುವುದು, ಸಾಮಾಜಿಕವಾಗಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು, ಪಠ್ಯ ವಿಷಯದಲ್ಲಿನ ಕ್ಷಿಷ್ಟಕರ ಅಂಶಗಳಿಗೆ ಒತ್ತು ನೀಡಿ ವಿಶೇಷ ಬೋಧನೆ ಮೂಲಕ ಕಲಿಕಾ ಗುಣಮಟ್ಟ ಸುಧಾರಿಸುವುದು, ಕಲಿಕೆಗೆ ಪೂರಕವಾದ ಅಭ್ಯಾಸ ಮತ್ತು ಚಟುವಟಿಕೆಗಳನ್ನು ಮಾಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

ಆರು ಶೈಕ್ಷಣಿಕ ವಲಯಗಳಲ್ಲಿ ತಲಾ ಮೂರರಂತೆ ಒಟ್ಟು 18 ವಿಶೇಷ ಬೋಧನಾ ತರಬೇತಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಪ್ರತಿ ಶೈಕ್ಷಣಿಕ ವಲಯಕ್ಕೆ ಸಂಪನ್ಮೂಲ ವ್ಯಕ್ತಿಯೊಬ್ಬರನ್ನು ಸಂಯೋಜಕರಾಗಿ ಹಾಗೂ ಕೇಂದ್ರಗಳಿಗೆ ಅನುಭವಿ ಶಿಕ್ಷಕರನ್ನು ನಿಯೋಜಿಸಲಾಗಿದೆ. ಕೇಂದ್ರಗಳಲ್ಲಿ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಪಠ್ಯ ಬೋಧನೆ ನಡೆಯುತ್ತಿದೆ.

ವಿಶ್ವಾಸ ಕಿರಣ ಕಾರ್ಯಕ್ರಮವು ವಿಶಿಷ್ಟವಾಗಿದ್ದು, ಚಟುವಟಿಕೆಗಳು, ಪ್ರಯೋಗಗಳು ಹಾಗೂ ಪ್ರಾತ್ಯಕ್ಷಿಕೆ ಮೂಲಕ ಪರಿಣಾಮಕಾರಿಯಾಗಿ ಪಠ್ಯ ಬೋಧನೆ ಮಾಡಲಾಗುತ್ತಿದೆ. ಜತೆಗೆ ಬೋಧನೆ ಮತ್ತು ಕಲಿಕೆ ಪ್ರಕ್ರಿಯೆಯಲ್ಲಿ ಶಿಕ್ಷಕರು ಪ್ರತಿ ವಿದ್ಯಾರ್ಥಿಯತ್ತ ಗಮನಹರಿಸುತ್ತಾರೆ. ದಸರಾ ರಜೆಯ ನಂತರವೂ 2018ರ ಜ.21ರವರೆಗೆ ಪ್ರತಿ ಭಾನುವಾರ ಪಠ್ಯ ಬೋಧನೆ ನಡೆಯಲಿದೆ.

ಗೌರವ ಸಂಭಾವನೆ: ವಲಯ ಸಂಯೋಜಕರಿಗೆ ಒಟ್ಟಾರೆ ಯೋಜನೆಗೆ ಸಂಬಳದ ಜತೆಗೆ ತಲಾ ₹ 5 ಸಾವಿರ ಮತ್ತು ಶಿಕ್ಷಕರಿಗೆ ದಿನಕ್ಕೆ ₹ 400 ಗೌರವ ಸಂಭಾವನೆ ನಿಗದಿಪಡಿಸಲಾಗಿದೆ. ಇದಕ್ಕಾಗಿ ಇಲಾಖೆಯು ಜಿಲ್ಲೆಗೆ ವಿಶೇಷ ಅನುದಾನ ಬಿಡುಗಡೆ ಮಾಡಿದೆ.

ವಿಶೇಷ ಬೋಧನಾ ತರಬೇತಿಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದ ಅಂತ್ಯಕ್ಕೆ 2018ರ ಜನವರಿಯಲ್ಲಿ ಸಾಫಲ್ಯ ಪರೀಕ್ಷೆ ನಡೆಸಿ ಕಲಿಕೆಯ ಗುಣಮಟ್ಟ ಸುಧಾರಿಸಿದೆಯೇ ಅಥವಾ ಇಲ್ಲವೇ ಎಂಬುದನ್ನು ವಿಶ್ಲೇಷಿಸಲಾಗುತ್ತದೆ.

ಅಂಕಿ–ಅಂಶ
(ವಿಶೇಷ ಬೋಧನಾ ತರಬೇತಿಗೆ ಆಯ್ಕೆಯಾಗಿರುವ ವಿದ್ಯಾರ್ಥಿಗಳು)
ಶೈಕ್ಷಣಿಕ ವಲಯ ಬಾಲಕರು ಬಾಲಕಿಯರು
ಬಂಗಾರಪೇಟೆ 203 363
ಕೆಜಿಎಫ್‌ 359 390
ಕೋಲಾರ 219 145
ಮಾಲೂರು 201 381
ಮುಳಬಾಗಿಲು 136 122
ಶ್ರೀನಿವಾಸಪುರ 380 468

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT