ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಚ್ಚುವ ಆತಂಕದಲ್ಲಿ ಈಜುಕೊಳ

Last Updated 21 ಅಕ್ಟೋಬರ್ 2017, 8:15 IST
ಅಕ್ಷರ ಗಾತ್ರ

ಕೊಪ್ಪಳ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿರುವ ಈಜುಕೊಳ ಉದ್ಘಾಟನೆಗೊಂಡ ಆರು ತಿಂಗಳ ಒಳಗೇ ಮುಚ್ಚುವ ಆತಂಕದಲ್ಲಿದೆ. ದುಬಾರಿ ಶುಲ್ಕದ ಕಾರಣ ಸದಸ್ಯತ್ವ ನೋಂದಣಿಯಲ್ಲಿಯೂ ಹಿನ್ನಡೆಯಾಗಿದೆ. ತಾತ್ಕಾಲಿಕ ಬಳಕೆ ಶುಲ್ಕವೂ ಕೊಪ್ಪಳದ ಮಟ್ಟಿಗೆ ತೀರಾ ದುಬಾರಿಯಾಗಿರುವುದರಿಂದ ಬಳಕೆದಾರರ ಕೊರತೆ ಉಂಟಾಗಿದೆ. ಸಹಜವಾಗಿ ನಿರ್ವಹಣಾ ವೆಚ್ಚವನ್ನು ಭರಿಸಲಾಗದ ಪರಿಸ್ಥಿತಿ ಈಜುಕೊಳ ಆಡಳಿತ ವ್ಯವಸ್ಥೆಯದ್ದಾಗಿದೆ. 

ಮೇ ಅಂತ್ಯದಲ್ಲಿ ಉದ್ಘಾಟನೆಗೊಂಡ ಈಜುಕೊಳಕ್ಕೆ ಆರಂಭದಲ್ಲಿ 200 ಜನ ನೋಂದಣಿಯಾಗಿದ್ದರು. ಪ್ರತಿ ಸದಸ್ಯರಿಗೆ ₹ 1 ಸಾವಿರ ನೋಂದಣಿ ಶುಲ್ಕ ನಿಗದಿಮಾಡಲಾಗಿತ್ತು. ಅದರಿಂದ ₹ 2 ಲಕ್ಷ ಆದಾಯ ಬಂದಿತ್ತು. ಆದರೆ, ಆರಂಭದಲ್ಲಿ ಕಂಡ ಆಸಕ್ತಿ ಮುಂದುವರಿಯಲೇ ಇಲ್ಲ. ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಈಜುಪ್ರಿಯರ ಹಾಜರಾತಿಯೂ ಕಡಿಮೆಯಾಯಿತು. ಈಗ ಅದು 25ಕ್ಕೆ ಇಳಿದಿದೆ.

ಏರಿದ ವೆಚ್ಚ: ಕೊಳದ ವಿದ್ಯುತ್‌ ಬಿಲ್‌ ತಿಂಗಳಿಗೆ  ₹ 20 ಸಾವಿರ, ಕ್ಲೋರಿನ್‌ ಪುಡಿ ಪ್ರತಿ ಕ್ವಿಂಟಲ್‌ಗೆ ₹ 30 ಸಾವಿರ ಸಿಬ್ಬಂದಿ ವೇತನವೇ ₹ 1 ಲಕ್ಷ ಆಗುತ್ತದೆ. ಆದರೆ, ಆದಾಯ ಮಾತ್ರ ₹ 25 ಸಾವಿರಕ್ಕಿಂತ ಮೇಲೇರಿಲ್ಲ. ಈ ಎಲ್ಲ ಕಾರಣಗಳಿಂದ ನಿರ್ವಹಣಾ ಸಮಸ್ಯೆ ಎದುರಿಸುತ್ತಿದ್ದೇವೆ ಎಂದು ಜಿಲ್ಲಾ ಕ್ರೀಡಾಂಗಣದ ಸಿಬ್ಬಂದಿ ಮಾಹಿತಿ ನೀಡಿದರು.

ಬಳಕೆ ದರವನ್ನೂ ಜನಸಾಮಾನ್ಯರಿಗೆ ನಿಲುಕುವಂತೆ ನಿಗದಿಪಡಿಸಬೇಕಿತ್ತು. ಕೊನೇ ಪಕ್ಷ ಇಲ್ಲಿ ಆಟವಾಡಲು ಬರುವವರಾದರೂ ಒಂದೆರಡು ತಾಸು ಈಜಿ ಹೋಗುತ್ತಿದ್ದರು. ಆದರೆ, ಪ್ರತಿ ತಾಸಿಗೆ ₹ 100 ವ್ಯಯಿಸುವುದು ನಮ್ಮಂಥವರಿಗೆ ಅಸಾಧ್ಯ ಎಂದು ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರಿಕೆಟ್‌ ಆಡಲು ಬರುವ ಯುವಕರು ಹೇಳಿದರು.

ಇನ್ನೂ ಬೇಕು ಸೌಲಭ್ಯ: ಚಪ್ಪಲಿ ಸ್ಟ್ಯಾಂಡ್‌, ಕನ್ನಡಿ, ಲಾಕರ್‌, ಸೂಚನಾ ಫಲಕ, ಕುರ್ಚಿ ಇತ್ಯಾದಿ ಬೇಕು. ಸದ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವಸ್ತುಗಳನ್ನು ಬಳಸಲಾಗುತ್ತಿದೆ. ಚಪ್ಪಲಿ ಸ್ಟ್ಯಾಂಡ್‌, ಕನ್ನಡಿ, ವಸ್ತುಗಳನ್ನು ಇಡಲು ಲಾಕರ್‌, ಸೂಚನಾ ಫಲಕ, ಹ್ಯಾಂಗರ್‌ ಇತ್ಯಾದಿ ಅವಶ್ಯಕತೆಯಿದೆ ಎಂಬುದು ಬಳಕೆದಾರರ ಕೋರಿಕೆ.

ಮುಚ್ಚಿದರೂ ಖರ್ಚು ತಪ್ಪಿದ್ದಲ್ಲ: ಒಂದು ವೇಳೆ ಕೊಳವನ್ನು ಮುಚ್ಚಿದರೂ ನಿರ್ವಹಣೆ ಮಾಡದೇ ಬಿಡುವಂತಿಲ್ಲ. ನೀರು ಪಾಚಿಗಟ್ಟದಂತೆ ನೋಡಿಕೊಳ್ಳಬೇಕು. ಕ್ಲೋರಿನ್‌ ಪುಡಿ ಸಿಂಪಡಿಸಲೇಬೇಕು. ವಿದ್ಯುತ್‌ ಬೇಕೇ ಬೇಕು. ಹಾಗಾಗಿ ಯಾರೂ ಇಲ್ಲದಿದ್ದರೂ ಖರ್ಚು ಅದೇ ಆಗಿರುತ್ತದೆ.

ಇಷ್ಟುದಿನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಹಣವನ್ನು ಬಳಸಲಾಗುತ್ತಿತ್ತು. ಆದರೆ, ಈ ಇಲಾಖೆಯಲ್ಲೂ ಹಣ ಖಾಲಿಯಾಗುವ ಸ್ಥಿತಿ ಇದೆ ಎನ್ನುತ್ತಾರೆ ಕೊಳದ ನಿರ್ವಾಹಕರು.

ಪರಿಹಾರವೇನು?: ವಿದ್ಯುತ್‌ ವೆಚ್ಚವನ್ನು ನಗರಸಭೆ ಭರಿಸಬೇಕು. ಸ್ವಲ್ಪವಾದರೂ ನಿರ್ವಹಣಾ ವೆಚ್ಚವನ್ನು ಜಿಲ್ಲಾ ಪಂಚಾಯಿತಿ ನೀಡಬೇಕು. ಈಜುಪ್ರಿಯರು ಕೊಳದ ಬಳಕೆಗೆ ಮುಂದಾಗಬೇಕು ಎನ್ನುತ್ತಾರೆ ಯುವ ಸಬಲೀಕರಣ ಇಲಾಖೆಯ ಅಧಿಕಾರಿಯೊಬ್ಬರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT