ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಜ್ಞಾನದ ಕತ್ತಲ ಕಳೆಯಲು ಜ್ಞಾನದೀಪ ಬೆಳಗಲಿ’

Last Updated 21 ಅಕ್ಟೋಬರ್ 2017, 9:29 IST
ಅಕ್ಷರ ಗಾತ್ರ

ಉಡುಪಿ: ಅಜ್ಞಾನವೆಂಬ ಕತ್ತಲನ್ನು ಹೊಡೆದೋಡಿಸಲು ಜ್ಞಾನವೆಂಬ ದೀಪ ಅವಶ್ಯಕ. ಜ್ಞಾನಕ್ಕೆ ಸಮನಾವಾದುದು ಯಾವುದೂ ಇಲ್ಲ. ಜ್ಞಾನವಿಲ್ಲದವನನ್ನು ಪಶುವಿಗೆ ಸಮ. ಹಾಗಾಗಿ ನಾವು ಜ್ಞಾನದ ದೀಪವನ್ನು ಹಚ್ಚುವಂತವರಾಗಬೇಕುಎಂದು ಉಡುಪಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಜೆರಾಲ್ಡ್ ಐಸಾಕ್ ಲೋಬೊ ಕರೆ ನೀಡಿದರು.

ಸೌಹಾರ್ದ ಸಮಿತಿ, ಕೆಥೊಲಿಕ್ ಸಭಾ ಉಡುಪಿ ಘಟಕ, ಶೋಕಮಾತಾ ಇಗರ್ಜಿ ಉಡುಪಿ ಹಾಗೂ ಲಯನ್ಸ್ ಕ್ಲಬ್ ಉಡುಪಿ ಜಂಟಿಯಾಗಿ ನಗರದ ಶೋಕಮಾತಾ ಚರ್ಚ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ಸರ್ವ ಧರ್ಮ ದೀಪಾವಳಿ ಆಚರಣೆ ಕಾರ್ಯಕ್ರಮದಲ್ಲಿ ಹಣತೆ ದೀಪಗಳನ್ನು ಬೆಳಗಿಸಿ ಮಾತನಾಡಿದರು.

ಅಜ್ಞಾನದ ಕತ್ತಲನ್ನು ದೂರ ಮಾಡಿ ಜ್ಞಾನದ ಬೆಳಕನ್ನು ಬೀರುವುದೇ ದೀಪಾವಳಿಯ ನಿಜಾರ್ಥ. ಆದ್ದರಿಂದ ಪ್ರತಿ ಮನೆಯಲ್ಲೂ ಪ್ರತಿಯೊಬ್ಬರ ಮನದಲ್ಲೂ ಜ್ಞಾನವೆಂಬ ದೀಪವು ನಿರಂತರವಾಗಿ ಬೆಳಗುತ್ತಿರಲಿ.

ನಮ್ಮ ಸಂಪ್ರದಾಯಗಳಲ್ಲಿ ಮತ್ತು ಕಾವ್ಯದಲ್ಲಿ ಬೆಳಕಿಗೆ ಅತ್ಯಂತ ಹೆಚ್ಚಿನ ಮಹತ್ವವಿದೆ. ನಾವು ಯಾವುದಾದರೂ ಶುಭಸಮಾರಂಭ ಆಚರಿಸುವುದೇ ದೀಪ ಹಚ್ಚುವುದರ ಮೂಲಕ. ಯಾವುದೇ ಭೇದವಿಲ್ಲದೆ, ಕಟ್ಟಲೆಯಿಲ್ಲದೆ ಹರಡುವ ಬೆಳಕು ಸಮಾನತೆಯ ಸಂಕೇತವೂ ಹೌದು. ನಾವು ಹಚ್ಚುವ ದೀಪದ ಬೆಳಕಿನಿಂದ ನಮ್ಮೊಳಗಿನ ಅಜ್ಞಾನ, ಅವಿವೇಕ, ದುಷ್ಟ ಗುಣಗಳು ನಾಶವಾಗಿ, ಸದ್ಗುಣಗಳು ಹೆಚ್ಚಬೇಕು. ಎಲ್ಲೆಡೆ ಶಾಂತಿ, ಸಮೃದ್ಧಿ ನೆಲೆಸುವಂತಾಗಬೇಕು ಎಂದು ಹೇಳಿದರು.

ಹಬ್ಬಗಳ ಹೆಸರೇ ಮನುಷ್ಯನನ್ನು ಶ್ರೇಷ್ಠ ಜೀವನ ರೂಪಿಸಿಕೊಳ್ಳಲು ಪ್ರೇರಣೆ ನೀಡುತ್ತವೆ. ನಮ್ಮ ಹಿರಿಯರು ಪ್ರತಿ ಹಬ್ಬಕ್ಕೂ ಅದಕ್ಕೆ ಸರಿಹೊಂದುವಂತೆ ಪುಣ್ಯಕಥೆಯನ್ನು ಬೆಸೆದು ಹಬ್ಬಕ್ಕೆ ಮೆರಗು ಹಾಕಿದ್ದಾರೆ. ಆದರೆ ಅದು ಕ್ರಮೇಣವಾಗಿ ಆಧ್ಯಾತ್ಮಿಕತೆಯ ಅರ್ಥ ಕಳೆದುಕೊಂಡು ತನ್ನ ಸೊಬಗನ್ನು ಕಳೆದುಕೊಳ್ಳುತ್ತಿದೆ. ಏಕೆಂದರೆ ಮಾನವನು ಹಬ್ಬಗಳ ಅಲೌಕಿಕ ಅರ್ಥವನ್ನು ತೆಗೆದುಕೊಳ್ಳದೇ ಕೇವಲ ಸ್ಥೂಲ ರೂಪದಲ್ಲಿ ಆಚರಿಸುತ್ತಿರುವುದರಿಂದ ಅಲೌಕಿಕ ಸಂತೋಷದ ಅನುಭವವಾಗುತ್ತಿಲ್ಲ ಎಂದರು.

ಸಾಹಿತಿ ಮುರಳೀಧರ ಉಪಾಧ್ಯ ಹಿರಿಯಡಕ ಮಾತನಾಡಿ, ‘ಸಿರಿಯಾ ದೇಶದ ಲಕ್ಷಾಂತರ ನಿರಾಶ್ರಿತರಿಗೆ ಜರ್ಮನಿಯಲ್ಲಿ ಆಶ್ರಯ ಕಲ್ಪಿಸಿಕೊಟ್ಟ ಜರ್ಮನ್ ಅಧ್ಯಕ್ಷೆ ಅಂಜೆಲಾ ಮಾರ್ಕೆಲ್ ಅವರು ಈ ಬಾರಿಯ ದೀಪಾವಳಿ ಹಬ್ಬದ ನಿಜವಾದ ಮಹಿಳೆ. ಅವರ ಕಾರ್ಯವನ್ನು ನಾವು ಗೌರವಿಸಬೇಕು’ ಎಂದರು.

ಧರ್ಮಗುರು ಸುಧೀರ್ ರೊಬಿನ್ಸನ್ ಆನಂದ, ಹೆಚ್ಚುವರಿ ಜಿಲ್ಲಾ ಸರ್ಕಾರಿ ವಕೀಲ ಮಹಮದ್ ಸುಹಾನ್ ಸಾಸ್ತಾನ್ ಉಪಸ್ಥಿತರಿದ್ದರು. ಶೋಕಮಾತಾ ಇಗರ್ಜಿಯ ಪ್ರಧಾನ ಧರ್ಮಗುರು ವಲೇರಿಯನ್ ಮೆಂಡೊನ್ಸಾ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT