ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಲಾನುಭವಿ ಕರೆದೊಯ್ಯಲು ವಿಶೇಷ ವ್ಯವಸ್ಥೆ

Last Updated 21 ಅಕ್ಟೋಬರ್ 2017, 9:36 IST
ಅಕ್ಷರ ಗಾತ್ರ

ವಿಜಯಪುರ: ಧಾರವಾಡದಲ್ಲಿ ಇದೇ 22, 23ರಂದು ನಡೆಯಲಿರುವ ರಾಜ್ಯ ಸರ್ಕಾರದ ವಿವಿಧ ಯೋಜನೆಗಳಡಿಯ ಸೌಲಭ್ಯಗಳ ವಿತರಣಾ ಸಮಾರಂಭಕ್ಕೆ ವಿಜಯಪುರ ಜಿಲ್ಲೆಯ ಫಲಾನುಶ್ರೀಭವಿಗಳನ್ನು ನಿಗದಿತ ಸಮಯಕ್ಕೆ ಸುರಕ್ಷಿತವಾಗಿ ಕರೆದೊಯ್ಯುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಾರ್ಯಾಲಯದಲ್ಲಿ ಗುರುವಾರ, ಬೆಳಗಾವಿ ವಿಭಾಗ ಮಟ್ಟದ ಈ ಸಮಾವೇಶಕ್ಕೆ ಅರ್ಹ ಫಲಾನುಭವಿಗಳ ಆಯ್ಕೆ ಮತ್ತು ಇತರೆ ಕ್ರಮಗಳ ಕುರಿತು ಪರಿಶೀಲನಾ ಸಭೆ ನಡೆಸಿದ ಅವರು, ಸಮಾವೇಶಕ್ಕೆ ಪ್ರತಿ ವಿಧಾನಸಭಾ ಕ್ಷೇತ್ರದಿಂದ ತಲಾ 500 ಅರ್ಹ ಫಲಾನುಭವಿಗಳನ್ನು ಕರೆದೊಯ್ಯಬೇಕು ಎಂದು ಹೇಳಿದರು.

ತಾಲ್ಲೂಕು, ಹೋಬಳಿವಾರು ನಿಗದಿತ ಸಮಯಕ್ಕೆ ಬಸ್‌ಗಳ ಮೂಲಕ ಅರ್ಹ ಫಲಾನುಭವಿಗಳನ್ನು ಧಾರವಾಡಕ್ಕೆ ಕರೆದೊಯ್ಯಬೇಕು. ಪ್ರತಿ ಬಸ್‌ಗೆ ಒಬ್ಬ ನೋಡಲ್ ಅಧಿಕಾರಿಯನ್ನು ಸಹ ನೇಮಕ ಮಾಡಲಾಗಿದ್ದು, ಫಲಾನುಭವಿಗಳ ಸುರಕ್ಷತೆಗಾಗಿ, ತುರ್ತು ಚಿಕಿತ್ಸೆಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ವೈದ್ಯಕೀಯ ನೆರವು ಮತ್ತು ಒಬ್ಬ ವೈದ್ಯರನ್ನು ನಿಯೋಜಿಸುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.

ಫಲಾನುಭವಿಗಳನ್ನು ಕರೆದೊಯ್ಯುವ ಮಾರ್ಗ ಮಧ್ಯೆ ಸೂಕ್ತ ಅಲ್ಪೋಪಹಾರ ವ್ಯವಸ್ಥೆ, ಸುರಕ್ಷತಾ ಕ್ರಮಗಳು, ಬ್ಯಾನರ್ ಮತ್ತು ಗುರುತಿನ ಚೀಟಿ ಕಡ್ಡಾಯ. ಯಾವುದೇ ರೀತಿಯ ಸಮಸ್ಯೆಯಾದಲ್ಲಿ ಆಯಾ ತಾಲ್ಲೂಕು ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂಬ ಎಚ್ಚರಿಕೆ ನೀಡಿದರು.

ಕೃಷಿ, ಸಮಾಜ ಕಲ್ಯಾಣ ಇಲಾಖೆ, ನಗರಾಭಿವೃದ್ಧಿಕೋಶ, ತೋಟಗಾರಿಕೆ, ದೇವರಾಜ ಅರಸು ಅಭಿವೃದ್ಧಿ ನಿಗಮ, ಜಿಲ್ಲಾ ಪಂಚಾಯಿತಿ ಮತ್ತು ಅರಣ್ಯ ಇಲಾಖೆ ವ್ಯಾಪ್ತಿ ಫಲಾನುಭವಿಗಳು, ತಾಲ್ಲೂಕು ಪಂಚಾಯಿತಿ, ಪ್ರವಾಸೋದ್ಯಮ ಇಲಾಖೆ, ಸಾಮಾಜಿಕ ಭದ್ರತಾ ಯೋಜನೆಯಡಿ ಆಯ್ಕೆ ಮಾಡಿರುವ ಫಲಾನುಭವಿಗಳ ಪಟ್ಟಿಯನ್ನು ತಕ್ಷಣ ಒದಗಿಸಬೇಕು.

ಮುಖ್ಯಮಂತ್ರಿ ಸೌಲಭ್ಯ ವಿತರಿಸಲಿರುವ ಅರ್ಹ ಫಲಾನುಭವಿಗಳ ಪಟ್ಟಿಯನ್ನು ಸಹ ಸಿದ್ಧಪಡಿಸಿ ನೀಡುವಂತೆ ಸೂಚಿಸಿದ ಜಿಲ್ಲಾಧಿಕಾರಿ, ಪ್ರತ್ಯೇಕವಾದ ಬಸ್‌ನಲ್ಲಿ ನೋಡಲ್ ಅಧಿಕಾರಿಯ ಉಸ್ತುವಾರಿಯೊಂದಿಗೆ ಫಲಾನುಭವಿಗಳನ್ನು ಧಾರವಾಡಕ್ಕೆ ಕರೆದೊಯ್ಯಬೇಕು. ಅದರಂತೆ ಕಾರ್ಯಕ್ರಮ ಮುಗಿದ ತಕ್ಷಣ ಜಿಲ್ಲೆಯ ಎಲ್ಲ ಫಲಾನುಭವಿಗಳನ್ನು ಸುರಕ್ಷಿತವಾಗಿ ಮರಳಿ ಕರೆ ತರುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಮಾವೇಶದ ಅಂಗವಾಗಿ ರಾಜ್ಯ ಸರ್ಕಾರ ನಾಲ್ಕು ವರ್ಷಗಳಲ್ಲಿ ಸಾಧಿಸಿದ ಪ್ರಗತಿ ಬಗ್ಗೆ ವಸ್ತು ಪ್ರದರ್ಶನ ಮಳಿಗೆ ಸಹ ಸ್ಥಾಪಿಸಲಾಗುತ್ತಿದ್ದು, ಇದಕ್ಕಾಗಿ ನಿಯೋಜಿಸಿದ ಆಯಾ ಇಲಾಖೆಗಳ ಅಧಿಕಾರಿಗಳು ಇದೇ 22, 23 ರಂದು ಉಪಸ್ಥಿತರಿದ್ದು, ಸೂಕ್ತ ನಿರ್ವಹಣೆ ಮಾಡಬೇಕು ಎಂದು ಸೂಚಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎಚ್.ಬಿ.ಬೂದೆಪ್ಪ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT