ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗೆಪಾಟಲಿಗೀಡಾದ ಬಿಎಸ್‌ವೈ; ಪಾಟೀಲ ವ್ಯಂಗ್ಯ

Last Updated 21 ಅಕ್ಟೋಬರ್ 2017, 9:39 IST
ಅಕ್ಷರ ಗಾತ್ರ

ವಿಜಯಪುರ: ‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಡಳಿತಾರೂಢ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ನಡೆಸುವುದನ್ನು ಕೈಬಿಟ್ಟು, ನನ್ನ ವಿರುದ್ಧ ವ್ಯಕ್ತಿಗತ ಹೋರಾಟ ಮಾಡುವ ಮೂಲಕ ನಗೆಪಾಟಲಿಗೆ ಗುರಿಯಾಗಿದ್ದಾರೆ’ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಹೇಳಿದರು.

ಮುಳವಾಡ ಏತ ನೀರಾವರಿ ಮಲಘಾಣ ಪಶ್ಚಿಮ ಕಾಲುವೆಯಿಂದ ತುಂಬಿರುವ ಯಕ್ಕುಂಡಿ ಕೆರೆಗೆ ಶುಕ್ರವಾರ ರೈತರೊಂದಿಗೆ ಬಾಗಿನ ಅರ್ಪಿಸಿ, ಸನ್ಮಾನ ಸ್ವೀಕರಿಸಿ ಮಾತನಾಡಿದ ಸಚಿವರು ‘ಯಡಿಯೂರಪ್ಪ ಹಿರಿಯರು. ಮುಖ್ಯಮಂತ್ರಿಗಳಾಗಿದ್ದವರು. ಅವರ ಮುಂದೆ ನಾನು ಸಣ್ಣವ. ಆದರೆ ನನ್ನ ವಿರುದ್ಧ ಹೋರಾಟ ಮಾಡುವ ಮೂಲಕ ದೊಡ್ಡವನನ್ನಾಗಿ ಮಾಡುತ್ತಿದ್ದಾರೆ. ಅವರಿಗೆ ಅಭಿನಂದನೆಗಳು’ ಎಂದರು.

‘ಯಾವ ಕಾರಣಕ್ಕಾಗಿ ಬಿಜೆಪಿಯವರು ನನ್ನ ವಿರುದ್ಧ ಹೋರಾಟ ಮಾಡುತ್ತಿದ್ದಾರೋ ಗೊತ್ತಿಲ್ಲ. ಇಲಾಖೆಯಲ್ಲಿ ಅಕ್ರಮವಾಗಿದ್ದರೆ ಲೋಕಾಯುಕ್ತ ಇದೆ, ಎ.ಸಿ.ಬಿ ಇದೆ, ನ್ಯಾಯಾ
ಲಯದ ಮೊರೆ ಹೋಗಬಹುದು. ತಪ್ಪು ಮಾಡಿದ್ದರೆ ನನ್ನನ್ನು ಜೈಲಿಗೆ ಹಾಕಿಸಬಹುದು. ಆದರೆ ಯಡಿಯೂರಪ್ಪನವರಂತಹ ಹಿರಿಯರನ್ನು ಇಲ್ಲಿ ಹೋರಾಟಕ್ಕೆ ಇಳಿಸುವ ಮೂಲಕ ಅವರನ್ನು ಸಣ್ಣವರನ್ನಾಗಿ ಮಾಡಲಾಗುತ್ತಿದೆ’ ಎಂದು ವ್ಯಂಗ್ಯವಾಡಿದರು.

ನೀರಾವರಿ ಹೋರಾಟಗಾರ ಡಾ.ಕಂಠೀರವ ಕುಳ್ಳೊಳ್ಳಿ ಮಾತನಾಡಿ ‘ರೈತ ಸಂಘದ ಅಧ್ಯಕ್ಷನಾಗಿ 1985ರಿಂದ ಮುಳವಾಡ ಏತ ನೀರಾವರಿ ಯೋಜನೆಗಾಗಿ ಹೋರಾಟ ಮಾಡುತ್ತಿದ್ದೇವೆ. 1992ರಲ್ಲಿ ವಿಜಯಪುರದ ಗಾಂಧಿ ವೃತ್ತದಲ್ಲಿ ಜಿಲ್ಲೆಯ ಮಠಾಧೀಶರೊಂದಿಗೆ ಆಮರಣ ಉಪವಾಸ ಕೈಗೊಂಡಾಗ ಆಗ ತಾನೇ ಶಾಸಕರಾಗಿದ್ದ ಎಂ.ಬಿ.ಪಾಟೀಲರು ನೀರಾವರಿ ಸಚಿವ ಮಲ್ಹಾರಿಗೌಡ ಪಾಟೀಲರನ್ನು ಕರೆದುಕೊಂಡು ಬಂದು ಸ್ವಲ್ಪ ಅನುದಾನ ನೀಡಿ ಕೆಲಸ ಆರಂಭ ಮಾಡಿಸಿದ್ದರು.

ನಂತರ 25 ವರ್ಷ ಕಾಲ ಇಲ್ಲಿ ಕೆಲಸ ನಡೆಯಲೇ ಇಲ್ಲ. ದಕ್ಷಿಣದವರು ನೀರಾವರಿ ಸಚಿವರಾಗಿ ಆಲಮಟ್ಟಿಯಲ್ಲಿ ಇಟ್ಟಿದ್ದ ಕಬ್ಬಿಣ, ಸಿಮೆಂಟ್ ಸಹಿತ ಆ ಭಾಗದ ಯೋಜನೆಗಳಿಗೆ ಎಲ್ಲವನ್ನೂ ತೆಗೆದುಕೊಂಡು ಹೋದರು. 1962ರಲ್ಲಿ ಲಾಲಬಾಹದ್ದೂರ್ ಶಾಸ್ತ್ರಿಯವರಿಂದ ಶಂಕುಸ್ಥಾಪನೆಗೊಂಡ ಯೋಜನೆ ಎಂ.ಬಿ.ಪಾಟೀಲರಿಂದಾಗಿ ಮುಕ್ತಾಯಗೊಳ್ಳುತ್ತಿದೆ. ಇದನ್ನು ಯಾರು ಮರೆಯಬಾರದು’ ಎಂದರು.

ಟಿ.ಎಸ್.ಕುಲಕರ್ಣಿ, ಮಧ್ವರಾಜ ಕುಲಕರ್ಣಿ, ವಿ.ಎಸ್.ಪಾಟೀಲ, ಧರ್ಮಣ್ಣ ಬೀಳೂರ, ಚನ್ನು ಯರನಾಳ, ಸಿದ್ದಗೊಂಡ ಜುಂಜರವಾಡ, ಪುಂಡಲೀಕ ತಟಗಾರ, ಹನಮಂತಗೌಡ ಬಿರಾದಾರ, ರವಿ ತೊರವಿ, ಬಾಬುಗೌಡ ಕುಮಠೆ, ಸುಭಾಷ ಕೊಪ್ಪದ, ಶಾಂತು ಕೊಪ್ಪದ, ಬಾಬುಗೌಡ ಯಕ್ಕುಂಡಿ, ವಿದ್ಯಾರಾಣಿ ತುಂಗಳ ಉಪಸ್ಥಿತರಿದ್ದರು.
101 ಮುತ್ತೈದೆಯರು ಸಚಿವ ಎಂ.ಬಿ.ಪಾಟೀಲರಿಗೆ ಆರತಿ ಬೆಳಗಿ, ಸ್ವಾಗತಿಸಿದರು. ಸಚಿವರ ಜತೆ ಬಾಗಿನ ಅರ್ಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT