ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯ–ಡಿ.ಕೆ.ಶಿವಕುಮಾರ್ ನಡುವೆ ಒಳ ಒಪ್ಪಂದ ಆರೋಪ: ಸಿಬಿಐ ತನಿಖೆಗೆ ಯಡಿಯೂರಪ್ಪ ಆಗ್ರಹ

₹424 ಕೋಟಿ ಹಗರಣ
Last Updated 21 ಅಕ್ಟೋಬರ್ 2017, 14:06 IST
ಅಕ್ಷರ ಗಾತ್ರ

ಬೆಂಗಳೂರು: ‘ಕರ್ನಾಟಕ ಎಮ್ಟಾಕೋಲ್‌ ಮೈನ್ಸ್ ಲಿಮಿಟೆಡ್‌ (ಕೆಇಸಿಎಂಎಲ್‌) ಕಂಪೆನಿ ಗಣಿ ಸಚಿವಾಲಯಕ್ಕೆ ಪಾವತಿಸಬೇಕಿದ್ದ ₹ 424 ಕೋಟಿ ದಂಡದಲ್ಲಿ ₹ 110 ಕೋಟಿಯನ್ನು ಕರ್ನಾಟಕ ವಿದ್ಯುತ್ ನಿಗಮ ನಿ. (ಕೆಪಿಸಿಎಲ್‌) ಪಾವತಿಸಿರುವುದರ ಹಿಂದೆ ಭಾರಿ ಅವ್ಯವಹಾರ ನಡೆದಿದ್ದು, ಈ ಬಗ್ಗೆ ಸಿಬಿಐ ತನಿಖೆ ನಡೆಸಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಆಗ್ರಹಿಸಿದರು.

ಖಾಸಗಿ ಕಂಪೆನಿ ಪರವಾಗಿ ದಂಡ ಪಾವತಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ರಾಜ್ಯದ ಬೊಕ್ಕಸ ಲೂಟಿ ಮಾಡಿದೆ. ಇದು 424 ಕೋಟಿ ಮೊತ್ತದ ಹಗರಣ. ಇದೊಂದು ಹಗಲು ದರೋಡೆ ಎಂದು ಯಡಿಯೂರಪ್ಪ ಶನಿವಾರ ಮಾಧ್ಯಮ ಗೋಷ್ಠಿಯಲ್ಲಿ ಆರೋಪಿಸಿದರು.

‘ಈ ಹಗರಣದಲ್ಲಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ನಡೆದಿರುವ ಒಳ ಒಪ್ಪಂದ ಏನೆಂಬುದು ಬಹಿರಂಗವಾಗಬೇಕು’ ಎಂದೂ ಒತ್ತಾಯಿಸಿದರು.

‘ಖಾಸಗಿ ಕಂಪೆನಿ ಪಾವತಿ ಮಾಡಬೇಕಾಗಿದ್ದ ಬೃಹತ್‌ ಮೊತ್ತದ ದಂಡವನ್ನು ಕೆಪಿಸಿಎಲ್‌ ಭರ್ತಿ ಮಾಡಿರುವುದು ಸಂಶಯಾಸ್ಪದವಾಗಿದೆ. ಇದರಲ್ಲಿ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಕಮಿಷನ್‌ ಪಡೆದಿದ್ದು ಏಜೆಂಟರಂತೆ ಕೆಲಸ ಮಾಡಿದ್ದಾರೆ’ ಎಂದು ಆರೋಪಿಸಿದರು.

ಪತ್ರ ಬರೆಯುತ್ತೇನೆ: ‘ಈ ಹಗರಣ ಕುರಿತಂತೆ ಕಾಂಗ್ರೆಸ್‌ ಅಧ್ಯಕ್ಷರು, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ, ರಾಜ್ಯ ಘಟಕದ ಅಧ್ಯಕ್ಷ  ಎಚ್.ಡಿ.ಕುಮಾರಸ್ವಾಮಿ, ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನಾನೇ ಪತ್ರ ಬರೆಯುತ್ತೇನೆ. ಹಗರಣದ ಕುರಿತು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡುತ್ತೇನೆ’ ಎಂದು ಯಡಿಯೂರಪ್ಪ ಹೇಳಿದರು.

ಏನಿದು ಪ್ರಕರಣ?:

ಯುಪಿಎ ಸರ್ಕಾರದ ಅವಧಿಯಲ್ಲಿ ಮಂಡಿಸಲಾಗಿದ್ದ ಮಹಾಲೇಖಪಾಲರ ವರದಿಯಲ್ಲಿ (ಸಿಎಜಿ), ‘ದಶಕಕ್ಕೂ ಹೆಚ್ಚು ಕಾಲದಿಂದ ಪರವಾನಗಿ ಹೊಂದಿದ ಖಾಸಗಿ ಗಣಿ ಕಂಪೆನಿಗಳು ಕಲ್ಲಿದ್ದಲು ಹೊರತೆಗೆದು ಗರಿಷ್ಠ ಲಾಭ ಪಡೆದಿವೆ. ಇದರಿಂದ ಬೊಕ್ಕಸಕ್ಕೆ ನಷ್ಟ ಮಾಡಲಾಗಿದೆ’ ಎಂದು ಉಲ್ಲೇಖಿಸಲಾಗಿತ್ತು.

ಇದೇ ವೇಳೆ ಗಣಿ ಕಂಪೆನಿಗಳ ಹಗರಣಕ್ಕೆ ಸಂಬಂಧಿಸಿದಂತೆ 2014ರಲ್ಲಿ ಸುಪ್ರೀಂ ಕೋರ್ಟ್‌ ಎಂ.ಎಲ್‌.ಶರ್ಮಾ ಪ್ರಕರಣದಲ್ಲಿ ಮಹತ್ವದ ತೀರ್ಪು ನೀಡಿ, ಹಲವು ಕಂಪೆನಿಗಳ ಕಲ್ಲಿದ್ದಲು ಹಂಚಿಕೆ ಪರವಾನಗಿ ರದ್ದುಗೊಳಿಸಿತ್ತು. ‘ರದ್ದುಗೊಂಡ ಕಂಪೆನಿಗಳು ಈತನಕ ಹೊರತೆಗೆದಿರುವ ಕಲ್ಲಿದ್ದಲಿಗೆ ಪ್ರತಿ ಮೆಟ್ರಿಕ್‌ ಟನ್‌ಗೆ ₹ 295ರಂತೆ ದಂಡ ಪಾವತಿಸಬೇಕು’ ಎಂದು ನಿರ್ದೇಶಿಸಿತ್ತು.

ಸುಪ್ರೀಂ ಕೋರ್ಟ್‌ ರದ್ದುಗೊಳಿಸಿದ ಕಂಪೆನಿಗಳಲ್ಲಿ ಕೆಇಸಿಎಂಎಲ್‌ ಕೂಡಾ ಒಂದಾಗಿತ್ತು.

ಕಲೆಕ್ಟರ್‌ ಕಚೇರಿಯಿಂದ ಪತ್ರ: ಸುಪ್ರೀಂ ಕೋರ್ಟ್‌ ನಿರ್ದೇಶನದ ಅನುಸಾರ ಗಣಿ ಸಚಿವಾಲಯದ ಅಧೀನಕ್ಕೆ ಒಳಪಟ್ಟ ಮಹಾರಾಷ್ಟ್ರದ ಚಂದ್ರಾಪುರ ಕಲೆಕ್ಟರ್‌ ಕಚೇರಿಯು 2014ರ ಅಕ್ಟೋಬರ್ 13ರಂದು ಕೆಇಸಿಎಂಎಲ್‌ಗೆ ಪತ್ರವೊಂದನ್ನು ಬರೆದಿತ್ತು. ದಂಡದ ಮೊತ್ತ ₹ 432,95,99,332 ಪಾವತಿಸುವಂತೆ ಸೂಚಿಸಿತ್ತು.

ಇದಕ್ಕೆ ಉತ್ತರಿಸಿದ್ದ ಕೆಇಸಿಎಂಎಲ್‌, ‘ಈ ಮೊತ್ತವನ್ನು ಕೆಪಿಸಿಎಲ್‌ ಭರಿಸಬೇಕು’ ಎಂದು ಹೇಳಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಕೆಪಿಸಿಎಲ್‌ 2014ರ ಡಿಸೆಂಬರ್ 30ರಂದು ಕಲೆಕ್ಟರ್‌ ಕಚೇರಿಗೆ ಪತ್ರ ಬರೆದು, ‘ಇದನ್ನು ಕೆಇಸಿಎಂಎಲ್‌ ಭರಿಸಬೇಕು’ ಎಂದು ಹೇಳಿತ್ತು. ಕೇವಲ 24 ಗಂಟೆಗಳ ಒಳಗೆ ತನ್ನ ನಿರ್ಧಾರ ಬದಲಿಸಿಕೊಂಡು, ‘ದಂಡದ ಮೊತ್ತದಲ್ಲಿ ಶೇಕಡ 26ರಷ್ಟು ಹಣವನ್ನು ಅಂದರೆ ₹ 110,43,24, 170.91 ಪೈಸೆಯನ್ನು ನಾನೇ ಭರಿಸುತ್ತೇನೆ’ ಎಂದು ತಿಳಿಸಿತು.

‘ಈ ದಂಡದ ಮೊತ್ತವನ್ನು ಭರಿಸುವಂತೆ ಕೆಪಿಸಿಎಲ್‌ಗೆ ಹೇಳಿದವರಾರು’ ಎಂಬುದು ಯಡಿಯೂರಪ್ಪ ಅವರ ಸದ್ಯದ ಪ್ರಶ್ನೆ.

ಸಾರ್ವಜನಿಕ ಬಳಕೆ: ಕೆಇಸಿಎಂಎಲ್‌ ಕಂಪೆನಿಯು ಹೊರತೆಗೆದ ಕಲ್ಲಿದ್ದಲನ್ನು ಕೆಪಿಸಿಎಲ್‌ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರಕ್ಕೆ ಪೂರೈಸಿತ್ತು.

ಕೆಪಿಸಿಎಲ್‌ಗೆ ಮುಖ್ಯಮಂತ್ರಿ ಅಧ್ಯಕ್ಷರಾಗಿದ್ದು, ಇಂಧನ ಸಚಿವರು ನಿರ್ದೇಶಕರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT