ಅಲೆದಾಟದಲ್ಲಿ ಜೊತೆಗಾತಿ ಕ್ಯಾಮೆರಾ

ಬುಧವಾರ, ಜೂನ್ 19, 2019
29 °C

ಅಲೆದಾಟದಲ್ಲಿ ಜೊತೆಗಾತಿ ಕ್ಯಾಮೆರಾ

Published:
Updated:
ಅಲೆದಾಟದಲ್ಲಿ ಜೊತೆಗಾತಿ ಕ್ಯಾಮೆರಾ

–ಶೋಭಾ ಸಾಲಿ

**

ಹರಿಹರ ತಾಲ್ಲೂಕಿನ ಇಂಗಳಗೊಂದಿ ನನ್ನ ಪೂರ್ವಜರ ಊರು. ಊರ ಎದುರಿಗೆ ಮೈದುಂಬಿ ಹರಿಯುತ್ತಿದ್ದ ತುಂಗಭದ್ರಾ ನದಿಗೆ- ಕುಮದ್ವತಿ ನದಿ ಬಂದು ಸೇರಿ ಸಂಗಮವಾದ ಸ್ಥಳ. ಹೊಳೆಯಾಚೆ ಮುದೇನೂರು. ಅದು ನನ್ನ ತಂದೆ ಶಾಲಾ ಶಿಕ್ಷಕರಾಗಿದ್ದ ಊರು. ತಿಳಿನೀರು ಹರಿಯುತ್ತಿದ್ದ ತುಂಗಭದ್ರಾ ಶಾಂತ, ವಿಶಾಲವಾದದ್ದು. ಕುಮದ್ವತಿ ಚಿಕ್ಕ ನದಿ.

ಆದರೇನು? ಮಳೆಗಾಲದಲ್ಲಿ ರಾಡಿ ತುಂಬಿದ ನೀರಿನ ರಭಸ ಎಷ್ಟಿರುತ್ತಿತ್ತೆಂದರೆ ವಿಶಾಲವಾದ ತುಂಗಭದ್ರೆಯನ್ನು ಹಿಮ್ಮೆಟ್ಟಿಸಿ, ತಿಳಿನೀರನ್ನು ರಾಡಿಗೊಳಿಸುತ್ತಿತ್ತು. ಇಂತಹ ಬೆರಗುಗಳನ್ನೇ ನೋಡುತ್ತ ಸಾಯಂಕಾಲವಾಗುತ್ತಿದ್ದಂತೆ ಹಿಂಡು ಹಿಂಡು ಬೆಳ್ಳಕ್ಕಿಗಳು ಹಾರಿ ಹೋಗುತ್ತಿದ್ದ ದೃಶ್ಯ, ದನಕರುಗಳೆಲ್ಲ ಸಂಜೆಯ ಹೊತ್ತು ಹೊಳೆಗೆ ಬಂದು ನೀರು ಕುಡಿಯುವ, ದನಗಾಹಿಗಳ ಕೊಳಲಿನ ಧ್ವನಿ, ಭತ್ತದ ಗದ್ದೆಗಳಲ್ಲಿ ಮೈಮುರಿಯುವ ಹಸಿರು, ಗಾಳಿಗೆ ತೊನೆಯುವ ಜೋಳ, ಗೋಧಿ, ರಾಗಿ, ಭತ್ತಗಳ ತೆನೆಗಳು, ಅರಿಸಿನ ಚೆಲ್ಲಿದಂತೆ ಹೊಲದ ತುಂಬೆಲ್ಲ ಅರಳಿ ನಿಂತ ಸೂರ್ಯಪಾನದ ಹೂಗಳು, ಹೂವಿಂದ ಹೂವಿಗೆ ಹಾರುವ ಬಣ್ಣಬಣ್ಣದ ಪಾತರಗಿತ್ತಿಗಳು, ಜೇನುನೊಣಗಳು, ಕುರಿಗಾಹಿಗಳು, ಬಲೆ ಬೀಸಿ ಮೀನು ಹಿಡಿಯುವ, ದೋಣಿ ನಡೆಸುವ ಬೆಸ್ತರು, ಹೀಗೆ ಪ್ರಕೃತಿಯ ತಂಪಾದ ಮಡಿಲಲ್ಲಿ ನನ್ನ ಬಾಲ್ಯದ ದಿನಗಳು ಕಳೆದವು.

ಹಳ್ಳಿಗಾಡಿನ ಅಂದಿನ ಮಳೆಗಾಲದ ಸೊಗಸೇ ಅದ್ಭುತ. ಮುಂಗಾರಿನಲ್ಲಿ ಆರ್ಭಟಿಸುತ್ತಿದ್ದ, ಬೆಚ್ಚಿ ಬೀಳಿಸುವ ಕೋಲ್ಮಿಂಚು. ಅದರ ಹಿಂದೆಯೇ ಬೆನ್ನತ್ತಿ ಬರುತ್ತಿದ್ದ ಗುಡುಗು, ಸಿಡಿಲು, ಟಪ ಟಪ ಬೀಳುತ್ತಿದ್ದ ಆಲಿಕಲ್ಲುಗಳ ಮಳೆಯಲ್ಲಿ ಹಿರಿಯರ ಬೈಗುಳನ್ನು ಲೆಕ್ಕಿಸದೇ ಅಂಗಳಕ್ಕೆ ಜಿಗಿದು ತೋಯಿಸಿಕೊಂಡೇವೆಂಬ ಪರಿವೆಯಲ್ಲದೆ ಆಲಿಕಲ್ಲನ್ನು ಉಡಿಯಲ್ಲಿ ಹಾಕಿಕೊಳ್ಳುವುದು, ಮರುಕ್ಷಣದಲ್ಲಿ ಅವು ಕರಗಿ ನೀರಾಗುವುದು, ಹಿತ್ತಲಲ್ಲಿ ಅರಳಿ ನಿಂತ ದುಂಡುಮಲ್ಲಿಗೆಯ ಘಮ, ಚೆಂಡು ಹೂ, ಬಟ್ಟಗಣಗಲ, ಮಧ್ಯಾಹ್ನ ಮಲ್ಲಿಗೆ, ಮುಟ್ಟಲ ಮುರಕಿ, ಹೀಗೆ ಸಂಭ್ರಮ ತುಂಬಿದ ಬಾಲ್ಯವದು.

ಹನುಮಂತ ದೇವರ ಗುಡಿಯ ಪಡಸಾಲೆಯೇ ನಮ್ಮ ಶಾಲೆ. ಗೋಣಿ ಚೀಲದ ತಾಟನ್ನು ಕೊಪ್ಪೆಯಾಗಿ ಮಾಡಿಕೊಂಡು ಅದರಲ್ಲಿ ಪಾಟಿಚೀಲ ಅಡಗಿಸಿ, ಪಾದ ಮುಚ್ಚಿ ಹೋಗುವಷ್ಟು ಕೆಸರನ್ನು ತುಳಿಯುತ್ತ ಶಾಲೆಗೆ ಹೋಗುವ ಪರಿಯೇ ಸಂತೋಷದ್ದು.

ಶಾಲೆ, ತದನಂತರ ಹೈಸ್ಕೂಲುಗಳಲ್ಲಿ ಕುಂಟಲಪಿ, ಹುಡುತುತು, ಗೋಟಗುಣಿ, ಕೊಕ್ಕೊ ಆಟಗಳನ್ನೇ ಆಡುತ್ತಾಡುತ್ತ, ಕೊಕ್ಕೊ ಆಟದಲ್ಲಿ ಸಾಧಿಸಿದ ಪರಿಣತಿ ಇಂದು ನೆನೆಸಿಕೊಂಡರೆ ಅಗಾಧವಾದದ್ದೇ. ಮೊದಲು ತಾಲ್ಲೂಕುಮಟ್ಟದಲ್ಲಿ ಜಯಶಾಲಿಯಾಗಿ, ಜಿಲ್ಲಾ ಮಟ್ಟ ಮತ್ತು ಅಲ್ಲಿಂದ ರಾಜ್ಯಮಟ್ಟದಲ್ಲಿ ಆಡಿದ ಸೊಗಸು ಅವರ್ಣನೀಯ. ಜಿಲ್ಲಾಮಟ್ಟದಲ್ಲಿ ಆಡಲು ಬಂದಾಗಲೇ ನಾನು ಧಾರವಾಡವೆಂಬ ಪಟ್ಟಣ ಕಂಡದ್ದು. ಅಲ್ಲಿ ಅದಾಗಲೇ ನನ್ನಣ್ಣ ಫೋಟೊ ಸ್ಟುಡಿಯೊವೊಂದನ್ನು ಸ್ಥಾಪಿಸಿ, ಫೋಟೋ ತೆಗೆಯುತ್ತಿದ್ದ ಕೌತುಕವನ್ನು ಸ್ಟುಡಿಯೋದಲ್ಲಿ ಕಂಡಿದ್ದು. ಬಹು ದೊಡ್ಡ ಕವಿಗಳೆಂದು ಹೆಸರು ಮಾಡಿದ್ದ, ನಮ್ಮ ಕನ್ನಡ ಪಂಡಿತರು ಹೇಳುತ್ತಿದ್ದ ದ.ರಾ.ಬೇಂದ್ರೆಯವರ ಕೈಯಿಂದ ನಾವು ಪ್ರಶಸ್ತಿ ಪಡೆದದ್ದು ಜೀವಮಾನವೆಲ್ಲ ನೆನಪಿಸುವಂಥ ಪುಳಕದ ಸಂಗತಿ. ನೆನೆದಾಗ ಇನ್ನೂ ಮೈನವಿರೇಳುವ ಹರುಷ.

ಕಾಲೇಜು ವಿದ್ಯಾಭ್ಯಾಸಕ್ಕೆಂದು ಅಣ್ಣನ ಬಳಿ ಬಂದೆ. ಕರ್ನಾಟಕ ಕಾಲೇಜು ಸೇರಿದೆ. ಕೊಕ್ಕೊ ಆಟದಲ್ಲಿದ್ದ ಸಾಧನೆ ಪ್ರತಿಭೆಗೆ ಕಾಲೇಜು ವಿಶ್ವ ವಿದ್ಯಾಲಯಗಳಲ್ಲಿ ಸುವರ್ಣ ಅವಕಾಶಗಳು, ಓದಿನ ಜೊತೆಗೆ ಬಿಡುವಿನ ವೇಳೆಯಲ್ಲಿ ಸ್ಟುಡಿಯೊಕ್ಕೆ ಹೋಗುತ್ತಿದ್ದೆ, ಅದಾಗಲೇ ಅಣ್ಣ ತನ್ನ ಪ್ರತಿಭೆ, ಸೃಜನಶೀಲತೆಯಿಂದ ಅಪಾರ ಹೆಸರು ಗಳಿಸಿದ್ದ. ವರ್ಣ ಸಂಸ್ಕರಣದಲ್ಲಿ ಫೋಟೊಗ್ರಾಫಿಯ ಹೊಸ ಆವಿಷ್ಕಾರಗಳ ತರಬೇತಿಯನ್ನು ಜಪಾನಿನ ನೊರಿತ್ಸು ಕಂಪನಿಯಲ್ಲಿ ಪೂರೈಸಿ ಬಂದಿದ್ದ. ಬಣ್ಣ ಬಣ್ಣದ ಫೋಟೊಪ್ರಿಂಟ್‌ಗಳು ತಂತಾನೆ ಪ್ರಿಂಟ್ ಆಗಿ ಚಕಚಕನೇ ಹೊರಬರುವುದನ್ನು ನೋಡುತ್ತ ನಿಲ್ಲುವುದೇ ತುಂಬಾ ಆಸಕ್ತಿಯ ವಿಷಯವಾಗಿತ್ತು. ನನಗೆ ಅರಿವಿಲ್ಲದೇ ಬೆಳೆಸಿಕೊಂಡ ಆಸಕ್ತಿಯನ್ನು ಗಮನಿಸಿದ ಅಣ್ಣ ನನಗೂ ತರಬೇತಿ ನೀಡತೊಡಗಿದ. ನೈಪುಣ್ಯ ಎನ್ನುವುದು ನನ್ನನ್ನು ಹಿಂಬಾಲಿಸಿದ್ದು ನನ್ನ ಸುದೈವ. ಕ್ರಮೇಣ ಶ್ರದ್ಧೆ, ಕಠಿಣ ಪರಿಶ್ರಮಗಳಿಂದ ತಂತ್ರಜ್ಞಾನದಲ್ಲಿ ಪರಿಣತಿ ಸಾಧಿಸಿದೆ. ಅಭ್ಯಸಿಸಿದಷ್ಟೂ ಕುತೂಹಲವನ್ನು, ಬೆರಗನ್ನು ಮೂಡಿಸುವ ಪ್ರಪಂಚ ಫೋಟೊಗ್ರಫಿ. ಡಿಜಿಟಲ್ ತಂತ್ರಜ್ಞಾನ ಫೋಟೊಗ್ರಫಿಗೆ ಕಾಲಿರಿಸಿದ್ದು ಅದರ ಕ್ಷೇತ್ರದ ಖದರನ್ನೇ ಬದಲಿಸಿತೆನ್ನಬಹುದು.

ಅರಿವು, ಅನುಭವ, ಶ್ರದ್ಧೆ, ಪರಿಶ್ರಮವೆಲ್ಲ ಸೇರಿದ ಪರಿಣಾಮವಾಗಿ ಅಣ್ಣನ ಸಹಕಾರದಿಂದ ಜಪಾನಿನ ಕೋನಿಕಾ ಕಂಪನಿಯವರ ಆಮಂತ್ರಣದ ಮೇರೆಗೆ, ಛಾಯಾಚಿತ್ರ ಕ್ಷೇತ್ರದ ಕಾಶಿ ಎಂದೆನಿಸುವ ಫೋಟೊಕಿನಾ ಪ್ರದರ್ಶನಕ್ಕೆ ನಾನು ತೆರಳುವಂತಾದದ್ದು ನನ್ನ ಜ್ಞಾನಾರ್ಜನೆಗೆ ಒತ್ತು ನೀಡಿತೆನ್ನಬಹುದು. ಜೊತೆ ಜೊತೆಗೆ ಸ್ವಿಟ್ಜರ್‌ಲೆಂಡ್, ಫ್ರಾನ್ಸ್, ಇಟಲಿ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಪ್ರವಾಸಗಳು ನನ್ನ ಭಿತ್ತಿಯನ್ನು ಅರಳಿಸಿದವು.ಜೀವನದಲ್ಲಿ, ಜೊತೆ ಜೊತೆಗೆ ನಡೆಯುವ ವಿದ್ಯಾಮಾನಗಳಲ್ಲಿ ನಡೆದು ಓಹ್! ಬದುಕು ಅದೆಷ್ಟು ಸುಂದರ ಅಂದು ಕೊಳ್ಳುತ್ತಿರುವಾಗಲೇ, ಬದುಕು ಮೂರಾಬಟ್ಟಿಯಾಗಿ, ಹದಗೆಟ್ಟು ಹೋದದ್ದು ವಿಧಿ ವಿಲಾಸವೇ ಸರಿ. ಚೈತನ್ಯಹೀನಳಾಗಿದ್ದ ನನ್ನನ್ನು ಮತ್ತೆ ಕೊನರುವಂತೆ, ಜೀವನವೆಂದರೆ ಇಷ್ಷೇ ಅಲ್ಲ, ಎಲ್ಲವೂ ಮುಗಿದು ಹೋಗುವುದಲ್ಲ, ಮತ್ತೆ ಕಟ್ಟಿಕೊಳ್ಳುವ, ಸುಂದರವಾಗಿ ಅರಳಿಸಿಕೊಳ್ಳುವ ಹೂದೋಟ ಎಂದು ಕೈ ಹಿಡಿದೆತ್ತಿ ಮುನ್ನಡೆಯಲು ಹಚ್ಚಿದವನು ಅಣ್ಣ.

ಅಣ್ಣ ಅದಾಗಲೇ ವನ್ಯಜೀವಿ ಛಾಯಾಚಿತ್ರಣದಲ್ಲಿ ಅಪಾರ ಹೆಸರು ಗಳಿಸಿದ್ದ. ಕ್ಯಾಮೆರಾ, ಅದಕ್ಕೆ ಪೂರಕವಾಗುವ ಲೆನ್ಸ್‌ಗಳ ಸಂಗ್ರಹ ಅವನ ಬಳಿ ಇದ್ದವು. ಅವನ ಹಿಂದೆ ಸುತ್ತುತ್ತ ಗಮನಿಸುತ್ತಿದ್ದವಳು ಅದೊಂದು ದಿನ ಕ್ಯಾಮೆರಾ ಎತ್ತಿಕೊಂಡು ಮನೆಯ ಅಂಗಳಕ್ಕೆ ಹೋಗಿ ಸ್ಥಾಪಿತಳಾದೆ. ಬೆಳಗಿನ ಸಮಯದಲ್ಲಿ ಹಸಿರು ನೊಣಹಿಡುಕಗಳು ಬೇಟೆಯನ್ನರಸುತ್ತ ಬೆಳ್ಳಿ ಬೆಳಕಿನಲ್ಲಿ ಸುತ್ತುತ್ತಿದ್ದ ದೃಶ್ಯ ಅವರ್ಣನೀಯವಾಗಿತ್ತು. ಗರಿಗೆದರಿ ವಯ್ಯಾರದಿಂದ ಹಾರುತ್ತಿದ್ದ ಹಕ್ಕಿಗಳ ಮೈಮಾಟ ತಿಳಿ ಹಸಿರು, ಹಳದಿ ಮಿಶ್ರಿತ ನಡುವೆ ಬಂಗಾರದ ರೇಖೆಯ ಪುಕ್ಕಗಳ ತೆರೆದು ಹಾರುವ ರೀತಿ ಗಂಟೆಗಟ್ಟಲೆ ತನ್ಮಯತೆಯಿಂದ ತೆಗೆದ ಚಿತ್ರಗಳನ್ನು ಕ್ಯಾಮೆರಾದ ಸ್ಕ್ರೀನ್ ಮೇಲೆ ತೆರೆದು, ಅಣ್ಣನ ಮುಂದೆ ಹಿಡಿದೆ. ಅಣ್ಣ ಬೆರಗಾದ. ಅವನು ಊಹಿಸಿಯೇ ಇರಲಿಲ್ಲ. ವಾವ್ ಎಂದು ಕಣ್ಣರಳಿಸಿ ಮೆಚ್ಚುಗೆ ವ್ಯಕ್ತಪಡಿಸಿದ. ಅಣ್ಣನ ಮೆಚ್ಚುಗೆ ಯಾವ ಉತ್ಕೃಷ್ಟ ಪಾರಿತೋಷಕಕ್ಕೂ ಕಡಿಮೆಯದಲ್ಲ ಎನಿಸಿದ್ದೇ ಆವಾಗ.

ಸಾಹಸದ ಮನಸ್ಸಿರುವ ನಮ್ಮದೊಂದು ಗುಂಪಿದೆ, ಚಾರಣ ನಮ್ಮ ಆಸಕ್ತಿಯ ಇನ್ನೊಂದು ವಿಷಯ. ರಜೆ ಸಿಕ್ಕರೆ ಸಾಕು, ಗುಡ್ಡ, ಕೆರೆ, ತೊರೆ, ಕಾಡು, ಮೇಡು, ಹಳ್ಳ, ಕೊಳ್ಳ ಎಂದೆಲ್ಲ ಹೊರಟು ಬಿಡುತ್ತೇವೆ. ಅದೊಂದು ರೋಮಾಂಚಕ ಕಥನವೇ. ಕನಿಷ್ಠ ವರ್ಷಕ್ಕೊಂದಾವರ್ತಿ ಉತ್ತರ ಭಾರತದ, ಹಿಮಾಚ್ಛಾದಿತ, ಕಾಡು, ಕಂದರಗಳಲ್ಲಿ ನಮ್ಮ ಚಾರಣ ಹಮ್ಮಿಕೊಂಡಿರುತ್ತೇವೆ. ದೇಶದ ವಿವಿಧ ಭಾಗಗಳಿಂದ, ವಿವಿಧ ಭಾಷೆ, ಧರ್ಮಗಳ ಸಾಹಸಿ ಪ್ರವೃತ್ತಿಯ ತರುಣ ತರುಣಿಯರು ನಮ್ಮ ಗುಂಪಿನಲ್ಲಿರುತ್ತಾರೆ. ಮಂಜು ಕವಿದ ಕಾಡು ಮೇಡುಗಳ ಪರ್ವತ ಶ್ರೇಣಿಯ ಗಿರಿ ಕಂದರಗಳ ಹತ್ತಿ ಇಳಿಯುವ ಈ ಚಾರಣ ನಿಜಕ್ಕೂ ರೋಮಾಂಚಕ. ಅವರ್ಣನೀಯ. 2015ರಲ್ಲಿ ಜರುಗಿದ, ಬದರೀನಾಥ ಬಳಿ ಹಿಮಪಾತದ ಸೃಷ್ಟಿ ಪ್ರಳಯದ ಅವಾಂತರ ನಡೆದಾಗ ಹಲವೇ ಮೈಲುಗಳ ಅಂತರದಲ್ಲಿ, ಪವಾಡ ಸದೃಶ್ಯ ರೀತಿಯಲ್ಲಿ ಪಾರಾಗಿ, ಒಂದು ವಾರಗಳ ಕಾಲ ಲ್ಯಾಂಡ್ ಸ್ಲೈಡಲ್ಲಿ ಸಿಲುಕಿ, ಪಾರಾಗಿ ಬಂದದ್ದು ಒಂದು ರೋಚಕ ಅನುಭವವೇ. ನಾವು ಮಾಡಿದ ಚಾರಣಗಳು ಮೈ ನವಿರೇಳಿಸುವ ಅನುಭವಗಳನ್ನು ನೀಡಿವೆ. ಸೃಷ್ಟಿಯ ಸೊಬಗು, ಹಿಮಾಚ್ಛಾದಿತ ಪ್ರದೇಶ, ಗುಡ್ಡ, ಪ್ರಪಾತ, ಮುಗಿಲೆತ್ತರಕ್ಕೆ ಬೆಳೆದು ನಿಂತ ಸೂಚಿಪರ್ಣ ವೃಕ್ಷಗಳು, ಮೈ ಕೊರೆಯುವ ಶೀತಲ, ಸ್ಫಟಿಕದಷ್ಟು ಶುಭ್ರ ನದಿ, ಕೊಳ್ಳಗಳು ಮನಸ್ಸಿಗೆ ಮುದ, ಹಿತವನ್ನು ನೀಡುವ ವಿವಿಧ ಬಗೆಯ ಹೂಗಳ ರಾಶಿ, ಪಕ್ಷಿಗಳು ನಯನ ಮನೋಹರ.

ಚಂದ್ರಕಣಿ ಪಾಸ್, ಮನಿಕರಣ್, ಮಾಲನಾ, ಬೆಹಲಿ ಜೊತೆಗೆ ಉತ್ತರಾಂಚಲದ ರೂಪಕುಂಡ ಅಲ್ಲಿಯ ಕಾರ್ತಿಕೇಯ ಪುರದಲ್ಲಿ, ಕಾತ್ಯೂರಿ ಅರಸು ಮನೆತನದವರು ನಿರ್ಮಿಸಿರುವರೆಂಬ ಸುಮಾರು ಕ್ರಿ.ಶ. 9ರಿಂದ 12ನೆಯ ಶತಮಾನದ ಬೈಜನಾಥ (ವಿದ್ಯಾನಾಥ) ದೇವಾಲಯಗಳ ಸಮೂಹ ಅಪೂರ್ವವಾದುದು. ಸಮುದ್ರ ಮಟ್ಟದಿಂದ 7700 ಅಡಿ ಎತ್ತರದಲ್ಲಿರುವ ರೂಪ ಕುಂಡ, ಗೋಸಾಂಗು, ದಾಂಡೇರಾಸ್ ತಾಚ್‌ಗಳದ್ದೇ ರುದ್ರ ರಮಣೀಯ ಪರ್ವತ ಶ್ರೇಣಿ, ಕಣಿವೆಯಲ್ಲಿ ಚಾರಣ ಮಾಡುವುದು ನಿಜಕ್ಕೂ ಗಟ್ಟಿ ಎದೆಯವರಿಗೆ ಮಾತ್ರ ಸಾಧ್ಯವೆನಿಸದೇ ಇರಲಾರದು.

ಎಲ್ಲಿಗೇ ಹೊರಟರೂ ಕ್ಯಾಮೆರಾ ಜೊತೆಗಿಟ್ಟುಕೋ ಎಂದು ಹೇಳುವ ಅಣ್ಣನ ಮಾತಿನಂತೆ ಕ್ಯಾಮೆರಾ ಜೊತೆಗಿರುತ್ತದೆ. ನಯನ ಮನೋಹರ ದೃಶ್ಯಗಳನ್ನು ಸೆರೆ ಹಿಡಿಯಲು ಅದರಿಂದ ಸಾಧ್ಯವಾಗುತ್ತದೆ. ಇದು ತಪ್ಪಿದರೆ ಅಣ್ಣ ನಾನು ಕಾಡು ಸುತ್ತುತ್ತೇವೆ. ಪಕ್ಷಿಗಳ ಮೇಲೆ ನಿಗಾವಹಿಸುತ್ತೇವೆ. ಅದೊಂದು ವರ್ಣರಂಜಿತ ಪ್ರಪಂಚ, ಪಕ್ಷಿಗಳ ವರ್ಣಮಯ ವೈವಿಧ್ಯ, ಗೂಡು ಕಟ್ಟುವ, ಬೇಟೆಯಾಡುವ, ಜೀಕಿ ತೊನೆಯುವ ಅಂದ ಚಂದಗಳ ಸೆರೆ ಹಿಡಿಯುತ್ತ ಮನದಣಿಯೆ ಸುತ್ತುತ್ತೇವೆ.

ನೂರೈವತ್ತಕ್ಕೂ ಹೆಚ್ಚು ಪ್ರಭೇದದ ಹಕ್ಕಿಗಳ ಚಿತ್ರ ಸೆರೆ ಹಿಡಿದಿದ್ದೇವೆ. ಪ್ರತಿ ವರ್ಷ ಆಗಸ್ಟ್‌ 19ರಂದು ಜಾಗತಿಕ ಛಾಯಾಚಿತ್ರ ದಿನಾಚರಣೆ ಅಂಗವಾಗಿ, ನಾನು ಅಣ್ಣನೊಡಗೂಡಿ ‘ಹಕ್ಕಿಗಳ ಇಂಚರ’ ಎಂಬ ಪ್ರದರ್ಶನ ಏರ್ಪಡಿಸುತ್ತೇನೆ. ಪ್ರತಿ ವರ್ಷ ಒಂದೊಂದು ಊರಿನಲ್ಲಿ. ಈಗಾಗಲೇ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಬೆಂಗಳೂರು, ಮೈಸೂರಿನಲ್ಲಿ ಏರ್ಪಡಿಸಿದ್ದೇವೆ. ಅನೇಕ ಚಿತ್ರಗಳಿಗೆ ಪ್ರಶಸ್ತಿಗಳು ಸಂದಿವೆ. ಆದರೆ ಈ ಎಲ್ಲ ಪ್ರಶಸ್ತಿಗಳಿಗಿಂತ ಪ್ರದರ್ಶನ ನೋಡಲು ಬಂದ ಮಕ್ಕಳು, ಜನ, ಸಂತಸದ ಜೊತೆಗೆ ಮೆಚ್ಚುಗೆ ವ್ಯಕ್ತಪಡಿಸುವುದು ನನ್ನಲ್ಲಿ ಸಾರ್ಥಕ ಭಾವನೆಯನ್ನು ಮೂಡಿಸುತ್ತದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry