ಶುಕ್ರವಾರ, ಸೆಪ್ಟೆಂಬರ್ 20, 2019
29 °C
ತೀರ್ಪುಗಾರರ ಮೆಚ್ಚುಗೆ ಪಡೆದ ಕವನ

ಇಲೆಕ್ಟ್ರಿಕ್ ಬೇಲಿ ಮತ್ತು ಪಾರಿವಾಳ

Published:
Updated:
ಇಲೆಕ್ಟ್ರಿಕ್ ಬೇಲಿ ಮತ್ತು ಪಾರಿವಾಳ

ಬಿಡುವಿನ ಒಂದೊಂದು ಇಳಿಸಂಜೆ

ನಾನು ಮತ್ತು ಅವಳು

ಚದುರಂಗದಾಟವಾಡುತ್ತೇವೆ.

ಆ ಒಂದು ಗಳಿಗೆ

ನಮ್ಮ ನಿಜ ಪೋಷಾಕುಗಳ ಕಳಚಿ

ನಾನು ರಾಜ ಅವಳು ರಾಣಿಯಾಗಿ

ಹುಸಿ ಖುಷಿಯ ಆರೋಪಿಸಿಕೊಂಡು

ಬೀಗುತ್ತೇವೆ.

 

ಆಟ ಸುಳ್ಳೆಂದು ಗೊತ್ತಿದ್ದರೂ

ಯಾರೊಬ್ಬರೂ ಸೋಲಲು ಸಿದ್ಧರಿಲ್ಲ

ಮೊದಲು ಯಾರಿಗೂ ಕಾಣದಂಥ ಕ್ಷೀಣ ಗೆರೆ

ಎಳೆಯುವೆವು

ನಂತರ ಅವೇ ಗೆರೆಗಳು ಢಾಳವಾಗಿ ಗಡಿಗಳಾಗುವವು

ಗಡಿಗಳುದ್ದಕ್ಕೂ ಇಬ್ಬರ ಮುಖ ಕಾಣಲಾರದಂಥ ಗೋಡೆಗಳೇಳುವವು

ಮೇಲೆ

ಹಕ್ಕಿ ಪುಕ್ಕ ತಗಲಿದರೂ ಸುಟ್ಟು ಕರಕಲಾಗುವ

ಇಲೆಕ್ಟ್ರಿಕ್ ಬೇಲಿಗಳು

ಅಣುತಲೆ ಹೊತ್ತ ಬಾಂಬುಗಳು ಎರಡೂ ಬದಿ

ಪದ ಪಾದುಕೆ ಪಲ್ಲಕ್ಕಿ ಪದಾತಿದಳ

ಹೂ ದಳ ವೂ ದಳವೇ ಅನ್ನಿ

 

ಅರೆರೆ!! ಇದೇನಿದು ಆಟವೋ ಬೇಟವೋ

ಇಬ್ಬರ ನಡುವೆ ಇದೆಂತಹ ಕದನ ಕುತೂಹಲ

ಪ್ರಭುಗಳು ಬಹಳ ಫೇಮಸ್ಸು

ಒಂದು ಹನಿಯೂ ನೆತ್ತರ ಬಿಂದು ಕಾಣದಂತ

ಹತ್ಯಾರಗಳ ಇಲ್ಲಿ ನಿತ್ಯ ಮಸೆವರು

ಯುದ್ಧ ಮತ್ತು ಪ್ರೇಮದಲ್ಲಿ ಎರಡೂ ಸಹ್ಯವೆಂದು

ಯಾರು ಹೇಳಿದರೊ

 

ಕ್ರೀಡೆಯೊಂದಿಲ್ಲಿ ಕದನವಾಗಿ

ಕದನವೊಂದು ಕ್ರೀಡೆಯಾಗುವ ನಾಡಿನಲ್ಲಿ

ಎಷ್ಟೊಂದು ಸಾವು ನೋವುಗಳು

ಹೆಣಗಳಿಗೆ

ಇಬ್ಬರೂ ಹೆಗಲಾದರೂ ನಮ್ಮ ಹಣೆಯ ಮೇಲೆ ಪಾಪದ ಗೆರೆಗಳಿಲ್ಲ. ಒಂಚೂರು ಪ್ರಾಯಶ್ಚಿತ್ತವಿಲ್ಲ.

ಯೋಧನ ಮಡದಿಗೆ

ನಿತ್ಯ ಮುತ್ತೈದೆ ಪಟ್ಟ ಕೊಟ್ಟು ಇನ್ನೊಮ್ಮೆ ಶಿಲುಬೆಗೇರಿಸುವೆವು.

 

ಸಂಜೆಯಾದೊಡನೆ ಶಸ್ತ್ರಾಸ್ತ್ರ ಎತ್ತಬಾರದೆನ್ನುವ

ನಿಯಮ ಇಬ್ಬರಿಗೂ ಇಲ್ಲ

ಚದುರಂಗದ ಕಾಯಿಗಳನ್ನು ಮತ್ತೆ ಡಬ್ಬಕೆ ಸುರಿದು

ಕತ್ತಲಾದೊಡನೆ ಎಲ್ಲ ಮರೆತು

ಕರ್ಲಾನ ಕುಷನಿನ ಬೆಡ್‌ರೂಮಿನತ್ತ ನಡೆಯುವೆವು

ಅಲ್ಲಿ ಇನ್ನೊಂದು ಆಟದ ಮೈದಾನ

ಹೂ ದಳ

ದೊಂದಿಗೆ ಸಿಂಗಾರಗೊಂಡಿದೆ.

ಹೂಂ! ಇನ್ನೊಮ್ಮೆ ಹೇಳುವೆ

ನಮ್ಮಿಬ್ಬರ ನಡುವೆ ನಡುವೆ ಅಂತದ್ದೇನೂ ನಡೆದೇಯಿಲ್ಲ

ಇದೆಲ್ಲಾ ಬರಿ

ಮಾಧ್ಯಮಗಳ ಸೃಷ್ಟಿ

 

ಪಾರಿವಾಳವೊಂದು ಈಗ ತಾನೆ ಮೊಟ್ಟೆ ಹಾಕಿ ದಾರಿ ಮರೆತಂತಿದೆ

ತನ್ನ ಗೂಡಿರುವುದು ಇಲೆಕ್ಟ್ರಿಕ್ ಬೇಲಿಯ

ಆ ಬದಿಯೊ ಈ ಬದಿಯೊ?

**

–ಡಾ.ಲಕ್ಷ್ಮಣ ವಿ ಎ

Post Comments (+)