ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಲ್ಲಬೇಡಿ ಕೆರೆಗಳನ್ನು...

Last Updated 21 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಕೊಲ್ಲಬೇಡಿ ಕೆರೆಗಳನ್ನ ಕೊಲ್ಲಬೇಡಿರಿ!
ಇಲ್ಲದಂತೆ ಮಾಡುವುದನು ಸುಳ್ಳು ಮಾಡಿರಿ!!

ಸಾವಿರಾರು ವರುಷದಿಂದ
ಜೀವಜಲವ ತುಂಬಿಕೊಂಡು
ಜೀವಜಂತುಗಳಿಗೆ ನೆಲೆಯ ನೀಡುತಿರುವುವು;
ಮುಗಿಲಮಾರಿ ಮುನಿಸಿನಿಂದ
ಹಗಲು ಇರುಳು ಬಿರುಕುಗೊಂಡು
ದುಗುಡದಿಂದ ಮಳೆಗೆ ಎದುರುನೋಡುತಿರುವುವು!

ನಾಡು ಕಟ್ಟಲೆಂದು ನಾವು
ಕಾಡನೆಲ್ಲ ಬಿಡದೆ ಕಡಿದು
ನೋಡುನೋಡುತಿರಲು ಮಳೆಯು ಇಲ್ಲವಾಯಿತು;
ಮಳೆಯು ಇರದೆ ಕೆರೆಯು ಬರಿದು
ಬೆಳೆಯು ಬರದೆ ಇಳೆಯು ಇರದು
ಮಳೆಯು ಬೇಕು ಎಂಬ ಕೂಗು ನಿಲ್ಲದಾಯಿತು!

ಹೊಲದೊಳಿರುವ ಅನ್ನದಾತ
ಛಲವ ಬಿಡದೆ ದುಡಿಯುವಾತ
ಮಳೆಯು ಇಲ್ಲವಾಗುತಿರಲು ಮರುಗುತಿರುವನು ;
ನೆಲದ ದಾಹ ತೀರದಿರಲು
ಹೊಲದ ಮೋಹ ಸೆಳೆಯುತಿರಲು
ನೆಲೆಯು ಕಾಣದಾಯಿತೆಂದು ಕೊರಗುತಿರುವನು!

ಜಲದೊಳಿರುವ ಜೀವಿಗಳಗೆ
ನೆಲೆಯು ಇಲ್ಲದಾಗಿ ಕೊನೆಗೆ
ನಲಿವು ಇರದೆ ನರಳಿ ನರಳಿ ಅಳಿದುಹೋದವು;
ಇಳೆಗೆ ಮಳೆಯು ಇಳಿದು ಬರಲು
ಹಳೆಯ ಸೊಬಗು ಮರಳಿ ಬಂದು
ಜಲವು ತುಂಬಿ ಕೆರೆಗಳೆಲ್ಲ ಜೀವ ಪಡೆವುವು!

ಕನ್ನಡಾಂಬೆ ಮಡಿಲಿನಲ್ಲಿ
ಚಿನ್ನ ಬೆಳೆವ ನಾಡಿನಲ್ಲಿ
ಹೊನ್ನಗುಣದ ಕನ್ನಡಿಗರ ಕರೆಯ ಕೇಳಿರಿ-
ಕೊಲ್ಲಬೇಡಿ ಕೆರೆಗಳನ್ನ ಕೊಲ್ಲಬೇಡಿರಿ
ಇಲ್ಲದಂತೆ ಮಾಡುವುದನು ಸುಳ್ಳು ಮಾಡಿರಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT