ಕರಾವಳಿಯ ಐಡೆಂಟಿಟಿ ‘ದೊಡ್ನ’

ಮಂಗಳವಾರ, ಜೂನ್ 18, 2019
24 °C

ಕರಾವಳಿಯ ಐಡೆಂಟಿಟಿ ‘ದೊಡ್ನ’

Published:
Updated:
ಕರಾವಳಿಯ ಐಡೆಂಟಿಟಿ ‘ದೊಡ್ನ’

–ಶ್ರೀರಂಜನಿ

**

ಮುಟ್ಟಿದರೆ ಎಲ್ಲಿ ನೋವಾಗುವುದೋ ಎನ್ನುವಷ್ಟು ನಾಜೂಕಿನ ದೊಡ್ನ ಎಂಬ ತಿಂಡಿಯನ್ನು ಮೊದಲ ಬಾರಿಗೆ ತಿಂದಿದ್ದು ಖಂಡಿತವಾಗಿಯೂ ನಮ್ಮನೆಯಲ್ಲಲ್ಲ. ಏಕೆಂದರೆ ಪಕ್ಕಾ ತುಳುನಾಡಿನ ‘ಜೇವು’(ಹೆಣ್ಣು) ಆದ ನನ್ನಮ್ಮನಿಗೆ ಇದು ತಿಳಿದಿರಲು ಸಾಧ್ಯವೂ ಇರಲಿಲ್ಲ. ಉಡುಪಿ ಎಂದರೆ ಕುಂದಾಪುರ ಎಂದು ಜೋಡಿ ಪದಗಳಂತೆ ನಾಲಗೆ ತನ್ನಿಂತಾನೆ ಉಲಿದರೂ, ಪರಸ್ಪರ ಕೈಚಾಚಿನ ಅಂತರದಲ್ಲಿದ್ದರೂ - ತುಳುನಾಡಿಗರಿಗೆ ಇದು ತೀರಾ ಅಪರಿಚಿತ. ಆಚೆಮನೆಗೆ ಇದನ್ನು ತಯಾರಿಸಲೆಂದೇ ಇದರಲ್ಲಿ ಪರಿಣಿತರಾದ ಮಹಿಳೆಯೊಬ್ಬರು ಯಾವಾಗಲೂ ಬರುತ್ತಿದ್ದರು. ಹೀಗಾಗಿ ಅಲ್ಲೇ ಮೊದಲ ಬಾರಿಗೆ ತಿಂದಿರುವ ಸಾಧ್ಯತೆ ಹೆಚ್ಚು. ಇವರು ಕೊಟ್ಟೆ ಕಡುಬಿಗೆ ಬೇಕಾದ ಓಲಿ (ಸ್ಥಳೀಯವಾಗಿ ಮುಂಡುಕನ ಓಲಿ) ಎಂಬ ಕೇದಗೆ ಜಾತಿಯ ಮುಳ್ಳಿನ ಗಿಡವನ್ನು ಯಾವತ್ತೂ ತರುತ್ತಿದ್ದರು. ಹಾಗಾಗಿ ಅವರಿಗೆ ‘ಓಲಿ ಹೆಂಗಸು’ ಎಂಬ ಹೆಸರು ಪರ‍್ಯಾಯವಾಗಿತ್ತು. ಅವರೂ ಅಷ್ಟೇ, ತಮ್ಮ ಹೆಸರನ್ನು ತಾವೇ ಮರೆಯುವಷ್ಟು ಈ ಹೆಸರನ್ನು ಆಪ್ತವಾಗಿ ಸ್ವೀಕರಿಸಿಬಿಟ್ಟಿದ್ದರು.

ಹಿಂದಿನ ದಿನ ಅಕ್ಕಿ ನೆನೆಸಿಟ್ಟು, ಅದೇ ದಿನ ರುಬ್ಬಿ, ಹುದುಗಲು ರಾತ್ರಿ ಇಡೀ ಇಟ್ಟರೆ ಮಾರನೆಯ ದಿನ ಮಾಡಲು ತಯಾರಿರುತ್ತದೆ ಹಿಟ್ಟು. ಸ್ವಲ್ಪ ತಳ ತಗ್ಗಿರುವ ಪ್ಲೇಟ್‌ನಲ್ಲಿ ನೀರ್‌ ದೋಸೆಗಿಂತ ಸ್ವಲ್ಪ ದಪ್ಪನಾದ ಹಿಟ್ಟನ್ನು ಹಾಕಿ ವೃತ್ತಾಕಾರವಾಗಿ ಸುತ್ತಲೂ ಹರಡಬೇಕು. ಇದನ್ನು ನೀರು ಕುದಿಯಲು ಇಟ್ಟ ದೊಡ್ಡ ಬೋಗುಣಿಯ ಮೇಲೆ ಇಟ್ಟು ಇನ್ನೊಂದು ಪಾತ್ರೆಯನ್ನು ಬೋರಲು ಹಾಕಬೇಕು. ಇದು ಬೇಯುವುದರೊಳಗೆ ಇನ್ನೊಂದು ಪ್ಲೇಟ್‌ಗೆ ಹಿಟ್ಟು ಹಾಗೇ ಹೊಯ್ದು ಸಿದ್ದವಾಗಿಟ್ಟುಕೊಂಡಿರಬೇಕು. ಕೆಲವೇ ಸೆಕೆಂಡಿನೊಳಗೆ ಬೆಂದ ಹಿಟ್ಟಿನ ಪ್ಲೇಟನ್ನು ತೆಗೆದು ರೆಡಿಯಾಗಿದ್ದ ಇನ್ನೊಂದು ಪ್ಲೇಟನ್ನು ಒಳಗಿಡಬೇಕು. ಈಗ ಬೆಂದ ದೊಡ್ನದ ಪ್ಲೇಟಿನ ಸುತ್ತ ಚೂಪಾದ ಯಾವುದಾದರೂ ವಸ್ತುವಿನಿಂದ ಎತ್ತಿ ತೆಗೆಯಬೇಕು.

ತೆಂಗಿನೆಣ್ಣೆ ಮತ್ತು ಉಪ್ಪಿನಕಾಯಿಯೊಂದಿಗೆ ನೆಂಜಿಕೊಳ್ಳುತ್ತ ತಿನ್ನುತ್ತಿದ್ದರೆ ಲೆಕ್ಕಾಚಾರವೆಲ್ಲಾ ಬುಡಮೇಲು. (ಲೆಕ್ಕವಿಲ್ಲದಷ್ಟು ದೊಡ್ನ ಹೊಟ್ಟೆಗೆ ಸೇರುವುದರಿಂದ ನಮ್ಮ ಕಡೆ ಮಾತೊಂದಿದೆ ‘ದೊಡ್ನ ತಿಂದರೆ ಜಡ್ನ’. ಜಡ್ನ ಎಂದರೆ ಜಡ, ತಿಂದನಂತರ ಆಲಸ್ಯ ಕಾಡುವುದು ಎಂದು ಇದರ ಅರ್ಥ.) ಬಿಸಿಬಿಸಿ ತಿನ್ನುವುದಕ್ಕಿಂತ ತಣಿದ ಅಥವಾ ಮಾರನೆಯ ದಿನದ ‘ತಂಗಳು’ ಇನ್ನೂ ರುಚಿ. ಬೇಯುವ ಸಮಯ, ಹಿಟ್ಟಿಗೆ ನೀರು ಹಾಕಿದ ಪ್ರಮಾಣ, ಹರಡುವ ರೀತಿಯ ಜೊತೆ ಅಪಾರ ಶ್ರಮ ಮತ್ತು ತಾಳ್ಮೆ ಮುಖ್ಯವಾಗಿರುವುದರಿಂದ ಎಲ್ಲರಿಗೂ ಈ ಕಲೆ ಸುಲಭವಾಗಿ ದಕ್ಕುವುದಿಲ್ಲ. ನಾನೊಮ್ಮೆ ಬೆಂಗಳೂರಿನಲ್ಲಿ ಈ ಕೆಲಸಕ್ಕೆ ಕೈ ಹಾಕಿ ದೊಡ್ನ ಸರಿಯಾಗಿ ಏಳದೆ, ಈ ರಗಳೆಯೇ ಬೇಡವೆಂದು ವೇಷ ಬದಲಿಸಿ ನೀರ್‌ದೋಸೆ ಮಾಡಿ ಮುಕ್ತಿ ಪಡೆದದ್ದು ಚೆನ್ನಾಗಿ ನೆನಪಿದೆ.

ಇದು ಆವಿಯಲ್ಲೇ ಬೇಯುವುದರಿಂದ ಕ್ಯಾಲೊರಿಗಳ ತಲೆಬಿಸಿ ಇಲ್ಲ. ದೋಸೆ, ಇಡ್ಲಿಗಳ ಲೆಕ್ಕಾಚಾರ 4, 5 ಎಂದಾದರೆ ಇದರದ್ದು ಅಟ್ಟೆ. ಅಟ್ಟೆ ಎಂದರೆ 10, 15 ದೊಡ್ನಗಳ ಒಂದು ಏರು. (ನಮ್ಮಲ್ಲಿ ಮಲ್ಲಿಗೆ ಹೂವಿನ 4 ಚೆಂಡುಗಳ ಅಳತೆಯೂ ಅಟ್ಟೆ. ಒಂದು ಚೆಂಡು ಎಂದರೆ ಸಾವಿರ ಮೊಗ್ಗಿನ ದಂಡೆ.) ಇಂಥ 4, 5 ಅಟ್ಟೆಗಳನ್ನು ಯಾರಾದರೂ ಆರಾಮವಾಗಿ ಹೊಟ್ಟೆಗೆ ಇಳಿಸಬಹುದು. ಕರಾವಳಿಯ ಐಡೆಂಟಿಟಿಗಳಾದ ಪತ್ರೊಡೆ, ಕೊಟ್ಟೆಕಡುಬು, ಮಂಗಳೂರು ಬನ್ಸ್, ಗೋಳಿಬಜೆ ಮುಂತಾದವುಗಳು ನಗರದ ಹೋಟೆಲ್‌ಗಳ ಮೆನುವಿನಲ್ಲಿ ಸ್ಥಾನ ಪಡೆದು ‘ಸೆಲೆಬ್ರಿಟಿ’ಗಳಂತೆ ಮಿಂಚುತ್ತಿದ್ದರೆ ಇದು ಮಾತ್ರ ಕರಾವಳಿಯಲ್ಲೇ ಎಲೆಮರೆಯ ಕಾಯಿಯಂತೆ ಇದೆ.

ಕೆಲವೇ ಜನರ ಕೈಯಲ್ಲಿ ಜೀವಂತವಾಗಿದ್ದು, ಇದನ್ನು ಸಿದ್ಧಪಡಿಸುವುದನ್ನು ಕಲಿಯುವವರ ಸಂಖ್ಯೆಯೂ ಕ್ಷೀಣಿಸುತ್ತಿದೆ. ಇದಕ್ಕೆ ಅಗತ್ಯವಿರುವ ‘ಪಳಗುವಿಕೆ’ ಇದ್ದಕ್ಕಿದ್ದಂತೆ ಒಲಿಯುವ ಸಂಗತಿ ಆಗಿಲ್ಲದೇ ಇರುವುದರಿಂದ ಯುವಜನರು ಇದರ ಉಸಾಬರಿಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ನನ್ನ ಭಾಗ್ಯ! ನನ್ನ ಅತ್ತಿಗೆ ಲಕ್ಷ್ಮಿ ತವರಿನಿಂದ ಬರುವಾಗಲೇ ಈ ವಿದ್ಯೆಯನ್ನು ಬಳುವಳಿಯಾಗಿ ತಂದಿದ್ದಾಳೆ. ‘ನಾಳೆ ದೊಡ್ನ ಮಾಡುವೆ. ನಿಮ್ಮೆಲ್ಲಾ ಪ್ರೋಗ್ರಾಂ ಕ್ಯಾನ್ಸಲ್ ಮಾಡಿಕೊಳ್ಳಿ’ ಎಂದು ಎರಡು ದಿನದ ಮುಂಚೆಯೇ ಫರ್ಮಾನು ಹೊರಡಿಸುತ್ತಾಳೆ. ಬೆಳಿಗ್ಗೆ 5 ಗಂಟೆಗೆಲ್ಲಾ ಒಲೆಯ ಮುಂದೆ ಪ್ರತಿಷ್ಠಾಪಿಸಿಕೊಂಡು, ನಾವೆಲ್ಲಾ ಅಟ್ಟೆ, ಎಣ್ಣೆ, ಉಪ್ಪಿನಕಾಯಿಗಳೆಂದು ಮುಳುಗೇಳುತ್ತಿರುವುದನ್ನು ಕಂಡೇ, ತನ್ನ ಶ್ರಮವನ್ನು ಮರೆಯುತ್ತಾಳೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry