ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್‌ ವಿಧಾನಸಭೆ ಚುನಾವಣೆ ಕಸರತ್ತು: ಬಿಜೆಪಿ ವಿರೋಧಿಗಳ ಮೇಲೆ ಕಣ್ಣಿಟ್ಟ ಕಾಂಗ್ರೆಸ್‌

Last Updated 21 ಅಕ್ಟೋಬರ್ 2017, 15:14 IST
ಅಕ್ಷರ ಗಾತ್ರ

ಅಹಮದಾಬಾದ್‌: ಗುಜರಾತ್ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳಿರುವಾಗಲೇ ಕಾಂಗ್ರೆಸ್ ಭರ್ಜರಿ ಕಾರ್ಯತಂತ್ರ ರೂಪಿಸಿದೆ. ಸದ್ಯ ಆಡಳಿತದಲ್ಲಿರುವ ಬಿಜೆಪಿ ಸರ್ಕಾರದ ವಿರುದ್ಧ ಹಲವು ವಿಚಾರಗಳ ಸಂಬಂಧ ಹೋರಾಟ ನಡೆಸುತ್ತಿರುವವರ ಬೆಂಬಲಗಳಿಸಿಕೊಳ್ಳಲು ಈ ಪಕ್ಷ ಮುಂದಾಗಿದೆ.

ರಾಜ್ಯದಲ್ಲಿ ಭ್ರಷ್ಟಾಚಾರ ಮತ್ತು ಕುಡಿತದ ಸಮಸ್ಯೆ ಪರಿಹಾರಕ್ಕಾಗಿ ಕ್ಷತ್ರಿಯ ಠಾಕೂರ್ ಸೇನಾ ಸಂಚಾಲಕರಾದ ಅಲ್ಪೇಶ್ ಠಾಕೂರ್‌ ಹೋರಾಟ ನಡೆಸುತ್ತಿದ್ದಾರೆ. ಪಟೇಲ್‌ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವಂತೆ ಹಾರ್ದಿಕ್‌ ಪಟೇಲ್‌ ಬೇಡಿಕೆ ಇಟ್ಟಿದ್ದಾರೆ. ದಲಿತರ ಹಕ್ಕುಗಳ ರಕ್ಷಣೆಗಾಗಿ ಜಿಗ್ನೇಶ್‌ ಮೇವಾನಿ ಹೋರಾಡುತ್ತಿದ್ದಾರೆ.

ಶನಿವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಗುಜರಾತ್‌ ಪ್ರದೇಶ ಕಾಂಗ್ರೆಸ್‌ ಕಮಿಟಿ ಅಧ್ಯಕ್ಷ ಭರತ್‌ ಸಿನ್ಹ ಸೋಲಂಕಿ, ಈ ಮೂವರೂ ತಮ್ಮನ್ನು ಬೆಂಬಲಿಸಬೇಕು ಎಂದು ಕೇಳಿಕೊಂಡಿದ್ದಾರೆ.

‘ಹಾರ್ದಿಕ್‌ ಪಟೇಲ್‌ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುವುದಾದರೆ, ಅವರಿಗೆ ಟಿಕೆಟ್‌ ನೀಡಲು ಕಾಂಗ್ರೆಸ್‌ ಸಿದ್ಧವಿದೆ. ದಲಿತರ ಹಕ್ಕುಗಳ ರಕ್ಷಣೆಗಾಗಿ ಜಿಗ್ನೇಶ್‌ ಮೇವಾನಿ ಶ್ರಮಿಸುತ್ತಿದ್ದಾರೆ. ಭ್ರಷ್ಟಾಚಾರ ಮತ್ತು ಕುಡಿತದ ಚಟದ ವಿರುದ್ಧ ಠಾಕೂರ್‌ ಹೋರಾಡುತ್ತಿದ್ದಾರೆ. ಕಾಂಗ್ರೆಸ್‌ ಅವರಿಗೆ ಆಹ್ವಾನ ನೀಡುತ್ತಿದ್ದು, ಮೂವರೂ ತಮ್ಮೊಡನೆ ಕೈಜೋಡಿಸಬೇಕು’ ಎಂದು ಕೋರಿದ್ದಾರೆ.

ಮೀಸಲಾತಿ ಹೋರಾಟಗಾರ 24 ವರ್ಷದ ಹಾರ್ದಿಕ್‌ ಪಟೇಲ್‌, ‘ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎನ್ನುವ ಯಾವ ಆಲೋಚನೆಯೂ ಇಲ್ಲ. ನಾವು ನಮ್ಮ ಸಮುದಾಯದ ಹಕ್ಕುಗಳಿಗಾಗಿ ಹೋರಾಡುತ್ತಿದ್ದೇವೆ. ಮೀಸಲಾತಿ ದೊರೆಯುವವರೆಗೂ ಹೋರಾಟ ಮುಂದುವರಿಸುತ್ತೇವೆ’ ಎಂದಷ್ಟೇ ಹೇಳಿಕೊಂಡಿದ್ದಾರೆ. ಆದರೂ ರಾಜಕೀಯವಾಗಿ ಪ್ರಭಾವ ಹೊಂದಿರುವ ಸಮುದಾಯದವರಾಗಿರುವ ಕಾರಣ ಪಟೇಲ್‌ ಅವರನ್ನು ಪಕ್ಷದತ್ತ ಸೆಳೆಯಲು ಕಾಂಗ್ರೆಸ್‌ ಪ್ರಯತ್ನಿಸುತ್ತಿದೆ.

‘ನಾನು ಭಾರತದಿಂದ ಪ್ರಜಾಪ್ರಭುತ್ವವನ್ನು ನಾಶಮಾಡುವ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಚಿಂತನೆಗಳ ವಿರುದ್ಧವಿದ್ದೇನೆ. ನನ್ನದು ಸಾಮಾಜಿಕ ಮತ್ತು ರಾಜಕೀಯ ಹೋರಾಟ. ಆದರೆ ನನ್ನ ಸಮುದಾಯದ ಕುರಿತು ಚರ್ಚಿಸುವುದಾದರೆ ನಾನು ಕಾಂಗ್ರೆಸ್‌ ಜತೆ ಪ್ರತಿಕ್ರಿಯಿಸುತ್ತೇನೆ’ ಎಂದು ದಲಿತ ಹೋರಾಟಗಾರ ಮೇವಾನಿ ಹೇಳಿಕೊಂಡಿದ್ದಾರೆ.

ಈ ಹೋರಾಟಗಾರರಷ್ಟೇ ಅಲ್ಲದೆ ಆಮ್‌ ಆದ್ಮಿ ಪಕ್ಷದ ಕನು ಕಲ್ಸಾರಿಯಾ, ಬಿಜೆಪಿಯ ಮಾಜಿ ಶಾಸಕ ಮಹುವಾ ಅವರಂತ ಇನ್ನೂ ಹಲವು ನಾಯಕರಿಗೆ ಕಾಂಗ್ರೆಸ್‌ ಜತೆ ಸಂಪರ್ಕದಲ್ಲಿರುವಂತೆ ಸೋಲಂಕಿ ಕರೆ ನೀಡಿದ್ದಾರೆ.

‘ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಯು ಶಾಸಕ ಛೋಟು ವಾಸವ ತಮ್ಮನ್ನು ಬೆಂಬಲಿಸಿದ್ದರು. ಅವರಿಗೂ ನಮ್ಮ ಪಕ್ಷಕ್ಕೆ ಆಹ್ವಾನ ನೀಡುತ್ತೇವೆ. ಜತೆಗೆ ರಾಜ್ಯಸಭೆಯಲ್ಲಿ ನಮನ್ನು ಬೆಂಬಲಿಸದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ(ಎನ್‌ಸಿಪಿ) ಈ ಬಾರಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದನ್ನು ಬಯಸಿದರೆ, ಅವರೊಡನೆ ಮೈತ್ರಿ ಮಾಡಿಕೊಳ್ಳುವ ಕುರಿತು ಯೋಚಿಸಲು ಸಿದ್ಧರಿದ್ದೇವೆ’ ಎಂದೂ ಸೋಲಂಕಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT