ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತಿ– ಪ್ರಿಯಕರನ ನಡುವೆ ಬದುಕು ಗೊಂದಲ!

Last Updated 21 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ ಶಹರದ ಶೋಕಿ ಶೌಖತ್‍ಗಳ ಅಮಲಿನಲ್ಲಿ ಬದುಕುವ ಕುಟುಂಬ. ತಂದೆತಾಯಿ ಹಾಗೂ ನಾಲ್ಕು ಜನ ಮಕ್ಕಳು. ಆ ನಾಲ್ಕು ಜನ ಮಕ್ಕಳಲ್ಲಿ ಹಿರಿಯ ಮಗಳು ಸೌಂದರ್ಯ ಬಹಳ ಸುಂದರಿ. ಆಕೆ ಬಿ.ಕಾಂ ಪದವಿ ಮುಗಿಸಿದ ಬಳಿಕ ತಂದೆಗೆ ಮಗಳ ಮದುವೆಯ ಚಿಂತೆ ಶುರುವಾಯಿತು. ಆದರೆ ಸೌಂದರ್ಯಳಿಗೆ ಮದುವೆ ಇಷ್ಟವಿರಲಿಲ್ಲ. ಸ್ನೇಹಿತರು, ಪಾರ್ಟಿ ಅದೂ ಇದೂ ಅಂತ ಹಾಯಾಗಿ ಇರಬೇಕೆಂಬ ಬಯಕೆ. ಮದುವೆ ಪ್ರಸ್ತಾಪ ಬರುತ್ತಿದಂತೆಯೇ ತಿರಸ್ಕರಿಸುತ್ತಿದ್ದಳು.

ಅರ್ಹತೆಗೆ ತಕ್ಕಂತೆ ಸೌಂದರ್ಯಳಿಗೆ ಕಂಪೆನಿಯೊಂದರಲ್ಲಿ ಅಕೌಂಟೆಂಟ್ ನೌಕರಿ ಸಿಕ್ಕಿತು. ಶೋಕಿ ಮತ್ತು ಖರ್ಚಿಗಾಗಿ ತಂದೆಯಲ್ಲಿ ಹಣ ಕೇಳುವ ಪ್ರಮೇಯ ತಪ್ಪಿತು. ವಾರಾಂತ್ಯದಲ್ಲಿ ಗೆಳತಿಯರು, ಸಹೋದ್ಯೋಗಿಗಳೊಂದಿಗೆ ಸಿನಿಮಾ, ಪಾರ್ಕ್, ಪಿಕ್‍ನಿಕ್ ಎಂದು ಸುತ್ತಾಡತೊಡಗಿದಳು. ರಾತ್ರಿ ತಡವಾಗಿ ಮನೆಗೆ ಬರತೊಡಗಿದಳು. ಇದನ್ನೆಲ್ಲ ಗಮನಿಸಿದ ತಂದೆಗೆ, ಮಗಳು ದಾರಿ ತಪ್ಪುತ್ತಿದ್ದಾಳೆ ಎಂಬ ಆತಂಕ ಶುರುವಾಯಿತು. ಮದುವೆ ಮಾಡಬೇಕೆಂದು ತಂದೆ ವರಾನ್ವೇಷಣೆ ಮಾಡುತ್ತಿದ್ದರೆ ಮಗಳು, ಬಂದವರನ್ನೆಲ್ಲ ತಿರಸ್ಕಾರ ಮಾಡುತ್ತಿದ್ದಳು. ತಂದೆಗೆ ಏಕೋ ಸಂಶಯ ಕಾಡತೊಡಗಿತು. ಅವಳ ಚಲನವಲನದ ಮೇಲೆ ನಿಗಾ ಇಡತೊಡಗಿದರು.

ಒಂದು ದಿನ ಸೌಂದರ್ಯ ತನ್ನ ಸಹಪಾಠಿ ಹುಡುಗನೊಂದಿಗೆ ಹೋಟೆಲ್‍ ಒಂದಕ್ಕೆ ಹೋಗುವುದನ್ನು ತಂದೆ ಗಮನಿಸಿದರು. ‘ಮಗಳು ತಪ್ಪು ಹೆಜ್ಜೆ ಇಡುತ್ತಿದ್ದಾಳೆ’ ಎಂಬ ಅವರ ಅನಿಸಿಕೆ ನಿಜ ಎನಿಸಿತು. ಮಗಳು ಒಪ್ಪಲಿ, ಬಿಡಲಿ ಮದುವೆ ಮಾಡಿಯೇ ಬಿಡಬೇಕು ಎಂದು ತೀರ್ಮಾನಿಸಿದರು. ಎಸ್‌ಎಸ್‌ಎಲ್‌ಸಿ ವರೆಗೆ ಶಿಕ್ಷಣ ಮುಗಿಸಿ ಕಾರ್ಖಾನೆ
ಯೊಂದರಲ್ಲಿ ಕೆಲಸ ಮಾಡುತ್ತಿದ್ದ ಬೆಳಗಾವಿಯ ರಾಜಣ್ಣ ಎಂಬಾತನಿಗೆ ಮಗಳನ್ನು ಕೊಡಲು ನಿರ್ಧರಿಸಿದರು. ಹುಡುಗಿಯ ಎತ್ತರ 5ಅಡಿ 4ಇಂಚು. ರಾಜಣ್ಣನದ್ದು 5ಅಡಿ. ಇವಳು ನೋಡಲು ಸುರಸುಂದರಿ. ಅವನು ಗುಡಾಣ ಹೊಟ್ಟೆಯ ಗಿಡ್ಡ ಜೊತೆಗೆ ಬೋಳುತಲೆ. ಹುಡುಗನನ್ನು ನೋಡಿ ಸೌಂದರ್ಯ ಸುತರಾಂ ಒಪ್ಪಲಿಲ್ಲ.

ಮಗಳ ಹಟದಿಂದ ತಂದೆಯ ಪಿತ್ತ ನೆತ್ತಿಗೇರುತ್ತದೆ. ಅವಳನ್ನು ಚೆನ್ನಾಗಿ ಥಳಿಸುತ್ತಾರೆ. ‘ನಾನು ತೋರಿಸಿದ ವರನನ್ನು ಮದುವೆಯಾಗದಿದ್ದರೆ ವಿಷ ಕುಡಿದು ಸಾಯುತ್ತೇನೆ’ ಎಂದು ಬೆದರಿಸುತ್ತಾರೆ. ಸುದ್ದಿ ಸಂಬಂಧಿಕರೆಲ್ಲರಿಗೂ ತಲುಪುತ್ತದೆ. ‘ಹುಡುಗಿಗೆ ಆಗಲೇ 25 ವಯಸ್ಸು, ಇನ್ನೇನು ಅವಳನ್ನು ಕೇಳುವುದು? ಹುಡುಗ ನೋಡಲು ಹೇಗಿದ್ದರೇನು?
ಶ್ರೀಮಂತ. ಒಬ್ಬನೇ ಮಗ ಬೇರೆ, ಸ್ವಂತ ಮನೆಯಿದೆ, ಆಸ್ತಿಯಿದೆ, ಮದುವೆ ಮಾಡಿಬಿಡಿ’ ಎಂದು ಸಂಬಂಧಿಕರೆಲ್ಲಾ ಪುಕ್ಕಟೆ ಸಲಹೆ ಕೊಟ್ಟರು. ಹಾಗೆನೇ ಸೌಂದರ್ಯಳಿಗೂ ಒಂದಿಷ್ಟು ಬುದ್ಧಿಮಾತು ಹೇಳಿದರು. ಅವರ ಕಿರಿಕಿರಿ ಸಹಿಸಲಾರದೇ ಸೌಂದರ್ಯ ಒಪ್ಪಿ ಮದುವೆ ಮಾಡಿಕೊಳ್ಳುತ್ತಾಳೆ.

***

ಮದುವೆಯಾದರೂ ಸೌಂದರ್ಯ ನೌಕರಿ ಬಿಟ್ಟಿರಲಿಲ್ಲ. ಗಂಡ ತನಗೆ ತಕ್ಕ ಜೋಡಿಯಲ್ಲ ಎಂಬ ಕೊರಗು ಆಕೆಯದ್ದು. ನೋಡಲು ಆಕೆಗೆ ತಕ್ಕವನಾಗಿ ಇಲ್ಲ ಎಂಬುದು ಒಂದೆಡೆಯಾದರೆ, ಸರಿಯಾದ ಕೆಲಸವೂ ರಾಜಣ್ಣನಿಗೆ ಇರಲಿಲ್ಲ, ಕುಡಿತದ ಚಟ ಬೇರೆ. ಈ ಕೊರಗುಗಳ ನಡುವೆಯೂ ಸೌಂದರ್ಯ ಕೆಲಸಗಳನ್ನೆಲ್ಲ ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಳು.

ಆದರೆ ಗಂಡನ ಜೊತೆ ಮಾತ್ರ ಎಲ್ಲಿಯೂ ಹೊರಗಡೆ ಹೋಗುತ್ತಿರಲಿಲ್ಲ. ಗಂಡ ಎಷ್ಟೇ ಪುಸಲಾಯಿಸಿ, ಮನವೊಲಿಸಿ ಕರೆದರೂ ಅವಳು ಸುಸ್ತು, ಬೇಜಾರು, ತಲೆ ನೋವು ಎಂದೆಲ್ಲ ನೆಪ ಹೇಳಿ ತಪ್ಪಿಸಿಕೊಳ್ಳುತ್ತಿದ್ದಳು. ರಜೆ ಬಂದರಂತೂ ಅವಳದ್ದು ತವರಿನಲ್ಲಿಯೇ ಠಿಕಾಣಿ. ಗಂಡನ ಸಮೀಪ ಹೋಗಲೂ ಆಕೆಗೆ ಮನಸ್ಸು ಇರಲಿಲ್ಲ. ತವರಿನಲ್ಲಿಯೇ ಉಳಿದುಬಿಡೋಣ ಎಂದರೆ ತಂದೆಯ ಭಯ. ಆದ್ದರಿಂದ ನಾಮಕಾವಸ್ತೆ ಗಂಡನ ಮನೆಗೆ ಹೋಗುತ್ತಿದ್ದಳು. ತಂದೆ ಬೈದರೆ ‘ನನ್ನ ಗಂಡ ಪ್ರತಿ ರಾತ್ರಿ ಕುಡಿದು ಬರುತ್ತಾನೆ. ವಾಸನೆಗೆ ವಾಕರಿಕೆ ಬಂದಂತಾಗುತ್ತದೆ’ ಎಂದು ಹೇಳುತ್ತಿದ್ದಳು.

ಸರಿಯಾಗಿ ಸಂಸಾರವೇ ಮಾಡದಿದ್ದ ಮೇಲೆ ಮಕ್ಕಳಾಗುವ ಮಾತೆಲ್ಲಿ? ಮದುವೆಯಾಗಿ ಎರಡು ವರ್ಷವಾಯಿತು. ಸೊಸೆ ಇನ್ನೂ ಗರ್ಭ ಧರಿಸಿಲ್ಲ ಎಂದು ಅತ್ತೆ ಸುನಂದಮ್ಮ ಅವರಿಗೆ ಸಂಕಟ ಶುರುವಾಯಿತು. ಆ ಸಂಕಟವನ್ನು ನೇರವಾಗಿ ಅವರು ಸೌಂದರ್ಯಳ ಮುಂದೆ ತೋರಿಸಲು ಶುರುಮಾಡಿದರು. ಮಗುವಾಗಿಲ್ಲ ಎಂದು ಆಕೆಯನ್ನು ಮೂದಲಿಸಲು ಶುರುವಿಟ್ಟುಕೊಂಡರು. ಕಂಡ ಕಂಡ ವೈದ್ಯರ ಬಳಿಯೂ ತೋರಿಸಿದರು. ಮಕ್ಕಳಾಗಲು ಇಬ್ಬರಿಗೂ ಯಾವುದೇ ಸಮಸ್ಯೆ ಇಲ್ಲ ಎಂದು ವೈದ್ಯರು ಹೇಳಿದಾಗ ಸುನಂದಮ್ಮ ಅವರಿಗೆ ಇವರು ಒಟ್ಟಿಗೆ ಸಂಸಾರ ಮಾಡುತ್ತಿಲ್ಲ ಎಂಬ ಗುಮಾನಿ ಶುರುವಾಯಿತು. ಅಲ್ಲಿಂದ ಅವರು ಸೊಸೆಯ ಮೇಲೆ ಕಿಡಿ ಕಾರುವುದು ಹೆಚ್ಚತೊಡಗಿತು. ಅವಳ ತಂದೆತಾಯಿಯನ್ನು ಮನೆಗೆ ಕರಿಸಿ ಅವರ ಮಗಳ ಬಗ್ಗೆ ದೂರಿದರು. ಅವಳನ್ನು ಸಮರ್ಥಿಸಿಕೊಳ್ಳಲು ಹೋದ ಆಕೆಯ ಪೋಷಕರಿಗೆ ಛೀಮಾರಿಹಾಕಿ ಮನೆಯಿಂದ ಕಳುಹಿಸಿಬಿಟ್ಟರು!

ಸೌಂದರ್ಯಳನ್ನು ಕಂಡರೆ ಅತ್ತೆಗೆ ಮೈಯೆಲ್ಲ ಉರಿದಂತೆ ಆಗುತ್ತಿತ್ತು. ಮೊದಲೇ ಹೇಳಿದ ಹಾಗೆ, ಸೌಂದರ್ಯ ಮನೆಕೆಲಸವನ್ನೆಲ್ಲ ಚೆನ್ನಾಗಿ ಮಾಡುತ್ತಿದ್ದಳು. ಮೊದಮೊದಲು ಅತ್ತೆಗೆ ಸೊಸೆಯ ಈ ನಡವಳಿಕೆ ಖುಷಿ ತರುತ್ತಿತ್ತು. ಆದರೆ ಈಗ ಅವಳು ಏನು ಮಾಡಿದರೂ ಹಿತವಾಗುತ್ತಿರಲಿಲ್ಲ.

‘ಒಲ್ಲದ ಗಂಡನಿಗೆ ಮೊಸರಲ್ಲೂ ಕಲ್ಲು’ ಎನ್ನುವ ಹಾಗೆ ಸೌಂದರ್ಯ ಏನು ಮಾಡಿದರೂ ಅದರಲ್ಲೊಂದು ಹುಳುಕು ಕಂಡುಹಿಡಿದು ರಂಪಾಟ ಮಾಡತೊಡಗಿದರು. ಬೆಳಿಗ್ಗೆ ಅಂಗಳ ಗುಡಿಸಿ ರಂಗೋಲಿ ಹಾಕುವಾಗ, ‘ಬೆಳಿಗ್ಗೆ ಬಾಗಲಾಗ ಯಾಂವಾ ನಿನ್ನ ನೋಡಾಕ ಬರ್ತಾನ, ಮೇಕಪ್‌ ಮಾಡ್ಕೊಂಡು ಅಂಗಳಾ ಗುಡಿಸಿ ಒಂದು ತಾಸ ರಂಗೋಲಿ ಹಾಕೋಂತ ಕುಂದರ್ತಿ, ಬೀದಿ ಬಸವಿಯಂಗ’ ಎಂದು ಕಟಕಿಯಾಡುತ್ತಿದ್ದಳು.

ಹೀಗೆ ಮನೆ ರಣರಂಗ ಆಗತೊಡಗಿತು. ಮಗಳ ಸಂಸಾರದಲ್ಲಿ ಏರುಪೇರು ಆಗುತ್ತಿರುವುದನ್ನು ಕಂಡ ಆಕೆಯ ಪೋಷಕರು ಕೂಡ ರಜೆಯಲ್ಲಿ ಹೀಗೆಲ್ಲಾ ಮನೆಗೆ ಬರಬೇಡ, ಗಂಡನ ಮನೆಯಲ್ಲಿಯೇ ಇರು ಎಂದು ಬುದ್ಧಿಮಾತು ಹೇಳುತ್ತಿದ್ದರು. ಆದರೆ ಸೌಂದರ್ಯಗಳಿಗೆ ಮಾತ್ರ ರಜೆ ಇದ್ದಾಗ ಮನೆಯಲ್ಲಿ ಇರುವುದೆಂದರೆ ಜೈಲಿನಲ್ಲಿ ಇದ್ದ ಅನುಭವವಾಗುತ್ತಿತ್ತು.

ಅತ್ತೆ-ಮಾವ, ಅಪ್ಪ-ಅಮ್ಮ... ಹೀಗೆ ಎಲ್ಲರಿಂದಲೂ ಕೊಂಕು ಮಾತು, ಬುದ್ಧಿಮಾತು ಕೇಳಿ ಕೇಳಿ ಸಾಕಾಗಿ ಹೋದಾಗ ಮನಸ್ಸಿಲ್ಲದ ಮನಸ್ಸಿನಿಂದ ಕೊನೆಗೂ ಗಂಡನ ಸಮೀಪ ಹೋಗಲು ಶುರುವಿಟ್ಟುಕೊಂಡಳು. ಗರ್ಭಿಣಿಯೂ ಆದಳು. ಆದರೆ ಅವಳಿಗೆ ತಾಯ್ತನದ ಖುಷಿಯೇ ಇರಲಿಲ್ಲ. ಕುರೂಪ ಗಂಡಿನ ಮಗು ತನ್ನ ಹೊಟ್ಟೆಯಲ್ಲಿದೆ ಎಂದು ಅನಿಸುತ್ತಿತ್ತೇ ವಿನಾ, ಅದು ತನ್ನದೇ ಅಂಶ ಎನ್ನುವ ಖುಷಿ ಆಕೆಗೆ ಕಾಣಲಿಲ್ಲ.

ಈ ಉಸಿರುಗಟ್ಟುವ ವಾತಾವರಣದಿಂದ ಬಿಡಿಸಿಕೊಳ್ಳಲು ಬೇರೆ ಊರಿನಲ್ಲಿ ನೌಕರಿ ಸಿಕ್ಕರೆ ಸಾಕು ಎಂದು ಸರ್ಕಾರಿ ನೌಕರಿಗಾಗಿ ಅರ್ಜಿ ಹಾಕುತ್ತಲೇ ಇದ್ದಳು. ಬುದ್ಧಿವಂತೆಯಾಗಿದ್ದ ಆಕೆಗೆ ಒಂದು ಸರ್ಕಾರಿ ನೌಕರಿ ಸಿಕ್ಕೇಬಿಟ್ಟಿತು! ಅವಳ ಆನಂದಕ್ಕೆ ಪಾರವೆಯೇ ಇರಲಿಲ್ಲ. ಗಂಡನ ಮನೆ ಬೆಳಗಾವಿಯನ್ನು ಬಿಟ್ಟು ಹುಟ್ಟೂರಾದ ಹುಬ್ಬಳ್ಳಿಗೆ ಪೋಸ್ಟಿಂಗ್ ಮಾಡಿಸಿಕೊಂಡು ಬಂದಳು. ಹೆಂಡತಿಗೆ ಒಳ್ಳೆಯ ಕೆಲಸ ಇರುವಾಗ ತಾನೇನು ದುಡಿಯುವುದು ಎಂದುಕೊಂಡ ಆಕೆಯ ಗಂಡ, ಇದ್ದ ಕೆಲಸವನ್ನೂ ಬಿಟ್ಟು ಇವಳ ಜೊತೆ ಬಂದ.

ಗಂಡನಿಗೆ ಒಳ್ಳೊಳ್ಳೆ ಬಟ್ಟೆ ಕೊಡಿಸಿ ಒಂದಿಷ್ಟು ನೀಟಾಗಿ ಇರುವಂತೆ ಹೇಳಿದಳು. ಮೊದಲೇ ಪರಮ ಆಲಸಿಯಾದ ರಾಜಣ್ಣ, ಹೆಂಡತಿಯ ದುಡ್ಡಿನಿಂದಲೇ ಮಜಾ ಮಾಡುತ್ತಾ ಕಾಲಕಳೆದ. ಕೆಲಸ ಹುಡುಕುವ ಪ್ರಯತ್ನವನ್ನೂ ಮಾಡಲಿಲ್ಲ. ಸೌಂದರ್ಯಳಿಗೆ ಗಂಡನ ಈ ವರ್ತನೆ ಅಸಹ್ಯ ತರಿಸತೊಡಗಿತು. ಅತ್ತೆ ಸುನಂದಮ್ಮ ತನಗೆ ಕೊಡುತ್ತಿದ್ದ ಕಿರುಕುಳವನ್ನು ಅವಳು ಈಗ ತನ್ನ ಗಂಡನಿಗೆ ಕೊಡಲು ಶುರುಮಾಡಿದಳು.

ಈ ಮಧ್ಯೆ ಆಕೆಯ ತಂದೆ ಕಾಯಿಲೆಗೆ ತುತ್ತಾಗಿ ಅಸುನೀಗಿದರು. ಗಂಡ ರಾಜಣ್ಣ ಆಗಾಗ ಬೆಳಗಾವಿಗೆ ಹೋಗುತ್ತಿದ್ದ. ಅದು ಅವಳಿಗೆ ಅತ್ಯಂತ ಅರಾಮ ಎನ್ನಿಸುತ್ತಿತ್ತು. ಗಂಡ ಮರಳಿ ಬಂದರೆ ಯಾಕೆ ಬಂದನೋ ಎಂಬಂತೆ ಸಿಡುಕುತ್ತಿದ್ದಳು. ‘ಮತ್ತೆ ಹಳೆಯ ಕೆಲಸವನ್ನೇ ಮಾಡಿಕೊಂಡು ನಿಮ್ಮ ಅಪ್ಪ ಅವ್ವನ ಹತ್ತಿರ ಇರು. ಇಲ್ಲಿ ಸುಮ್ಮನೆ ಕುಡಿದುಕೊಂಡು ಯಾಕೆ ಬಿದ್ದಿರುತ್ತಿ’ ಎಂದು ದಬಾಯಿಸುತ್ತಿದ್ದಳು.

ರಾಜಣ್ಣ ಪುನಃ ತನ್ನೂರಿಗೆ ಹೋಗಿ ಕೆಲಸ ಹುಡುಕಲು ಶುರುಮಾಡಿದ. ಆದರೆ ಅಲ್ಲೀವರೆಗೆ ಒಂದು ಕಾಸೂ ದುಡಿಯದೇ ಮಜಾಮಾಡಿಕೊಂಡಿದ್ದ ಅವನು ದುಡಿಯುವ ಶಕ್ತಿ ಮತ್ತು ಉತ್ಸಾಹ ಕಳೆದುಕೊಂಡಿದ್ದ. ಅವರ ಒಂದು ಮನೆಯನ್ನು ಬಾಡಿಗೆಗೆ ಕೊಡಲಾಗಿತ್ತು. ಆ ಬಾಡಿಗೆ ಹಣದಲ್ಲಿಯೇ ಹೆಂಡ ಕುಡಿಯುತ್ತ ಗಟಾರದಲ್ಲಿ ಬೀಳತೊಡಗಿದ. ಓಣಿಯ ಕೆಲವು ಜನರ ಒತ್ತಾಯಕ್ಕೆ ಹೋಟೆಲ್ ಒಂದರಲ್ಲಿ ಸಪ್ಲಯರ್ ಕೆಲಸಕ್ಕೆ ಸೇರಿಕೊಂಡ.

ತನ್ನ ಹುಟ್ಟೂರಲ್ಲೇ ನೌಕರಿ ಸಿಕ್ಕಕಾರಣ ಸೌಂದರ್ಯಳಿಗೆ ತನ್ನ ಕಾಲೇಜು ಸಹಪಾಠಿಗಳ ನೆನಪಾಗುತ್ತಿತ್ತು. ಕಳೆದು ಹೋಗಿದ್ದ ಸಂಪರ್ಕಗಳನ್ನು ಒಂದೊಂದಾಗಿ ಪುನಃ ಸಂಪಾದಿಸಿದಳು. ತನ್ನ ಸೌಂದರ್ಯದ ಆರಾಧಕನಾಗಿದ್ದ ಆನಂದ್‌ ಎಂಬುವವನ ಫೋನ್ ನಂಬರನ್ನು ತನ್ನ ಗೆಳತಿಯೊಬ್ಬಳಿಂದ ಪಡೆದುಕೊಂಡು ಅವನಿಗೆ ಕರೆ ಮಾಡಿದಳು. ಅನಿರೀಕ್ಷಿತ ಕರೆಯಿಂದ ಆನಂದ್‌ಗೆ ಕಳೆದುಹೋದ ಕಾಮಲತೆ ಕಾಲಿಗೆ ತೊಡರಿಕೊಂಡಾಯಿತು. ತಾನು ಮೆಚ್ಚಿದ ಹುಡುಗ
ಸಿಕ್ಕ ಸಂಭ್ರಮ ಸೌಂದರ್ಯಳಿಗಾದರೆ, ಆನಂದನಿಗೆ ಸ್ವರ್ಗಕ್ಕೆ ಮೂರೇ ಗೇಣು ಎನ್ನುವಂತಾಯಿತು.

ಇಬ್ಬರೂ ಗುಪ್ತವಾಗಿ ಮದುವೆ ಮಾಡಿಕೊಳ್ಳಲು ತೀರ್ಮಾನಿಸುತ್ತಾರೆ. ಮೊದಲನೆ ಗಂಡನಿಗೆ ವಿಚ್ಛೇದನ ಕೊಡದೆ ಎರಡನೆ ಮದುವೆ ಮಾಡಿಕೊಳ್ಳುವುದು ಕಾನೂನು ಬಾಹಿರ. ಅಲ್ಲದೆ ಮದುವೆಯಾಗಿ ವಿವಾಹೇತರ ಸಂಬಂಧ ಹೊಂದುವುದು ಕೂಡ ಸರ್ಕಾರಿ ನಡತೆ ನಿಯಮಗಳ ಪ್ರಕಾರ ಶಿಕ್ಷಾರ್ಹ ಅಪರಾಧ. ಇದರಿಂದ ಇಬ್ಬರಿಗೂ ಏನು ಮಾಡುವುದು ಎಂದು ತಿಳಿಯುವುದಿಲ್ಲ. ಆದರೆ ಗುಟ್ಟಾಗಿ ಒಟ್ಟಿಗೆ ಇರಲು ಶುರು ಮಾಡುತ್ತಾರೆ.

ಇತ್ತ, ಸಂಬಂಧಿಕರು ಗಂಡಹೆಂಡತಿಯನ್ನು ಒಂದು ಮಾಡಲು ಹರಸಾಹಸ ಪಡುತ್ತಾರೆ. ಆದರೆ ಅವಳು ತನ್ನ ಹಳೆಯ ಗೆಳೆಯನೊಂದಿಗೆ ಇರುವ ಗುಲ್ಲು ಎಲ್ಲೆಡೆ ಹಬ್ಬುತ್ತದೆ. ತನ್ನ ಸಂಬಂಧಿಯೊಬ್ಬರ ಮೂಲಕ ಗಂಡನಿಗೆ ವಿವಾಹ ವಿಚ್ಚೇದನದ ವಿಷಯವನ್ನು ತಿಳಿಸುತ್ತಾಳೆ. ಇವಳ ಅಕ್ರಮ ಸಂಬಂಧದ ಬಗ್ಗೆ ಗೊತ್ತಾಗಿ ಆತ ಇವಳ ಬಗ್ಗೆ ಆಸೆಯನ್ನು ಬಿಟ್ಟು ಬಿಡುತ್ತಾನೆ. ಹಲವಾರು ದಿನಗಳ ಎಳೆದಾಟದ ನಂತರ ಲೋಕ ಅದಾಲತ್‍ನಲ್ಲಿ ಸಮ್ಮತದ ವಿವಾಹ ವಿಚ್ಛೇದನ ಪಡೆದುಕೊಳ್ಳುತ್ತಾಳೆ. ವಿಚ್ಛೇದನ ಸಿಕ್ಕಿದ್ದೇ ತಡ, ಆನಂದ್‌ ಜೊತೆ ಮದುವೆಯಾಗಲು ತೀರ್ಮಾನ ಮಾಡುತ್ತಾಳೆ.

ಅಷ್ಟರಲ್ಲಿ ಆನಂದನಿಗೆ ಅವರ ಊರಿನಿಂದ ಕರೆ ಬರುತ್ತದೆ. ಆತ ಲಗುಬಗೆಯಿಂದ ಊರಿಗೆ ಹೋಗುತ್ತಾನೆ. ಅಲ್ಲಿ ಅವನ ಚಿಕ್ಕಮ್ಮನಿಗೆ ಹೃದಯಾ
ಘಾತವಾಗಿ ಬೆಂಗಳೂರಿನ ಆಸ್ಪತ್ರೆಗೆ ಸೇರಿಸುತ್ತಾರೆ. ಆತ ಬೆಂಗಳೂರಿನ ಆಸ್ಪತ್ರೆಯಿಂದ ಮರಳಿ ಬರುವಷ್ಟರಲ್ಲಿ ಆತನ ಊರಲ್ಲಿ ಅವನ ಪ್ರೇಮ ಪ್ರಕರಣ ಕುಂಬಿಯ ಮೇಲೆ ಕುಳಿತು ಕೂಗುತ್ತಿರುತ್ತದೆ. ಆತ ಮದುವೆಯಾಗಬೇಕು ಎಂದುಕೊಂಡ ಹುಡುಗಿಯ ಚಾರಿತ್ರ್ಯದ ಕುರಿತು ಹಲವಾರು ಪತ್ರಗಳು ಇವನ ವಿಳಾಸಕ್ಕೆ ಬರುತ್ತವೆ. ಅಲ್ಲದೆ ತನಗಿಂತ ವಯಸ್ಸಿನಲ್ಲಿ ಚಿಕ್ಕವನಾದ ತನ್ನ ದೂರದ ಸಂಬಂಧಿಯೊಂದಿಗೆ ಅವಳು ಹಿಂದಿನಿಂದಲೂ ಗುಪ್ತ ಪ್ರೇಮವನ್ನು ಇಟ್ಟುಕೊಂಡ ವಿಷಯ ಖಚಿತವಾಗಿ ಅವನಿಗೆ ತಿಳಿಯುತ್ತದೆ. ಆತನ ಮನೆಮಂದಿಯೆಲ್ಲ ‘ಗಂಡಬಿಟ್ಟ
ಹೆಂಗಸಿನೊಂದಿಗೆ ಓಡಿ ಹೋಗುವ ಅನಿಷ್ಠ ನಿನಗೇನಿದೆ’ ಎಂದೆಲ್ಲಾ ಕಿವಿಯೂದಿ, ಆತನನ್ನು ಮನೆಯಿಂದ ಹೊರಗೆ ಹೋಗದಂತೆ ಮಾಡುತ್ತಾರೆ.

ಇತ್ತ ಸೌಂದರ್ಯ ತನ್ನ ಪ್ರಿಯಕರನಿಗೆ ಕಾದು ಕನಲಿ ಹೋಗುತ್ತಾಳೆ. ತನ್ನ ಗೆಳತಿಯರು ಮತ್ತು ತನ್ನ ಕೆಲ ಸಂಬಂಧಿಕರ ಮುಂದೆ ತನ್ನ ಅಳಲನ್ನು ತೋಡಿಕೊಳ್ಳುತ್ತಾಳೆ. ಆದರೆ ಯಾವುದೇ ಪರಿಹಾರಕಾಣುವುದಿಲ್ಲ. ಕಟ್ಟಿಕೊಂಡ ಗಂಡನೂ ಇಲ್ಲ, ಜೊತೆಗಿದ್ದ ಪ್ರಿಯಕರನೂ ಇಲ್ಲ ಎಂದು ಕೊರಗುತ್ತಾಳೆ. ಆನಂದನಿಗಾಗಿ ಕಾದೂ ಕಾದೂ ಸಣ್ಣಗಾಗುತ್ತಾಳೆ.

ಅಷ್ಟರಲ್ಲಿಯೇ ಅವಳ ಕೆಲ ಸಂಬಂಧಿಕರು ರಾಜಣ್ಣನ ಮನೆಗೆ ಹೋಗಿ ಬುದ್ಧಿಮಾತು ಹೇಳಿ ಇಬ್ಬರನ್ನೂ ಮತ್ತೆ ಒಂದು ಮಾಡುತ್ತಾರೆ. ಈ ಹಿಂದೆ ಪಡೆದ ವಿವಾಹ ವಿಚ್ಛೇದನವನ್ನು ಅವಳು ನ್ಯಾಯಾಲಯದ ಮೂಲಕ ಅನೂರ್ಜಿತಗೊಳಿಸಿಕೊಳ್ಳುತ್ತಾಳೆ. ರಾಜಣ್ಣ ಕೂಡ ಹೆಂಡತಿಯನ್ನು ಆದರಿಂದ ಸ್ವಾಗತಿಸುತ್ತಾನೆ.

ಅತ್ತ ಗಂಡ-ಹೆಂಡತಿ ಒಟ್ಟಿಗೆ ಇರುತ್ತಿದ್ದಂತೆಯೇ ಇತ್ತ ಆನಂದ್‌, ಮತ್ತೆ ಸೌಂದರ್ಯಳ ಹತ್ತಿರ ಬರುತ್ತಾನೆ. ಆದರೆ ಈ ಬಾರಿ ಸೌಂದರ್ಯ ರಾಜಣ್ಣನೊಂದಿಗೇ ಸಂಸಾರ ಮಾಡಿಕೊಂಡು ಇರಲು ನಿರ್ಧರಿಸುತ್ತಾಳೆ. ಆನಂದ್‌ ಎಷ್ಟೇ ಕೇಳಿಕೊಂಡರೂ, ಅವನ ಜೊತೆ ಹೋಗಲು ಒಪ್ಪುವುದಿಲ್ಲ.

(ಹೆಸರುಗಳನ್ನು ಬದಲಾಯಿಸಲಾಗಿದೆ) ಲೇಖಕ ನ್ಯಾಯಾಂಗ ಇಲಾಖೆ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT