ಮಂಗಳವಾರ, ಸೆಪ್ಟೆಂಬರ್ 17, 2019
21 °C

ಜನರ ಮಾತಿಗೆ ದನಿಯಾದ ನಾಯಕಿ

Published:
Updated:
ಜನರ ಮಾತಿಗೆ ದನಿಯಾದ ನಾಯಕಿ

‘ನೀವು ಪ್ರಧಾನಿ ಆದ ಮೇಲೆ ಹೆರಿಗೆ ರಜೆ ತಗೊಳ್ತೀರಾ?’

ಕಾರ್ಯಕ್ರಮವೊಂದರಲ್ಲಿ ಟಿ.ವಿ. ನಿರೂಪಕ ಕೇಳಿದ ಈ ಪ್ರಶ್ನೆಗೆ ಉತ್ತರಿಸುವಾಗ ಆಕೆ ತಡವರಿಸಲಿಲ್ಲ. ನೇರವಾಗಿ ನಿರೂಪಕನ ಕಣ್ಣನ್ನೇ ನೋಡಿದ ಆಕೆಯಲ್ಲಿ ನ್ಯೂಜಿಲೆಂಡ್‌ನ ಕೋಟ್ಯವಧಿ ಯುವತಿಯರು ಪ್ರತಿದಿನ ಅನುಭವಿಸುತ್ತಿರುವ ಸಂಕಟವೇ ಮೈದುಂಬಿತು.

‘2017ರ ಈ ಕಾಲಘಟ್ಟದಲ್ಲಿಯೂ ನ್ಯೂಜಿಲೆಂಡ್‌ನ ಯುವತಿಯರು ಇಂಥ ಪ್ರಶ್ನೆಗಳಿಗೆ ಉತ್ತರ ನೀಡಬೇಕು ಎಂದು ನೀವು ಬಯಸ್ತೀರಾ? ಮಕ್ಕಳನ್ನು ಪಡೆಯುವುದು ಅಥವಾ ವೃತ್ತಿಯಲ್ಲಿ ಮುಂದುವರಿಯುವುದು ಎಷ್ಟು ದಿನ ಪ್ರತ್ಯೇಕ ಆಯ್ಕೆಗಳಾಗಿ ಇರಲು ಸಾಧ್ಯ? ತನಗೆ ಬೇಕೆನಿಸಿದಾಗ ತಾಯಿಯಾಗುವ ಸ್ವಾತಂತ್ರ್ಯ ಮಹಿಳೆಗೆ ಇಲ್ಲವೇ?'

ಆಕೆ ಕೊಟ್ಟ ಈ ದಿಟ್ಟ ಉತ್ತರ ಒಂದೇ ದಿನದಲ್ಲಿ ಆಕೆಗೆ ತಾರಾಪಟ್ಟ ತಂದುಕೊಟ್ಟಿತ್ತು. ಅಷ್ಟುದಿನ ‘ಪರಕೀಯ’ಳಂತೆ ಕಾಣುತ್ತಿದ್ದ ಆಕೆಯನ್ನು ಜನರು ತಮ್ಮ ನಾಯಕಿ ಎಂದು ಒಪ್ಪಿಕೊಂಡರು. ಕುಟುಕು ಜೀವ ಹಿಡಿಯಲು ಪರದಾಡುತ್ತಿದ್ದ ಲೇಬರ್ ಪಕ್ಷಕ್ಕೆ ಹೊಸ ಉಸಿರು ಬಂದಿತ್ತು. ಇದೀಗ ಪ್ರಧಾನಿ ಪಟ್ಟ ಆಕೆಗೆ ನಿಲುಕಿದ ನಕ್ಷತ್ರ.

‘ನನಗೇನು ಅನಿಸುತ್ತೋ ಅದನ್ನೇ ಮಾಡುತ್ತೇನೆ. ನಾನೇನು ಮಾಡುತ್ತೇನೋ ಅದನ್ನೇ ಮಾತನಾಡುತ್ತೇನೆ’ ಎನ್ನುವ ಹಠತೊಟ್ಟೇ ರಾಜಕೀಯಕ್ಕೆ ಬಂದವರು ಜಸಿಂಡಾ ಅರ್ಡರ್ನ್‌ (ಜನನ: 26ನೇ ಜುಲೈ, 1980). 37ರ ಹರೆಯದ ಜಸಿಂಡಾ ನ್ಯೂಜಿಲೆಂಡ್‌ನ ಇತಿಹಾಸದಲ್ಲಿ ಅತಿಕಿರಿಯ ಪ್ರಧಾನಿ ಎಂಬ ಶ್ರೇಯಕ್ಕೂ ಪಾತ್ರರಾಗಲಿದ್ದಾರೆ.

‘ಅತಿ ಶ್ರೀಮಂತರಿಗೆ ತೆರಿಗೆ, ತಮ್ಮನ್ನು ತಾವು ಪೋಷಿಸಿಕೊಳ್ಳಲು ಶಕ್ತಿ ಇಲ್ಲದವರಿಗೆ ಆಶ್ರಯ, ಉದ್ಯೋಗಸ್ಥ ಮಹಿಳೆಯರಿಗೆ ಬೇಕೆನಿಸಿದಾಗ ಮಕ್ಕಳನ್ನು ಪಡೆಯುವ ಹಕ್ಕು...’ ಹೀಗೆ ಹಲವು ಕ್ರಾಂತಿಕಾರಕ ವಿಚಾರಗಳನ್ನು ಚುನಾವಣಾ ಕಣದಲ್ಲಿ ಪ್ರಸ್ತಾಪಿಸಿ ಮನೆಮಾತಾದರು ಜಸಿಂಡಾ. ಅವರು ಮೊದಲು ಸಂಸತ್ತು ಪ್ರವೇಶಿಸಿದ್ದು 2008ರಲ್ಲಿ. ಆಗಿನ್ನೂ ಅವರಿಗೆ 28 ವಯಸ್ಸು.

ತಮ್ಮ ಹದಿವಯಸ್ಸಿನಿಂದಲೂ ಎಡಪಕ್ಷಗಳೊಂದಿಗೆ

ಕೆಲಸ ಮಾಡುತ್ತಿರುವ ಜಸಿಂಡಾ, ನ್ಯೂಜಿಲೆಂಡ್‌ನ ಮೊದಲ ಲೇಬರ್‌ ಪಾರ್ಟಿಯ ಪ್ರಧಾನಿ ಹೆಲೆನ್ ಕ್ಲಾರ್ಕ್ ಅವರ ಕಚೇರಿಯಲ್ಲಿ ಕೆಲಸ ಮಾಡಿದ್ದರು. ಬ್ರಿಟನ್ ಪ್ರಧಾನಿ ಟೋನಿ ಬ್ಲೇರ್ ಅವರಿಗೆ ನೀತಿ ನಿರೂಪಣೆಯಲ್ಲಿ ಸಲಹೆಗಾರ್ತಿಯಾಗಿಯೂ ಸೇವೆ ಸಲ್ಲಿಸಿದ್ದರು.

ಇವರು ಹುಟ್ಟಿ ಬೆಳೆದಿದ್ದು ಹಾಮಿಲ್ಟನ್‌ನಲ್ಲಿ. ಅಪ್ಪ ರೋಸ್ ಆರ್ಡರ್ನ್ ಪೊಲೀಸ್ ಅಧಿಕಾರಿ, ಅಮ್ಮ ಶಾಲೆಯ ಕ್ಯಾಂಟೀನ್ ಒಂದರಲ್ಲಿ ಕೆಲಸಗಾರ್ತಿ. ತಮ್ಮಲ್ಲಿ ರಾಜಕೀಯ ಆಸಕ್ತಿ ಮೊಳೆತ ಸಂದರ್ಭವನ್ನು ಜಸಿಂಡಾ ನೆನಪಿಸಿಕೊಳ್ಳುವುದು ಹೀಗೆ...

‘ಹಾಮಿಲ್ಟನ್‌ನಲ್ಲಿ ನನ್ನ ಬಾಲ್ಯ ಕಳೆಯಿತು. ತುಣುಕು ಬ್ರೆಡ್‌ ಸಿಗದೆ ಹಸಿದುಕೊಂಡಿರುವ, ಕಾಲಿಗೆ ಶೂ ಇಲ್ಲದೆ ಕಷ್ಟದ ಬದುಕು ಸಾಗಿಸುತ್ತಿರುವ ಮಕ್ಕಳನ್ನು ನೋಡುತ್ತಿದ್ದೆ. ಆಗೆಲ್ಲಾ ನನಗೆ ಇವರ ಭವಿಷ್ಯಕ್ಕೆ ಬೆಳಕು ಕೊಡುವ ರಾಜಕಾರಿಣಿ ನಾನಾಗಬೇಕು ಎನಿಸುತ್ತಿತ್ತು. ಅಸಮಾನತೆ ನಿವಾರಿಸಬೇಕು. ಎಲ್ಲರಿಗೂ ನೆಮ್ಮದಿಯ ಬದುಕು ಸಿಗುವಂತಾಗಬೇಕು ಎಂಬ ಕನಸು ಕಾಣುತ್ತಿದ್ದೆ. ಅದನ್ನು

ಸಾಕಾರಗೊಳಿಸಿಕೊಳ್ಳಲೆಂದೇ ರಾಜಕೀಯಕ್ಕೆ ಬಂದೆ’.

ಜಸಿಂಡಾ ಲೇಬರ್ ಪಕ್ಷದ ನಾಯಕತ್ವ ವಹಿಸಿಕೊಂಡಿದ್ದು ಜುಲೈ 31ರಂದು. ಪಕ್ಷದ ಚುಕ್ಕಾಣಿ ಹಿಡಿದಿದ್ದ ಆಂಡ್ರ್ಯೂ ಲಿಟ್ಲ್ ತಮ್ಮ ವೈಫಲ್ಯ ಒಪ್ಪಿಕೊಂಡು ನಾಯಕತ್ವದಿಂದ ಕೆಳಗಿಳಿಯಲು ನಿರ್ಧರಿಸಿದ್ದ ಸಂದರ್ಭ ಅದು.

‘ನನಗೆ ಸಿದ್ಧತೆ ಮಾಡಿಕೊಳ್ಳಲು ಹೆಚ್ಚು ಅವಕಾಶ ಸಿಗಲೇ ಇಲ್ಲ. ಚುನಾವಣಾ ಪ್ರಚಾರವನ್ನು ನಿರ್ವಹಿಸಬೇಕಾದ ಅನಿವಾರ್ಯತೆ ಇತ್ತು. ನನ್ನ ಸ್ವಭಾವ ಮತ್ತು ಆಶಯಗಳಿಗೆ ಅನುಗುಣವಾಗಿಯೇ ನನ್ನ

ಜವಾಬ್ದಾರಿಯನ್ನು ನಾನು ನಿರ್ವಹಿಸಿದೆ’ ಎಂದು ಈಗ ಜಸಿಂಡಾ ಹೇಳಿಕೊಳ್ಳುತ್ತಾರೆ. ಆದರೆ ಅವರು ಸವೆಸಿದ ಹಾದಿಯಲ್ಲಿ ಹೂಹಾಸು ಇರಲಿಲ್ಲ. ಲೇಬರ್ ಪಾರ್ಟಿಯ ಜನಪ್ರಿಯತೆ ದಿನದಿಂದ ದಿನಕ್ಕೆ ಕುಸಿಯುತ್ತಿತ್ತು. ಹತ್ತಾರು ಜಾಗತಿಕ ಸಮಸ್ಯೆಗಳ ನಡುವೆ ದೇಶವನ್ನು ಮುನ್ನಡೆಸುವ ನಾಯಕತ್ವದ ನಿರೀಕ್ಷೆ ಜನರಿಗಿತ್ತು.

ಆದರೆ ಚುನಾವಣಾ ಪರ್ವದ ಮೊದಲ ದಿನ ಟಿ.ವಿ. ನಿರೂಪಕ ಕೇಳಿದ ಪ್ರಶ್ನೆ ಜಸಿಂಡಾ ಪಾಲಿಗೆ ವರದಾನವಾಯಿತು. ಆಕೆಯ ಸ್ವಾಭಿಮಾನವನ್ನು ಬಡಿದೆಬ್ಬಿಸುವುದರೊಂದಿಗೆ ಸಾಕಷ್ಟು ಜನಪ್ರಿಯತೆಯನ್ನೂ ಗಳಿಸಿಕೊಟ್ಟಿತು. ಆಕೆಯ ಉತ್ತರವು ಸ್ತ್ರೀವಾದಿಯೊಬ್ಬಳ ಕೋಪದ ಪ್ರತಿಕ್ರಿಯೆಯಷ್ಟೇ ಆಗಿರಲಿಲ್ಲ. ಜನಸಾಮಾನ್ಯರ ವೈಯಕ್ತಿಕ ಬದುಕಿನ ಬಗ್ಗೆ ಜಸಿಂಡಾ ಅವರಿಗೆ ಇರುವ ಜ್ಞಾನ ಮತ್ತು ಖಾಸಗಿತನವನ್ನು ಗೌರವಿಸುವ ಅವರ ನಿಲುವನ್ನು ಆ ಪ್ರಸಂಗ ದೇಶಕ್ಕೆ ಸಾರಿಹೇಳಿತು.

ಕಳೆದ ಸೆಪ್ಟೆಂಬರ್‌ನಲ್ಲಿ ಮುಗಿದ ಚುನಾವಣೆಗಳಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗಲಿಲ್ಲ. ಆದರೆ ನ್ಯೂಜಿಲೆಂಡ್ ಫಸ್ಟ್ ಮತ್ತು ಗ್ರೀನ್ಸ್ ಪಕ್ಷಗಳೊಂದಿಗೆ ಲೇಬರ್ ಪಕ್ಷದ ಮೈತ್ರಿಕೂಟಕ್ಕೆ ಅವಕಾಶ ಮಾಡಿಕೊಟ್ಟಿತು. ಈ ಮೈತ್ರಿಕೂಟದ ನಾಯಕಿಯಾಗಿ ಜಸಿಂಡಾ ಹೊರಹೊಮ್ಮಿದರು.

ಭಾವನೆಗಳ ತಾಕಲಾಟ: ನಾಯಕತ್ವದ ವಿಚಾರಕ್ಕೆ ಬಂದಾಗ ಮತದಾರರು ಪುರುಷ ಮತ್ತು ಮಹಿಳಾ ನಾಯಕತ್ವದಿಂದ ಕೆಲ ಪ್ರತ್ಯೇಕ ನಿರೀಕ್ಷೆಗಳನ್ನು ಇರಿಸಿಕೊಂಡಿರುತ್ತಾರೆ. ನಾಯಕಿಯಾದಾಕೆ ಕಠಿಣ ನಿಲುವು ತಳೆಯಬಲ್ಲ ಸ್ವಾಭಿಮಾನಿ, ಚುರುಕಾಗಿ ಕೆಲಸ ಮಾಡುವ ಬುದ್ಧಿವಂತೆಯಷ್ಟೇ ಆಗಿದ್ದರೆ ಮತದಾರರನ್ನು ಸೆಳೆಯಲು ಸಾಧ್ಯವಾಗುವುದಿಲ್ಲ. ನ್ಯೂಜಿಲೆಂಡ್‌ನ ಜನರೂ ಸಹ ಈ ವಿಚಾರದಲ್ಲಿ ಅಷ್ಟೇನೂ ಭಿನ್ನವಾಗಿ ಯೋಚಿಸಲಿಲ್ಲ.

‘ನಮ್ಮ ನಾಯಕಿಗೆ ಭಾವನೆಗಳು ಇರಬೇಕು, ಆಕೆ ಅದರಲ್ಲಿ ಕೊಚ್ಚಿ ಹೋಗಬಾರದು, ಭಾವನೆಗಳನ್ನು ದಾಟಿಸುವಷ್ಟು ಸಮರ್ಥೆಯಾಗಿರಬೇಕು’ ಎನ್ನುವುದು ಅಲ್ಲಿನ ಜನರ ನಿರೀಕ್ಷೆಯಾಗಿತ್ತು. ರಕ್ತಗತವಾಗಿರುವ ನೇರವಂತಿಕೆಯಿಂದಲೇ ಜಸಿಂಡಾ ಈ ನಿರೀಕ್ಷೆಗಳನ್ನು ನಿಭಾಯಿಸಿದರು.

ಮಾನಸಿಕ ಸಮಸ್ಯೆ ಮತ್ತು ಆತ್ಮಹತ್ಯೆ ಇದೀಗ ನ್ಯೂಜಿಲೆಂಡ್‌ ಪಾಲಿಗೆ ದೊಡ್ಡ ಸವಾಲು. ಆತ್ಮಹತ್ಯೆ ಮಾಡಿಕೊಂಡವರಿಗಾಗಿ ನಿರ್ಮಿಸಿದ ಸ್ಮಾರಕ ಉದ್ಘಾಟಿಸುವ ಸಮಾರಂಭದಲ್ಲಿ ಜಸಿಂಡಾ ಜೋರಾಗಿ ಅತ್ತುಬಿಟ್ಟಿದ್ದರು. ಅಷ್ಟು ಮಾತ್ರವಲ್ಲ ತಮ್ಮನ್ನು ಕಾಡುತ್ತಿರುವ ಮಾನಸಿಕ ತೊಳಲಾಟಗಳ ಬಗ್ಗೆಯೂ ಬಹಿರಂಗವಾಗಿ ಮಾತನಾಡಿದ್ದರು.

‘ನಾನೇನಾದರೂ ತಪ್ಪು ಮಾಡಿಬಿಡಬಹುದು ಎಂಬ ಹೆದರಿಕೆ ಸದಾ ನನ್ನನ್ನು ಕಾಡುತ್ತಿರುತ್ತದೆ. ರಾಜಕೀಯ ಬದುಕು ತುಂಬಾ ಅನಿಶ್ಚಿತವಾದುದು. ಒಂದು ಚಿಟಿಕೆ ಹೊಡೆಯುವಷ್ಟರಲ್ಲಿ ಏನು ಬೇಕಾದರೂ ಆಗಬಹುದು. ಪಕ್ಷವೊಂದರ ಚುಕ್ಕಾಣಿ ಹಿಡಿಯುವುದು ಎಂದರೆ ನಿಮ್ಮನ್ನು ಕೆಳಗೆ ಬೀಳಿಸಬಲ್ಲದವರ ಸಂಖ್ಯೆ ಹೆಚ್ಚು ಮಾಡಿಕೊಳ್ಳುವುದು ಎಂದೇ ಅರ್ಥ’ ಎಂದು ಬಹಿರಂಗವಾಗಿಯೇ ತಮ್ಮ ಮನಸು ತೆರೆದಿಟ್ಟರು. ಆಕೆಯ ಪ್ರಾಮಾಣಿಕ ಮಾತುಗಳನ್ನು ದೇಶ ಕೇಳಿಸಿಕೊಂಡಿತ್ತು.

ಇನ್ನು ಮುಂದೆಯೂ ಮ್ಯಾಜಿಕ್ ನಡೆಯುತ್ತಾ: ಒಳಿತಿನ ಕನಸು ಬಿತ್ತಿ ಜನರನ್ನು ಒಲಿಸಿಕೊಂಡ ಜಸಿಂಡಾ ಇದೀಗ ಮೂರು ಪಕ್ಷಗಳು ಸೇರಿ ರಚಿಸುವ ಮೈತ್ರಿಕೂಟ ಸರ್ಕಾರದ ಪ್ರಧಾನಿ. ಡಿಸ್ಕೊ ಜಾಕಿ ಶೋಗಳನ್ನು ಆಸ್ವಾದಿಸುವ, ಸಂದರ್ಶನಗಳಲ್ಲಿ ಭಾವುಕವಾಗಿ ಪ್ರತಿಜ್ಞೆಗಳನ್ನು ಮಾಡುವ, ಸ್ವಾಭಿಮಾನಿ ನಡಿಗೆಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುವ, ಚಂದ ಕಾಣುವಂತೆ ಡ್ರೆಸ್ ಮಾಡಿಕೊಳ್ಳುವ... ಅಷ್ಟೇಕೆ, ‘ಜನರೆಲ್ಲಾ ಒಪ್ಪಿಕೊಳ್ಳುವಷ್ಟು ಬುದ್ಧಿವಂತೆ ನಾನು’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಅವರ ಮ್ಯಾಜಿಕ್ ಇನ್ನು ಮುಂದೆಯೂ ಕೆಲಸ ಮಾಡಬಲ್ಲುದೇ?

ಈ ಪ್ರಶ್ನೆಯೂ ಈಗ ನ್ಯೂಜಿಲೆಂಡ್‌ನಲ್ಲಿ ಚರ್ಚೆಗೆ ಬಂದಿದೆ. ‘ರೋಹಿಂಗ್ಯಾ ಸಮಸ್ಯೆ ನಿರ್ವಹಿಸುವುದು ಹೇಗೆ? ಇಸ್ಲಾಮಿಕ್ ಉಗ್ರವಾದಿಗಳ ವಿರುದ್ಧ ಮಿಲಿಟರಿ ಕಾರ್ಯಾಚರಣೆಗೆ ಅಸ್ತು ಎನ್ನಬೇಕೇ? ಆಸ್ಟ್ರೇಲಿಯಾದೊಂದಿಗಿನ ಸಂಬಂಧ ಸುಧಾರಣೆಗೆ ಕೈಗೊಳ್ಳಬೇಕಾದ ಕ್ರಮಗಳೇನು’ ಇವು ಸದ್ಯದ ಮಟ್ಟಿಗೆ ಜಸಿಂಡಾ ಅವರೆದುರು ಇರುವ ದೊಡ್ಡ ಪ್ರಶ್ನೆಗಳು.

‘ನಮ್ಮದು ಜಗತ್ತಿನಲ್ಲಿ ಅತಿವೇಗದ ಆರ್ಥಿಕ ವೃದ್ಧಿದರ ಇರುವ ದೇಶ. ಇದಕ್ಕೆ ಕಾರಣವಾಗಿದ್ದು ನಮ್ಮ ಆರ್ಥಿಕ ನೀತಿಗಳು. ಅವು ಅತ್ಯುತ್ತಮ ಫಲಿತಾಂಶ ನೀಡುವ ಮೂಲಕ ಯಶಸ್ಸನ್ನು ಸಾಬೀತುಪಡಿಸಿವೆ. ಆದರೆ ನಮ್ಮ ರಾಜಕೀಯ ವಿರೋಧಿಗಳು ಅಪ್ರಬುದ್ಧ ಆರ್ಥಿಕ ನೀತಿಗಳನ್ನು ಮುಂದಿಡುವ ಮೂಲಕ ಜಗತ್ತನ್ನು ಗೊಂದಲಕ್ಕೆ ದೂಡುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಅವರು ಎಬ್ಬಿಸಿದ ದೂಳು ಇನ್ನಾದರೂ ಅಣಗಬೇಕು, ಅವರು ಪ್ರತಿಪಾದಿಸುವ ಆರ್ಥಿಕ ನೀತಿಗಳ ಫಲಿತಾಂಶ ಹೊರ ಜಗತ್ತಿಗೆ ಗೊತ್ತಾಗಬೇಕು’ ಎಂದು ನ್ಯೂಜಿಲೆಂಡ್‌ನ ನಿರ್ಗಮಿಸುತ್ತಿರುವ ಪ್ರಧಾನಿ ಬಿಲ್ ಇಂಗ್ಲಿಷ್, ಜಸಿಂಡಾ ವಿರುದ್ಧ ಹರಿಹಾಯ್ದಿದ್ದರು.

ಈ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಜಸಿಂಡಾ, ‘ದೂಳು ಎಂದಿಗೂ ಅಣಗುವುದಿಲ್ಲ. ಯಾಕಂದ್ರೆ ಕೆಲಸ ಮಾಡದೇ ಸುಮ್ಮನಿರುವವಳಲ್ಲ.  ಇಡೀ ಜಗತ್ತು ಗರ್ವ ಪಡುವ ಸ್ಥಾನದಲ್ಲಿ ನ್ಯೂಜಿಲೆಂಡ್ ಇರುತ್ತೆ, ನೋಡುತ್ತಿರಿ’ ಎಂದು ಸವಾಲು ಹಾಕುವ ಮೂಲಕ ತಮ್ಮದೇ ಶೈಲಿಯಲ್ಲಿ ಮತ್ತೊಂದು ಕನಸು ಬಿತ್ತಿದರು.

ಹೀಗೆ ಕನಸು ಕಾಣುವ, ಕನಸು ಬಿತ್ತುವ ಅವರ ಸಾಮರ್ಥ್ಯದ ಫಲವೇ ಪ್ರಧಾನಿ ಪಟ್ಟ.

Post Comments (+)