ವಜ್ರ ಮಹೋತ್ಸವ: ಶಾಸಕರಿಗೆ ಟಿಎ–ಡಿಎ

ಸೋಮವಾರ, ಜೂನ್ 24, 2019
24 °C

ವಜ್ರ ಮಹೋತ್ಸವ: ಶಾಸಕರಿಗೆ ಟಿಎ–ಡಿಎ

Published:
Updated:

ಬೆಂಗಳೂರು:  ವಿಧಾನಸೌಧದ ವಜ್ರಮಹೋತ್ಸವ ನೆನಪಿಗಾಗಿ ಶಾಸಕರಿಗೆ ಚಿನ್ನದ ಬಿಸ್ಕತ್ ಕೊಡುವ ಪ್ರಸ್ತಾವ ಮುಂದಿಟ್ಟು ವ್ಯಾಪಕ ಟೀಕೆಗೆ ಒಳಗಾಗಿದ್ದ ವಿಧಾನಸಭೆ ಸಚಿವಾಲಯ ಇದೇ 25ರಂದು ನಡೆಯುವ ಕಾರ್ಯಕ್ರಮಕ್ಕೆ ಬರುವ ಶಾಸಕರಿಗೆ ಪ್ರಯಾಣ ಮತ್ತು ದಿನಭತ್ಯೆ ನೀಡುವುದಾಗಿ ಲಘು ಪ್ರಕಟಣೆ ಹೊರಡಿಸಿದೆ.

ವಜ್ರಮಹೋತ್ಸವ ಅಂಗವಾಗಿ ಕರೆಯಲಾಗಿರುವ ಒಂದು ದಿನದ ವಿಶೇಷ ಜಂಟಿ ಅಧಿವೇಶನದಲ್ಲಿ ಭಾಗವಹಿಸುವ ಶಾಸಕರಿಗೆ ದಿನಭತ್ಯೆ ಮತ್ತು ಪ್ರಯಾಣ ಭತ್ಯೆ (ಟಿಎ–ಡಿಎ) ಪಾವತಿ ಕಡ್ಡಾಯ. ಆದರೆ, ಇದನ್ನು ಪ್ರಕಟಿತ ರೂಪದಲ್ಲಿ ಕಳುಹಿಸಿರುವುದಕ್ಕೆ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ನಾವು ಪ್ರಯಾಣ ಮತ್ತು ದಿನ ಭತ್ಯೆ ಕೊಡುವಂತೆ ವಿಧಾನಸಭೆ ಅಥವಾ ವಿಧಾನ ಪರಿಷತ್ತಿನ ಸಚಿವಾಲಯಕ್ಕೆ ಕೇಳಿರಲಿಲ್ಲ. ಆದರೂ ಇದನ್ನು ಮುದ್ರಿತ ರೂಪದಲ್ಲಿ ಕಳುಹಿಸುವ ಮೂಲಕ ಜನಪ್ರತಿನಿಧಿಗಳಿಗೆ ಅಪಮಾನ ಮಾಡಲಾಗಿದೆ’ ಎಂದು ಕೆಲ ಶಾಸಕರು ಬೇಸರ ವ್ಯಕ್ತಪಡಿಸಿದ್ದಾರೆ.

‘ವಿಧಾನ ಮಂಡಲದ ಉಭಯ ಸದನಗಳ ಅಧ್ಯಕ್ಷರು ಸಾರ್ವಜನಿಕರ ಅಭಿಪ್ರಾಯಕ್ಕೆ ವಿರುದ್ಧವಾಗಿ ಹೋಗುತ್ತಿದ್ದಾರೆ. ಈಗಾಗಲೇ ರಾಜಕೀಯ ವ್ಯವಸ್ಥೆ ಬಗ್ಗೆ ಕೆಟ್ಟ ಅಭಿಪ್ರಾಯವಿದೆ. ವಿಧಾನಸೌಧದ ವಜ್ರಮಹೋತ್ಸವ ಹೆಸರಿನಲ್ಲಿ ದುಬಾರಿ ವೆಚ್ಚ ಮಾಡುತ್ತಿವೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ’ ಎಂದು  ವಿಧಾನ ಪರಿಷತ್‌ನ ಜೆಡಿಎಸ್ ಸದಸ್ಯ ರಮೇಶ್ ಬಾಬು ಹೇಳಿದ್ದಾರೆ.

‘ವಿಧಾನಸೌಧ ಕಟ್ಟುವುದಕ್ಕೆ ಖರ್ಚಾದ ಹಣ ಕೇವಲ ₹ 1.83 ಕೋಟಿ. ವಜ್ರಮಹೋತ್ಸವಕ್ಕೆ ಈಗ ₹ 10 ಕೋಟಿ ಖರ್ಚು ಮಾಡುತ್ತಿರುವುದಕ್ಕೆ ಯಾವ ಅರ್ಥವೂ ಇಲ್ಲ. ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ  ಎಚ್.ಡಿ. ಕುಮಾರಸ್ವಾಮಿ ಅವರು ವಜ್ರಮಹೋತ್ಸವ ಸಮಾರಂಭದಲ್ಲಿ ಪಕ್ಷದ ಶಾಸಕರು ಒಂದು ಲೋಟ ನೀರನ್ನೂ ಕುಡಿಯುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಈ ನಮ್ಮ ನಿಲುವು ಅಂತಿಮ’ ಎಂದು ರಮೇಶ್ ಬಾಬು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ವಜ್ರಮಹೋತ್ಸವ ಸಂತೋಷದ ಕಾರ್ಯಕ್ರಮ. ಎಲ್ಲ ಶಾಸಕರು ಉತ್ಸಾಹದಿಂದ ಭಾಗಿಯಾಗಬೇಕು. ಪ್ರಯಾಣ ಮತ್ತು ದಿನಭತ್ಯೆ ಅಮಿಷ ಒಡ್ಡಿ ಅವರನ್ನು ಕರೆಯಿಸುವ ಅಗತ್ಯವಿಲ್ಲ’ ಎಂದು ಬಿಜೆಪಿ ವಕ್ತಾರ ಎಸ್. ಸುರೇಶ್‌ಕುಮಾರ್ ಹೇಳಿದ್ದಾರೆ.

ವಿಧಾನ ಪರಿಷತ್ ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಿ, ‘ಟಿಎ–ಡಿಎ ಕೊಡಿ ಎಂದು ನಾವು ಯಾರೂ ಕೇಳಿರಲಿಲ್ಲ. ಅದನ್ನು ಕೊಡದಿದ್ದರೆ ಸಮಾರಂಭ ಹೆಚ್ಚು ಅರ್ಥಪೂರ್ಣ ಆಗಿರುತ್ತಿತ್ತು’ ಎಂದು ಪ್ರತಿಕ್ರಿಯಿಸಿದ್ದಾರೆ.

‘ಅಧಿವೇಶನ ಕರೆದಾಗ ಭತ್ಯೆಗಳನ್ನು ಕೊಡುವುದು ಕಡ್ಡಾಯ. ಆದರೆ, ಅದನ್ನು ಪ್ರಕಟಿತ ರೂಪದಲ್ಲಿ ಸದಸ್ಯರಿಗೆ ಕಳುಹಿಸುವ ಅಗತ್ಯವಿಲ್ಲ. ಚಿನ್ನದ ಬಿಸ್ಕತ್ ಕೊಡುವುದು ತಪ್ಪು. ಟಿಎ–ಡಿಎ ಕೊಡುವುದರಲ್ಲಿ ತಪ್ಪೇನಿಲ್ಲ’ ಎಂದು ಶಾಸಕ ಬಿ.ಆರ್. ಪಾಟೀಲ ಅಭಿಪ್ರಾಯಪಟ್ಟಿದ್ದಾರೆ.

ಈ ಬಗ್ಗೆ ವಿಧಾನಸಭೆ ಕಾರ್ಯದರ್ಶಿ ಎಸ್. ಮೂರ್ತಿ ಅವರನ್ನು ಪ್ರತಿಕ್ರಿಯೆಗಾಗಿ ಸಂಪರ್ಕಿಸಿದಾಗ ದೂರವಾಣಿ ಕರೆ ಕಡಿತಗೊಳಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry