ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದಿನ ‘ಅರಬ್ ವಸಂತ’? ಮಹಿಳಾ ಹಕ್ಕುಗಳು

Last Updated 21 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಅರಬ್‌ ಪ್ರಪಂಚದಲ್ಲಿ ಈಗಲೂ ಕ್ರಾಂತಿ ಮಾಡುತ್ತಿರುವವರು ಯಾರು? ಹಿಂಸೆ ಅಥವಾ ಉಗ್ರವಾದದಲ್ಲಿ ಸಿಲುಕಿಕೊಂಡಿರುವ ಇಸ್ಲಾಮಿಕ್‌ ವಾದಿಗಳಲ್ಲ.  ಎಡಪಂಥೀಯ ದೊಡ್ಡ ಜನರೂ ಅಲ್ಲ. ಯಾಕೆಂದರೆ, ಅವರಿಗೀಗ ವಯಸ್ಸಾಗುತ್ತಿದೆ. ಶಸ್ತ್ರತ್ಯಾಗ ಮಾಡಿದ ಸ್ಥಿತಿ ಅವರದ್ದು. ರಾಷ್ಟ್ರೀಯ ಚಳವಳಿಗಳು ಭಗ್ನಗೊಂಡ ಮೇಲೆ ಅವರಿಗೆಲ್ಲ ಅಪಖ್ಯಾತಿ ಅಂಟಿಕೊಂಡಿದೆ. ಯುವ ಬ್ಲಾಗರ್‌ಗಳೂ ಅಲ್ಲ. ಅವರನ್ನು ಒಂದೋ ನಿಶ್ಚೇಷ್ಟಗೊಳಿಸುತ್ತಾರೆ. ಬಂಧಿಸುತ್ತಾರೆ. ಸೆನ್ಸಾರ್‌ಷಿಪ್ ಹೇರುತ್ತಾರೆ (ಎಲ್ಲ ಪ್ರದೇಶಗಳಲ್ಲಿ) ಅಥವಾ ಬೆದರಿಸುತ್ತಾರೆ. ಅಲ್ಜೀರಿಯಾ, ಮೊರೊಕ್ಕೊ ಹಾಗೂ ಸೌದಿ ಅರೇಬಿಯಾದಲ್ಲಿ ಪೊಲೀಸ್ ನಿಗಾ ಕೂಡ ಜೋರಾಗಿದೆ. ಈಜಿಪ್ಟ್‌ನಲ್ಲಿ ಜೈಲು ವಾಸ ಗ್ಯಾರಂಟಿ. ಸಿರಿಯಾದ ಬ್ಲಾಗರ್‌ಗಳಾದರೆ ಮರಣದಂಡನೆಯಾಗುವ ಆತಂಕ ಇದೆ.

ಇಷ್ಟೆಲ್ಲ ಕಠಿಣವಾದ ಪರಿಸ್ಥಿತಿಯಿಂದ ಹೊರತಾದ ಏಕೈಕ ವ್ಯಕ್ತಿಯಂತೆ ಕಾಣುತ್ತಿರುವವರು ಉತ್ತರ ಆಫ್ರಿಕಾದ ಹಿರೀಕ, ವಕೀಲಿಕೆ ಕಲಿತ, ಸೇನೆಯಲ್ಲಿ ವಸಾಹತುವಿರೋಧಿ ಚಳವಳಿಯಲ್ಲಿ ತೊಡಗಿದ್ದ ಬೀಜಿ ಕೈದ್ ಎಸೆಬ್ಸಿ; ಟ್ಯುನಿಷಿಯಾದ ಅಧ್ಯಕ್ಷ. 90 ವಯಸ್ಸಿನ ಅವರನ್ನು ಅರಬ್‌ನ ಸದ್ಯದ ಉತ್ತಮ ಕ್ರಾಂತಿಕಾರಿ ಎನ್ನಲಡ್ಡಿಯಿಲ್ಲ.

ಈ ಹೇಳಿಕೆ ಅಚ್ಚರಿ ಮೂಡಿಸುವುದಾದರೆ ಅದಕ್ಕೆ ಅವರ ರಾಜಕೀಯ ಯುಕ್ತಿಯನ್ನು ಪಶ್ಚಿಮದ ಜನರು ಇನ್ನೂ ನಿಜಕ್ಕೂ ಅಂದಾಜು ಮಾಡದೇ ಇರುವುದೇ ಕಾರಣ. ಪ್ರಭುತ್ವವಾದಿಗಳು ಹಾಗೂ ಇಸ್ಲಾಮಿಸ್ಟ್‌ಗಳ ನಡುವೆ ಸಾಮರಸ್ಯ ಸಾಧಿಸುವುದೇ ಕಷ್ಟ ಎನ್ನುವ ಸ್ಥಿತಿ ಇತ್ತು. ಅದನ್ನು ನಿಧಾನವಾಗಿ ಅವರು ಸಾಧ್ಯಮಾಡುತ್ತಿದ್ದಾರೆ. ಟ್ಯುನಿಷಿಯಾವನ್ನು ನಿಜಕ್ಕೂ ಕೆಲವು ಸಮಸ್ಯೆಗಳು ಕಾಡುತ್ತಿವೆ. ಅದರಲ್ಲೂ ವಿಶೇಷವಾಗಿ ಆರ್ಥಿಕ ಸಮಸ್ಯೆಗಳು. ಅಲ್ಲದೆ ಭ್ರಷ್ಟಾಚಾರ ಆರೋಪ ಎದುರಿಸಿದ್ದ ಮಾಜಿ ಅಧಿಕಾರಿಗಳಿಗೆ ಕ್ಷಮಾದಾನ ನೀಡುವ ಕಾನೂನನ್ನು ಎಸೆಬ್ಸಿ ಬೆಂಬಲಿಸಿರುವುದು ತೀವ್ರ ಆಕ್ಷೇಪಣೆಗೆ ಗುರಿಯಾಗಿದೆ. ಹಾಗಿದ್ದೂ ಟ್ಯುನಿಷಿಯಾದ ಅಧ್ಯಕ್ಷ, ಅರಬ್‌ ಮಟ್ಟಿಗೆ ಸುಧಾರಣೆಯ ಹರಿಕಾರನೂ ಆಗಿದ್ದಾರೆ. ಮುಸ್ಲಿಮೇತರ ವಿದೇಶಿಯರನ್ನು ಮದುವೆಯಾಗುವ ಹಕ್ಕನ್ನು ಮುಸ್ಲಿಂ ಮಹಿಳೆಯರಿಗೆ ಕೊಡಬೇಕೆಂದು ಅವರು ಪ್ರತಿಪಾದಿಸುತ್ತಿರುವುದೇ ಇದಕ್ಕೆ ಸಾಕ್ಷಿ.



ಇಸ್ಲಾಮಿಕ್ ಕಟ್ಟಳೆಗಳ ಪ್ರಕಾರ ವಿಶೇಷ ಸಂದರ್ಭಗಳನ್ನು ಬಿಟ್ಟರೆ ಆಸ್ತಿ ಹೊಂದುವ ಹಕ್ಕಿನಲ್ಲಿ ಪುರುಷನಿಗಿಂತ ಮಹಿಳೆ ಅರ್ಧದಷ್ಟು ಹಿಂದುಳಿದಿದ್ದಾಳೆ. ಟ್ಯುನಿಷಿಯಾ ಹಾಗೂ ಅರಬ್‌ನ ಇತರ ಕಡೆಗಳಲ್ಲಿ ಕಾನೂನು ವ್ಯವಸ್ಥೆಗಳು ಈ ಸಮಸ್ಯೆ ಬಗೆಹರಿಸಲು ಆದ್ಯತೆಯನ್ನೇ ನೀಡಿಲ್ಲ. ಮೈದುನರು ಅಥವಾ ಅತ್ತೆ-ಮಾವನ ಮನೆಯಿಂದ ವಿಧವೆಯರು ಹೊರದಬ್ಬಿಸಿಕೊಳ್ಳುವುದು ಅಲ್ಲಿ ವ್ಯವಸ್ಥಿತವಾಗಿ ನಡೆದಿದೆ. ಇದರಿಂದಾಗಿ ಜೀವನಪರ್ಯಂತ ಮಹಿಳೆ ಬೇರೆಯವರ ಹಂಗಿನಲ್ಲೇ ಇರಬೇಕಾಗಿ ಬಂದಿದೆ.

ಟ್ಯುನಿಷಿಯಾ, ಅಲ್ಜೀರಿಯಾ ಹಾಗೂ ಇತರ ದೇಶಗಳ ಸಂವಿಧಾನಗಳು ಒಪ್ಪಿತ ಧಾರ್ಮಿಕ ಹಕ್ಕುಗಳ ಸ್ವಾತಂತ್ರ್ಯವನ್ನು ಕೊಟ್ಟಿರಬಹುದು. ಅಲ್ಜೀರಿಯಾವನ್ನು ಉದಾಹರಣೆಯಾಗಿ ತೆಗೆದುಕೊಂಡರೆ, ಮುಸ್ಲಿಮೇತರನನ್ನು ಮದುವೆಯಾಗಲು ಮಹಿಳೆ ಮುಂದಾದರೆ ಅದಕ್ಕೆ ವಿಪರೀತ ನಿಯಮಗಳಿವೆ. ಅವಳ ವಿದೇಶಿ ಪತಿ ಸಾಕ್ಷಿಗಳ ಸಮ್ಮುಖದಲ್ಲಿ ಇಸ್ಲಾಂಗೆ ಮತಾಂತರಗೊಳ್ಳಬೇಕು. ಅದಕ್ಕೆ ಪ್ರಮಾಣಪತ್ರ ಒದಗಿಸಬೇಕು. ಅದೇ ಮುಸ್ಲಿಂ ಪುರುಷನೊಬ್ಬ ಮುಸ್ಲಿಮೇತರ ಹುಡುಗಿಯನ್ನು ವರಿಸಲು ಮುಂದಾದರೆ, ಆ ಹುಡುಗಿ ಅದೃಷ್ಟವಂತೆ. ಅದಕ್ಕೆ ಯಾವ ಪ್ರಮಾಣಪತ್ರದ ಅಗತ್ಯವೂ ಇಲ್ಲ. ಮುಸ್ಲಿಂ ಸಮಾಜದ ಸೈದ್ಧಾಂತಿಕ ನೆಲೆಗಟ್ಟಿನ ಈ ಕಾನೂನು ಒಟ್ಟಾರೆಯಾಗಿ ಇನ್ನೂ ಗ್ರಾಮೀಣ ಸ್ವರೂಪದ್ದೇ ಆಗಿದೆ. ಯಾವ ರಾಜಕೀಯ ಮುಖಂಡನೂ ಈ ಸಮಸ್ಯೆ ಖಂಡಿಸಲು ದನಿ ಎತ್ತುವ ಧೈರ್ಯ ಮಾಡಿಲ್ಲ. ಬಹುಮತ ಕಳೆದುಕೊಳ್ಳುವ ಭೀತಿ ಅವರೆಲ್ಲರಿಗೆ. ಆಧುನಿಕ ‘ಟ್ಯುನಿಷಿಯಾದ ಪಿತ’ ಎನಿಸಿದ, ಆ ದೇಶದ ಮೊದಲ ಅಧ್ಯಕ್ಷ, ಕ್ರಾಂತಿ ಯೋಜನೆಯ ಹರಿಕಾರ ಹಬೀಬ್ ಬೊರ್ಗ್ಯುಬಾ ಕೂಡ ಸಂಪ್ರದಾಯವಾದಿಗಳು ಹಾಗೂ ಧರ್ಮಾಂಧರಿಂದ ಪ್ರತಿರೋಧ ಎದುರಿಸಿದವರೇ.

ಹಾಗಿದ್ದೂ ಆಗಸ್ಟ್‌ನಲ್ಲಿ ಎಸೆಬ್ಸಿ, ಟ್ಯುನಿಷಿಯನ್ ಸರ್ಕಾರವನ್ನು ಉದ್ದೇಶಿಸಿ ಮಾಡಿದ ಭಾಷಣ ಬಿರುಗಾಳಿ ಎಬ್ಬಿಸಿತು. ಟ್ಯುನಿಷಿಯಾದ ಜನರಿಗೆ ತಾನು ಆಘಾತವನ್ನೇನೂ ಉಂಟುಮಾಡುವುದಿಲ್ಲ ಎಂದು ಅವರು ಹೇಳಿದರು. ಮುಸ್ಲಿಮರೇ ಹೆಚ್ಚಾಗಿರುವ ದೇಶದ ಸಂವಿಧಾನದಲ್ಲಿ ಟ್ಯುನಿಷಿಯಾ ಒಂದು ‘ನಾಗರಿಕ’ ಸ್ಥಿತಿಯಲ್ಲಿದೆ ಎಂದೇ ಉಲ್ಲೇಖವಾಗಿರುವುದನ್ನು ಅವರು ನೆನಪಿಸಿದ್ದರಲ್ಲಿ ವ್ಯಂಗ್ಯವೂ ಇತ್ತು. ಪುರುಷರು ಮತ್ತು ಮಹಿಳೆಯರ ಸಮಾನತೆಯ ಕುರಿತು ಮಾತನಾಡಿದ ಅವರು, ‘ನಾವು ಇಬ್ಬರ ನಡುವೆ ಸಮಾನತೆ ಸಾಧಿಸುವ ನಿಟ್ಟಿನಲ್ಲಿ ಮುನ್ನಡೆಯಬೇಕು. ಉತ್ತರಾಧಿಕಾರದ ವಿಷಯದಲ್ಲಿ ಎಲ್ಲ ತೊಡಕುಗಳೂ ಸುತ್ತಿಕೊಂಡಿವೆ’ ಎಂದರು.

ಸೆಪ್ಟೆಂಬರ್‌ನ ನಡುಘಟ್ಟದಲ್ಲಿ ಇನ್ನೊಂದು ಬಾಂಬ್ ಸಿಡಿಯಿತು. ಎಸೆಬ್ಸಿ ಪ್ರತಿಪಾದಿಸಿದಂತೆ ಸರ್ಕಾರವು, ಮುಸ್ಲಿಂ ಮಹಿಳೆಯರು ಮುಸ್ಲಿಮೇತರರನ್ನು ಮದುವೆಯಾಗುವುದನ್ನು ನಿಷೇಧಿಸಿದ್ದ 1973ರ ಆಡಳಿತಾತ್ಮಕ ಆದೇಶವನ್ನು ರದ್ದುಪಡಿಸಿತು. ಈ ಆದೇಶ ರದ್ದುಪಡಿಸುವುದರಿಂದ ಇಡೀ ಅರಬ್ ರಾಷ್ಟ್ರಗಳ ಮಹಿಳೆಯರಿಗೆ ಆಗುವ ಅನುಕೂಲವನ್ನು ಟ್ಯುನಿಷಿಯಾದ ಮಹಿಳಾ ಪ್ರಭುತ್ವವಾದಿಗಳ ಒಕ್ಕೂಟದ ಅಧ್ಯಕ್ಷೆ ಮೋನಿಯಾ ಬೆನ್ ಜಮಿಯಾ ಒತ್ತಿಹೇಳಿದ್ದರು. ‘ಟ್ಯುನಿಷಿಯಾವು ಪ್ರಗತಿಯ ಅಪಾಯಕಾರಿ ಮಾದರಿಯಾಗುತ್ತಿದೆ’ ಎಂದು ಅವರು ಪದೇ ಪದೇ ಹೇಳಿದ್ದರು.

ಎಲ್ಲ ಇಸ್ಲಾಮಿಕ್ ಸಂಘಟನೆಗಳಿಗೂ ಎಸೆಬ್ಸಿ ತೆಗೆದುಕೊಂಡ ಕ್ರಮಗಳ ಅರಿವಿದೆ. ಆ ಸಂಘಟನೆಗಳವರು ತಕ್ಷಣ ಪ್ರತಿಕ್ರಿಯಿಸಿದರು. ಟರ್ಕಿಯಲ್ಲಿ ವಾಸ ಮಾಡುತ್ತಿರುವ ಈಜಿಪ್ಟ್‌ನ ಪ್ರವಾದಿಯೊಬ್ಬರು ಹಳೆಯ ಟ್ಯುನಿಷಿಯಾವನ್ನು ‘ಅಪರಾಧಿ, ಪಾಷಾಂಡಿ, ಮತಭ್ರಷ್ಟ ಹಾಗೂ ಜಾತ್ಯತೀತ’ ಎಂದು ಕರೆದಿದ್ದರು. ‘ಸಮಾನ ಹಕ್ಕುಗಳು ಮಹಿಳೆಯರಿಗೆ ಅಪಾಯಕಾರಿ, ಶರಿಯಾ ಕಾನೂನಿಗೆ ಅದು ವಿರುದ್ಧವಾಗಿದ್ದು, ಅದರಿಂದ ಅವರಿಗೆ ಅನ್ಯಾಯವಾಗುತ್ತದೆ’ ಎಂದು ಕೈರೊದಲ್ಲಿನ ಸುನ್ನಿ ಧರ್ಮದ ಪ್ರಮುಖ ಸಂಘಟನೆಯಾದ ‘ಅಲ್‌ ಅಜರ್‌’ನ ಪ್ರಧಾನ ಇಮಾಂ ಅವರ ಉಪ ಧರ್ಮಾಧಿಕಾರಿ ತಮ್ಮ ಫೇಸ್‌ಬುಕ್‌ ಪುಟದಲ್ಲಿ ಬರೆದರು. ನಾನು ವಾಸ ಮಾಡುತ್ತಿರುವ ಅಲ್ಜೀರಿಯಾದಲ್ಲಿನ ಇಸ್ಲಾಮಿಸ್ಟ್‌ ಪತ್ರಿಕೆಗಳು ಜನಾಭಿಪ್ರಾಯದ ನೆಪದಲ್ಲಿ ಎಸೆಬ್ಸಿ ಅವರ ಮೇಲೆ ಬರವಣಿಗೆಗಳ ಮೂಲಕ ಪರೋಕ್ಷವಾಗಿ ದಾಳಿ ಇಟ್ಟವು.

ಟ್ಯುನಿಷಿಯಾದ ಪ್ರಮುಖ ಇಸ್ಲಾಮಿಸ್ಟ್‌ ಪಕ್ಷ ಎನ್ನಾಹ್ದಾ ಅಧಿಕೃತವಾಗಿ ಆದೇಶ ರದ್ದತಿಯನ್ನು ವಿರೋಧಿಸಲು ನಿರ್ಧರಿಸಿತು. ಆದರೆ, ಯಾವುದೇ ಪ್ರತಿಕ್ರಿಯೆ ನೀಡದೆ ಮೌನಪ್ರತಿಭಟನೆಯ ನಿಲುವು ತಳೆಯಿತು. ಕೆಲವೇ ತಿಂಗಳಲ್ಲಿ ಸ್ಥಳೀಯ ಚುನಾವಣೆ ಇರುವುದರಿಂದ ಹೆಚ್ಚು ವಾಚ್ಯವಾಗಿ ಪ್ರತಿಕ್ರಿಯೆ ನೀಡುವುದು ಅಪಾಯಕಾರಿಯಾದೀತು ಎಂದು ಅದು ಹೀಗೆ ಮಾಡಿದ್ದು. ಇದನ್ನು ರಾಜಕೀಯ ಎಂದು ಕೆಲವರು ಹೇಳಬಹುದು. ಆದರೆ, ಸಿದ್ಧಾಂತವನ್ನೇ ರಾಜಕೀಯ ದಾಳವಾಗಿಸಿಕೊಳ್ಳುವ ರಾಜತಾಂತ್ರಿಕ ನಡೆ ಇದು ಎನ್ನುವುದೇ ಸೂಕ್ತ.

ಎಸೆಬ್ಸಿ ಅವರ ಘೋಷಣೆಗಳು ಅರಬ್‌ ಪರಿಪೂರ್ಣವಾಗಿ ಸುಭಿಕ್ಷವಾಗಲು ಏನೆಲ್ಲಾ ಮಾಡಬೇಕು ಎನ್ನುವುದನ್ನು ಕೂಡ ಒತ್ತಿಹೇಳಿವೆ. ಅರಾಜಕತೆಯನ್ನು ಅಳಿಸುವುದಷ್ಟೇ ಅಲ್ಲ; ಪುರುಷಪ್ರಧಾನ ವ್ಯವಸ್ಥೆಯನ್ನೂ ಹೊಡೆದುರುಳಿಸಬೇಕು. ಸಂವಿಧಾನಕ್ಕೆ ಅಗತ್ಯ ತಿದ್ದುಪಡಿ ತರಲು ಅಥವಾ ಮುಖಂಡರಿಗೆ ಅಧಿಕಾರಾವಧಿ ನಿಗದಿಪಡಿಸಲು ಮೂಲಭೂತ ಹಕ್ಕುಗಳನ್ನು ರಕ್ಷಿಸುವುದು ಅಗತ್ಯ. ಅದರಲ್ಲೂ ಲಿಂಗ ಸಮಾನತೆಗೆ ಆದ್ಯತೆ ನೀಡುವ ಹಕ್ಕುಗಳನ್ನು ಸಂರಕ್ಷಿಸಬೇಕು ಎನ್ನುವುದನ್ನು ಅವು ಪ್ರತಿಪಾದಿಸಿವೆ.

ಪ್ರಸ್ತುತ ಅರಬ್ ರಾಷ್ಟ್ರಗಳಾದ್ಯಂತ ಉತ್ತರಾಧಿಕಾರದ ವಿಷಯದಲ್ಲಿ ಲಿಂಗ ತಾರತಮ್ಯ ಎದ್ದುಕಾಣುತ್ತಿದೆ. ಅಲ್ಜೀರಿಯಾದಲ್ಲಿ 1962ರಲ್ಲಿ ಸ್ವಾತಂತ್ರ್ಯ ಬಂದಾಗಿನಿಂದ ಪ್ರಭುತ್ವವಾದಿಗಳ ಹಾಗೂ ಮಹಿಳಾ ಸಂಘಟನೆಗಳ ಹೋರಾಟಗಳು ನಡೆದ ನಂತರವೂ ಶರಿಯಾ ಕಾನೂನು ಈಗಲೂ ಜಾರಿಯಲ್ಲಿದೆ. ಮದುವೆಯಾಗಲು ಹುಡುಗಿ ಬಯಸುವ ಗಂಡು ಅರ್ಹನೇ ಹೌದು ಎಂಬುದನ್ನು ಕುಟುಂಬದ ಪುರುಷ ಪೋಷಕನೇ ನಿರ್ಧರಿಸಬೇಕು. ಮರ್ಯಾದೆಯ ಹೆಸರಲ್ಲಿ ನಡೆಯುವ ಅಪರಾಧಗಳು ಕೂಡ ವ್ಯಾಪಕವಾಗಿವೆ. ಸೂಕ್ಷ್ಮ ಸಂವೇದನೆ ಇರುವವರು ಹೆಚ್ಚಾಗಿದ್ದಾರೆ ಎನ್ನಲಾದ ಜೋರ್ಡಾನ್‌ನಂಥ ದೇಶದಲ್ಲೂ ಇದೇ ಪರಿಸ್ಥಿತಿ ಇರುವುದು ವಿಪರ್ಯಾಸ.

ಅರಬ್ ರಾಷ್ಟ್ರಗಳ ಹಿನ್ನಡೆಗೆ ಕಾರಣವಾಗಿರುವ ನಡಾವಳಿಗಳತ್ತ ಹಳೆಯ ಟ್ಯುನಿಷಿಯಾದ ಕ್ರಾಂತಿಗಳು ಬೆಳಕು ಚೆಲ್ಲಿವೆ. ನಾಗರಿಕ ಕಾನೂನುಗಳು ಹಾಗೂ ಧಾರ್ಮಿಕ ಕಾನೂನುಗಳ ನಡುವಿನ ಸಂಘರ್ಷ ಏನೆಂಬುದೂ ಗೊತ್ತಾಗಿದೆ. ಧಾರ್ಮಿಕ ಕಾನೂನು ಲಾಗಾಯ್ತಿನಿಂದ ನಾಗರಿಕ ಕಾನೂನನ್ನು ಹಿಂದಕ್ಕೆ ಸರಿಸಿ, ರಹಸ್ಯವಾಗಿ ಅಥವಾ ಬಹಿರಂಗವಾಗಿ ಮಾರ್ಪಾಟುಗಳನ್ನು ಮಾಡುತ್ತಲೇ ಬಂದಿದೆ. ಇದೇ ವೇಳೆಯಲ್ಲಿ ಎಸೆಬ್ಸಿ ಅವರ ನಿಲುವುಗಳು ಪ್ರತಿರೋಧಕ್ಕೆ ಹೊಸ ಅರ್ಥ ದಕ್ಕಿಸಿಕೊಟ್ಟಿವೆ. ಆಳವಾದ ಸುಧಾರಣೆಯ ಆಶಾವಾದವನ್ನೂ ಮೂಡಿಸಿವೆ.

ಮತ್ತೊಂದು ‘ಅರಬ್ ವಸಂತ’ದ ಕಾಲವೀಗ ಸನ್ನಿಹಿತವಾಗುತ್ತಿದೆಯೇ? ಬಹುಶಃ ಹೌದು. ಮಹಿಳೆಯ ಮೇಲೆ ಅತ್ಯಾಚಾರ ಮಾಡಿದ ನಂತರ ಆಕೆಯನ್ನೇ ಮದುವೆಯಾಗಿ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಕಾನೂನಿನಲ್ಲಿ ಇದ್ದ ಅವಕಾಶವನ್ನು ಮೊರಾಕ್ಕೊ, ಜೋರ್ಡನ್ ಹಾಗೂ ಲೆಬನಾನ್ ಅಂತೂ ಅಂತಿಮವಾಗಿ ರದ್ದು ಮಾಡಿವೆ. ಕಳೆದ ವಾರ ಸೌದಿ ಅರೇಬಿಯಾದ ದೊರೆ, ಸೌದಿ ಮಹಿಳೆಯರಿಗೆ ಕಾರು ಚಾಲನೆ ಮಾಡಲು ಅನುಮತಿ ಕೊಟ್ಟರು. ಆದರೆ, ಸೌದಿ ಮಹಿಳೆಯರು ಈಗಲೂ ಇಷ್ಟ ಬಂದೆಡೆ ಪ್ರವಾಸ ಹೋಗಲು ಅಥವಾ ತಾವು ಮೆಚ್ಚಿದ ಬಟ್ಟೆ ತೊಡುವುದು ಸಾಧ್ಯವಿಲ್ಲ. ಎಸೆಬ್ಸಿ ಎತ್ತಿರುವ ದನಿಯಿಂದ ಮಹಿಳಾ ಹಾಗೂ ಬೌದ್ಧಿಕ ಸಂಘಟನೆಗಳ ಚಳವಳಿಗಳು ಮತ್ತೆ ಕಾವು ಪಡೆದುಕೊಳ್ಳಬಹುದು.

ಎಸೆಬ್ಸಿ ನಿಲುವನ್ನು ಇನ್ನೂ ಕೊಂಡಾಡಬೇಕಿದೆ. ಅದು ಕ್ರಾಂತಿಕಾರಿ ಹಾಗೂ ವಿಭಿನ್ನವಾದದ್ದು. ಸಪಾಟಾದ ಭೂಮಂಡಲದಲ್ಲಿರುವ ಅರಬ್ ರಾಷ್ಟ್ರಗಳ ಸಾಮಾಜಿಕ ಪರಿಧಿಯಲ್ಲಿ ಟ್ಯುನಿಷಿಯಾದ ಅಧ್ಯಕ್ಷ ಮಹಿಳಾ ಸಮಾನತೆಯ ಅಲೆಯೊಂದನ್ನು ಎಬ್ಬಿಸಿರುವಂಥ ನಿಲುವು.

(ಲೇಖಕ ಕ್ಯಾಮೆಲ್ ದೌಡ್ ‘ದಿ ಮ್ಯೂರ್‌ಸಾಲ್ಟ್ ಇನ್‌ವೆಸ್ಟಿಗೇಷನ್’ ಕಾದಂಬರಿ ಬರೆದಿದ್ದಾರೆ. ಫ್ರೆಂಚ್‌ ಭಾಷೆಯಲ್ಲಿದ್ದ ಅವರ ಈ ಲೇಖನವನ್ನು ಜಾನ್ ಕುಲ್ಲೆನ್ ಇಂಗ್ಲಿಷ್‌ಗೆ ಭಾಷಾಂತರಿಸಿದ್ದಾರೆ)

ದಿ ನ್ಯೂಯಾರ್ಕ್ ಟೈಮ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT