ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಗಣಿ ಎರಚಿಕೊಂಡು, ಬೈದಾಡಿಕೊಂಡರು...

ತಾಳವಾಡಿ ತಾಲ್ಲೂಕಿನ ಗುಮುಟಾಪುರದಲ್ಲಿ ವಿಶಿಷ್ಟ ‘ಗೋರೆ ಹಬ್ಬ’
Last Updated 21 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ಸಗಣಿಯನ್ನು ಮೈಮೇಲೆ ಪರಸ್ಪರ ಎರಚಿಕೊಂಡು ಅವಾಚ್ಯ ಪದಗಳಿಂದ ನಿಂದಿಸುವ ವಿಶಿಷ್ಟ ‘ಗೋರೆ ಹಬ್ಬ’ವನ್ನು ಜಿಲ್ಲೆಯ ಗಡಿಭಾಗದಲ್ಲಿರುವ ತಮಿಳುನಾಡಿನ ತಾಳವಾಡಿ ತಾಲ್ಲೂಕಿನ ಗುಮುಟಾಪುರದಲ್ಲಿ ಶನಿವಾರ ಆಚರಿಸಲಾಯಿತು.

ಗ್ರಾಮದ ಬೀರೇಶ್ವರ ದೇಗುಲದ ಮುಂಭಾಗ ಸಗಣಿ (ಗೋರೆ) ರಾಶಿ ಹಾಕಿದ್ದ ಯುವಕರು, ಪೂಜಾರಿಯು ರಾಶಿಗೆ ಪೂಜೆ ಸಲ್ಲಿಸಿದ ಬಳಿಕ ಎರಚಿ ಸಂಭ್ರಮಿಸಿದರು. ಇದಕ್ಕೂ ಮುನ್ನ ಹಿರಿಯರು ಮತ್ತು ಮಕ್ಕಳು ಗ್ರಾಮದ ಹೊರಗಿನ ಕಾರ್ಯೇಶ್ವರ ದೇವಸ್ಥಾನಕ್ಕೆ ಮೆರವಣಿಗೆಯಲ್ಲಿ ತೆರಳಿ ಪೂಜೆ ಸಲ್ಲಿಸಿದರು. ಅಲ್ಲಿ ಮಕ್ಕಳು ಮುದ್ದೆ ಮಾಡಿದ್ದ ಸಗಣಿಯಿಂದ ಹೊಡೆದಾಡಿಕೊಂಡರು.

ಬಳಿಕ, ಗ್ರಾಮದ ಕಟ್ಟೆಗೆ ಬಂದು ಕತ್ತೆಯನ್ನು ಬಳ್ಳಿಗಳಿಂದ ಅಲಂಕರಿಸಿದರು. ಪ್ರತಿ ಬಾರಿ ಹುಲ್ಲಿನ ಮೀಸೆ, ಗಡ್ಡ ಕಟ್ಟಿಕೊಂಡ ಕೊಂಡಿಗೆಕಾರನನ್ನು (ಚಾಡಿಕೋರ) ಕತ್ತೆಯ ಮೇಲೆ ಕುಳ್ಳಿರಿಸಿ ಮೆರವಣಿಗೆ ಮಾಡುವುದು ವಾಡಿಕೆ. ಆದರೆ, ಈ ಬಾರಿ ಕತ್ತೆ ಅಶಕ್ತವಾಗಿದ್ದರಿಂದ ಅದನ್ನೇ ಹೊತ್ತುಕೊಂಡು ಊರಿನ ಪ್ರಮುಖ ಬೀದಿಗಳಲ್ಲಿ ತೆರಳಿದರು.

ಬೀರೇಶ್ವರ ದೇವಸ್ಥಾನದ ಹಿಂಭಾಗದ ಬೀದಿಯಲ್ಲಿ ಸಂಗ್ರಹಿಸಿ ಇಡಲಾಗಿದ್ದ ಸಗಣಿ ರಾಶಿಗೆ ಪೂಜೆ ಸಲ್ಲಿಸಲಾಯಿತು. ಪೂಜಾರಿ ಮೈಮೇಲೆ ದೇವರು ಬಂದ ಬಳಿಕ ಸಗಣಿಯ ದೊಡ್ಡ ಮುದ್ದೆಗಳನ್ನು ಮಾಡಿ ಎಸೆದುಕೊಂಡರು.

ಕನ್ನಡಿಗರೇ ಅಧಿಕ ಸಂಖ್ಯೆಯಲ್ಲಿ ಇರುವ ತಾಲ್ಲೂಕಿನ ಸುತ್ತಮುತ್ತಲ ಗ್ರಾಮಗಳಿಂದ ನೂರಾರು ಸಂಖ್ಯೆಯ ಜನರು ಭಾಗವಹಿಸಿದ್ದರು. ಇಲ್ಲಿ ಶತಮಾನದಿಂದಲೂ ದೀಪಾವಳಿಯ ಮರುದಿನ ‘ಗೋರೆ ಹಬ್ಬ’ವನ್ನು ಆಚರಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT