ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಧಾನಸೌಧ ವಜ್ರಮಹೋತ್ಸವಕ್ಕೆ ₹10 ಲಕ್ಷ ಸಾಕು’

ದುಂದು ವೆಚ್ಚ ಕಡಿವಾಣ ಹಾಕಲು ಕರ್ನಾಟಕ ರಾಜ್ಯ ಮಾಜಿ ಶಾಸಕರ ವೇದಿಕೆಯ ಸಲಹೆ
Last Updated 21 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ನಾಲ್ಕು ವರ್ಷಗಳಿಂದ ಬರ ಆವರಿಸಿದೆ. ರಾಜಧಾನಿಯಲ್ಲಿ ರಸ್ತೆ ಗುಂಡಿಗಳಿಂದ ಸವಾರರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ವಿಧಾನಸೌಧದ ವಜ್ರ ಮಹೋತ್ಸವಕ್ಕೆ ₹10 ಕೋಟಿ ಖರ್ಚು ಮಾಡುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾಡುತ್ತಿರುವ ಅಪಮಾನ ಎಂದು ಕರ್ನಾಟಕ ರಾಜ್ಯ ಮಾಜಿ ಶಾಸಕರ ವೇದಿಕೆಯು ಟೀಕಿಸಿದೆ.

ಈ ಬಗ್ಗೆ ಮಾಜಿ ಶಾಸಕರು ಶನಿವಾರ ಇಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಸರ್ಕಾರದ ಕ್ರಮವನ್ನು ಟೀಕಿಸಿದರು. ಅವರ ಅಭಿಪ್ರಾಯಗಳು ಇಲ್ಲಿವೆ.

***

‘ಸಭಾಧ್ಯಕ್ಷ, ಸಭಾಪತಿಯ ಏಕಪಕ್ಷೀಯ ನಿರ್ಧಾರ’
ವಿಧಾನಸೌಧಕ್ಕೆ 60 ವರ್ಷಗಳು ತುಂಬಿರುವ ಪ್ರಯುಕ್ತ ವಜ್ರ ಮಹೋತ್ಸವ ಆಚರಣೆ ಮಾಡುತ್ತಿರುವುದು ಸಂತೋಷದ ವಿಷಯ. ಆದರೆ, ಇದಕ್ಕಾಗಿ ₹27 ಕೋಟಿ ಖರ್ಚು ಮಾಡಲು ಮುಂದಾಗಿದ್ದು, ಸಾರ್ವಜನಿಕವಾಗಿ ಟೀಕೆಗಳು ವ್ಯಕ್ತವಾದ್ದರಿಂದ ₹10 ಕೋಟಿಗೆ ಸೀಮಿತಗೊಳಿಸಲಾಗಿದೆ. ಆದರೆ, ಇದೂ ದುಂದು ವೆಚ್ಚವಾಗಿದೆ‌. ಕಾರ್ಯಕ್ರಮ ಆಯೋಜನೆಯ ಕುರಿತು ವಿಧಾನ ಸಭಾಧ್ಯಕ್ಷರು ಹಾಗೂ ವಿಧಾನ ಪರಿಷತ್ತಿನ ಸಭಾಪತಿ ಅವರು ಮುಖ್ಯಮಂತ್ರಿ, ಶಾಸಕರ ಅಭಿಪ್ರಾಯ ಪಡೆಯಬೇಕಿತ್ತು. ಆದರೆ, ಅವರು ಏಕಪಕ್ಷೀಯ ನಿರ್ಣಯ ಕೈಗೊಂಡಿದ್ದಾರೆ.

– ಎಚ್‌.ಡಿ.ಬಸವರಾಜು, ಕರ್ನಾಟಕ ರಾಜ್ಯ ಮಾಜಿ ಶಾಸಕರ ವೇದಿಕೆಯ ಪ್ರಧಾನ ಕಾರ್ಯದರ್ಶಿ

***
‘ಕಾರ್ಯಕ್ರಮಕ್ಕೆ ₹10 ಲಕ್ಷ ಸಾಕು’
ವಜ್ರ ಮಹೋತ್ಸವಕ್ಕೆ ₹10 ಕೋಟಿ ಬೇಕಿಲ್ಲ. ₹10 ಲಕ್ಷ ಸಾಕು. ಈ ಹಿಂದೆ ರಾಷ್ಟ್ರಪತಿಯಾಗಿದ್ದ ಅಬ್ದುಲ್‌ ಕಲಾಂ ಅವರು ಬಂದಿದ್ದಾಗ ಸರಳವಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅದೇ ಮಾದರಿಯಲ್ಲಿ ಈಗಲೂ ಕಾರ್ಯಕ್ರಮ ಆಯೋಜಿಸಬೇಕು. ರಾಜ್ಯದಲ್ಲಿರುವ ಎಲ್ಲ ಶಾಸಕರು, ವಿಧಾನ ಪರಿಷತ್‌ ಸದಸ್ಯರು ತಮ್ಮ ಕ್ಷೇತ್ರದಲ್ಲಿ ತಲಾ 60 ಗಿಡಗಳನ್ನು ನೆಡಲಿ. ಇದಕ್ಕೆ ಆರಣ್ಯ ಇಲಾಖೆಯು ಸಹಕಾರ ನೀಡಲಿ. ಈ ಮೂಲಕ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿಸಬೇಕು. ಮಾಜಿ ಶಾಸಕರಿಗೆ ಚಿನ್ನದ ಗಟ್ಟಿಗಳು ಅಗತ್ಯವಿಲ್ಲ. 60 ವರ್ಷಗಳಲ್ಲಿ ಶಾಸಕರು ಹಾಗೂ ಮಂತ್ರಿಗಳು ನೀಡಿದ ಕೊಡುಗೆಗಳೇನು ಎಂಬುದರ ಬಗ್ಗೆ ಚರ್ಚೆ ನಡೆಯಲಿ. ಇದಕ್ಕೆ ಮಾಜಿ ಶಾಸಕರನ್ನೂ ಆಹ್ವಾನಿಸಲಿ.

–ಬಿ.ವಿ.ರಾಮಚಂದ್ರರೆಡ್ಡಿ, ಅಖಿಲ ಭಾರತ ಮಾಜಿ ಶಾಸಕರ ಪರಿಷತ್ತಿನ ಉಪಾಧ್ಯಕ್ಷ

***
ಪಂಚತಾರಾ ಹೋಟೆಲ್‌ ಊಟ ಬೇಡ
ಇಂದಿರಾ ಕ್ಯಾಂಟೀನ್‌ ರಾಜ್ಯ ಸರ್ಕಾರದ ಹೆಮ್ಮೆಯ ಯೋಜನೆ. ಪೌಷ್ಠಿಕಾಂಶಯುಕ್ತ ಆಹಾರವನ್ನು ಕಡಿಮೆ ಬೆಲೆಯಲ್ಲಿ ಸಾರ್ವಜನಿಕರಿಗೆ ವಿತರಿಸುತ್ತಿದ್ದೇವೆ ಎಂದು ಸರ್ಕಾರ ಹೇಳಿಕೊಳ್ಳುತ್ತಿದೆ. ವಜ್ರ ಮಹೋತ್ಸವಕ್ಕೆ ಬರುವ ಶಾಸಕರು, ಅತಿಥಿಗಳಿಗೆ ಈ ಕ್ಯಾಂಟೀನ್‌ಗಳ ಊಟವನ್ನೇ ಉಣಬಡಿಸಲಿ. ಪಂಚತಾರಾ ಹೋಟೆಲ್‌ಗಳಿಂದ ಊಟ ತರಿಸುವ ಪ್ರಮೇಯ ಏನಿದೆ?

–ಎಚ್‌.ಎಂ.ಚಂದ್ರಶೇಖರಪ್ಪ, ಕರ್ನಾಟಕ ರಾಜ್ಯ ಮಾಜಿ ಶಾಸಕರ ವೇದಿಕೆ ಅಧ್ಯಕ್ಷ

***

‘ದುಂದುವೆಚ್ಚಕ್ಕೆ ಕಡಿವಾಣ ಹಾಕಿ’
ಸಾಕ್ಷ್ಯಚಿತ್ರಕ್ಕಾಗಿ ನಿರ್ದೇಶಕರಾದ ಗಿರೀಶ್‌ ಕಾಸರವಳ್ಳಿ, ಟಿ.ಎನ್‌.ಸೀತಾರಾಮ್‌, ಮಾಸ್ಟರ್‌ ಕಿಶನ್‌ ನೀಡಿದ ಅಂದಾಜು ಪಟ್ಟಿಯನ್ನು ಪರಿಶೀಲಿಸದೆ ಒಪ್ಪಿಗೆ ಕೊಡಲಾಗಿದೆ. ಈಗ ದಿಢೀರನೆ ಬಜೆಟ್‌ ಅನ್ನು ಕಡಿತ ಮಾಡಿದ್ದಾರೆ. ಇದರಿಂದ ನಿರ್ದೇಶಕರೂ ಗೊಂದಲದಲ್ಲಿದ್ದಾರೆ. ವಜ್ರ ಮಹೋತ್ಸವದ ದುಂದುವೆಚ್ಚಕ್ಕೆ ಕಡಿವಾಣ ಹಾಕಬೇಕು. ಸರಳ ಹಾಗೂ ಅರ್ಥಪೂರ್ಣವಾಗಿ ಕಾರ್ಯಕ್ರಮ ಆಯೋಜಿಸಬೇಕು.

– ರಹಮತ್‌ ಉಲ್ಲಾ ಖಾನ್‌, ವೇದಿಕೆಯ ಉಪಾಧ್ಯಕ್ಷ

***
‘ವಿಧಾನಸೌಧ: ನನ್ನ ಕೊಡುಗೆ ಮರೆತ ಸರ್ಕಾರ’

‘ವಿಧಾನಸೌಧವನ್ನು ಬಣ್ಣಿಸಿ ಹಾಡುಗಳನ್ನು ಬರೆದು ಚಿತ್ರೀಕರಿಸಿ ರಾಷ್ಟ್ರಕ್ಕೆ ತೋರಿಸಿದ್ದೆ. ಆದರೆ ವಜ್ರಮಹೋತ್ಸವದ ಸಂದರ್ಭದಲ್ಲಿ, ನಾನು ನೀಡಿದ ಕೊಡುಗೆಯನ್ನು ಸರ್ಕಾರವು ಮರೆತುಬಿಟ್ಟಿದೆ’ ಎಂದು ಚಿತ್ರ ನಿರ್ದೇಶಕ ಸಿ.ವಿ.ಶಿವಶಂಕರ್‌ ನೋವು ತೋಡಿಕೊಂಡರು.

ಶನಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘63 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಚಿತ್ರ ಸಾಹಿತಿ, ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. 1965ರಲ್ಲೇ, ಬೆಳೆದಿದೆ ನೋಡಾ ಬೆಂಗಳೂರು ನಗರ, ಸಂಸ್ಕೃತಿ ಕಲೆಗಳ ಹೆಮ್ಮೆಯ ನಗರ, ಕಣ್ಣಿಗೆ ಕಾಣುವ ಅಂದದ ಸೌಧ, ಕನ್ನಡ ನಾಡಿನ ವಿಧಾನಸೌಧ ಎಂದು ಬರೆದ ಹಾಡನ್ನು ‘ಮನೇಕಟ್ಟಿ ನೋಡು’ ಚಿತ್ರದಲ್ಲಿ ಬಳಸಿಕೊಂಡಿದ್ದೆ’ ಎಂದರು.

‘ಅಂದಿನ ಮುಖ್ಯಮಂತ್ರಿ ಕೆಂಗಲ್‌ ಹನುಮಂತಯ್ಯ ಅವರು ಗ್ರಾಮಾಫೋನ್‌ ಪ್ಲೇಟ್‌ ತರಿಸಿ ಈ ಹಾಡನ್ನು ಹತ್ತಾರು ಬಾರಿ ಕೇಳಿ ಸಂತಸ ಪಟ್ಟಿದ್ದರು. ಅಲ್ಲದೆ, ₹100 ಬಕ್ಷೀಸು ನೀಡಿದ್ದರು. ವಿಧಾನಸೌಧವನ್ನು ಚೆನ್ನಾಗಿ ತೋರಿಸಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ದೇವರಾಜ ಅರಸು ಮುಖ್ಯಮಂತ್ರಿ ಆಗಿದ್ದಾಗ, ರಾಜ್ಯದ ಯೋಜನೆಗಳ ಬಗ್ಗೆ ಹಾಡು ಬರೆಯಿರಿ ಎಂದು ಕೇಳಿದ್ದರು. ಆಗಲೂ ವಿಧಾನಸೌಧ, ದೇವಾಲಯಗಳನ್ನು ಹೋಲಿಸಿ ಹಾಡು ಬರೆದಿದ್ದೆ’ ಎಂದು ನೆನಪು ಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT